ಆರ್ಕಿಮಿಡೀಸ್ ತತ್ವಕ್ಕೆ ಹೊಸ ವ್ಯಾಖ್ಯಾನ
ಬೊಗಳೂರು, ಡಿ.18- ದೇಶವು ಜಾಗತೀಕರಣಗೊಳ್ಳುತ್ತಿರುವ ಪರಿಣಾಮ ಇದರ ಬಿಸಿ ಯುವ ಜನಾಂಗವನ್ನೂ ತಟ್ಟಿದ್ದು, ಕುಡಿತದ ಚಟ ಹತ್ತುವ ವಯಸ್ಸು 20ಕ್ಕೆ ಇಳಿದಿರುವುದು ಸ್ವಾಗತಾರ್ಹ ಎಂದು ಮದ್ಯ ಕುಡಿಸುವವರ ಸಂಘ ಶ್ಲಾಘಿಸಿದೆ. (bogaleragale.blogspot.com)
ಜಾಗತೀಕರಣ ಎಂಬ ಬಲೂನಿನಲ್ಲಿ ಬಿಸಿ ಗಾಳಿ ತುಂಬಿದರೆ ಸುಲಭವಾಗಿ ಮೇಲಕ್ಕೆ ಹಾರುವ ಮಾದರಿಯಲ್ಲೇ, ಯುವ ಜನಾಂಗಕ್ಕೂ ಬಿಸಿ ಗಾಳಿಯ ಬಿಸಿ ಏರಿಸಬಲ್ಲ ಮದ್ಯ ಸುರಿಯಲು ಸಾಕಷ್ಟು ಪ್ರಮಾಣದಲ್ಲಿ ಯತ್ನಿಸಲಾಗುತ್ತದೆ. ಹಾಗಾಗಿ ಬೆಂಗಳೂರು ಈಗ ಪಬ್ಗಳೂರು ಆಗಿಬಿಟ್ಟಿದೆ ಎಂದು ಈ ಸಂಘವು ಚೀಯರ್ಸ್ ಎಂಬ ತಲೆಬರಹದಡಿಯಲ್ಲಿ ಹೇಳಿಕೆ ನೀಡಿದೆ.
ವರ್ಷ ಕಳೆದಂತೆ ಕರ್ನಾಟಕದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗುತ್ತಿದೆ, ಕುಡಿತದ ಚಟ ಹತ್ತುವ ವಯಸ್ಸು ಕಡಿಮೆಯಾಗುತ್ತದೆ ಎಂಬುದಾಗಿ ಆರ್ಕಿಮಿಡೀಸ್ ಸಿದ್ಧಾಂತಕ್ಕೆ ಹೊಸ ವ್ಯಾಖ್ಯಾನ ನೀಡಿದ ಕ್ರಮವನ್ನು ವೈಜ್ಞಾನಿಕ ಸಂಶೋಧಕರು ಸ್ವಾಗತಿಸಿದ್ದು, ಯುರೇಕಾ ಎನ್ನುತ್ತಲೇ ಬಾಟಲಿಗಳನ್ನು ತಮ್ಮ ಟೇಬಲಿನ ಮುಂದಿರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಮದ್ಯದ ಮಧ್ಯೆ, ಮದ್ಯ ಮಾರಾಟದಿಂದ ಬೊಕ್ಕಸಕ್ಕೆ ಬರುವ ಆದಾಯಕ್ಕಿಂತಲೂ, ಮದ್ಯಸೇವನೆಯ ದುಷ್ಪರಿಣಾಮದ ಪರಿಹಾರ ಕಾರ್ಯಕ್ರಮಗಳಿಗೆ ಸರಕಾರ ಖರ್ಚು ಮಾಡುತ್ತಿದೆ ಎಂಬಲ ವರದಿಗಳನ್ನು ಸಾರಾ ಸಗಟಾಗಿ ತಳ್ಳಿ ಹಾಕಿರುವ ಮದ್ಯ ಕುಡಿಯುವವರ ಸಂಘ, ಇದು ನಮ್ಮ ಮೇಲೆ ಹುಳಿ ಮದ್ಯ ಸುರಿಯುವ ತಂತ್ರ ಎಂದು ಟೀಕಿಸಿದ್ದಾರೆ.