ಇವರೂ ಕನ್ನಡಿಗರು!

ಇವರೂ ಕನ್ನಡಿಗರು!

ಬೆಳಗಾವಿಗೆ ಸಂಬಂಧಿಸಿದಂತೆ ಅಕ್ಟೋಬರ್ ೪ರಂದು ಕನ್ನಡ ಪರ ಸಂಘಟನೆಗಳು ನೀಡಿದ ಬಂದ್ ಕರೆ ರಾಜ್ಯದ ಎಲ್ಲೆಡೆ ಬಹು ಯಶಸ್ವಿಯಾಗಿ ನಡೆದರೂ, ಬುದ್ಧಿವಂತರ(?) ನಾಡು ಎಂದೆನಿಸಿಕೊಳ್ಳುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಂದ್-ಗೆ ಇದ್ದ ನೀರಸ ಪ್ರತಿಕ್ರಿಯೆ ಕಂಡು ಏನು ಎಂದುಕೊಳ್ಳಬೇಕೆಂದು ತಿಳಿಯಲಿಲ್ಲ. ನಟ ರಾಜ್ ತೀರಿಕೊಂಡಾಗ ಇಲ್ಲಿ ಯಾವುದೇ ಬಂದ್ ಇರಲಿಲ್ಲ. ಅದು ಸ್ವಾಗತಾರ್ಹ ಕೂಡಾ. ಒಬ್ಬ ವ್ಯಕ್ತಿ ತೀರಿಕೊಂಡ ಕಾರಣಕ್ಕಾಗಿ ಬಂದ್ ಮಾಡಿ ಏನೂ ಬೆಂಬಲಿಸಿದಂತಾಗುವುದಿಲ್ಲ.

ಆದರೆ ಕರ್ನಾಟಕದೆಲ್ಲೆಡೆ 'ಬೆಳಗಾವಿ ಬಿಟ್ಟುಕೊಡೆವು' ಎಂಬ ಏಕನೀತಿಯನ್ನು ಬೆಂಬಲಿಸಿ ಬಂದ್-ಗೆ ಸ್ವಯಂಪ್ರೇರಿತ ಬೆಂಬಲವನ್ನು ಬುದ್ಧಿವಂತರಾಗಿದ್ದೂ ಬುದ್ಧಿವಂತರೆಂದು ಕರೆಸಿಕೊಳ್ಳದ ಜನತೆ ನೀಡಿರುವಾಗ, ಕೇವಲ ವೈಯುಕ್ತಿಕವಾಗಿ ಉದ್ಧಾರವಾಗಿರುವ ಕಾರಣಕ್ಕಾಗಿ ಬುದ್ಧಿವಂತರೆಂದು ಕರೆಸಿಕೊಳ್ಳುವ ಬುದ್ಧಿವಂತರು(?) ನೀಡಿದ ಪ್ರತಿಕ್ರಿಯೆ ಬೇಸರ ತರುವಂತದ್ದು.

'ಗಡಿ ವಿವಾದದಿಂದ ನಮಗೇನು ಪ್ರಯೋಜನ?' ಎಂಬ ಶುದ್ಧ ಮೂರ್ಖ ಪ್ರಶ್ನೆ. (ಪಕ್ಕದ ಕಾಸರಗೋಡಿನ ಬಗ್ಗೆ ದಶಕಗಳಿಂದಲೂ ಇರುವ ವಿವಾದ 'ಗಡಿ' ಎಂಬ ವಿಷಯಕ್ಕೆ ಸಂಬಂಧಿಸಿದ್ದು ಎನ್ನುವುದನ್ನು ಈ ಬುದ್ಧಿವಂತರು ಮರೆತುಬಿಟ್ಟರೇ ?) 'ಮಹಾಜನ್ ವರದಿಯಿಂದ ನಮಗೇನು ಲಾಭ' ಎಂಬ ಇನ್ನೊಂದು ಅತೀ ಬುದ್ಧಿವಂತ ಪ್ರಶ್ನೆ. ಈ ಪ್ರಶ್ನೆಯಲ್ಲಿ 'ನಮಗೆ' ಎಂದರೆ 'ಕರ್ನಾಟಕಕ್ಕೆ' ಎಂದು ಭಾವಿಸಬೇಡಿ. ಇಲ್ಲಿ 'ನಮಗೆ' ಎಂದರೆ 'ತನಗೆ' ಎಂದರ್ಥ. 'ಸ್ವಾರ್ಥ'ತನದ ಉತ್ತುಂಗ!

ರಾಜ್ಯಮಟ್ಟದ, ರಾಷ್ಟ್ರಮಟ್ಟದ ವಿಚಾರಗಳು, ವಿವಾದಗಳು ತಮಗೆ ಸಂಬಂಧವಿಲ್ಲವೆಂಬಂತೆ ನಡೆಯುವ, ನುಡಿಯುವ ನನ್ನ ಉಡುಪಿ ಹಾಗೂ ಮಂಗಳೂರಿನ ಸಹಜೀವಿಗಳೊಂದಿಗೆ ನಾನು ಮೊದಲಿಂದಲೂ ಮೃದುವಾಗಿ ಕಿತ್ತಾಡಿಕೊಂಡೇ ಬಂದಿದ್ದೇನೆ. ಹಾಗೇನೆ ಕಾಲೆಳೆಯುತ್ತಾ ಇದ್ದೇನೆ ಕೂಡಾ.

ಬಿಜಾಪುರ, ಬಾಗಲಕೋಟೆ, ರಾಯಚೂರುಗಳಿಂದ ಹೊಟ್ಟೆಪಾಡಿಗಾಗಿ ಗುಳೇ ಬರುವ ಬಡ ಜನರನ್ನು ತುಚ್ಛವಾಗಿ ಕಾಣುವುದು, ಅವರನ್ನು ಗೇಲಿ ಮಾಡುವುದು, ಇತ್ಯಾದಿ ಮೊದಲಿಂದಲೂ ನಡೆದು ಬಂದಿದೆ. ಅವರೂ ಕೂಡಾ ತಮ್ಮಂತೆ ಕನ್ನಡಿಗರು ಎಂಬ ಕನಿಷ್ಟ ಪ್ರಜ್ನೆ ಇಲ್ಲದವರು ನನ್ನ ಸಹಜೀವಿಗಳು. ತಮಿಳುನಾಡು, ಕೇರಳಗಳಿಂದ ಬರುವವರನ್ನು ದೊರೆಗಳಂತೆ ಕಾಣುವುದು ಕೂಡಾ ಮೊದಲಿನಿಂದ ನಡೆದು ಬಂದ 'ಸಂಪ್ರದಾಯ'(?). ಯಾಕೆ ಹೀಗೆ? ಯಾಕೆಂದರೆ ಸ್ವಾಮಿ - ಉಡುಪಿ, ಮಂಗಳೂರು, ಬೆಂಗಳೂರು, ಮೈಸೂರು ಇಷ್ಟು ಮಾತ್ರ ಕರ್ನಾಟಕವೆಂದು ತಿಳಿದುಕೊಂಡವರಿಗೆ ಉಡುಪಿಯಾಚೆ ಉತ್ತರ ಕರ್ನಾಟಕವಿದೆ ಎಂಬುದನ್ನು ದೊಣ್ಣೆ ಹಿಡಿದು ಕಲಿಸಬೇಕೇನೋ.

ಕಳೆದ ಸಲ ಕೇವಲ ಹಾಸ್ಯ ಪ್ರಜ್ನೆಯಿಂದ ಉಚ್ಚಾರದ ಬಗ್ಗೆ ಬರೆದ ಲೇಖನವನ್ನು ಭಾವನಾತ್ಮಕವಾಗಿ ತೆಗೆದುಕೊಂಡ ಕೆಲವರು 'ಇವರೆಲ್ಲಾ ಕನ್ನಡಿಗರಲ್ಲವೇ' ಎಂದಿದ್ದರು. ಆಗಲೇ ಉತ್ತರ ನೀಡಬೇಕೆಂದಿದ್ದೆ. ಆದರೆ ಅವಕಾಶ ಈಗ ಸಿಕ್ಕಿತು. ನಾನು ಅತೀಯಾಗಿ ಕಾಲೆಳೆಯುವುದು ಕೂಡ ಇಲ್ಲಿನವರ ರಾಜ್ಯಮಟ್ಟದ ವಿವಾದಗಳ ಬಗ್ಗೆ ಇರುವ 'ಸ್ವಾರ್ಥ' ನೀತಿಯನ್ನು ನೋಡಿ ನೋಡಿ ಬೇಸತ್ತಿರುವುದರಿಂದಲೇ ವಿನಹ ಬೇರೆ ಯಾವ ಕಾರಣದಿಂದಲ್ಲ.

'ಇವರೆಲ್ಲಾ ಕನ್ನಡಿಗರಲ್ಲವೇ'? ನೋ ಡೌಟ್, ಉಡುಪಿ ಮತ್ತು ಮಂಗಳೂರಿನ ನಾಗರಿಕರೆಲ್ಲಾ ಕನ್ನಡಿಗರೇ..... ಐ ರಿಪೀಟ್ 'ಉಡುಪಿ ಮತ್ತು ಮಂಗಳೂರಿನ ನಾಗರಿಕರೆಲ್ಲಾ ಕನ್ನಡಿಗರೇ'. ಬಟ್ ಒನ್ಲಿ ಪ್ರಾಕ್ಟಿಕಲೀ, ನಾಟ್ ಲಾಜಿಕಲಿ.

Rating
No votes yet

Comments