ಇಶಾಂತ್ ಶರ್ಮ - ಚೇತನ್ ಶರ್ಮಾ

ಇಶಾಂತ್ ಶರ್ಮ - ಚೇತನ್ ಶರ್ಮಾ

ನಿನ್ನೆ ನಡೆದ ಭಾರತ ಆಸ್ಟ್ರೇಲಿಯಾದ ಮೂರನೇ ಒಂದು ದಿನದ ಪಂದ್ಯ ಯಾರೂ ಊಹಿಸದ ಫಲಿತಾಂಶ ನೀಡಿತು. ಯಾವ ಆಟ ಅಥವಾ ಸ್ಪರ್ದೆಯೇ  ಆದರೂ ನಿರೀಕ್ಷಿಸಿದ ಫಲಿತಾಂಶ ಕೊಡಲ್ಲ. ಅದರಲ್ಲೇ ಅಲ್ಲವೇ ಆಟದ ಮಜಾ ಇರೋದು? ಆದರೆ ಕ್ರಿಕೆಟ್ ನ ಸೊಗಸೇ ಬೇರೆ. ಬೌಲ್ ಮಾಡಿದ ಪ್ರತೀ ಚೆಂಡು, ಬೀಸಿದ ಪ್ರತೀ ಹೊಡೆತ ಫಲಿತಾಂಶವನ್ನು ಏರು ಪೇರು ಮಾಡುತ್ತದೆ. ಕಮೆಂಟೇಟರ್ ನನ್ನು ಪ್ರೇಕ್ಷಕನನ್ನು ಇಂಗು ತಿಂದ ಮಂಗವನ್ನಾಗಿಸುತ್ತದೆ.   ನಿನ್ನೆಯ ಕತೆಯೂ ಅದೇ. ೪೭ ನೆ ಓವರ ವರೆಗೂ ಗೆಲುವು ಭಾರತದ ಕೈಯಲ್ಲಿತ್ತು. ೪೮ನೆ ಓವರ ಎಸೆಯಲು ಬಂದ ಇಶಾಂತ್ ಶರ್ಮ ಎಲ್ಲಾ ಲೆಕ್ಕಾಚಾರವೂ ತಲೆ ಕೆಳಗಾಗುವಂತೆ ಬೌಲ್ ಮಾಡಿ ಆರು ಚೆಂಡು ಗಳಲ್ಲಿ ಭಾರ್ತಿ ೩೦ ರನ್ ಕೊಟ್ಟು ಆಸ್ಟ್ರೇಲಿಯಾ ಕುಣಿಯುವಂತೆ ಮಾಡಿದ. ಆಟದ ಪ್ರತೀ ಸನ್ನಿವೇಶದ ಬಗ್ಗೆ ಇಲ್ಲಿ  ಹೇಳುವ ಅಗತ್ಯ ಇಲ್ಲ. ೩೦ ರನ್ ಕೊಟ್ಟ ಇಶಾಂತ್ ಶರ್ಮನನ್ನು ಮಾತ್ರ ಜನ ಮನೆಯ ಟೀವೀ ರೂಂ ನಿಂದ ಹಿಡಿದು ಅಂತರ್ಜಾಲದ ವಿವಿಧ ಸಾಮಾಜಿಕ ತಾಣಗಳ ತನಕ ಹಿಗ್ಗಾ ಮುಗ್ಗಾ ಮೂದಲಿಸಿದರು. ಧೋನಿಯನ್ನೂ ಬಿಡಲಿಲ್ಲ. ಧೋನಿ ಮತ್ತು ಇಶಾಂತ್ ಸಲಿಂಗ ಕಾಮಿಗಳಂತೆ, ಅದಕ್ಕೆ ಧೋನಿ ಇಶಾಂತ್ ನನ್ನೇ ಆಡಿಸುವ ಬಗ್ಗೆ ಹಠ ತೊಡುತ್ತಾನಂತೆ....ಅಂತೆ ಕಂತೆ. ತಂಡಗಳ ಮೇಲಿನ ವ್ಯಾಮೋಹ, ನಿಷ್ಠೆ ಆಟದ ನಿಜವಾದ ಆಕರ್ಷಣೆ, ಮತ್ತು ಸೊಗಸನ್ನು ಆಸ್ವಾದಿಸದಂತೆ ಮಾಡಿ ಬಿಡುತ್ತದೆ. ನಮ್ಮ ದೇಶದ ತಂಡವನ್ನ ಖಂಡಿತ ಬೆಂಬಲಿಸಬೇಕು , ಆದರೆ ಆಟ  ಒಂದು ಘಟ್ಟ ತಲುಪಿದ ಕೂಡಲೇ, ನಮ್ಮವರು ಪ್ರಯತ್ನಿಸಿಯೂ ಸೋತಾಗ,  ಎದುರಾಳಿಯ ಆಟದ ವೈಖರಿಯನ್ನು, ಕೆಚ್ಚನ್ನು ಮೆಚ್ಚಲೇ ಬೇಕು. ಪ್ರತೀ ಸಲವೂ ನಾವು ಗೆಲ್ಲಲಾಗುವುದಿಲ್ಲ. 

೩೦ ರನ್ ಕೊಟ್ಟು ಭಾರತ ಸೋಲುವಂತೆ ಮಾಡಿದ ಇಶಾಂತ್ ಶರ್ಮನ ರೀತಿಯ ಕಥೆಯ ಮತ್ತೊಬ್ಬ ಶರ್ಮ ನದು. ಅವನೇ ನಮ್ಮಾ ಚೇತನ್ ಶರ್ಮಾ. ಇಸವಿ ೧೯೮೬. ಶಾರ್ಜಾ ನಗರ. ಗೆಲ್ಲಲು ಪಾಕಿಸ್ತಾನಕ್ಕೆ ಬೇಕು, ನಾಲ್ಕು ರನ್ನುಗಳು. ೫೦ ನೆ ಓವರಿನ ಕೊನೆಯ ಚೆಂಡಿನಲ್ಲಿ ಈ ನಾಲ್ಕು ರನ್ ಗಳು ಬೇಕು. ಚೇತನ್ ಹಾಕುತ್ತಾನೆ ಫುಲ್ ಟಾಸ್, ಬ್ಯಾಟ್ ಮಾಡುತ್ತಿದ್ದ ಜಾವೇದ್ ಮಿಯಂದಾದ್ ಚೆಂಡನ್ನು ಬೌಂಡರಿಯ ಆಚೆಗೆ ಅಟ್ಟುತ್ತಾನೆ, ಸಿಕ್ಸರ್ ಗಾಗಿ. ಇಡೀ ದೇಶ ದುಃಖದ ಮಡುವಿನಲ್ಲಿ ಮುಳುಗುತ್ತದೆ, ಚೇತನ್ ಶರ್ಮನಿಗೆ ಹಿಡಿ ಹಿಡಿ ಶಾಪ ಹಾಕುತ್ತಾ.

ನಿನ್ನೆ ರಾತ್ರಿಯೂ ಎಲ್ಲರೂ ಮಲಗಲು ಹೋಗಿದ್ದು ಇಶಾಂತ್ ಶರ್ಮ ನಿಗೆ ಶಾಪ ಹಾಕಿಯೇ. ಆದರೆ ಇಶಾಂತ್ ಧೃತಿಗೆಡಬಾರದು. ನಾಯಕ ಇಟ್ಟ ವಿಶ್ವಾಸಕ್ಕೆ, ೩೦ ರನ್ ಬಾರಿಸಿದ "ಜೇಮ್ಸ್ ಫಾಕ್ನರ್" ನ ಹುರುಪಿನ ಮಾತಿಗೆ ತಕ್ಕಂತೆ ಆಡಿ ಕ್ರಿಕೆಟ್ ಆಟಕ್ಕೆ ಕೀರ್ತಿ ತರಬೇಕು.       

Rating
No votes yet