ಉತ್ತರ ಭಾರತದ ಪ್ರವಾಸ ಕಥನ - ಭಾಗ ೧

ಉತ್ತರ ಭಾರತದ ಪ್ರವಾಸ ಕಥನ - ಭಾಗ ೧

ಮೊದಲು ನಡೆದ ಪ್ರವಾಸದ ಯೋಜನೆ:

ಪ್ರತಿವರ್ಷ ಮಗನ ರಜೆಯ (ಏಪ್ರಿಲ್ ಅಥವ ಮೇ ತಿಂಗಳು) ದಿನಗಳಲ್ಲಿ, ಎಲ್ಲಾದರೂ ಸರಿ, ಒಂದು ನಾಲ್ಕೈದು ದಿನಗಳ ಮಟ್ಟಿಗಾದರೂ ಸರಿ, ಬೆಂಗಳೂರಿಂದ ಹೊರಗೆ ಹೋಗುವ ಅಭ್ಯಾಸ ಮಾಡಿಕೊಂಡಿದ್ದೇವೆಂದರೆ ತಪ್ಪಾಗಲಾರದು. ಸರಿ, ಈ ಬಾರಿ ಎಲ್.ಟಿ.ಸಿ (ಯಜಮಾನರಿಗೆ ಆ ಸೌಲಭ್ಯವಿದೆ) ಸೌಲಭ್ಯ ಪಡೆದು ಉತ್ತರ ಭಾರತದ ಕಡೆಗೆ ಹೋಗೋಣವೆಂದು ಯೋಚನೆ ಮಾಡಿದೆವು. ಆಗ ಯಾರ ಜೊತೆ ಹೋಗುವುದು ಅಂತ ಯೋಚಿಸುತ್ತಿದ್ದಾಗ ನಮ್ಮ ತಲೆಗೆ ಬಂದದ್ದು ಶ್ರೀಕಾಂತ ಕುಟುಂಬ. (ಈ ಹಿಂದೆ ಅವರ ಜೊತೆ ನಾವು ಕುದುರೆಮುಖ ಕ್ಕೆ ಹೋಗಿ ಬಂದಿದ್ದೆವು). ಮೊದಮೊದಲು ಶ್ರೀಕಾಂತ್ ಏಪ್ರಿಲ್ ನಲ್ಲಿ ಬೇಡ, ಬೇಕಾದಷ್ಟು ಫಂಕ್ಷನ್ಸ್ ಇದೆ (ತೀರ ಹತ್ತಿರದವರ), ಅಕ್ಟೋಬರ್ ನಲ್ಲಿ ಹೋಗೋಣವೆಂದರು. ಅದಕ್ಕೆ ನಾವು ಅಕ್ಟೋಬರ್ ನಲ್ಲಿ, ಶಾಲೆಗೆ ಹದಿನೈದು ದಿನಗಳ ಮಾತ್ರ ರಜೆ ಇರುತ್ತೆ, ಅದು ಅಲ್ಲದೆ ಜೊತೆಗೆ ದಸರ ಹಬ್ಬ ಬೇರೆ, ಉತ್ತರ ಭಾರತದಲ್ಲಿ ಮಳೆಗಾಲ ತೊಂದರೆಯಾಗುತ್ತದೆ. ಈಗಲೇ ಹೋಗೋಣವೆಂದು ಪಟ್ಟುಹಿಡಿದೆವು. ಫೆಬ್ರವರಿ ೧೩, ೨೦೦೯ ರಂದು ಸಂಜೆ, ಪದ್ಮ (ಶ್ರೀಕಾಂತ್ ಧರ್ಮಪತ್ನಿ) ಮತ್ತೆ ಶ್ರೀಕಾಂತ್ ಕರೆ ಮಾಡಿ "ರೀ ನಾವು ಟೂರ್ ಗೆ ಬರೋಣ ಅಂತ ಇದೀವಿ", ಎಂದರು. ತಕ್ಷಣ ನಮ್ಮ ಕಡೆಯಿಂದ ಬಂದ ಉತ್ತರ ಸರಿ, ಪ್ರಸಾದ್ (ಅವರ ಪೂರ್ಣ ಹೆಸರು ನರಸಿಂಹ ಪ್ರಸಾದ್, ಅವರ ಧರ್ಮಪತ್ನಿ ಗೀತಾ ಪ್ರಸಾದ್) ಫ್ಯಾಮಿಲಿ ಕೂಡ ಬರ್ತಾರೆ. ಸಧ್ಯಕ್ಕೆ ಈಗ ಒಂದು ರಿಸೆಪ್ಶನ್ ಗೆ ಹೊರಟಿದ್ದೇವೆ. ನಾಳೆ ಮನೆಗೆ ಬಂದುಬಿಡು, ಇಂಟರ್ನೆಟ್ನಲ್ಲಿ ಟ್ರೀನ್ ಎಲ್ಲ ಬುಕ್ ಮಾಡೋಣ ಎಂದರು. ಆಗ ನನಗಾದ ಖುಷಿ ಅಷ್ಟಿಷ್ಟಲ್ಲ. (ದಿನಾ ಮನೆ, ಕಚೇರಿ, ಟ್ರಾಫಿಕ್ಕು ಅದು ಇದು ಅಂತ ಇದ್ದ ನನಗೆ ಖುಷಿ ಆಗದಲೇ ಇರುತ್ತ, ಅದೂ ಅಲ್ಲದೆ ನೋಡಿಲ್ಲದ ಸ್ಥಳವನ್ನು ನೋಡುವುದೆಂದರೆ ನನಗೆ ಎಲ್ಲಿಲ್ಲದ ಆನಂದ). ಸರಿ ಮಾರನೆಯ ದಿನದಿಂದ ಶುರು. ಟ್ರೀನ್ ಬುಕ್ ಮಾಡತೊಡಗಿದರು. ನಾವು ಮೂವರು ಹೆಂಗಸರು ದೂರವಾಣಿಯ ಮೂಲಕವೇ "ನಾವು ಇದು ತೊಗೊಂಡುಹೋಗಬೇಕು, ಅದನ್ನು ತೆಗೆದುಕೊಂಡುಹೋಗಬೇಕು, ಅಲ್ಲಿ ತುಂಬಾ ಚಳಿಯಂತೆ, ಕೆಲವು ಕಡೆ ತುಂಬಾ ಬಿಸಿಲಂತೆ ಅಂತೆಲ್ಲ ಮಾತಾಡಿ ಕಡೆಗೆ ಅಯ್ಯೋ ಇನ್ನು ಮಕ್ಕಳ ಪರೀಕ್ಷೆಯೆ ಮುಗಿದಿಲ್ಲ. ಮುಗಿದ ನಂತರ ಪ್ರವಾಸಕ್ಕೆ ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಳ್ಳೋಣವೆಂದು ತೀರ್ಮಾನಿಸಿದೆವು".

ಪ್ರವಾಸಕ್ಕೆ ಬೇಕಾದ ತಯಾರಿಗಳು, ತಯಾರಾದ ರೀತಿ:

ಮಕ್ಕಳ ಪರೀಕ್ಷೆಯು ಮುಗಿಯುವಷ್ಟರಲ್ಲಿ ನಾನು ಪ್ರವಾಸಕ್ಕೆ ಬೇಕಾದುದನ್ನು (ಅದರಲ್ಲೂ ಅತಿ ಮುಖ್ಯವಾದುದನ್ನು) ಕಚೇರಿಯಲ್ಲಿ ಊಟದ ಸಮಯದಲ್ಲಿ ಕುಳಿತು ಒಂದು ಪಟ್ಟಿ ಮಾಡಿದೆ. ಮುದ್ರಣ ಮಾಡಿ ಇಬ್ಬರ ಕುಟುಂಬಗಳಿಗೂ ತಲುಪಿಸಿದೆ. ಅದರ ಪ್ರಕಾರ ಎಲ್ಲ ತಯಾರಿ ಆರಂಭ. ಪ್ರವಾಸದ ದಿನ ಹತ್ತಿರವಿದ್ದಂತೆ ನಾವೆಲ್ಲರೂ ಮೀಟ್ ಮಾಡೋಣ ಅಂತ ಪ್ರಸಾದ್ ಹೇಳಿದ್ದರು. ನಾನು ಕಚೇರಿಯಿಂದ ಹಿಂದಿರುಗುವ ಸಮಯವನ್ನು ನೋಡಿ ಏಪ್ರಿಲ್ ೧೪ ೨೦೦೯, ಸಂಜೆ ೬:೩೦ಕ್ಕೆ ಶ್ರೀಕಾಂತ್ ಮನಯಲ್ಲಿ ಸೇರೋಣವೆಂದು ಪ್ರಸಾದ್ ಹೇಳಿದರು. ಹೇಳಿದ ಹಾಗೆ ನಾವೆಲ್ಲರು ಸೇರಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದೆವು (ಆ ದಿನ ನಮಗೆ ಕೊಡಲೆಂದೇ ಪದ್ಮ ತಯಾರಿಸಿದ್ದ ಪಾವ್ ಬಾಜಿಯಂತು ಸೂಪರಾಗಿತ್ತು). ರೈಲಿನಲ್ಲಿ ಊಟ ಒಂಚೂರು ಚೆನ್ನಾಗಿರೋದಿಲ್ಲ. ಜೊತೆಗೆ ನಮಗು ಸೇರೋದಿಲ್ಲ, ನಾವೇ ಒಂದು ದಿನಕ್ಕಾಗುವಷ್ಟು ಚಪಾತಿ, ಅದಕ್ಕೆ ಪಲ್ಯವನ್ನು ಪ್ಯಾಕ್ ಮಾಡಿಕೊಂಡು ಹೋಗೋಣವೆಂದರು ಗೀತಾ. ನಾನು ಹುಳಿ ಅನ್ನದ ಗೊಜ್ಜು (ಪುಳಿಯೋಗರೆ ಗೊಜ್ಜು), ಚಟ್ನಿಪುಡಿ, ಚೂಡಾ ತೆಗೆದುಕೊಂಡು ಬರುತ್ತೇನೆಂದೆ. ನಮಗೆ ಗೊತ್ತಿರೋ ಅಡಿಗೆ ಭಟ್ಟ (ರಾಜಶೇಖರ್)ರಿಂದ ೭೫ ಚಪಾತಿಯನ್ನು ಮಾಡಿಸಿ ತರುತ್ತೇನೆಂದೆ. ರಾಗಿ ಹುರಿಹಿಟ್ಟನ್ನು (ಅದಕ್ಕೆ ಬೇಕಾದ ಬೆಲ್ಲ, ಹುಣಸೇಹಣ್ಣಿನ ಪೇಸ್ಟ್) ಗೀತಾ ಮತ್ತೆ ಪದ್ಮ ತರುತ್ತೇವೆಂದರು. ಪ್ರಸಾದ್ ತುಂಬ ಚೆನ್ನಾಗಿ ಚುರುಮುರಿ ಮಾಡ್ತಾರೆ. ರೈಲಲ್ಲಿ ಇನ್ನೇನು ಕೆಲ್ಸ, ಪ್ರಸಾದ್ ಹತ್ರ ಚುರುಮುರಿ ಮಾಡ್ಸೋಣ ಎಂದರು ಗೀತಾ. ಅದಕ್ಕೂ ಒಪ್ಪಿದೆವು. ನಮ್ಮೆಜಮಾನ್ರು ಸ್ವಲ್ಪ ಹಸಿತರಕಾರಿ, ಹಣ್ಣುಗಳೂ ಬೇಕು ನನಗೆ ಎಂದರು. ಅದನ್ನು ಒಪ್ಪಿದೆವು. ಮಕ್ಕಳೀಗೋಸ್ಕರ ಒಂದಷ್ಟು ಚಾಕೊಲೇಟ್, ಬಿಸ್ಕತ್ತು ಅಂತ ನಮ ಪಟ್ಟಿಯಲ್ಲಿ ಸೇರಿಸಿಕೊಂಡೆವು. ಕಡೆಗೆ ಬಂದೇ ಬಿಟ್ಟಿತು ಏಪ್ರಿಲ್ ೧೭ನೇ ದಿನ.

ನಮ್ಮ ಪ್ರಯಾಣ:

೧೭ ಏಪ್ರಿಲ್ ೨೦೦೯ ರಂದು ನಾವೆಲ್ಲರೂ ಅವರವರ ಮನೆಯಲ್ಲಿ ರಾತ್ರಿಯ ಊಟ ಮುಗಿಸಿ, ಟ್ಯಾಕ್ಸಿ ಹತ್ತಿ (ಟ್ಯಾಕ್ಸಿ ಹತ್ತುತ್ತಿದ್ದಂತೆ ಮಳೆಯೂ ಶುರುವಾಯಿತು. ಶುಭಸೂಚನೆ ಎಂದರು ಗೀತಾ) ಯಶವಂತಪುರ ರೈಲ್ವೆ ನಿಲ್ದಾಣವನ್ನು ತಲುಪಿದೆವು. (ರೈಲ್ವೆ ನಿಲ್ದಾಣದಲ್ಲಿ ನಮ್ಮ ನಮ್ಮ ಲಗೇಜನ್ನು ಹೊರಲಾರದೆ ಹೊತ್ತುತ್ತಿದ್ದ ದೃಶ್ಯ ಈಗ ನೆನೆಸಿಕೊಂಡರೆ ನಗು ಬರ್ತಿದೆ). ರೈಲ್ವೆ ನಿಲ್ದಾಣಕ್ಕೆ ವಸಂತ್ (ನಮ್ಮೆಲ್ಲರ ಆಪ್ತರು) ನಮ್ಮನ್ನು ಕಳುಹಿಸಲು ಬಂದಿದ್ದರು. ಜೊತೆಗೆ ಸೀಡ್ಲೆಸ್ ದ್ರಾಕ್ಷಿ, ನಿಂಬೆಕಾಯಿಯ ಉಪ್ಪಿನಕಾಯಿ, ಟೊಮ್ಯಾಟೊ ಉಪ್ಪಿನಕಾಯಿಯನ್ನು, ವಸಂತ್ ನಮಗೆ ತಂದಿದ್ದರು. ರೈಲು ರಾತಿ ೯:೩೦ ಗೆ ಸರಿಯಾದ ಸಮಯಕ್ಕೆ ಹೊರಟೇಬಿಟ್ತಿತು. ನಾವೆಲ್ಲರು ರಾತ್ರಿಯ ಊಟ ಮಾಡಿ ಬಂದಿದ್ದೆವು. ಆದರೂ ವಸಂತ್ ತಂದಿದ್ದ ಸೀಡ್ಲೆಸ್ ದ್ರಾಕ್ಷಿ ನಮ್ಮೆಲ್ಲರಿಗೂ ತಿನ್ನುವಂತೆ ಮಾಡಿತು. ಪ್ಲಾಸ್ಟಿಕ್ ಕವರೊಳಗೆ ದ್ರಾಕ್ಷಿಯನ್ನು ತೊಳೆದು ನಾವೆಲ್ಲರು ತಿಂದು ಮಲಗಿದೆವು.

೧೮ರ ಬೆಳಿಗ್ಗೆ ಬೇಗನೆ ಎಚ್ಚರಿಸಿದರು ನಮ್ಮನೆಯವರು (ಅಯ್ಯೋ ಇದೇನು ಮನೇನಾ, ರೈಲು. ಏನು ಕೆಲಸವಿಲ್ಲ, ತಿಂಡಿ ಮಾಡಬೇಕೆಂಬುದಿಲ್ಲ, ಆದರೂ ಬೇಗ ಏಳಬೇಕೆ ಎಂದರು ಮಲಗಿದ್ದ ಪದ್ಮ). ಬೆಳಗಿನ ಕೆಲಸವೆಲ್ಲ ಮುಗಿಸಿ ನಂತರ ಅಯ್ಯೋ ಕಾಫಿ / ಟೀ ತಯಾರಿಸಲು ಎಲ್ಲ ಇದೆ (ನೆಸ್ಕೆಫೆ, ಟೀ ಬ್ಯಾಗ್, ಶುಗರ್ ಕ್ಯೂಬ್ಸ್, ಅಮೂಲ್ಯ ಹಾಲಿನ ಪುಡಿ ಎಲ್ಲ ತಂದಿದ್ದರು), ಆದರೆ ಬಿಸಿ ಮಾಡಲು ಏನು ಇಲ್ಲ ಅಂತ ಗೀತ ಗೊಣಗುತ್ತಿರುವಾಗಲೇ, ಪದ್ಮ "ರೀ ನಾವು ಎಲೆಕ್ಟ್ರಿಕ್ ಕೆಟಲ್ ತಂದಿದ್ದೇವೆ ಎಂದರು. ಗೀತಾ ಒಂದು ತರಹದ ನಿಟ್ಟುಸಿರು ಬಿಟ್ಟರು. ಕಡೆಗೆ ಪ್ರಸಾದ್ ಪ್ಯಾಂಟ್ರಿ ಗೆ ಹೋಗಿ ನೀರನ್ನು ಚೆನ್ನಾಗಿ ಕುದಿಸಿ ತಂದರು. ನಾವು ಹಾಲನ್ನು ತಯಾರಿಸಿ, ಕಾಫಿ ಬೇಕಾದವರಿಗೆ ಕಾಫಿ, ಟೀ ಬೇಕಾದವರಿಗೆ ಟೀ, ಮಕ್ಕಳಿಗೆ ಹಾಲನ್ನು ಕೊಟ್ತೆವು. ತಿಂಡಿಗೆ ಚಪಾತಿ ಜೊತೆಗೆ ಈರುಳ್ಳಿ ಗೊಜ್ಜನ್ನು ತಿಂದೆವು. ಮಧ್ಯಾಹ್ನ ಊಟಕ್ಕೆ ಪುಳಿಯೋಗರೆ, ಮೊಸರನ್ನ (ಗೀತಾ ಅನ್ನ ಮಾಡಿ ತಂದಿದ್ದರು). ತಂಗಳು ಅನ್ನವನ್ನು ಮುಟ್ಟದೇ ಇದ್ದ ನನ್ನ ಮಗನು ಕೂಡ ಅವತ್ತು ಪುಳೀಯೋಗರೆ, ಮೊಸರನ್ನವನ್ನು ಚೆನ್ನಾಗಿ ಬಾರಿಸಿದ. ಆಮೇಲೆ ಎಲ್ಲರು ಸ್ವಲ್ಪ ನಿದ್ರೆ ಹೋದರು. ಅದೇ ಸಂಜೆ ಶ್ರೀಕಾಂತ್ ಈರುಳ್ಳಿ ಹೆಚ್ಚಿದರು, ನಮ್ಮನೆಯವರು ಕ್ಯಾರೆಟನ್ನು ತುರಿದರು. ಚುರುಮುರಿಗೆ ಬೇಕಾದ ಪದಾರ್ಥವು ಜೊತೆಗಿದ್ದಿತು. ರೆಡಿಯಾಗೇ ಬಿಟ್ಟಿತು ಚುರುಮುರಿ. ಮಧ್ಯದಲ್ಲಿ (ರೈಲಿನಲ್ಲಿ) ತಿನ್ನಲು ತರಕಾರಿಗಳೂ ಇದ್ದವು. ನಾಗಪುರ್ ಬರುತ್ತಿದ್ದಂತೆ ಶ್ರೀಕಾಂತ್ ಒಂದಷ್ಟು ಕಿತ್ತಳೆಹಣ್ಣನ್ನು ಕೊಂಡುಕೊಂಡರು. ಸುಮಾರು ೬ ಗಂಟೆಗೆ (ಸಂಜೆ) ಕಿತ್ತಳೆಹಣ್ಣಿನ ಜ್ಯೂಸನ್ನು (ಜ್ಯೂಸ್ ತಯಾರಿಸಬಹುದಾದ ಟಪ್ಪರ್ ವೇರ್ ಬಾಟಲನ್ನು ಪದ್ಮ ತಂದಿದ್ದರು) ಮಾಡಿ ಎಲ್ಲರಿಗೂ ಕೊಟ್ಟು, ನಾವು ಕುಡಿದೆವು. ರಾತ್ರಿಗೆ ಚಪ್ಪಾತಿಯಿದ್ದಿತು. ಜೊತೆಗೆ ಬಲು ರುಚಿಕರವಾಗಿದ್ದ ಉಪ್ಪಿನಕಾಯೂ ಇದ್ದುದರಿಂದ ಒಣಗಿದ ಚಪಾತಿ ತಿನ್ನಲು ಬೇಸರವೆನಿಸಲಿಲ್ಲ ಎನಗೆ. ಇದರ ಮಧ್ಯ ನಮ್ಮ ಮಾತುಗಳು, ಪ್ರಸಾದ ಜೋಕ್ ಹೇಳಿ ನಮ್ಮನ್ನೆಲ್ಲ ನಗಿಸುತ್ತಿದ್ದುದರಿಂದ ೧೮ನೇ ತಾರೀಖು ಕಳೆದದ್ದೇ ಗೊತ್ತಾಗಲಿಲ್ಲ. ಮಕ್ಕಳು (ಅಮಿತ್, ಸುಷ್ಮಿತ, ಸುಪ್ರಿಯ) ಸಹ ಬರ್ಥ್ ನಲ್ಲೆ ಕುಳಿತು ತಮಗೆ ಬೇಕಾದ ಆಟಗಳನ್ನು ಆಡುತ್ತ ಆ ದಿನವನ್ನು ಕಳೆದರು.

೧೯ ಏಪ್ಪ್ರಿಲ್ ಬಂದೇಬಿಟ್ಟಿತು. ಎಂಟು ಗಂಟೆಗೆ ದೆಹಲಿ ತಲುಪಬೇಕಾಗಿದ್ದ ರೈಲು ಬೆಳಗ್ಗೆ ೧೦ಕ್ಕೆ ಹೋಯಿತು. ಅಷ್ಟರೊಳಗೆ ಸ್ವಲ್ಪ ಚಪಾತಿ ಉಳಿದಿದ್ದುದರಿಂದ ಎಲ್ಲರೂ ಅದನ್ನೇ ತಿಂದು ರೈಲು ನಿಲ್ದಾಣದಲ್ಲಿ ಇಳಿಯಲು ಕಾತುರದಿಂದಿದ್ದೆವು. ದೆಹಲಿ ರೈಲು ನಿಲ್ದಾಣ ಬಂದಿತು. ನಮ್ಮ ನಮ್ಮ ಲಗೇಜನ್ನು ತೆಗೆದುಕೊಂಡು ಇಳಿದೆವು.

ಇದಿಷ್ಟು ಬರೀ ರೈಲಿನ ಪುರಾಣವೆನಿಸಿದರೂ, ನಾವು ಆತುರಾತುರದಿಂದ, ಖುಷಿಯಿಂದ ತಯಾರಾಗಿದ್ದು, ರೈಲಿನಲ್ಲಿ ಹೆಚ್ಚುಕಡಿಮೆ ಎರಡು ದಿನ ಕಳೆದದ್ದು ನಮಗೆ ಗೊತ್ತಾಗಲೇ ಇಲ್ಲ. ಜೊತೆಗೆ ಇನ್ನೊಂದು ಸಂಗತಿಯೆಂದರೆ ಯಾವುದೇ ಟ್ರ್ಯಾವೆಲರ್ಸ್ ಬೇಡವೆಂದು, ನಾವೇ ಸ್ವಂತವಾಗಿ ಹೊರಟಿದ್ದೆವು.

ದೆಹಲಿಯಿಂದ ಇಳಿದು, ಏನೆಲ್ಲ ನೋಡಿದೆವು, ಮುಂದೆ ಎಲ್ಲಿಗೆ ಹೋದ್ವಿ ಎಲ್ಲ ವಿವರಣೆಯನ್ನ ಮುಂದಿನ ಭಾಗದಲ್ಲಿ ಹೇಳ್ತೀನಿ.

ನಿಮ್ಮ ಅನಿಸಿಕೆಯನ್ನು ಪ್ರತಿಕ್ರಿಯೆ ಮೂಲಕ ಬರೆಯಲು ಮರೆಯದಿರಿ.

Rating
No votes yet

Comments