ಅವಳ ಹಿಂದೆ ನೀನು ನಡೆದು...
ಬಂಗಾರಪ್ಪೀ..,
ನಾವು ಇದುವರೆಗೆ ವ್ಯಾಲಂಟೈನ್ಸ್ ಡೇ ಅಂತೆಲ್ಲ ಸಲೆಬ್ರೇಶನ್ನೇ ಮಾಡಿದವರಲ್ಲ. ವ್ಯಾಲೆಂಟೈನ್ಸ್ ಡೇಯ ಕಾನ್ಸೆಪ್ಟೇ ಬೇರೆ ಇಂದು ನಡೆಯುತ್ತಿರುವುದೇ ಬೇರೆ, ಇಂದಿನ ವಾಣಿಜ್ಯ ಯುಗದ ಹಲವು ಹುಚ್ಚುಗಳಲ್ಲಿ ಇದೊಂದು ಅಂತ ಟೀಕಿಸಿದವರೆ, ಆದರೆ ಈ ಸರ್ತಿ ಮಾತ್ರ ಪ್ರೇಮಿಗಳ ದಿನಾಚರಣೆ ಅಂದಾಗ ನಿನ್ನ ನೆನಪು ತುಂಬ ತುಂಬ ಆಗ್ತಾ ಇದೆ.
ನಾವು ಪ್ರೇಮಿಗಳಾಗದೇ ಸೀದ ಮದುವೆಯೇ ಆಗಿಬಿಟ್ಟೆವು. ಮತ್ತೆ ಪುರ್ಸೊತ್ತಲ್ಲಿ ಪ್ರೇಮಿಗಳಾಗೋಣ ಅಂತ ಭಾವಿಸಿದ್ದೆವು. ಸಿನಿಮೀಯ ರೀತಿಯಲ್ಲಿ ನಮ್ಮ ಮದುವೆ ಆಯಿತು. ನಮ್ಮ ಮದುವೆಯ ವೇಳೆಗೆ ನಾವಿಬ್ಬರು ಹದಿ ಹರೆಯ ದಾಟಿ, ಯೌವ್ವನದ ಕೊನೆಯಂಚಿಗೆ ಬಂದು ಮುದಿ ಹರೆಯದ ಹೊಸ್ತಿಲಲ್ಲಿದ್ದೆವು. ನಮ್ಮದು ಅಂತರ್ಜಾತಿ ವಿವಾಹ ಅಂದಾಗ, ಲವ್ವಾ ಅಂತ ಮಂದಿ ಕೇಳುತ್ತಿದ್ದರು. ಆದಕ್ಕೆ ನಾವು ಇಲ್ಲ ಇನ್ಮೇಲೆ ಲವ್ವು ಅನ್ನುತ್ತಾ ನೆಗಾಡಿದ್ದೆವಲ್ಲ.
ಸ್ವತಂತ್ರವಾಗಿ ಒಂಟಿಯಾಗೇ ಬದುಕುತ್ತಿದ್ದ ನಾವಿಬ್ಬರು ಮದುವೆಯ ಬಳಿಕದ ಜಂಟಿ ಜೀವನಕ್ಕೆ ಒಗ್ಗಿಕೊಂಡು ಸ್ವಲ್ಪ ದಿವಸ ಮಾತ್ರವೇ ಆಗಿತ್ತು. ಪರಸ್ಪರ ಅರ್ಥ ಮಾಡಿಕೊಂಡೆವೋ; ಅಥವಾ ಅಪಾರ್ಥ ಮಾಡಿಕೊಂಡೆವೋ ಅಂತೂ ಇನ್ನು ಪರ್ವಾಗಿಲ್ಲ ಅಂತ ಜೀವನದಲ್ಲಿ ಭದ್ರ ಹೆಜ್ಜೆಯೂರಿ ಮುನ್ನುಗ್ಗುತ್ತಿರುವಾಗಲೇ ಬಿತ್ತಲ್ಲ ಬ್ರೇಕ್!
ಒಂದು ವರ್ಷ ಕಳೆದು ಎರಡನೇ ವರ್ಷಕ್ಕೆ ಅಡಿ ಇಟ್ಟಿದ್ದೆವು ಅಷ್ಟೆ. ನಮಗೆ ಈ ವಯಸ್ಸಲ್ಲಿ ಮಗು ಬೇಡವೆಂದು ನಿರ್ಧರಿಸಿದ್ದರೂ, ಮಗು ಬೇಕೆಂಬ ನನ್ನ ಸ್ತ್ರೀ ಸಹಜ ಬಯಕೆ ನಿನಗೆ ಅರ್ಥವಾಯಿತೋ ಎಂಬಂತೆ ನೀನೇ ನನಗೆ ಮಗುವಾಗಿ ಬಿಟ್ಟೆ!
ನಿನ್ನ ಫ್ರೆಂಚ್ ಫ್ರೆಂಡ್ ಒಬ್ಬಾಕೆ ನಿನನ್ನು ಮನುವಾ ಅಂತ ಕರೆಯುತ್ತಿದ್ದಳಂತೆ. ಆಗೊಮ್ಮೆ ಈಗೊಮ್ಮೆ ನಾನೂ ನಿನ್ನ ಮನುವಾ ಅಂದರೆ ನೀನೆಷ್ಟು ಪುಳಕಗೊಳ್ಳುತ್ತಿದ್ದೆ. ಫ್ರೆಂಚ್ ಭಾಷೆಯನ್ನು ಬಹಳವಾಗಿ ಪ್ರೀತಿಸುತ್ತಿದ್ದ ನೀನು ನನಗೆ ಪಾರ್ ಅಮೋರ್, ಮುನಾಮಿ, ಬೀಝೂ... ಎಂಬೆಲ್ಲ ಶಬ್ದಗಳನ್ನು ಕಲಿಸಿದ್ದೆ. ನಿಂಗೊತ್ತಾ..... ನಮಗೇನು ಹದಿಹರೆಯವೇ ಎಂದೆಲ್ಲ ಒಣಜಂಭ ಕೊಚ್ಚಿಕೊಳ್ಳುತ್ತಿದ್ದ ನಾವುಗಳು ನಮಗೇ ಗೊತ್ತಿಲ್ಲದಂತೆ ಗಾಢವಾದ ಪ್ರೀತಿಗೆ ಬಿದ್ದಿದ್ದೆವು!
ನೀನು ನನಗೆ ಬೇಕು; ನಾನು ನಿನಗೆ ಬೇಕು- ಪ್ರಪಂಚ ಸುತ್ತಬೇಕು ಎಂದೆಲ್ಲ ಅನಿಸಲಾಂಭಿಸಿದ ಹೊತ್ತಲ್ಲಿ ಮಧ್ಯದಲ್ಲಿ ಅವಳು ಬಂದಳಲ್ಲ ಮಾರಿ. ಬಂದವಳು ನನ್ನಿಂದ ನಿನ್ನನ್ನು ಕಸಿದೇ ಬಿಟ್ಟಳು! ನಿನ್ನಲ್ಲಿದ್ದ ಗಾಢವಾದ ಇಚ್ಛಾಶಕ್ತಿಯನ್ನು ಬಲ್ಲವಳಾಗಿದ್ದ ನಾನು, ನೀನೇನು ಅವಳ ವಶವಾಗಲಾರೆ ಎಂದೇ ನಂಬಿದ್ದೆ. ಆದರೆ ಅವಳ ವಿರುದ್ಧದ ನಮ್ಮ ಹೋರಾಟ ವ್ಯರ್ಥವೇ ಆಯಿತು ಮತ್ತು ಕ್ಯಾನ್ಸರೆಂಬ ರಕ್ಕಸಿ ಹೆಸರಿನ ಅವಳೇ ಗೆದ್ದುಬಿಟ್ಟಳು.
ನೀನು ಅವಳ ಹಿಂದೆ ನಡೆದು ಒಂದು ವರ್ಷವೇ ಆಗುತ್ತಾ ಬಂತು. ಅಂದ ಹಾಗೆ ನಮ್ಮ ಮದುವೆಯ ಬಳಿಕ ಇದು ಮೂರನೆಯ ವ್ಯಾಲಂಟೈನ್ಸ್ ಡೇ. ಮೊದಲ ಬಾರಿ ಫೆಬ್ರವರಿ 14ರಂದು ನಮಗೆ ಮದುವೆಯಾಗಿ ಒಂದೂ ಮುಕ್ಕಾಲು ತಿಂಗಳು ಆಗಿತ್ತು. ಆ ದಿನ ನಿನ್ನೊಬ್ಬ ಸ್ನೇಹಿತ ಬಾಂಬೆಯಿಂದ ಬಂದಿದ್ದರು ಅಂತ ನೀನು ನನ್ನನ್ನು ಬಿಟ್ಟು ಅವರೊಂದಿಗೆ ಹೋಗಿದ್ದೆ. ಮಿತ್ರರ ಮಧ್ಯೆ ನಾನ್ಯಾಕೆ ಇನ್ನೂ ಬೇಕಾದಷ್ಟು ಫೆಬ್ರವರಿಗಳು ಬರ್ತಾವಲ್ಲ ಅಂತ ನಾನೂ ಸುಮ್ಮನಿದ್ದೆ. ಎರಡನೇ ವರ್ಷದ ವ್ಯಾಲಂಟೈನ್ ಡೇಯಂದು ದಿನಗಳನ್ನೆಣಿಸುತ್ತಾ ಕೆಎಂಸಿ ಆಸ್ಪತ್ರೆಯಲ್ಲಿ ಮಲಗಿದ್ದೆ ನೀನು. ಅಂದು ನೋಡಲು ಬಂದ ನಿನ್ನ ಆಪ್ತಮಿತ್ರ “ಹೌ ಆರ್ ಯೂ ಮೈ ವ್ಯಾಲಂಟೈನ್” ಅಂದಾಗ ಸಂಪೂರ್ಣ ಅಶಕ್ತನಾಗಿದ್ದ ನಿನ್ನ ಕಣ್ಣಲ್ಲಿ ಸುಳಿದ ಮಿಂಚು ಕಂಡು ನನ್ನ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಆದಾದ ಮೂರೇ ದಿವಸಕ್ಕೆ ನನ್ನನ್ನು ಶಾಶ್ವತವಾಗಿ ತೊರೆದು ಹೋಗಿದ್ದೆ.
ನೋಡ ನೋಡುತ್ತಿರುವಂತೆ ನನ್ನ ಕೈಯಿಂದ ಯಾರೋ ಕಸಿದುಕೊಂಡಂತೆ, ನನ್ನ ಕೈಗಳಲ್ಲೇ ನೀನು ಕೊನೆಯುಸಿರು ಬಿಟ್ಟೆ. ನೀನು ಸತ್ತ ಮೇಲೂ ನೀನು ಬದುಕಿರಬೇಕಿತ್ತು ಮುದ್ದಪ್ಪೀ.... ಕೊನೆ ಪಕ್ಷ. ನೀನು ಇರುವಾಗ ನಿನ್ನನ್ನು ದೂಷಿಸುತ್ತಿದ್ದವರೆಲ್ಲ ನಿನ್ನನ್ನು ಹಾಡಿಹಾಡಿ ಹೊಗಳುವುದನ್ನು ನೋಡುವುದಕ್ಕೆ ನೀನಿರಬೇಕಿತ್ತು. ನಂಬಿದ ಜನರ ತಿರುಗಿ ನಿಲ್ಲುವ ಪರಿ ಮತ್ತು ಅವರ ಮಾತು ವರ್ತನೆಗಳನ್ನು ನೋಡುವುದಕ್ಕಾದರೂ ನೀನಿರಬೇಕಿತ್ತು. ಒಂದೇ ಒಂದು ನಿಮಿಷದಲ್ಲಿ ಪ್ರಪಂಚ ಪರಿವರ್ತನೆಯಾಗಿರುವದನ್ನು ನೋಡುವುಕ್ಕೂ ನೀನು ಇರ ಬೇಕಿತ್ತು.
ಇರಲಿ, ನೀನು ಸತ್ತು ಬದುಕಿದೆ. ನಾನು ಬದುಕಿ ಸತ್ತೆ. ನನ್ನ ಆಧ್ಯಾತ್ಮ ಗುರುಗಳು ಯಾವಾಗಲೂ ಹೇಳುತ್ತಿರುತ್ತಾರೆ. ಆತ್ಮಕ್ಕೆ ಸಾವಿಲ್ಲವಂತೆ. ಶಕ್ತಿ ಎಂದಿಗೂ ನಾಶವಾಗದು ಅದು ಬದಲಾಗುತ್ತದೆ ಅಥವಾ ರೂಪಾಂತರವಾಗುತ್ತದೆಯಂತೆ. ಹಾಗಾಗಿ ನೀನು ದೇಹ ತ್ಯಾಗ ಮಾಡಿದ ಬಳಿಕ ಹೇಗಿದ್ದಿ ನನಗೆ ಗೊತ್ತಿಲ್ಲ. ಎಲ್ಲಿದ್ದಿ ಎಂಬುದೂ ನನಗೆ ಗೊತ್ತಿಲ್ಲ. ಎಲ್ಲಿಯಾದರೂ ಇದ್ದಿಯಾ ಎಂಬುದಾಗಿ ಗಟ್ಟಿಯಾಗೇ ನಂಬಿದ್ದೇನೆ ನಾನು.
ನೀನು ಸತ್ತಮೇಲೆ ನಿನ್ನ ಮೇಲೆ ದೂರುಗಳಿಲ್ಲ. ನನ್ನೊಂದಿಗೆ ಬರುವುದಿಲ್ಲ, ಮಾತನಾಡುವುದಿಲ್ಲ ಎಲ್ಲೂ ಕರೆದೊಯ್ಯುವುದಿಲ್ಲ ಎಂಬ ಮುನಿಸೂ ಇಲ್ಲ. ಯಾಕೆಂದರೆ ಎಲ್ಲಿದ್ದರೂ, ಹೇಗಿದ್ದರೂ, ಯಾವಾಗಿದ್ದರೂ ನೀನು ನನ್ನೊಂದಿಗೇ, ನನ್ನೊಳಗೇ ಇರುತ್ತಿಯಲ್ಲ. ಕಾಯುವ, ಬೇಯುವ ಬೇಗೆಯಂತೂ ಇಲ್ಲವೇ ಇಲ್ಲ ಈಗ.
ಬದುಕಿದ್ದಾಗ ತಮಾಷೆಗೂ ನಿನ್ನನ್ನು ಏಕವಚನದಲ್ಲಿ ಕರೆಯುತ್ತಿರಲಿಲ್ಲ. ನೀನು ಸಹ ಆದಿಯಿಂದ ಅಂತ್ಯದ ತನಕವೂ ನನ್ನನ್ನು ಬಹುವಚನದಲ್ಲೇ ಮಾತನಾಡಿಸುತ್ತಿದ್ದೆ. ಆದರೆ, ನಾನು ನಿನಗೆ ಬರೆಯುತ್ತಿರುವ ಮೊದಲ ಪ್ರೇಮಪತ್ರವಿದು. ನೀನೀಗ ಅನುಗಾಲವೂ ನನ್ನಂತರಾತ್ಮವೇ ಆಗಿರುವುದರಿಂದ ನೀವು ಅಂದರೆ ಯಾರೋ ದೂರದವರು ಅಂದಹಾಗನಿಸುತ್ತದೆ. ಹಾಗಾಗಿ ನೀನು ಅಂದಿರುವೆ. ಕೋಪಿಸಬೇಡ. ಅಗೌರವ ಎಂದಂತೂ ಭಾವಿಸಲೇ ಬೇಡ.
ನನ್ನ ಅತ್ತೆ, ನಿನ್ನ ಅಮ್ಮನಾಗಿರುವ ‘ಅತ್ತೆಮ್ಮ’ ಯಾವಾಗಲೂ ಹೇಳುತ್ತಿದ್ದರು, ಹೋದ ಜನ್ಮದ ನಿನ್ನ ಋಣವನ್ನು ನಾನು ಬಾಕಿ ಇರಿಸಿಕೊಂಡದ್ದಿಕ್ಕೇ ನಮ್ಮ ಮದುವೆಯಾಯಿತಂತೆ. ಮತ್ತು ಆ ಆರೇಳು ತಿಂಗಳು ನೀನು ನನಗೆ ಮಗುವೇ ಆಗಿದ್ದೆ. ಹಾಗಾಗಿ ನನ್ನ ಋಣವೇನೋ ಸಂದಾಯವಾಗಿರಬಹುದು. ಆದರೆ ಈ ಜನ್ಮದಲ್ಲಿ ನಮ್ಮ ಪ್ರೀತಿಯ ಋಣ ಹಾಗೇ ಬಾಕಿ ಉಳಿದಿದೆಯಲ್ಲಾ. ಅದಕ್ಕಾಗಿಯಾದರೂ ಮತ್ತೊಮ್ಮೆ ನಾನು ಮತ್ತು ನೀನು ಒಂದಾಗುವಾ. ಆಗ ಇನ್ನಷ್ಟು ಗಾಢವಾಗಿ, ಇನ್ನಷ್ಟು ಆಪ್ತವಾಗಿ ಪ್ರೀತಿಸೋಣ, ಏನಂತೀ?
ಚಿನ್ನಪ್ಪೀ.... ಪಾರ್ ಅಮೋರ್, ಮುನಾಮಿ, ಬೀಝೂ...
Comments
ಓಹ್! ಮನ ಕಲಕಿಸಿದಿರಿ, ಶಾನಿಯವರೇ.
ಓಹ್! ಮನ ಕಲಕಿಸಿದಿರಿ, ಶಾನಿಯವರೇ.