ಆಸೆ
ಕಾಣದಿರಲವಳ ನೋಟವೊಂದರ ಆಸೆ
ಕಂಡರಾಗುವುದು ಅಪ್ಪಿ ಸುಖಿಸುವ ಆಸೆ ;
ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು
ಬರುವುದು ಒಡನೆಯೇ ಒಂದಾಗುವಾಸೆ!
ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) :
ಅದರ್ಶನೇ ದರ್ಶನಮಾತ್ರ ಕಾಮಾ
ದೃಷ್ಟಾ ಪರಿಷ್ಟಂಗ ಸುಖೈಕ ಲೋಲಾ |
ಆಲಿಂಗಿತಾಯಾಂ ಪುನರಾಯತಾಕ್ಷ್ಯಾ
-ಮಾಶಾಸ್ಮಹೇ ವಿಗ್ರಹಯೇರಭೇದಮ್ ||
-ಹಂಸಾನಂದಿ
ಕೊ: ಈ ಅನುವಾದವನ್ನು ನೋಡಿದ ನನ್ನ ಗೆಳೆಯರೊಬ್ಬರು ಇದನ್ನ ಯಾವುದೋ ಸಿನೆಮಾದಲ್ಲಿ ಇಂತಹದ್ದೇ ಸಾಲುಗಳನ್ನ ಕೇಳಿದ ಹಾಗಿದೆ ಅಂದರು. ಇದ್ದರೂ ಇರಬಹುದು - ಜೈ ಭರ್ತೃಹರಿ! ಪಾಪ ಕ್ರೆಡಿಟ್ ಸಿಕ್ಕಿತೋ ಇಲ್ಲವೋ ಗೊತ್ತಿಲ್ಲ.
ಕೊ.ಕೊ: ಕನ್ನಡ ಚಿತ್ರ ’ಮನಸಾರೆ’ ನೋಡಿದ್ದಿರಾ? ಅಲ್ಲಿ ಬರುವ ಒಂದು ಮುಖ್ಯವಾದ ಸನ್ನಿವೇಶ (ನಾಯಕ ನ ಪಕ್ಕದ ಮನೆಯ ಹುಡುಗಿಯ ಮದುವೆಯ ಸಮಯದಲ್ಲಿ ಬರುತ್ತೆ), ಅಲ್ಲಿ ಬರುವ ಮಾತುಗಳು ನೇರವಾಗಿ ಭರ್ತೃಹರಿಯ "ಯಂ ಚಿಂತಯಾಮಿ ಸತತಮ್ ಮಯಿ ಸಾ ವಿರಕ್ತಾ" ಎಂದು ಮೊದಲಾಗುವ ಶ್ಲೋಕದ ಅಚ್ಚು. ಆ ಸನ್ನಿವೇಶವನ್ನು ಬರೆಯುವಾಗ ಯೋಗರಾಜ ಭಟ್ಟರು ಭರ್ತೃಹರಿಯಿಂದ ಚೆನ್ನಾಗೇ ಪ್ರೇರಿತರಾಗಿದ್ದಾರೆ ಎಂದರೆ ಅಡ್ಡಿಯಿಲ್ಲ!
ಕೊ.ಕೊ.ಕೊ: ಸಂಸ್ಕೃತ ಕಾವ್ಯಗಳಿಂದ ಸಾಮಾಜಿಕ ಚಿತ್ರಗಳ ನಿರ್ದೇಶಕರು ಪ್ರೇರಿತರಾಗಿರುವುದರಲ್ಲಿ ಯೋಗರಾಜ ಭಟ್ಟರೇನೂ ಮೊದಲಿಗರೇನಲ್ಲ. ಕಾಲು ಶತಮಾನ ಮುನ್ನವೇ ಬಂದಿದ್ದ ತಮಿಳಿನ ’ಅಪೂರ್ವ ರಾಗಂಗಳ್’, ಅದರ ಹಿಂದೀ ಅವತರಣಿಕೆ ’ಏಕ್ ನಯೀ ಪಹೇಲಿ’ ಇದರಲ್ಲಿ ವೇತಾಳಪಂಚವಿಂಶತಿಯ ಒಂದು ಕಥೆಯು ಮುಖ್ಯವಾದ ಎಳೆಯಾಗಿ ಕಾಣಿಸಿಕೊಂಡಿತ್ತು (ನಿರ್ದೇಶನ: ಕೆ ಬಾಲಚಂದರ್)
Comments
ಉ: ಆಸೆ
In reply to ಉ: ಆಸೆ by makara
ಉ: ಆಸೆ