ಇನ್ನೂ ಜೀವಂತ

ಇನ್ನೂ ಜೀವಂತ

ಡಿಗ್ರಿ ದೊರೆತರು


ತೊರೆದು ಬಂದೆ


ಇಳೆಬೆಳೆಯ ನಂಬಿ


ತುಂಬಿ ಕನಸ ಗೊಂಚಲು


ಇಲ್ಲಿ ಮಿಂಚಲು



 


 


ಮಣ್ಣಿನಲಿ ಕೆಸರಿನಲಿ


ಹಸಿರ ಹೊನಲು


ಹದವಾಗಿರಬೇಕು


ನೀರು ಗಾಳಿ ಬೆಳಕು


ಅತಿವೃಷ್ಟಿ ಬರಗಾಲ


ಬಾಧಿಸದು ನಿಮಗೆ


ಎಣಿಸುವಿರಿ


ಗರಿ ಗರಿ ನೋಟುಗಳ


ಕಾಣುವೆನು


ಕಣ್ಣೀರ ನೋಟಗಳ


ನೆಲಕಚ್ಚುವ ಸರದಿ


ಸಲ್ಲಿಸುವೆವು ವರದಿ


ಪರಿಹಾರ ಘೋಷಣೆ


ಸೋರುವುದು ಅಲ್ಲಲ್ಲಿ


ಸೇರುವುದೇ ಇಲ್ಲ


ಬೇಕಾದಲ್ಲಿ


ನಾನಾ ಅರಿವೆಯಿಲ್ಲ


ಅರಿವಿದೆ ಗಿಡಮರ


ಹಕ್ಕಿಪ್ರಾಣಿಗಳಿಗೂ ಹಸಿವೆ


ನೀರಡಿಕೆಯಿದೆಯೆಂದು


ಅಡಿಗಡಿಗು ಕಷ್ಟಕಾರ್ಪಣ್ಯಗಳು


ತುಂಬಿದ್ದರು ಕೆರೆಬಾವಿ


ನೀರುಣಿಸಲಾರೆವು


ಸೂಕ್ತ ಸಮಯದಿ


ತಾರತಮ್ಯ ಧೋರಣೆ


ನಿಮಗೆಬೇಕು


ನೆರಳಿದ್ದರು ಫ್ಯಾನ್,ಎಸಿ


ಬೆಳಕಿದ್ದರು ಮಿರುಗುವ ಲೈಟು


ದಿನವಿಡಿ



 


 


ಸುಡುವ ಬಿಸಿಲಿಗು


ಸುರಿವ ಮಳೆಗು


ಹಕ್ಕಿ ಗೂಡಸೇರಿದರೂ


ಮುಗಿಯದೆಮ್ಮ ದುಡಿತ


ಬಿತ್ತಿದಾಬೀಜ ಮೊಳಕೆಯೊಡೆದು


ಚಿಗುರಿ ತೆನೆತುಂಬಿ ಕಾಳು


ಕಟ್ಟಲು ಸಾಲು ಸಾಲು


ಸವಾಲುಗಳು


ಸುಳಿವುನೀಡದ


ಸುಳಿಗಾಳಿ ಬಿರುಗಾಳಿ


ಕ್ರಿಮಿಕೀಟ ರೋಗಬಾಧೆ


ಕಾರ್ಮಿಕರ ಕೊರತೆ


ಎಲ್ಲವನು ದಾಟಿ


ಬೆಳೆದರು ಬಂಗಾರದ ಬೆಳೆ


ದೊರೆಯದು ಸೂಕ್ತ ಬೆಲೆ


ಮಧ್ಯವರ್ತಿಗಳ ಮೋಸಜಾಲ..


 


ಪೊಳ್ಳು ಭರವಸೆ ಬೇಡ


ಅಭಿವೃದ್ಧಿ   ಹೆಸರಲಿ

ನಮ್ಮ ಸಮಾಧಿಯಲಿ


ಕಟ್ಟುವಿರಿ ಸೌಧ


ಕೇಳಿಸದು ಮೊರೆ


ಕೃಷಿಯೆಂದರೆ ತಾತ್ಸಾರ


ಆಗುವುದು ಆಹಾರಕೆ ತತ್ವಾರ


ಬಣ್ಣಿಸುವಿರಿ ಸೌಂದರ್ಯ


ಬೇಕಾಗಿದೆ ಸೌಕರ್ಯ


ಎಲ್ಲರ ಚಿತ್ತ


ನಗರದತ್ತ


ಸೌಲಭ್ಯ ದೌಲತ್ತು


ನೂರಾರು ಆಕರ್ಷಣೆ


ಬರಿದಾಗುತಿದೆ ಹಳ್ಳಿ


ಒಳಿತಾಗದು ತಿಳಿಯದೆ?


 


 


ಗಟ್ಟಿಮನಸಲಿ


ಕಟ್ಟಿಕೊಳ್ಳಬೇಕು ಬದುಕ


ನೋಡುತ್ತೇನೆ ದೂರದಿಗಂತದತ್ತ


ಭರವಸೆಯ ಕುಡಿಯು


ಇನ್ನೂ ಜೀವಂತ


ತಿರುಗಲೇಬೇಕು ಕಾಲಚಕ್ರ!




 


 



 


 

Rating
No votes yet

Comments