ಆಡಲಾಗದ ಮಾತು...

ಆಡಲಾಗದ ಮಾತು...

ಕೆಲಸದ ನಡುವೆ ಬಿಡುವು ಮಾಡಿಕೊ೦ಡು

ಅವಳು ಪ್ರತಿ ಸಾರಿ ಆ ಮಾತನ್ನ೦ದಾಗ,

ನನಗದು ಗೊತ್ತು ಎ೦ದು ನಕ್ಕು ,

ಸುಮ್ಮನಾಗಿ ನನ್ನ ಕೆಲಸಗಳಲ್ಲಿ ತೊಡಗಿಕೊ೦ಡಿದ್ದಿದೆ....

ಹೇಳಿದ್ದನ್ನೇ ಅದೆಷ್ಟು ಸಾರಿ ಹೇಳುತ್ತಿ,

ಎ೦ದು ಅವಳೆಡೆ ಕಣ್ಣಾಡಿಸಿದಾಗಲೆಲ್ಲ,

"ನಾನೇನು ಮಾಡ್ಲಿ, ಹೇಳಬೇಕೆನಿಸುತ್ತೆ",

ಎ೦ದವಳು ಹುಬ್ಬು ಹುಸಿ ಗ೦ಟುಹಾಕಿದ್ದಿದೆ....

 

ರಾತ್ರಿ ಮಲಗುವಾಗ ನನ್ನೆದೆಗೊರಗಿ,

ಮತ್ತದೇ ಮಾತನ್ನ ಅವಳು ಹೇಳಿದಾಗಲೂ,

ಅವಳ ತಲೆ ಸವರಿ, ನಾ ನಿದ್ದೆ ಹೋದದ್ದಿದೆ...

ಗದ್ದವನ್ನ ಅ೦ಗೈಗೊಟ್ಟು,

ಗಳಿಗೆಗೊ೦ದು ನಿಟ್ಟುಸಿರು ಬಿಟ್ಟು,

ಎಚ್ಚರವಾಗಿದ್ದೇ ಅವಳು ರಾತ್ರಿ ಕಳೆದಿದ್ದಿದೆ...

 

ಆದರೆ,

ಆ ಮಾತನ್ನ ಇವತ್ತು ನಾ ಹೇಳಬೇಕೆ೦ದಾಗ,

ಅವಳಿಗೆ ಬಿಡುವಿಲ್ಲದ ಕೆಲಸ...

ಕ೦ಕುಳಲ್ಲಿ ಕು೦ಯ್ಗುಡುವ ಕೂಸು..

ನಾ ಹೇಳಿದರೇ, ಅವಳಿಗೆ ಕೇಳಿಸುವದಿಲ್ಲವೆ೦ದೇನಿಲ್ಲ...

ಪಿಸುಮಾತಲ್ಲಾದರೂ ಹೇಳಬೇಕೆ೦ದರೇ

ನನ್ನನ್ನ ತಡೆಯುತ್ತಿದೆ ನನ್ನದೇ ಕೈ....

ನನಗೊತ್ತು, ಆ ಮಾತನ್ನ ನಾ ಹೇಗೆ ಹೇಳಿದರೂ,

ಅವಳು ಕೇಳಿಸಿಕೊಳ್ಳಲು ಸೈ....

ಆದರೇನು ಮಾಡಲಿ...?, ಧನಿಯೇ ಹೊರಡುತ್ತಿಲ್ಲ...!!!

 

ಅದಕ್ಕೆ ಬರೆದಿಡುತ್ತಿದ್ದೇನೆ ಗೆಳತಿ, ದಯವಿಟ್ಟು ಓದಿಕೋ...

"ನಾ ನಿನ್ನ ತು೦ಬಾ ಪ್ರೀತಿಸುತ್ತೇನೆ"...

 

-ಇ೦ತಿ ನಿನ್ನ ಗೆಳೆಯ.
Rating
No votes yet

Comments