ಆ ಒಂದು ರೂಪಾಯಿ!

ಆ ಒಂದು ರೂಪಾಯಿ!

ಫೆಬ್ರವರಿಯ ಎಲ್ ಐ ಸಿ ಪೇಮೆಂಟ್ ಬಾಕಿ ಇತ್ತು. ಆ ತಿಂಗಳು ರಜೆ ತೆಗೆದುಕೊಂಡಿದ್ದರಿಂದ ಜೊತೆಗೆ ಮಾರ್ಚ್ನಲ್ಲಿ ಮದ್ವೆ ಇದ್ದುದ್ದರಿಂದ ಏಪ್ರಿಲ್ನಲ್ಲಿ ಅದನ್ನ ಬಡ್ಡಿ ಸಮೇತ ಕಟ್ಟಬೇಕಾದ ಭಾಗ್ಯ ನನಗೊಲಿದಿತ್ತು. ಈ ಉರಿಬಿಸಿಲಿನಲ್ಲಿ ಮಧ್ಯಾಹ್ನ ೧:೩೦ರ ಸುಮಾರಿಗೆ ಆಫೀಸಿನಿಂದ ಸ್ವಲ್ಪ ದೂರದಲ್ಲಿರುವ ಎಲ್ ಐ ಸಿ ಆಫೀಸಿಗೆ ಹೋದೆ, ಆದರೆ ಊಟದ ಸಮಯವಾದ್ದರಿಂದ ವಾಪಸ್ ಬಂದೆ. ಮತ್ತೆ ೨:೩೦ಕ್ಕೆ ಹೋಗಿ ೩ನೇ ಮಹಡಿಗೆ (ಲಿಫ್ಟಲ್ಲಿ!) ಹೋಗಿ ಕ್ಯೂನಲ್ಲಿ ನಿಂತು ನನ್ನ ಸರದಿ ಬಂದಾಗ, ಪಾಲಿಸಿ ನಂಬರ್ ಹೇಳಿದೆ. ಅಲ್ಲಿರುವ ಚೀಟಿಯಲ್ಲಿ ಬರೆದುಕೊಡು ಅಂದ್ರು, ಪೆನ್ ಇರಲಿಲ್ಲ. ಹಿಂದೆ ಇದ್ದವರ ಬಳಿ ತೆಗೆದುಕೊಂಡು ಬರೆದು ಕೊಟ್ಟೆ. ೩೦೨೧ ರೂಪಾಯಿ ಕೊಡಿ ಅಂದಾಗ ೩೦೩೦ ಕೊಟ್ಟೆ. ಚೇಂಜ್ ಇಲ್ಲ ೧ ರೂ ಚೇಂಜ್ ಕೊಡು ಅಂದ್ರು. ಇಲ್ಲ ಅಂದೆ. ೯ ರೂ ನಾನೆಲ್ಲಿಂದ ತರಲಿ ಈಗ, ಇಲ್ಲಿ ಬರೆದು ಕೊಂಡಿರ್ತೀನಿ ೪ ಘಂಟೆ ಒಳಗೆ ಬಂದ್ರೆ ಕೊಡ್ತೀನಿ. ಕೊಡಿ ರಶೀದಿ ಅಂದು ಅದ್ನ ಇಸ್ಕೊಂಡು ನೋಡಿದ್ರೆ ೩೦೨೦.೧೦ ಅಂತಿತ್ತು. ಇಲ್ಲಿ ೧೦ ಪೈಸೆ ಇದೆ ನೀವು ೧ ರೂ ಕೇಳ್ತಿದೀರಾ? ಅದು ಹಾಗೇನೇ, ರೌಂಡ್ ಆಫ್. ಪ್ರತಿಕ್ರಿಯೆ ಕಾರವಾಗಿತ್ತು. ಪರ್ಸ್ ಹುಡುಕ್ದೆ, ೫೦ ಪೈಸೆ ಸಿಕ್ತು. ಅದನ್ನ ತೋರಿಸಿ, ೫೦ ಪೈಸೆ ಆಗತ್ತಲ್ಲ? ಇಲ್ರೀ ೧ ರೂ ಬೇಕು. ಅದೇಕೆ ಹಾಗೆ? ಸರಕಾರದ್ದೇ ಸಂಸ್ಥೆ. ಸರ್ಕಾರನೇ ೫೦ ಪೈಸೆ ಇನ್ನೂ ಸ್ಟಾಪ್ ಮಾಡಿಲ್ಲ ನೀವು ನೋಡಿದ್ರೆ ತಗೋಳಲ್ಲ ಅಂತಿದೀರಾ?. ಆ ವಯ್ಯನ ತಲೆ ಸ್ವಲ್ಪ ಹೊತ್ತು ಬ್ಲಾಂಕ್ ಆಯ್ತು, ಆಮೇಲೆ ಇಲ್ಲ ಒಂದ್ರೂಪಾಯಿ ಕೊಡ್ಬೇಕು ಅಂದ. ಸರಿ ಇನ್ನೇನು ಈತನ ಹತ್ರ ಮಾತಾಡೋದು ಅಂದು ಮತ್ತೆ ಕೆಳಗಿಳಿದು, ಸ್ವಲ್ಪ ದೂರ ನಡೆದು ಒಂದು ಅಂಗಡಿಯ ಬಳಿ ಹೋದೆ. ೧ ಶ್ಯಾಂಪೂ ಕೊಡಿ ಅಂದೆ ೩ ರೂಪಾಯಿದು. ೧೦ ರೂ ತೆಗೆದೆ. ಸಾರ್ ಚೇಂಜ್ ಇಲ್ಲ, ೩ ಕೊಡ್ಲಾ? ?????? ಸರಿ ಕೊಡಿ. ೧೦ರೋ ಕೊಟ್ಟೆ, ದುಡ್ಡು ತಗೊಂಡು ಶ್ಯಾಂಪೂ ಕೊಟ್ಟು ಒಂದು ಚಾಕಲೇಟ್ ಕೊಟ್ಟ. ಈ ೧ ರೂಪಾಯಿಗೆ ನಿಮ್ಮ ಹತ್ರ ಬಂದಿದ್ದು, ಈ ಚಾಕಲೇಟ್ ಬೇಡ. ಸಾರ್ ಚೇಂಜ್ ಇಲ್ಲ. ಹಾಗಿದ್ರೆ ಶ್ಯಾಂಪೂ ತಗೊಳ್ಳಿ ೧೦ ರೂ ಕೊಡಿ. ಅವ್ನು ಯಾಕೆ ಲಾಸ್ ಮಾಡ್ಕೊಳ್ಳೋದು ಅಂದ್ಕೊಂಡು ತಡೀರಿ ಸಾರ್ ಅಂದು ಪಕ್ಕದಲ್ಲಿ ಹರಟೆ ಹೊಡೆಯುತ್ತಿದ್ದ ಅವನ ಗೆಳೆಯನ ಹತ್ತಿರ ಕೇಳಿದ, ಅವ್ನು ಪರ್ಸ್ ತೆಗದು ಹುಡ್ಕಿ ಹುಡ್ಕಿ ಆಮೇಲೆ ೧ ರೂ ಕೊಟ್ಟ. ನಾನು ಮತ್ತೆ ವಾಪಸ್ ಎಲ್ ಐ ಸಿ ಆಫೀಸಿಗೆ ಹೋದೆ. ೧ ರೂ ಕೊಟ್ಟೆ. ನಿಮ್ಮಿಂದ ನಮ್ಗೆ ಸಮಸ್ಯೆ ನೋಡಿ, ಬರೋವಾಗ ಚೇಂಜ್ ಇಟ್ಕೊಂಡು ಬರ್ಬೇಕು. ಇಲ್ಲಾಂದ್ರೆ ನಮ್ಮ ಕೈನಿಂದ ಹಾಕ್ಬೇಕು, ನಮ್ಗೇನು ಅಂತ ದರ್ದು. ಕಡಿಮೆ ಆದ್ರೆ ಮೇಲಿನವ್ರು ಕೇಳ್ತಾರೆ ಏನೇನೋ ಕಥೆ ಶುರು ಮಾಡಿದ. ನೋಡಯ್ಯಾ, ಸಾಕು ಮಾತು ಸುಮ್ನೆ ಕಥೆ ಕುಯ್ಬೇಡ . ೧೦ ರೂ ಈಚೆ ಕೊಡು, ನಾನೇನಾದ್ರೂ ನಿಂಗೆ ಹೇಳಿದ್ರೆ ಆಗ ಮಾತಾಡು, ನಾನು ನನ್ನ ಕೆಲ್ಸ ನೀಟಾಗಿ ಮಾಡಿದೆ ತಾನೇ, ನೀನು ಹಾಗೆ ಮಾಡು ಅಂದು ೧೦ ರೂ ವಾಪಸ್ ತಗೊಂಡು ಬಂದೆ. (ಚಿತ್ರಕೃಪೆ: ಅಂತರ್ಜಾಲ)
Rating
No votes yet

Comments