ಇದು ಒಂದು ಬ್ಲಾಗು.

ಇದು ಒಂದು ಬ್ಲಾಗು.

ಅಥವಾ ಇದೂ ಒಂದು ಬ್ಲಾಗು. ನನ್ನ ಬ್ಲಾಗು ಬೇರೊಂದು ಇದೆ. ಅಲ್ಲಿ ನಾನೂ ನನ್ನವಳೂ ಇಬ್ಬರೂ ಬ್ಲಾಗಿಸುತ್ತೇವೆ. ಆದ್ದರಿಂದ ಇಲ್ಲಿ ಹೆಚ್ಚಾಗಿ ಬರೆಯುಲಾರೆ. ಆದರೆ ಆಗಾಗ ಅಲ್ಲಿಂದ ಇಲ್ಲಿಗೆ ತಂದು ಹಾಕಿಯೇನು. ಅದು ಕೃತಿಚೌರ್ಯವೆನಿಸುವುದಿಲ್ಲವಷ್ಟೆ. ಆದರೆ ಸಂಪದವನ್ನು ದಿನಕ್ಕೊಮ್ಮೆಯಾದರೂ ಓದುತ್ತೇನೆ. ಆಗಾಗ ಪ್ರತಿಕ್ರಯಿಸುತ್ತೇನೆ.

ಸಂಪದದಂಥ ತಾಣದಲ್ಲಿ ಬ್ಲಾಗ್‌ಗಳು ಇರಬೇಕೆ? ನಾನು ಕಂಡ ಹಾಗೆ ಬ್ಲಾಗುಗಳಲ್ಲಿ ಎರಡು ಬಗೆ: "ನಾನು ಈಹೊತ್ತು ಇಲ್ಲಿಗೆ ಹೋದೆ; ಅದು ಮಾಡಿದೆ/ಮಾಡಲಿಲ್ಲ; ಹೀಗಾಯಿತು/ಇಲ್ಲ" "ನನಗೆ ಬದುಕಿನಲ್ಲಿ ಬೇಸರ ಹುಟ್ಟಿದೆ/ನಲಿವುಂಟಾಗಿದೆ" ಇಂತಹ ದಿನಚರಿಯವು ಒಂದು (ಸಾವಿರಕ್ಕೆ ಒಂಭೈನೂರ ತೊಂಭತ್ತು ಇಂತಹವು. ನಾನೇನು ಇದರ ಬಗ್ಗೆ ಮೂಗು ಮುರಿಯುತ್ತಿಲ್ಲ; ನಾನು ಮಾಡಿರುವುದು, ಮಾಡುವುದೂ ಇದನ್ನೆ). ಯಾವುದೊ ವಿಷಯದ, ಕಲೆಯ, ಆಸಕ್ತಿಯ, ಕಾರ್ಯಕ್ಷೇತ್ರದ, ನಂಬಿಕೆಯ ಬಗ್ಗೆ, ಬರೆದು ವಿಚಾರವಿನಿಮಯ ನಡೆಸುವ, ತಿಳಿವಳಿಕೆ ಬೆಳೆಸಿಕೊಳ್ಳುವ/ಬೆಳೆಸುವ ಬಗೆಯವು ಇನ್ನೊಂದು. ಇವು ಬಹಳ ವಿರಳ. ಸಂಪದ ಬೆಳೆದು ಆಗಬೇಕಾದ್ದು ಎರಡನೆಯದರ ಹಾಗೆ. ಬ್ಲಾಗುಗಳಿಗೆ ಅವಕಾಶವಿದ್ದರೆ ಆಗಬಹುದಾದ್ದು ಮೊದಲನೆಯದರ ಹಾಗೆ (ಈಗ ಆಗಿಲ್ಲ; ಆಗಿಯೇ ತೀರಬೇಕಾಗಿಲ್ಲ; ಆಗುವ ಸಾಧ್ಯತೆ ಇದೆ, ಅಷ್ಟೆ). ಸಂಪದದ ಸದಸ್ಯರು ಬೇಕಾದಹಾಗೆ ಬ್ಲಾಗಿಸಲಿ; ಹೀಗೆ ಬೇಕು ಹಾಗೆ ಬೇಡವೆನ್ನುವ ಹಕ್ಕು ಯಾರಿಗೂ ಇಲ್ಲ. ಆದರೆ ಸಂಪದದಲ್ಲಿ ಕಾಣಿಸಿಕೊಳ್ಳುವ ಬರಹಗಳು ಹೇಗಿರಬೇಕು ಎನ್ನುವುದರ ಸಂಪಾದಕರ ಕಲ್ಪನೆಗೆ ವಿಪರೀತವಾಗಿ ಸಂಪದದಲ್ಲಿ ಬ್ಲಾಗು ಕಾಣಿಸಿಕೊಂಡರೆ ಏನು ಮಾಡಬೇಕು? ಏನು ಮಾಡಬಹುದು? ಸಂಪಾದಕರಿಗೆ ಬೇಸರವಾಗದ ಹಾಗೆ ಬ್ಲಾಗಿಸಬೇಕಾದ ಕಷ್ಟದ ಪರಿಸ್ಥಿತಿ ಸದಸ್ಯರಿಗಾದರೂ ಏಕೆ? ಸದಸ್ಯರಿಗೆ ಬ್ಲಾಗಿಸುವ ಅವಕಾಶ ಕೊಡದೆಯೆ ಇದ್ದರೆ ಒಳಿತೇನೊ ಎನಿಸುತ್ತದೆ.

ಇದು ಬರೆಯ ಸೈತಾನನ ವಕೀಲಿಯಷ್ಟೆ. ಈ ವಕಾಲತ್ತು ನಡೆಸುತ್ತಿರುವುದೂ ಸದಸ್ಯನಾಗಿ ನಾನು ಪಡೆದಿರುವ ಬ್ಲಾಗಿಸುವ ಅವಕಾಶವನ್ನು ಬಳಸಿಕೊಂಡೆಯೆ. ಇದರಿಂದ ಯಾರದ್ದಾದರೂ "ಗರಿಗಳು ಕೆದರಿದ್ದರೆ" ಕ್ಷಮೆಯಿರಲಿ. ನಿಮ್ಮ ಮಾರ್ನುಡಿಗಳಿಗೆ, ಕಿಡಿಕಾರುವಿಕೆಗೆ ಕೂಡ :), ಬಾಗಿಲು ತೆರೆದೆ ಇದೆ.

ವೆಂ.

Rating
No votes yet

Comments