ಉಡುಗೊರೆಯೊಂದಾ ತಂದ ಎನ್ನಯ ಮನದಾನಂದ ... (ರಾಗ ಮೋಹನ - ಭಾಗ ೩)

ಉಡುಗೊರೆಯೊಂದಾ ತಂದ ಎನ್ನಯ ಮನದಾನಂದ ... (ರಾಗ ಮೋಹನ - ಭಾಗ ೩)

ಕಳೆದ ಕಂತಿನಲ್ಲಿ ಮೋಹನ ರಾಗದ ಬಗ್ಗೆ ಸ್ವಲ್ಪ ಹೇಳಿದ್ದೆ. ಈ ಕಂತಿನಲ್ಲಿ ಇನ್ನು ಕೆಲವು ಮಧುರ ಗೀತೆಗಳೊಂದಿಗೆ ಮೋಹನದ ಮೋಹದಲ್ಲಿ ಬೀಳೋಣ. ಕಳೆದ ಬಾರಿ ಬರೀ ರಾಗದ ಆರೋಹಣ ಅವರೋಹಣವನ್ನು ಮಾತ್ರ ಕೊಟ್ಟಿದ್ದೆ. ವೈಭವ ಅವರು ಅಷ್ಟೇ ಸಾಕೇ ರಾಗವನ್ನು ಗುರುತಿಸಲು ಎಂದು ಕೇಳಿದ್ದರು. ನಿಜವಾಗಿ ಹೇಳಿದರೆ. ಅಷ್ಟೇ ಸಾಲದು. ಹಾಗಾಗಿ, ಈ ಬಾರಿ ಆ ವಿಷಯವನ್ನು ಸ್ವಲ್ಪ ಹೇಳುವೆ.

ಏಳು ಸ್ವರವು ಸೇರಿ ಸಂಗೀತವಾಯಿತು ಎಂಬ ಚಿತ್ರಗೀತೆಯನ್ನು ನೀವೆಲ್ಲ ಕೇಳೇ ಇರುತ್ತೀರಿ. ಈ ಏಳು ಸ್ವರಗಳನ್ನು ನಾವು ಷಡ್ಜ, ರಿಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ ಮತ್ತು ನಿಷಾದ ಎಂದು ಹೆಸರಿಸುತ್ತೇವೆ. ಈ ಹೆಸರುಗಳನ್ನು ಸುಲಭವಾಗಿ ಹಾಡಲು ಅನುಕೂಲವಾಗುವಂತೆ ಸ ರಿ ಗ ಮ ಪ ದ ನಿ ಎಂಬ ಸಂಕೇತಗಳಿಂದ ಗುರುತಿಸುವುದೇ ರೂಢಿ. ಸಂಗೀತದಲ್ಲಿ ಇರುವುದು ಏಳು ಸ್ವರಗಳೇ ಎಂದು ಹೇಳಿದರೂ, ಅವು ಏಳಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಹೊಂದಬಲ್ಲವು. ಏಳು ಸ್ವರಗಳಲ್ಲಿ, ಸ ಮತ್ತು ಪ ಎರಡೂ ಒಂದೇ ಪ್ರಭೇದವುಳ್ಳವು. ಇವುಗಳಲ್ಲಿ ಬದಲಾವಣೆ ಇಲ್ಲದ್ದರಿಂದ, ಇವನ್ನು ಪ್ರಕೃತಿ ಸ್ವರಗಳು ಎನ್ನುತ್ತೇವೆ. ರಿ, ಗ, ಮ, ದ, ನಿ  - ಈ ಸ್ವರಗಳು ಬೇರೆ ಬೇರೆ ರಾಗಗಳಲ್ಲಿ, ಬೇರೆ ಬೇರೆ ಸ್ಥಾನಗಳಲ್ಲಿ ಇರಬಹುದಾದ್ದರಿಂದ ಅವುಗಳಿಗೆ ವಿಕೃತಿ ಸ್ವರಗಳು ಎನ್ನುತ್ತೇವೆ. ಒಂದು ಸಪ್ತಕವು ಮಧ್ಯ ಸ್ಥಾಯಿ ಷಡ್ಜದಿಂದ ಪ್ರಾರಂಭವಾಗಿ, ತಾರಸ್ಥಾಯಿ ಷಡ್ಜದಲ್ಲಿ ಕೊನೆಗೊಳ್ಳುತ್ತದೆ. ಮಧ್ಯಸ್ಥಾಯಿ ಸ ವನ್ನು ಆಧಾರ ಷಡ್ಜ ಎಂದೂ ಕರೆಯುತ್ತೇವೆ. ನಾವು ಹಾಡುವಾಗ ಹೆಚ್ಚಿನಂಶ ಮಧ್ಯಸ್ಥಾಯಿಯಲ್ಲೇ ಸಂಚರಿಸುತ್ತಿರುತ್ತೇವೆ. ತಾರ ಷಡ್ಜಕ್ಕಿಂತ ಮೇಲಿನ ಸ್ವರಗಳು ತಾರಸ್ಥಾಯಿಯವು. ಆಧಾರ ಷಡ್ಜಕ್ಕೂ ಕೆಳಗಡೆ ಇರುವುದು ಮಂದ್ರ ಸ್ಥಾಯಿ. (ಭೈರಪ್ಪನವರ ಮಂದ್ರ ಕಾದಂಬರಿಯನ್ನು ನೆನಪಿಸಿಕೊಳ್ಳಿ!)

ಕರ್ನಾಟಕ ಸಂಗೀತದಲ್ಲಿ, ರಿ, ಗ, ದ, ನಿ ಗಳಲ್ಲಿ ೩ ವಿಧಗಳೂ, ಮ ಸ್ವರದಲ್ಲಿ ೨ ವಿಧಗಳೂ ಇವೆ ಎಂದು ಮಾತ್ರ ಸಧ್ಯಕ್ಕೆ ಇಟ್ಟುಕೊಳ್ಳೋಣ. ( ಅತೀ ಹೆಚ್ಚಾದರೆ ಅಜೀರ್ಣ!) . ಈ ವಿಧಗಳನ್ನು, ರಿ೧, ರಿ೨, ರಿ೩, ಗ೧, ಗ್೨, ಗ್೩ ಎಂದು ಮುಂತಾಗಿ ಸೂಚಿಸುತ್ತೇವೆ. ಇದರೆ ಬಗ್ಗೆ ಇನ್ನೊಮ್ಮೆ ಮಾತಾಡಬಹುದು.

ಮೋಹನ ರಾಗವನ್ನು ಈ ರೀತಿಯಲ್ಲಿ ತೋರಿಸಬಹುದು.

ಸ ರಿ೨ ಗ್೩ ಪ ದ೨ ಸ*

ಸ* ದ೨ ಪ ಗ೩ ರಿ೨ ಸ

ಸ ಮತ್ತು ಪ ಗಳಿಗೆ ಸಂಖ್ಯೆ ಜೋಡಿಸಿಲ್ಲ ಎಂಬುದನ್ನು ಗಮನಿಸಿ. ಏಕೆ? ಏಕೆಂದರೆ ಆ ಸ್ವರಗಳಲ್ಲಿ ಪ್ರಭೇದಗಳೇ ಇಲ್ಲ. ಮತ್ತೆ ಸ* ಎಂಬುದು ತಾರ ಷಡ್ಜವನ್ನು ಸಂಕೇತಿಸುತ್ತದೆ. ಸಂಗೀತವನ್ನು ಬರೆಯುವಾಗ ಇದನ್ನು ಸ ಮೇಲೆ ಒಂದು ಚುಕ್ಕಿ ಹಾಕಿ ತೋರಿಸಲಾಗುತ್ತದೆ. ಇಲ್ಲಿ ಆ ಸೌಕರ್ಯವಿಲ್ಲದ್ದರಿಂದ, * ಹಾಕಿದ್ದೇನೆ.

ಮರೆಯುವ ಮೊದಲು ಇನ್ನೊಂದು ವಿಷಯ ಹೇಳಿಬಿಡುತ್ತೇನೆ. ಭಾರತೀಯ ಸಂಗೀತದಲ್ಲಿ, ಆಧಾರ ಷಡ್ಜ ಇಂತಲ್ಲೇ ಬರಬೇಕೆಂದು ಏನೂ ಇಲ್ಲ. ಹಾಡುವವರ, ವಾದ್ಯ ನುಡಿಸುವವರ ಅನುಕೂಲಕ್ಕೆ ತಕ್ಕಂತೆ ಆದಾರಷಡ್ಜ ನಿರ್ಧಾರಿತವಾಗುತ್ತದೆ. ಇತರ ಸ್ವರಗಳು, ಇದಕ್ಕೆ ಅನುಗುಣವಾಗಿ ಬದಲಾಗುತ್ತವೆ. ಪಾಶ್ಚಾತ್ಯ ಸಂಗೀತಕ್ಕೂ ಭಾರತೀಯ ಸಂಗೀತಕ್ಕೂ ಇದೊಂದು ಮುಖ್ಯ ವ್ಯತ್ಯಾಸ. ಆಧಾರ ಷಡ್ಜದ frequency x hz  ಆಗಿದ್ದರೆ, ತಾರ ಷಡ್ಜ 2x hz ಆಗಿರುತ್ತದೆ. ಮತ್ತೆ ಪಂಚಮ? ಅದು ಒಂದು ಸ್ಥಾಯಿದ ಮಧ್ಯ ಭಾಗ - ಎಂದರೆ ಅದರ frequency 1.5x hz. ಇದು ಮನಸ್ಸಿನಲ್ಲಿ ಇರಬೇಕಾದ ವಿಚಾರ.

ಸರಿ, ಇಷ್ಟೇ ಸಾಕೇ? ನಿಮಗೆ ಸ್ವರಗಳನ್ನೇ ತೋರಿಸುವ ಎಂದರೆ ಈ ಪುಟಕ್ಕೆ ಹೋಗೋಣ:

 http://www.apronus.com/music/flashpiano.htm

ಈ ಪುಟವನ್ನು ತೆರೆದರೆ, ನಿಮಗೆ ಒಂದು ಕೀಬೋರ್ಡ್ ಕಾಣುತ್ತದೆ. ಅದರಲ್ಲಿ ಕೆಲವು ಕೀ ಗಳು ಬಿಳುಪಾಗಿದ್ದರೆ, ಕೆಲವು ಕಪ್ಪು ಎಂಬುದನ್ನು ನೀವು ಗಮನಿಸಿರಬಹುದು. ಎಡಗಡೆಯಿಂದ ಬಿಳೀ ಮನೆಗಳನ್ನೂ, ಕರೀ ಮನೆಗಳನ್ನೂ ಬೇರೆಬೇರೆಯಾಗಿ ಎಣಿಸುತ್ತಾ ಬರುವುದು ಪದ್ಧತಿ. ಎಂದರೆ, ಎಡಗಡೆಯಿಂದ ಬಂದರೆ ಮೊದಲ ಮನೆ ಬಿಳಿ ಒಂದು. ಆಮೇಲೆ ಕರಿ ಒಂದು. ಮತ್ತೆ ಬಿಳಿ ಎರಡು, ಕರಿ ಎರಡು, ಬಿಳಿ ಮೂರು, ಬಿಳಿ ನಾಕು ಹೀಗೆ ಎಣಿಕೆ ಮುಂದುವರೆಯುತ್ತೆ.

ನಮ್ಮ ಸಂಗೀತದಲ್ಲಿ ಸ್ ಎಲ್ಲಿಂದ ಬೇಕಾದರೂ ಇರಬಹುದು ಎಂದು ಹೇಳಿದೆ. ಈಗ ಸುಲಭವಾಗಿ ಮೋಹನದ scale ಕೇಳುವುದು ಹೇಗೆ? ಕರಿ ಮೂರರಿಂದ ಎಂಟರವರೆಗೆ ನುಡಿಸಿ. ಇದು ಮೋಹನದ ಆರೋಹಣ. ಈಗ ಕರಿ ಮೂರು ನಿಮ್ಮ ಆಧಾರ ಷಡ್ಜ. ಕರಿ ಎಂಟು ನಿಮ್ಮ ತಾರ ಷಡ್ಜ. ನಾಲ್ಕಾರು ಬಾರಿ ನುಡಿಸಿಕೊಳ್ಳಿ. ಈಗ ಮತ್ತೆ ಹೋದ ಬಾರಿ ಕೇಳಿದ ಜೇನಿನ ಹೊಳೆಯೋ ಗೀತೆ ನೆನೆಸಿಕೊಳ್ಳಿ - ಏನಾದರೂ ಹೋಲಿಕೆ ಕಂಡಿತೇ? ಕಂಡಿತಾದರೆ, ನಾನು ಇಷ್ಟು ಬರೆದದ್ದು ಸಾರ್ಥಕ!

on-line keybord ಅಲ್ಲದೆ, ನಿಜವಾದ ಕೀ ಬೋರ್ಡೇ ಆಗಲಿ, ಹಾರ್ಮೋನಿಯಮ್ ಆಗಲಿ ನಿಮ್ಮ ಬಳಿ ಇದ್ದರೆ, ಅದರಲ್ಲೂ ನೀವು ನುಡಿಸಿ ನೋಡಿಕೊಳ್ಳಬಹುದು.

ಸರಿ, ಇಷ್ಟೂ ಬರಿ theory ಆಯ್ತು ಅಂದಿರಾ? ಈಗ ಸ್ವಲ್ಪ ಉದಾಹರಣೆಗಳತ್ತ ಗಮನಿಸೋಣ. ಈ ಮೊದಲೇ ಹೇಳಿದ ಹಾಗೆ, ಮೋಹನ ರಾಗವನ್ನು ಕನ್ನಡ ಚಿತ್ರ ರಂಗದಲ್ಲಿ ಆ ಕಾಲದಿಂದ ಈ ಕಾಲದವರೆಗೂ ಉಪಯೋಗಿಸುತ್ತಾ, ಹಲವು ಜನಪ್ರಿಯ ಗೀತೆಗಳನ್ನು ಈ ರಾಗದಲ್ಲಿ ಸಂಯೋಜಿಸುತ್ತ ಬಂದಿದ್ದಾರೆ.

ಮೊದಲಿಗೆ ಆ ಕಾಲದ ಕೆಲವು ಹಾಡುಗಳನ್ನು ಕೇಳೋಣ. ತೆಲುಗಿನಿಂದ ಕನ್ನಡಕ್ಕೆ ಬಂದ ಮಾಯಾ ಬಜಾರ್ ಚಿತ್ರದ ಈ ಮಧುರವಾದ ಹಾಡು ಮೊದಲಿಗಿರಲಿ. ಹಾಡಿರುವವರು ಘಂಟಸಾಲ ಮತ್ತು ಪಿ.ಲೀಲಾ : 

ಸಾಗಲಿ ತೇಲಿ ತರಂಗದೊಳು:  http://www.udbhava.com/udbhava/songs.jsp?id=210

ಈ ಹಾಡು ಕೆಳಗಿನ ಷಡ್ಜದಲ್ಲಿ ಪ್ರಾರಂಭವಾಗುವುದನ್ನು ಗಮನಿಸಿ. ಕೇಳುತ್ತಾ, ನೀವೇ ತರಂಗದೊಳಗೆ ತೇಲುವ ಭಾವನೆಯುಂಟಾದರೆ, ಅದಕ್ಕೆ ಮೋಹನರಾಗವೇ ಕಾರಣ. ಈ ರಾಗ ಹಲವು ರಸಗಳನ್ನು ಉಂಟುಮಾಡಬಲ್ಲದು.

ಇದರ ನಂತರ ಇನ್ನೊಂದು classic ಚಿತ್ರಗೀತೆ.  ಟಿ.ಜಿ. ಲಿಂಗಪ್ಪ ಅವರ ನಿರ್ದೇಶನದಲ್ಲಿ ಸ್ಕೂಲ್ ಮಾಸ್ಟರ್ ಚಿತ್ರದಿಂದ:

ರಾಧಾ ಮಾಧವ ವಿನೋದ ಹಾಸ: http://www.udbhava.com/udbhava/songs.jsp?id=153

ಸಾಗಲಿ ತೇಲಿ ತರಂಗದೊಳು ಗೀತೆ ಹೆಚ್ಚಾಗಿ ಮಧ್ಯಸ್ಥಾಯಿಯಲ್ಲೇ ಸಂಚರಿಸಿದರೆ, ರಾಧಾ ಮಾಧವರು ಹೆಚ್ಚಿಗೆ ತಾರ ಸ್ಥಾಯಿಯಲ್ಲೇ ಸಂಚರಿಸುವುದನ್ನು ನೋಡಿ. ಮೋಹನ ರಾಗ ಮೂರೂ ಸ್ಥಾಯಿಗಳಲ್ಲೂ ಸಂಚಾರವುಳ್ಳಂತಹ ರಾಗ. ಇಂತಹ ರಾಗಗಳಿಗೆ ಸಂಗೀತದ ಪರಿಭಾಷೆಯಲ್ಲಿ ತ್ರಿಸ್ಥಾಯಿ ರಾಗ ಎನ್ನುತ್ತೇವೆ. ಸ್ಕೂಲ್ ಮಾಸ್ಟರ್ ಚಿತ್ರದ ಪುಟ ತೆರೆದಾಗ, ಅಲ್ಲಿ ಕಾಣುವ ಲಾಂಛನ ಧ್ವನಿಯನ್ನು (ಪಟ್ಟಿಯಲ್ಲಿ ಮೊದಲನೆಯದು) ಮರೆಯದೆ ಕೇಳಿ. ಅದೂ ಕೂಡ ಮೋಹನ ರಾಗವೇ.

ಇನ್ನು ಅರವತ್ತರ ದಶಕಕ್ಕೆ ಬರೋಣ. ರಾಜ್ -ಕಲ್ಪನಾ-ಹರಿಣಿ ಅವರ ಉತ್ತಮ ಅಭಿನಯವಿರುವ ಚಿತ್ರ ನಾಂದಿ. ವಿಜಯ ಭಾಸ್ಕರ್ ಸಂಯೋಜನೆಯಲ್ಲಿ ಈ  ಚಿತ್ರದಿಂದಾಯ್ದ ಮೋಹನ ರಾಗದ ಮಧುರ ಗೀತೆ, ಜಾನಕಿಯವರ ಸವಿಕಂಠದಲ್ಲಿ ಕೇಳಿ.

ಉಡುಗೊರೆಯೊಂದ ತಂದ ಎನ್ನಯ ಮನದಾನಂದ: http://www.udbhava.com/udbhava/songs.jsp?id=704

ಈ ಗೀತೆ ಸ್ವಲ್ಪ ವಿಶಿಷ್ಟವಾದ್ದು. ಇದು ಮಂದ್ರ ಪಂಚಮದಿಂದ ಮಧ್ಯಸ್ಥಾಯಿ ದ ವರೆಗೆ ಮಾತ್ರ ಸಂಚರಿಸುತ್ತದೆ. ಸಾಮಾನ್ಯವಾಗಿ ಎಲ್ಲ ಗೀತೆಗಳಲ್ಲು ಸ ಸ್ವರವು pivotal note ಆಗಿರುವುದು ರೂಢಿ. ಅದನ್ನು ಸಂಗೀತದ ಭಾಷೆಯಲ್ಲಿ ಗ್ರಹ ಸ್ವರ ಎನ್ನುತ್ತೇವೆ. ಈ ಹಾಡಿನಲ್ಲಿ ಷಡ್ಜದ ಬದಲು ಗಾಂಧಾರ (ಗ) ವನ್ನು pivotal note ಆಗಿ ಬಳಸಲಾಗಿದೆ. ಹಾಗಾಗಿ, ಇದು ಮೋಹನಕ್ಕಿಂತ ಸ್ವಲ್ಪ ಬೇರೆಯಾದ ಭಾವನೆಯನ್ನೂ ತರಬಹುದು. ಹಿಂದೂಸ್ತಾನಿಯಲ್ಲಿ ಇದನ್ನೇ ಪಹಾಡಿ ಎಂದೂ ಹೆಸರಿಸುವುದುಂಟು. ಆದರೆ, ಪಹಾಡಿಯಲ್ಲಿ ಉಪಯೋಗಿಸುವ ಅನ್ಯ ಸ್ವರಗಳಿಲ್ಲದೆ ( ಅನ್ಯ ಸ್ವರ ಎಂದರೇನು ಅಂತ ಇನ್ನೊಮ್ಮೆ ಬರೆಯುತ್ತೇನೆ) ಇರುವುದರಿಂದ, ನಾನು ಇದನ್ನು ಮೋಹನದಲ್ಲೇ ಸೇರಿಸಿದ್ದೇನೆ.

ಮೋಹನ ರಾಗದ ವಿವಿಧ ಭಾವಗಳನ್ನು ಅರಿಯಲು ಈ ಉದಾಹರಣೆಗಳು ಸ್ವಲ್ಪ ಸಹಾಯ ಮಾಡಿವೆ ಎಂದೆಣಿಕೆ. ಇನ್ನೂ ಮತ್ತಷ್ಟು ಸುಂದರ ಗೀತೆಗಳು, ಮತ್ತು ಸ್ವಲ್ವ theory (ಅಂದ ಹಾಗೆ ಇದಕ್ಕೆ ಸಂಗೀತದ ಭಾಷೆಯಲ್ಲಿ ಲಕ್ಷಣ ಎಂದು ಹೆಸರು) ಜೊತೆಗೆ ಮತ್ತೆ ಹಾಜರಾಗುತ್ತೇನೆ.

ಈ ಭಾಗ ಏನೆನ್ನಿಸಿತೆಂಬ ಬಕ್ಕೆ ಎರಡು ಸಾಲು ಬರೆದು ತಿಳಿಸಿ :)

-ಹಂಸಾನಂದಿ

Rating
No votes yet

Comments