' ಅವಸಾನ ' (ಕಥೆ) ಭಾಗ 2

' ಅವಸಾನ ' (ಕಥೆ) ಭಾಗ 2

                           
     ಬಿಳಿ ದೊರೆಗಳ ಆಳ್ವಿಕೆಯಿದ್ದ ಆ ಕಾಲದಲ್ಲಿ ಕನಕಗಿರಿ ದಂಡಕಾರಣ್ಯಕ್ಕೆ ಬೇಟೆಗಾಗಿ ಹಾಗೂ ಮನರಂಜನೆಗಾಗಿ ಆಗಾಗ ಕನಕಗಿರಿ ಫಾರೆಸ್ಟ್ ಬಂಗಲೆಗೆ ಕಲೆಕ್ಟರ್ ಸ್ಯಾಮುವೆಲ್ ವಾಲ್ಟೆರ್ ಬಂದಾಗ ಅವರು ಹೇಳಿ ಕರೆಯಿಸಿ ಕೊಳ್ಳು ತ್ತಿದ್ದುದು ಈ ಭಾಸ್ಕರನ್ ನಾಯರನನ್ನೆ. ಸ್ಯಾಮುವೆಲ್ ವಾಲ್ಟೆರ್ ಗೆ ಕಾಡು ಪ್ರಾಣಿಗಳಿರುವ ತಾವುಗಳನ್ನು ತೋರಿಸಿ ಅವನ ಮೃಗಯಾ ವಿಹಾರಕ್ಕೆ ಭಾಸ್ಕರನ್ ನಾಯರ ಸಹಕರಿಸುತ್ತಿದ್ದ. ಇಂತಹ ಸಂಧರ್ಭಗಳಲ್ಲೊಂದು ದಿನ ವಾಲ್ಟೆರ್ ಟಸ್ಕರೊಂದಕ್ಕೆ ಗುರಿಯಿಟ್ಟು ಬೇಟೆಯಾಡುತ್ತಿದ್ದ ಸಂಧರ್ಭದಲ್ಲಿ ಆತನಿಟ್ಟ ಗುರಿ ಸರಿಯಾಗಿ ತಾಗದೆ ಆ ಗುರಿ ಅದರ ಬಲಗಿವಿಗೆ ತಾಗಿ ರೋಷಗೊಂಡ ಆ ಮದ್ದಾನೆ ವಾಲ್ಟೆರ್ ಕಡೆಗೆ ನುಗ್ಗಿ ಬಂದಾಗ, ಆ ಸಂಧರ್ಭಧ ಸೂಕ್ಷ್ಮತೆಯನ್ನು ಅರಿತ ನಾಯರ್ ತನ್ನ ಜೋಡು ನಳಿಗೆ ಬಂದೂಕನ್ನು ಎತ್ತಿಕೊಂಡು ಗುರಿಯಿಟ್ಟು ಆ ಮದ್ದಾನೆಯ ತಲೆಯನ್ನು ಸೀಳಿ ವಾಲ್ಟೇರ್ ನನ್ನು ಮೃತ್ಯವಿನ ದವಡೆಯಿಂದ ಪಾರು ಮಾಡಿದ್ದ.  ಆ ಉಪಕಾರಕ್ಕೆ ಪ್ರತಿಫಲವಾಗಿ ವಾಲ್ಟೆರ್ ತನ್ನ ಪ್ರಭಾವ ಬೀರಿ ಆ ಸರಹದ್ದಿನ ಅರಣ್ಯ ಉತ್ಪನ್ನಗಳ ಖರೀದಿ ಮತ್ತು ಮರಾಟದ ಗುತ್ತಿಗೆಯನ್ನು ಭಾಸ್ಕರನ್ ನಾಯರಗೆ ಕೊಡಿಸಿದ್ದಾಗಿ ತನ್ನ ತಂದೆ ಹೇಳುತ್ತಿದ್ದುದನ್ನು ತಿಮ್ಮಪ್ಪಯ್ಯ ಆಗಾಗ ಕೇಳುತ್ತಿದ್ದ.


     ಉಪ್ಪಿನ ಸತ್ಯಾಗ್ರಹ ಮತ್ತು ಚಲೆಜಾವ್ ಚಳುವಳಿಗಳು ಬಹಳ ಬಿರುಸಿನಿಂದ ದೇಶದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದ ಕಾಲಘಟ್ಟವದು, ಸ್ವಾತಂತ್ರ ಚಳುವಳಿಯ ಬಿಸಿ ಕುಗ್ರಾಮವಾಗಿದ್ದ ಈ ಬಿದ್ರಕಾನಿಗೂ ತಟ್ಟಿತ್ತು. ತಿಮ್ಮಪ್ಪಯ್ಯನ ಚಿಕ್ಕಪ್ಪ ಶಂಕರಯ್ಯ ದುರ್ಗಾಪುರದಲ್ಲಿ ಇಂಟರ್ ನಲ್ಲಿ ಓದುತ್ತಿದ್ದವನು ಮಹಾತ್ಮಾ ಗಾಂಧೀಜಿಯವರ ಕರೆಗೆ ಓಗೊಟ್ಟು ಓದಿಗೆ ತಿಲಾಂಜಲಿಯನ್ನಿತ್ತು ಭೂಗತನಾಗಿ ಜನಗಳನ್ನು ಬ್ರಿಟೀಶ್ ಆಡಳಿತದ ವಿರುದ್ಧ ಎತ್ತಿಕಟ್ಟಿ ಸರಕಾರಿ ಕಚೇರಿಗಳಿಗೆ ಬೆಂಕಿ ಹಚ್ಚುವುದು ಮುಂತಾದ ಬ್ರಿಟೀಶ್ ಆಡಳಿತ ವಿರೋಧಿ ಕಾರ್ಯಗಳಲ್ಲಿ ತೊಡಗಿದ್ದ ನೆಂದೂ, ಆತನನ್ನು ಹುಡುಕಿಕೊಂಡು ಪೋಲೀಸಿನವರು ಎರಡು ಮೂರು ಸಲ ಬಂದಿದ್ದೆರೆಂದೂ, ಒಂದು ಸಲ ಜಿಲ್ಲಾ ಕಲೆಕ್ಟರ್ ರವರೆ ಖುದ್ದಾಗಿ ನಮ್ಮ ಮನೆಗೆ ಬಂದು ಚಿಕ್ಕಪ್ಪ ಶಂಕರಯ್ಯನನ್ನು  ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳದಂತೆ ತಡೆಯಬೇಕೆಂದೂ ಇಲ್ಲವಾದಲ್ಲಿ ನಮ್ಮ ಅಜ್ಜ ದೇವಯ್ಯನ ಮೇಲೆ ರಾಜದ್ರೋಹದ ಅರೋಪ ಬರುವುದೆಂದೂ ಅದೂ ಅಲ್ಲದೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿ ಕೊಳ್ಳುವುದಾಗಿ ಹೆದರಿಸಿದ್ದರೆಂದೂ, ಆಗ ನಮ್ಮ ಅಜ್ಜ ದೇವಯ್ಯ ಕಲೆಕ್ಟರರಿಗೆ ತಮ್ಮ ಮಗ ಕಾಲೇಜು ಬಿಟ್ಟಂದಿನಿಂದ ಮನೆಗೆ ಬಂದಿಲ್ಲವೆಂದೂ ಮೇಲಾಗಿ ಆತನ ಸರಕಾರಿ ವಿರೋಧಿ ಚಟುವಟಿಕೆಗಳಿಗೆ ತಮ್ಮ ಅನುಮತಿ ಇಲ್ಲವೆಂದೂ, ಒಂದು ವೇಳೆ ಅವನು ಮನೆಗೆ ಬಂದರೆ ತಾವೆ ಆತನನ್ನು ಹಿಡಿದು ಕೊಡಸುವ ವಾಗ್ದಾನ ಮಾಡಿದ್ದರೆಂದು ಅಜ್ಜಿ ಆಗಾಗ ಹೇಳುತ್ತಿದ್ದುದನ್ನು ಸಹ ತಿಮ್ಮಪ್ಪಯ್ಯ ತನ್ನ ಬಾಲ್ಯದ ದಿನಗಳಲ್ಲಿ ಕೇಳಿದ್ದ. ಶಂಕರಯ್ಯನಂತೆ ಬಿದ್ರಕಾನಿನ ಚಂದ್ರ ಪೂಜಾರಿಯ ಮಗ ನಾರಾಯಣ ಪೂಜಾರಿ, ಮೊಹಮ್ಮದ್ ಬ್ಯಾರಿಯ  ಮಗ ಮೊಯ್ದು ಸಹ ಸ್ವಾತಂತ್ರ ಚಳುವಳಿಯಲ್ಲಿ ಅಪರೋಕ್ಷವಾಗಿ ತೊಡಗಿದ್ದು ಈ ಮಾಹಿತಿ ಯನ್ನು ಕಲೆಕ್ಟರ್ ಸ್ಯಾಮುವೆಲ್ ವಾಲ್ಟೆರ್ ನಿಗೆ  ಹತ್ತಿರದವನಾದ ಭಾಸ್ಕರನ್ ನಾಯರ ಕೊಟ್ಟಿರಬೇಕೆಂದು ಊರ ಜನರು ಆಡಿ ಕೊಳ್ಳುತ್ತಿದ್ದುದನ್ನು ತಿಮ್ಮಪ್ಪಯ್ಯ ಸಣ್ಣವನಿರುವಾಗ ಕೇಳಿದ್ದರು. ಆತನ ಎದುರು ಮಾತನಾಡಲು ಧೈರ್ಯವಿಲ್ಲದ ಜನರು ಆ ನಾಯರನನ್ನು ಹಿಂದೆ ಬೈದು ದೇಶದ್ರೋಹಿ ಎಂದು ಆಡಿ ಕೊಳ್ಳುತ್ತಿದ್ದರು.


     1940 ನೇ ಇಸವಿಯ ಅಗಷ್ಟ್ ತಿಂಗಳಲ್ಲಿ ದುರ್ಗಾಪುರದ ಸಮೀಪ ರೈಲು ಹಳಿಯ ಫಿಶ್ ಪ್ಲೇಟ್ ಕಿತ್ತಿದ ಪರಿಣಾಮವಾಗಿ ರೈಲು ಗಾಡಿಯ ಹಳಿತಪ್ಪಿ ಎರಡು ಬೋಗಿಗಳು ಬಿದ್ರಕಾನ ಹೊಳೆಗೆ ಬಿದ್ದು ಕೆಲ ಜನರು ಸಾವನ್ನಪ್ಪಿ ಹಲವಾರು ಜನರು ಗಾಯಗೊಂಡ ಘಟನೆಯೊಂದು ಜರುಗಿತ್ತು. ಈ ಘಟನೆಯ ನೇರ ಆಪಾದನೆ ಶಂಕರಯ್ಯ, ನಾರಾಯಣ ಪೂಜಾರಿ ಹಾಗೂ ಮೊಯ್ದು ಅವರ ಮೇಲೆ ಬಂದು ಆ ಕುರಿತು ತೀವ್ರ ಕಾರ್ಯಚರಣೆ ನಡೆದು ಆಗ ಪೋಲೀಸರ ಜೊತೆಗಿನ ಮುಖಾಮುಖಿಯಲ್ಲಿ ಶಂಕರಯ್ಯ ಮರಣಹೊಂದಿದ. ಆಗ ಎಲ್ಲರೂ ಸಂಶಯ ಪಟ್ಟದ್ದು ಭಾಸ್ಕರನ್ ನಾಯರನ ಮೇಲೆಯೆ, ಆದರೆ ಆಗ ತಂದೆ ದೇವಯ್ಯ ಮಾತ್ರ ತಮ್ಮ ಮಗನ ಕಾನೂನು ಬಾಹಿರ ಚಟುವಟಿಕೆಗಳನ್ನು ಬೆಂಬಲಿಸದೆ ಆತನು ಮಾಡಿದ ರಾಜದ್ರೋಹಕ್ಕೆ ತಕ್ಕ ಬೆಲೆ ತೆತ್ತ ಎಂದು ವಿಷಾದಿಸಿದ್ದರು. ಆದರೆ ದೇವಯ್ಯನವರ ಹೆಂಡತಿ ಪದ್ಮಾವತಮ್ಮ ತಮ್ಮ ಮಗ ಶಂಕರಯ್ಯನ ಸಾವಿಗೆ ಭಾಸ್ಕರನ್ ನಾಯರನ ಫಿತೂರಿಯೆ ಕಾರಣ ಎಂದು ಆಗಾಗ ಶಾಪ ಹಾಕುತ್ತಿದ್ದುದನ್ನು ಅವಳು ಬದುಕಿರುವ ವರೆಗೂ ತಿಮ್ಮಪ್ಪಯ್ಯ ಕೇಳುತ್ತ ಬಂದಿದ್ದ. ಕೊನೆಗೆ ಗಾಂಧೀಜಿಯ ಪ್ರಭಾವ ಹೆಚ್ಚಾಗಿ ಬ್ರಿಟೀಶರು ಅನಿವಾರ್ಯವಾಗಿ ಭಾರತವನ್ನು ಬಿಟ್ಟು ಹೋದರು. ಅಲ್ಲಿಯ ವರೆಗೂ ದಟ್ಟ ಕಾನನದಲ್ಲಿ ನಿಗೂಢವಾಗಿ ಒಂಟಿ ಜೀವನವನ್ನು ಮಾಡಿಕೊಂಡು ಬಂದಿದ್ಚ ಭಾಸ್ಕರನ್ ನಾಯರಗೆ ಬ್ರಿಟೀಶರ ಆಡಳಿತ ಕೊನೆಗೊಂಡದ್ದು ದಿಕ್ಕು ತೋಚದಂತಾಯಿತು. ಕಲೆಕ್ಟರ್ ಸ್ಯಾಮುವೆಲ್ ವಾಲ್ಟೇರ್ ತನ್ನ ಕುಟುಂಬ ಸಮೇತ ಇಂಗ್ಲಂಡಿನ ಲಿಸಿಷ್ಟರ್ ಶಾಯರ್ ಗೆ ಹೊರಟು ಹೋದ ; ಹೋಗುವಾಗ ತನ್ನ ಮನದುಂಬಿ ತನ್ನ ಮತ್ತು ನಾಯರನ ಸ್ನೇಹದ ಗುರುತಾಗಿ ತನ್ನಲ್ಲಿದ್ದ ಇಂಗ್ಲಂಡ್ ತಯಾರಿಕೆಯ ಜೋಡು ನಳಿಗೆಯ ಬಂದೂಕನ್ನು ಭಾಸ್ಕರನ್ ನಾಯರ ನಿಗೆ  ಕೊಟ್ಟು ಅವನನ್ನು ಮತ್ತು ಆತ ಮಾಡಿದ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ ವೆಂದು ಹೃದಯತುಂಬಿ ನುಡಿದು ವಿದಾಯ ಹೇಳಿ ಹೋಗಿದ್ದ.


                                                                          *


     ಬ್ರಿಟೀಶ್ ಆಡಳಿತದ ಅಧಃಪತನದೊಂದಿಗೆ ಭಾಸ್ಕರನ್ ನಾಯರನ  ಅಧಃಪತನವೂ ಪ್ರಾರಂಭವಾಯಿತು. ಬಿದ್ರಕಾನಿನ ಸುತ್ತ ಮುತ್ತಲಿನ ಕಾಡು ಉತ್ಪನ್ನಗಳ ಗುತ್ತಿಗೆಯನ್ನು ಪಡೆದಿದ್ದ ಭಾಸ್ಕರನ್ ನಾಯರ್ಗೆ ಸ್ವತಂತ್ರ ಭಾರತದ ಮೊದಲ ಬಿಸಿ ತಟ್ಟಿತು. ಅರಣ್ಯ ಉತ್ಪನ್ನಗಳ ಹರಾಜನ್ನು ಅರಣ್ಯ ಇಲಾಖೆಗೆ ವಹಿಸಿಕೊಟ್ಟ ಸರಕಾರ, ಈ ಹಿಂದೆ ಬ್ರಿಟೀಶ್ ಸರಕಾರದ ಕಾಲದಲ್ಲಿ ಅರಣ್ಯ ಉತ್ಪನ್ನಗಳ ಗುತ್ತಿಗೆ ಪಡೆಯುತ್ತ ಬಂದವರು ಇನ್ನು ಮುಂದೆ ಅರಣ್ಯ ಇಲಾಖೆ ನಿಗದಿ ಪಡಿಸುವ ಮೊತ್ತವನ್ನು ಕಟ್ಟಬೇಕು ; ಇಲ್ಲದಿದ್ದಲ್ಲಿ ಹರಾಜು ಮೂಲಕ ಅರಣ್ಯ ಉತ್ಪನ್ನಗಳ ಖರೀದಿ ಮತ್ತು ಮರಟದ ಹಕ್ಕನ್ನು ಹೆಚ್ಚು ಬಿಡ್ ಮಾಡಿದವರಿಗೆ ಕೊಡ ಲಾಗುವುದು ಎಂದು ಆದೇಶವೊಂದನ್ನು ಹೊರಡಸಿತು. ಆ ವರ್ಷ ಎಷ್ಟು ಸಲ ಅಲೆದರೂ ಭಾಸ್ಕರನ್ ನಾಯರನಿಗೆ  ಅರಣ್ಯ ಉತ್ಪನ್ನಗಳ ಗುತ್ತಿಗೆ ದೊರೆಯಲಿಲ್ಲ. ಆತ ಅರಣ್ಯ ಇಲಾಖೆಗೆ ಅಲೆದೂ ಅಲೆದೂ ಸುಸ್ತಾದ. ಅರಣ್ಯ ಇಲಾಖೆ ನಿಗದಿ ಪಡಿಸಿದ ಮೊತ್ತವನ್ನು ಸರಕಾರಕ್ಕೆ ಕಟ್ಟಲು ತಯಾರಿದ್ದರೂ ಅವರು ಹೇಳುವ ಒಳ ಒಪ್ಪಂದಕ್ಕೆ ನಾಯರ್ ಸಮ್ಮತಿಸಲಿಲ್ಲ. ಅನಿವಾರ್ಯ ವಾಗಿ ಹರಾಜಿನ ಖೆಡ್ಡಾಕ್ಕೆ ನಾಯರ್ ಬಿದ್ದ. ಅಲ್ಲಿಯ ವರೆಗೂ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಬ್ರಿಟೀಶ್ ಆಡಳಿತ ಮತ್ತು ಕಲೆಕ್ಟರ್ ಸ್ಯಾಮುವೆಲ್ ವಾಲ್ಟೇರ್ ನ ಕೃಪೆಯಿಂದ ಯಾವುದೆ ತೊಂದರೆ ತಕರಾರುಗಳಿಲ್ಲದೆ ಅರಣ್ಯ ಉತ್ಪನ್ನಗಳ ಖರೀದಿ ಮತ್ತು ಮಾರಾಟದ ಗುತ್ತಿಗೆಯನ್ನು ಗಿಟ್ಟಿಸುತ್ತ ಬಂದಿದ್ದ ಭಾಸ್ಕರನ್ಗೆ ಜೀವನದಲ್ಲಿ ಮೊದಲ ಬಾರಿಗೆ ಸ್ಪರ್ದೆ ಯನ್ನು ಎದುರಿಸುವ ಪ್ರಸಂಗ ಬಂದಿತ್ತು ! ಅಲ್ಲಿಯ ವರೆಗೂ ವರ್ಷಕ್ಕೆ ಎರಡು ಸಾವಿರ ರೂಪಾಯಿಗಳ ಮೊತ್ತದ ಕಿಸ್ತು ಹಣ ಕಟ್ಟುತ್ತಿದ್ದ ಭಾಸ್ಕರನ್ ಸ್ಪರ್ದೆಯ ಕಾರಣದಿಂದಾಗಿ ಪ್ರತಿವರ್ಷ ಇಪ್ಪತ್ತೈದು  ಸಾವಿರ ರೂಪಾಯಿಗಳ ಕಿಸ್ತು ಕಟ್ಟುವ ಸಂಧರ್ಭ ಒದಗಿ ಬಂತು. ಇದರಲ್ಲಿ ನಾಯರನ ಸ್ವಯಂ ಕೃತಾಪರಾಧವೂ ಕಾರಣವೆಂದು ಹೇಳಬಹುದು ಏಕೆಂದರೆ ಹರಾಜು ಪ್ರಕ್ರಿಯೆ ತನ್ನ ಎಣಿಕೆಯನ್ನು ಮೀರಿ ಹೋಗುತ್ತಿದೆ ಎನ್ನುವಾಗ ಹರಾಜು ಕೂಗುವುದನ್ನು ಆತ ನಿಲ್ಲಿಸ ಬೇಕಿತ್ತು. ಆತನಿಗೆ ತಾನು ಕಲೆಕ್ಟರ್ ವಾಲ್ಟೆರನಿಗೆ ಆತ್ಮೀಯ ವಾಗಿ ಸುಮಾರು ಕಾಲು ಶತಮಾನ ಕಾಲ ದರಬಾರು ನಡೆಸಿಕೊಂಡು ಬಂದವನು, ಬಿಡ್ ಗೆ ಬಂದವರು ಏನು ಮಹಾ ಎಂಬ ಹಮ್ಮು, ತನ್ನ ಸಂಪನ್ಮೂಲದ ಮೂಲಕ್ಕೆ ಎಲ್ಲರೂ ಅಡ್ಡಿಯಾಗುತ್ತಿರುವರೆಂಬ ಕ್ರೋಧ; ಆತನ ಮನೋವ್ಯಾಪಾರದ ಮರ್ಮ ವನ್ನರಿತಿದ್ದ ಹೊಸ ಬಿಡ್ಡು ದಾರರಾದ ಉನ್ನಿ ಕೃಷ್ಣನ್ ಮತ್ತು ಮೋಯ್ದು ಬ್ಯಾರಿ ಹೆಚ್ಚಿನ ಮೊತ್ತಕ್ಕೆ ಬಿಡ್ಡು ಕೂಗುತ್ತ ಬಿಡ್ ಮೊತ್ತ ಮಿತಿಮೀರಿ ಬೆಳೆದಾಗ ಒಮ್ಮೆಲೆ ಬಿಡ್ ಕೂಗುವುದನ್ನು ನಿಲ್ಲಿಸಿ, ಆ ವರ್ಷದ ಅರಣ್ಯ ವಸ್ತುಗಳ ಖರೀದಿ ಮತ್ತು ಮಾರಾಟದ ಗುತ್ತಿಗೆ ಬಾಸ್ಕರನ್ ನಾಯರಗೆ ಆಗುವಂತೆ ಮಾಡಿದರು. ಆದರೆ ಉನ್ನಿಕೃಷ್ಣನ್ ಮತ್ತು ಮೊಯ್ದುಬ್ಯಾರಿ ಹಳ್ಳಿಗರ ಒಂದು ಪಟಾಲಂ ಮಾಡಿಕೊಂಡು ನಾಯರಗಿಂತ ಸ್ವಲ್ಪ ಹೆಚ್ಚಿನ ಬೆಲೆಗೆ ಅರಣ್ಯ ಉತ್ಪನ್ನಗಳ ಖರೀದಿಗೆ ತೊಡಗಿದರು. ಒಂದು ಕಡೆಗೆ ಭಾರಿ ಮೊತ್ತದ ಕಿಸ್ತು ಹಣ, ಇನ್ನೊಂದೆಡೆಗೆ ಉನ್ನಿ ಮತ್ತು ಮೊಯ್ದುರವರ ಕಾನೂನು ಬಾಹಿರ ಅನಾಗರಿಕ ಸ್ಪರ್ದೆ, ಹೀಗಾಗಿ ಹಣಕಾಸಿನ ವ್ಯವಹಾರದಲ್ಲಿ ಮೊದಲ ಬಾರಿಗೆ ಭಾಸ್ಕರನ್ ನಾಯರ ಸೋಲು ಕಂಡ. ಆದರೆ ಪೂರ್ತ ಕಿಸ್ತು ಹಣವನ್ನು ಕಟ್ಟಲಾಗದ ಭಾಸ್ಕರನ್ ನಾಯರ ಮೊದಲ ಬಾರಿಗೆ ಅರಣ್ಯ ಉತ್ಪನ್ನಗಳ ಗುತ್ತಿಗೆಯನ್ನು ಕಳೆದುಕೊಂಡ. ಮೊಯ್ದು ಮತ್ತು ಉನ್ನಿ ಜಂಟಿಯಾಗಿ ಉನ್ನಿಯ ಹೆಸರಲ್ಲಿ ಗುತ್ತಿಗೆಯನ್ನು ಪಡೆದರು.


     ಹೆಡೆ ತುಳಿಸಿಕೊಂಡ ಹಾವಿನಂತಾದ ಭಾಸ್ಕರನ್ ಉನ್ನಿ ಮೊಯ್ದು ರವರು ಮಾಡಿದಂತೆ ಕಾನೂನು ಬಾಹಿರವಾಗಿ ಅರಣ್ಯ ಉತ್ಪನ್ನಗಳ ಸಂಗ್ರಹಣೆಗೆ ತೊಡಗಿದ. ಇಲಾಖೆಯ ಕೃಪಾಶಿರ್ವಾದ ಇಲ್ಲದುದು ಒಂದು ಕಡೆಗಾದರೆ ಮತ್ತೊಂದೆಡೆ ಜನರ ಅಸಹನೆ, ಹೀಗಾಗಿ ಅರಣ್ಯ ಇಲಾಖೆಯವರು ಭಾಸ್ಕರನ್ ನಾಯರ ಸಂಗ್ರಹಿಸಿದ ಎಲ್ಲ ಅರಣ್ಯ ಉತ್ಪನ್ನಗಳ ದಾಸ್ತಾನಿನ ಮಾಹಿತಿ ಪಡೆದ ಅವರು ದಾಳಿಮಾಡಿ ವಶಪಡಿಸಿಕೊಂಡು ಎಲ್ಲ ಮಾಲನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಂಡರು. ಈ ಕಾನೂನು ಸುಳಿಯಿಂದ ಹೊರಬರಲು ನಾಯರ ತನ್ನ ಮಡದಿ ಅಮ್ಮು ಕುಟ್ಟಿಯ ಮೈಮೇಲಿನ ಬಂಗಾರದ ಆಭರಣಗಳನ್ನು ಮಾರಬೇಕಾದ ಪ್ರಸಂಗ ತಂದುಕೊಡ.  ಮೊದ ಮೊದಲು ಆಭರಣಗಳನ್ನು ಕೊಡಲು ಒಪ್ಪದ ಅಮ್ಮು ಭಾಸ್ಕರನ್ನ ಹೊಡೆತ ಬಡಿತ ತಾಳಲಾರದೆ ಆತನ ಕಿರುಕುಳಕ್ಕೆ ಬೇಸತ್ತು ಮನಸಿಲ್ಲದ ಮನಸಿನಿಂದ ಆಭರಣಗಳನ್ನು ಬಿಚ್ಚಿ ಕೊಟ್ಟಳು. ವಿಧಿಯ ಕ್ರೂರ ಹೊಡೆತಕ್ಕೆ ಸಿಕ್ಕಿದ್ದ ನಾಯರ್ ಆ ಸುಳಿಯಿಂದ ಹೊರ ಬರಲಾಗಲಿಲ್ಲ. ಕುಡಿತದ ವ್ಯಸನಿಯಾದ, ಆತನ ವಿಪರೀತ ಕುಡುಕತನ ಮತ್ತು ಹೊಡೆತ ಬಡಿತಗಳನ್ನು ತಾಳಲಾರದ ಅಮ್ಮು ಕುಟ್ಟಿ ಒಂದು ದಿನ ಮನೆಯಲ್ಲಿ ಇದ್ದ ಬಿದ್ದ ಹಣ ಮತ್ತು ಆಭರಣ ಗಳೊಂದಿಗೆ ಬಿದ್ರಕಾನಿಗೆ ವಿದಾಯ ಹೇಳಿ ಹೊರಟು ಹೋದಳು. ಅಮ್ಮುವಿನ ಪಲಾಯನ ನಾಯರನ ಮೇಲೆ ತೀವ್ರ ಪರೀಣಾಮ ಮಾಡಿತು. ಆಕೆಯನ್ನು ಮನವೊಲಿಸಿ ಮತ್ತೆ ಕರೆತರಲು ಕಣ್ಣಾನೂರಿಗೆ ಹೋದ ಭಾಸ್ಕರನ್ ನಾಯರ್ ಒಂಟಿಯಗಿ ಮರಳಿದ. ಕೈತಪ್ಪಿದ ಅರಣ್ಯ ಉತ್ಪನ್ನಗಳ ಗುತ್ತಿಗೆ, ಮಧ್ಯ ವಯಸ್ಸು ಕಳೆದು ವೃದ್ಧಾಪ್ಯದಂಚಿಗೆ ಸರಿಯುತ್ತಿದ್ದ ದೈಹಿಕ ಸ್ಥಿತಿ ಅಮ್ಮು ಕುಟ್ಟಿ ಇಲ್ಲದ ಒಂಟಿ ಜೀವನ, ಆಕೆಯಿಲ್ಲದೆ ಹಾಳಾದ ಹುಲ್ಲೆಣ್ಣೆ ವ್ಯವಹಾರ ಬದಲಾಗುತ್ತಿದ್ದ ಕಾಲಮಾನ ಎಲ್ಲವೂ ಸೇರಿ ಮೊಟ್ಟ ಮೊದಲ ಬಾರಿಗೆ ಹತಾಶೆ ಎಂದರೇನೆಂಬುದನ್ನು ಆತ ಅನುಭವಿಸಿದ.


                                                                                                          ( ಮುಂದುವರಿದಿದೆ )                                       


ಮೊದಲಭಾಗಕ್ಕೆ ಲಿಂಕ್ /sampada.net/blog/%E0%B2%85%E0%B2%B5%E0%B2%B8%E0%B2%BE%E0%B2%A8-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-1/19/06/2012/37117


ಹನುಮಂತ ಅನಂತ ಪಾಟೀಲ


 


 


 

Rating
No votes yet

Comments