ಆಗಮ ಸಂಧಿ

ಆಗಮ ಸಂಧಿ

ನನ್ನದೊಂದು ಒಂಟಿ ಪದ ನಿನ್ನದಿನ್ನೊಂದು 

ನಡುವೆ ಗಾಳಿ ತೂರುವಷ್ಟೆ ಕದ ತೆರೆದಿಟ್ಟಂದು  

ಹಚ್ಚಿಟ್ಟ ದೀಪದೆಣ್ಣೆ ಮೆಲನೆ ಮೆಲನೆ ಆರಿದಾಗ

ಸಾರ್ಥಕ್ಯವು ಉರಿದ ದೀಪಕ್ಕ, ಮುಗಿದ ಎಣ್ಣೆಗ?

 

ಇಷ್ಟಕ್ಕೂ ಅಂದು ಕತ್ತಲು ಬೇಕಿತ್ತು ನಮಗೆ 

ನಮ್ಮೊಲವ ಪ್ರೀತಿಯೆರಡು ಪದಗಳಿಗೆ 

ಹೊಸದೇ ಅರ್ಥವನ್ನು ಕೊಟ್ಟು ಪಡೆಯಲು... 

ದೀಪ ತನ್ನಾಟ ಮುಗಿಸಲು ವಹಿಸಿಕೊಂಡಿತು ಕತ್ತಲು

 

ಎರಡು ಪದಗಳು ಸೇರಿದಾಗ ಸಂಧಿಯಂತೆ

ಲೋಪವಂತಾರೆ, ನಮ್ಮಿಬ್ಬರ ನಡುವೆ ಮೊದಲಾದದ್ದೇ ಅದು 

ಆದೇಶ, ಕಣ್ಣುಗಳು ಒಂದಕ್ಕೊಂದು ಹೇಳಿದ್ದು ಮತ್ತೇನು ?

ಬೇಕಿದ್ದುದೊಂದೇ ,ಹೊಸದೊಂದು ಹುಟ್ಟು, ಮತ್ತಿಷ್ಟು ಕಾಯ್ದಿಟ್ಟ ಗುಟ್ಟು    

 

ಅದು 'ಯಾವ' ಮಾಯೆ, ನಮ್ಮಿಬ್ಬರಲ್ಲು ಇರದವನೊಬ್ಬ 

ಅಥವಾ, ಇಬ್ಬರೊಳಗೂ ಅಡಗಿದ್ದವನೊಬ್ಬ , ಬಂದೇ ಬಂದ..  

ಸಂದಿಯಿಂದಲೇ ಆಗಮವಾಯ್ತು ಅವನದು, ಸಂಧಿಯಿಂದಲೂ..

ಪದಗಳಿಗೀಗ ಹೊಸ ಅರ್ಥದ ಮೆರುಗು, ಹೊಸತನದ ಬೆರಗು...

 

Rating
No votes yet

Comments