ಈ ಕವಿಗಳೇ ಹೀಗೆ!!!

ಈ ಕವಿಗಳೇ ಹೀಗೆ!!!

ಸಖೀ,

ಕವಿ ಬರೇ ಕವಿತೆಗಳನ್ನಷ್ಟೇ ರಚಿಸುತ್ತಿರುತ್ತಾನೆ
ಅಂತ ಅಂದರೆ ಅದು ತಪ್ಪಾಗುತ್ತದೆ ತಾನೆ

ಆದದ್ದನ್ನೆಲ್ಲಾ ಈತ ಒಮ್ಮೊಮ್ಮೆ ಆಗಿಲ್ಲವೆನ್ನುತ್ತಾನೆ
ಆಗದ್ದನ್ನೆಲ್ಲಾ ಕೆಲವೊಮ್ಮೆ ಆಗಿದೆಯೆನ್ನುತ್ತಾನೆ

ಕಾಣದ್ದನ್ನೂ ಈತ ನಿಜಕ್ಕೂ ಕಂಡವರಂತಾಡುತ್ತಾನೆ
ಕಂಡದ್ದನ್ನೂ ಬೇಕೆಂದೇ ಮರೆಯಲೆತ್ನಿಸುತ್ತಾನೆ

ಒಮ್ಮೊಮ್ಮೆ ನಗುವವರ ನಡುವೆ ಒಬ್ಬನೇ ಅಳುತ್ತಾನೆ
ಅವರಿವರ ಹೃದಯಗಳ ಚುಚ್ಚಿ ಬರಿದೇ ಅಳಿಸುತ್ತಾನೆ

ಅಳುವವರ ನಡುವೆ ಈತ ತಾನೊಬ್ಬನೇ ನಗುತ್ತಾನೆ
ಅವರಿಗೂ ಕಚಗುಳಿಯಿಟ್ಟು ತನ್ನೊಡನೆ ನಗಿಸುತ್ತಾನೆ

ಕವಿಯನ್ನು ಹೊಗಳಲು ಹೋದರೆ ಈತ ನಮ್ಮನ್ನೇ
ಟೀಕಿಸುವ ಚುಟುಕವೊಂದನ್ನು ಬರೆದು ಬಿಡುತ್ತಾನೆ

ಅವನನ್ನು ತೆಗಳುವ ಪ್ರಯತ್ನ ಮಾಡಿದರೆ ತನ್ನ ಹೊಸ
ರಚನೆಯಿಂದ ನೋಡು, ನಮ್ಮ ಮನಸ್ಸನ್ನೇ ಗೆಲ್ಲುತ್ತಾನೆ

ನಮ್ಮೆಲ್ಲರ ನಡುವೆ ಇದ್ದೂ ಈತ ಇಲ್ಲದಂತೆ ಇರುತ್ತಾನೆ
ತನ್ನದೇ ಲೋಕದಲ್ಲಿ ಸದಾ ಒಂಟಿ ವಿಹರಿಸುತ್ತಿರುತ್ತಾನೆ

ಎಂದೂ ಕಾಣದವರ ಬಣ್ಣಿಸಿ ಹೊಗಳಿ ಅಟ್ಟಕ್ಕೇರಿಸುತ್ತಾನೆ
ಕಣ್ಣೆದುರು ದಿನಾ ಕಾಂಬವರ ಬರಿದೇ ತೆಗಳುತ್ತಿರುತ್ತಾನೆ

ಯಾರು ಯಾರನ್ನೋ ಕವಿ ತನ್ನವರೆಂದು ಅನ್ನುತ್ತಾನೆ
ತನ್ನವರನ್ನೇ ನಿಜದಿ ಈತ ಕೆಲವೊಮ್ಮೆ ಮರೆತಿರುತ್ತಾನೆ

ತನ್ನವರಲ್ಲದವರ ಮನದಿ ಮನೆಮಾಡಿರುತ್ತಾನೆ
ಮನೆ ಮಂದಿಯ ಮನವ ನೋಯಿಸುತ್ತಿರುತ್ತಾನೆ

ಈತನ ಕಲ್ಪನಾ ಲೋಕದಲ್ಲಿ ಮಿಥ್ಯವೆಲ್ಲವೂ ಸತ್ಯ
ಈತನಿಗೆ ಒಮ್ಮೊಮ್ಮೆ ಅಲ್ಲಿ ಸತ್ಯವೆಲ್ಲವೂ ಮಿಥ್ಯ

ಕವಿ ಬರೇ ಕವಿತೆಗಳನ್ನಷ್ಟೇ ರಚಿಸುತ್ತಿರುತ್ತಾನೆ
ಅಂತ ಅಂದರೆ ಅದು ತಪ್ಪಾಗುತ್ತದೆ ತಾನೆ
*-*-*-*-*-*-*-*-*-*-*-*-*-*-*-*

Rating
No votes yet