ಊರ ಮದುವೆ

ಊರ ಮದುವೆ

ತಲೆಬರಹ ನೋಡಿದಕೂಡಲೇ ಯಾರಾದರೂ ಊರಿಗೆ ಮದುವೆ ಮಾಡ್ತಾರಾ? ಇವರೆಲ್ಲೋ ಹುಚ್ಚರಿರಬೇಕು, ಅನ್ನುವಂತವರೂ ಇರ ಬಹುದು.ಅಂದಹಾಗೆ ನಿಮ್ಮ ಮಗಳನ್ನು ಯಾವ ಊರಿಗೆ ಕೋಟ್ರಿ? ಅಂತಾ ನಮ್ಮ ಕಡೆ ಜನ ಕೇಳ್ತಾರೆ.ಅಂದ್ರೆ ಹೆಣ್ಣನ್ನು ಯಾವುದಾದರೂ ಊರಿಗೇ ಮದುವೆ ಮಾಡಿಕೊಡುತ್ತಾರೇನು? ಆದರೆ ಅದು ರೂಢಿಗೆ ಬಂದು ಬಿಟ್ಟಿದೆ.
ಇನ್ನು ವಿಚಾರಕ್ಕೆ ಬರುವೆ. ನಾನು ಬರೆಯೋ ಬರಹಕ್ಕೂ ನನ್ನ ಚಟುವಟಿಕೆಗಳಿಗೂ ಸಂಬಂಧ ವಿರುತ್ತೆ. ಹಾಗಾಗಿ ನನ್ನ ಅನುಭವದ ಮಾತುಗಳನ್ನೇ ಬರೆಯ ಬೇಕಾಗುತ್ತದೆ. ಅದು ಕೆಲವರಿಗೆ ನನ್ನ ಬಗ್ಗೆ " ಇವನದೊಂದು ಪ್ರತಿಷ್ಟೆ" ಅಂತಾ ಅನ್ನಿಸ ಬಹುದು. ಆದರೆ ಏನು ಮಾಡಲೀ, ಬರೆಯದೆ ವಿಧಿ ಇಲ್ಲ.
ಈಗ್ಗೆ ಮೂರ್ನಾಲ್ಕು ತಿಂಗಳಲ್ಲಿ ನಮ್ಮೂರ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಹೋಗಿದ್ದಾಗ ಅಲ್ಲಿನ ಅರ್ಚಕರಾದ ಕೃಷ್ಣಮೂರ್ತಿಗಳು " ನಿಮ್ಮಲ್ಲಿ ಒಂದು ವಿಚಾರ ಪ್ರಸ್ಥಾಪ ಮಾಡಬೇಕು, ಒಂದು ಅರ್ಧ ಗಂಟೆ ಇರ್ತೀರಾ?" ಎಂದರು
- ಆಗಲೀ ಗುರುಗಳೇ, ಏನ್ ಸಮಾಚಾರ?
- ನಿಮ್ಮ ತಮ್ಮನ ಮಗಳಿಗೆ ಮದುವೆ ಮಾಡ್ತೀರಾ?
- ಅವಳಿನ್ನೂ ೨೧ ವರ್ಷದ ಹುಡುಗಿ. ಏನೂ ಯೋಚನೆ ಮಾಡಿಲ್ಲ
- ನೋಡಿ ಕೃಷ್ಣಮೂರ್ತಿಗಳು ಹೀಗೆ ಹೇಳ್ತಾನೆ ಅಂತಾ ತಪ್ಪು ತಿಳೀ ಬೇಡಿ, ಮೊನ್ನೆ ಚಂಡಿಕಾಹೋಮ ಮಾಡಿಸಲು ೮-೧೦ ಜನ ಋತ್ವಿಕರು ಬಂದಿದ್ದರು. ಎಲ್ಲರೂ ಯುವಕರುಗಳು. ಅದರಲ್ಲಿ ಒಬ್ಬ " ಲಕ್ಷ್ಮೀಶ " ಅನ್ನೋ ಯುವಕ.ನಿಮ್ಮ ತಮ್ಮನ ಮಗಳು ದೇವಸ್ಥಾನಕ್ಕೆ ಬಂದಿದ್ದಳು. ಅವಳನ್ನು ನೋಡಿ " ಕೃಷ್ಣಮೂರ್ತಿಗಳೇ, ಈ ಹುಡುಗಿ ಯಾರು? ಅವರಮನೆಯಲ್ಲಿ ನಮ್ಮಂತವರಿಗೆ ಕೊಡಲು ಒಪ್ಪಿದರೆ ನಾನು ಮದುವೆಯಾಗ ಬಯಸುವೆ" ಎಂದು ಹೇಳಿಕೊಂಡ. " ಆಗಲೀ ವಿಚಾರ ಮಾಡುವೆ"- ಎಂದು ತಿಳಿಸಿದೆ. ನಿಮ್ಮ ತಮ್ಮ ನಿಗೆ ಕೇಳಿದೆ -" ನಮಗೆಲ್ಲಿ ಈಗ ಮದುವೆ ಮಾಡುವ ಶಕ್ತಿ ಇದೆ, ನಮ್ಮಣ್ಣನನ್ನು ಕೇಳಬೇಕು, ಅವರು ಮನಸ್ಸು ಮಾಡಿದರೆ ನೋಡೋಣ, ಅಂತಾ ಹೇಳಿದರು, ಈಗ ಚಂಡು ನಿಮ್ಮ ಕೋರ್ಟಿನಲ್ಲಿದೆ. ಎಲ್ಲಾ ನಿಮಗೆ ಬಿಟ್ಟಿದ್ದು. ಹುಡುಗ ಮಾತ್ರ ತುಂಬಾ ಯೋಗ್ಯ. ಹೊನ್ನಾವರದವರು. ಹವ್ಯಕ ಬ್ರಾಹ್ಮಣರು. ವೇದಪಾಠವಾಗಿದೆ. ಹವನ-ಹೋಮಗಳನ್ನು ಮಾಡಿಸುವ ಸಾಮರ್ಥ್ಯವಿದೆ. ಹೆಂಡತಿ ಸಾಕುವ ಸಾಮರ್ಥ್ಯವಿದೆ. ನೀವು ಒಪ್ಪುವುದಾದರೆ ಮುಂದೆ ಯೋಚಿಸ ಬಹುದು"
ದೇವಿಯ ಸನ್ನಿಧಿಯಲ್ಲಿ ದೇವಿಯ ಅರ್ಚಕರ ಬಾಯಿಂದ ಇಂತಹಾ ಒಂದು ಪ್ರೊಪೋಸಲ್ ಬಂದಿದ್ದರಿಂದ ಸಂತೋಷವೇ ಆಯ್ತು. ನಾನು ವಿಚಾರಿಸುತ್ತೆನೆಂದು ಹೇಳಿ ಸ್ವಲ್ಪ ದಿನಗಳು ಸುಮ್ಮನಾದೆ. ಒಂದು ದಿನ ನನ್ನ ತಮ್ಮನೇ ನನಗೆ ಫೋನಾಯಿಸಿ " ದೇವಿಯ ಅರ್ಚಕರು ಮಾತನಾಡಿದ್ರು, ಏನು ನಿರ್ಧರಿಸಿರಿ? ಅಂತಾ ಕೇಳಿದ್ರು, ಏನು ಮಾಡೋಣ, ಅಂತಾ ಕೇಳಿದ. ನಾನು ಹುಡುಗನ ಮನೆಯ ವಿವರ ಪಡೆದು ಅವನನ್ನು ನೋಡಲು ಪತ್ನಿ ಹಾಗೂ ನನ್ನ ಮಕ್ಕಳೊಡನೆ ಹೊರಟೆ.
ಹೊಳೇನರಸೀಪುರದ ಅಧ್ಯಾತ್ಮ ಪ್ರಕಾಶ ಕಾರ್ಯಾಲಯಕ್ಕೆ ಹೋದೆವು. ಅಲ್ಲಿ ವೇ.ಬ್ರ.ಶ್ರೀ ಚಂದ್ರ ಮೌಳಿ ಅವಧಾನಿಗಳ ಭೇಟಿಯಾಯ್ತು. ಕಾರ್ಯಾಲಯ ಒಂದು ಸುತ್ತು ನೋಡಿದ್ದಾಯ್ತು. ಅವಧಾನಿಗಳೊಡನೆ ವಿಷಯ ಪ್ರಸ್ತಾಪವಾಯ್ತು." ಲಕ್ಷ್ಮೀಶನೇ, ಅವನಿಗೆ ಕಣ್ಣು ಮುಚ್ಚಿಕೊಂಡು ನಿಮ್ಮ ಹುಡುಗಿಯನ್ನು ಮದುವೆಮಾಡಿಕೊಡಿ. ವಿದ್ಯಾವಂತ. ಪತ್ನಿ ಸಾಕಲು ಸಮರ್ಥ.ಯೋಗ್ಯ. ಅವನು ಈಗ ಕೇವಲ ನನ್ನ ಶಿಷ್ಯನಲ್ಲ. ಅವನೇ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಾನೆ. ಅವನೂ ಕೂಡ ಗುರುವೇ ಆಗಿದ್ದಾನೆ.
ಸರಿ. ಮುಂದಿನ ಪಯಣ ಹುಡುಗನ ಅಣ್ಣನ ಮನೆಗೆ. ಮೈಸೂರಲ್ಲಿ ಅವರೂ ಪೌರೋಹಿತ್ಯ ಮಾಡುವವರೇ.ಅವರ ಮನೆಗೆ ಹೋದರೆ ಮನೆತುಂಬಾ ವೇದ ಗ್ರಂಥಗಳು. ಇದರಲ್ಲಿ ಕಾಲು ಭಾಗ ನನ್ನದು, ಮುಕ್ಕಾಲು ಭಾಗ ಲಕ್ಷ್ಮೀಶನದು-ಎಂದು ವೇದ ಗ್ರಂಥಗಳನ್ನು ತೋರಿಸುವಾಗ ನನ್ನ ಮನಸ್ಸಿನಲ್ಲಿ ಆಗಲೇ ಒಂದು ನಿರ್ಧಾರಕ್ಕೆ ಬಂದಿದ್ದೆ. ಎಲ್ಲಾ ದೇವಿಯ ವರ ಪ್ರಸಾದ. ನಾನೇಕೆ ಬೇಡವೆನ್ನಲಿ?
ಅಲ್ಲಿಂದ ತುಂಬಿದ ಮನಸ್ಸು ಹೊತ್ತು ಹಾಸನಕ್ಕೆ ವಾಪಸಾದೆ. ಲಕ್ಷ್ಮೀಶನನ್ನು ಒಮ್ಮೆ ಹಾಸನಕ್ಕೆ ಕರೆಯಿಸಿಕೊಂಡೆ. ಅವನೊಡನೆ ವಿಚಾರ ಮಾಡಿದೆ.
- " ನೋಡಿ ನಾನು ನಿಮ್ಮ ತಮ್ಮನ ಮಗಳನ್ನು ಮದುವೆಯಾಗಬೇಕೆಂದು ಬಯಸಿರುವುದು ನಿಜ. ಆದರೆ ನಾನು ಮದುವೆಯಾಗುವ ಹೆಣ್ಣಿಗಾಗಿ, ನನ್ನ ವೇಷಭೂಷಣ, ದಿನಚರಿ, ಯಾವುದನ್ನೊ ಬದಲಿಸಿಕೊಳ್ಳಲಾರೆ."
- ಅಂದರೆ?
- ನೋಡಿ, ನಾನು ಶಿಖೆ ಬಿಟ್ಟಿದ್ದೀನಿ. ಅದನ್ನು ತೆಗೆಸಲಾರೆ. ಪ್ಯಾಂಟ್ ಧರಿಸಲಾರೆ. ಪಂಚೆ-ಶರ್ಟ್ ನನ್ನ ಮಾಮೂಲಿ ವೇಷ.
ಮನದಲ್ಲೇ ಭೇಶ್, ಅಂದುಕೊಂಡೆ. ಆದರೂ ಮದುವೆಯಾಗುವ ಹೆಣ್ಣಿನ ಸ್ಪಷ್ಟ ಅಭಿಪ್ರಾಯ ಪಡೆಯಬೇಕಲ್ಲಾ!
ನಮ್ಮ ಹಳ್ಳಿಗೆ ಲಕ್ಷ್ಮೀಶನನ್ನು ಕರೆಯಿಸಿ ಅವನ ವಿಚಾರವನ್ನು ಹುಡುಗಿಗೆ ಸ್ಪಷ್ಟವಾಗಿ ತಿಳಿಸಿದ್ದಾಯ್ತು. ಆಶ್ಚರ್ಯ! ಹುಡುಗಿ ನಗುನಗುತ್ತಲೇ ಒಪ್ಪಿಗೆ ಸೂಚಿಸಿದಳು. ಅವರ ಅಪ್ಪ-ಅಮ್ಮನೂ ಅಷ್ಟೆ.
ಆಗ ನಾನೂ ಸರಿಯಾದ ನಿರ್ಧಾರಕ್ಕೆ ಬಂದೆ. ಎಲ್ಲರಿಗೂ ಪೂರ್ಣ ಒಪ್ಪಿಗೆ ಇರುವುದರಿಂದ ಮಾತುಕತೆ ಮುಂದುವರೆಸುವುದೆಂದು.
ಹುಡುಗ ಹೇಳಿದ- ನಮ್ಮಣ್ಣನಿಗೆ ನಮ್ಮ ತಂದೆ ಎಲ್ಲಾ ಜವಾಬ್ದಾರಿ ಕೊಟ್ಟಿದ್ದರೂ ಸಹ ನೀವು ಒಮ್ಮೆ ನಮ್ಮ ಮನೆಗೆ ಹೋಗಿ ನಮ್ಮ ತಂದೆಯನ್ನು ನೋಡಿಕೊಂಡು ಬಂದುಬಿಡಿ.
ನಾನು ಹೇಳಿದೆ. "ನಿಮ್ಮ ತಂದೆಗೂ ಒಪ್ಪಿಗೆ ಇದೆ ಎಂದ ಮೇಲೆ ನಾನು ನಿಮ್ಮ ಊರಿಗೆ ಹೋಗುವ ಅಗತ್ಯವಿಲ್ಲ. ಮುಂದು ವರೆಯೋಣ"
ಆದರೂ ಹುಡುಗ " ಇಲ್ಲಾ, ನಮ್ಮ ಮನೆ ಒಮ್ಮೆ ನೋಡಿ ಬಂದು ನಿರ್ಧಾರ ತೆಗೆದುಕೊಳ್ಳಿ."
ಅವನ ಬಲವಂತಕ್ಕೆ ಕಟ್ಟು ಬಿದ್ದು ಹುಡುಗನ ಅಣ್ನನ ಜೊತೆಗೂಡಿ ನಾನು ನನ್ನ ತಂಗಿ ಮತ್ತು ಅವಳ ಯಜಮಾನರೊಡನೆ ಹೊನ್ನಾವರ ದ ಸಮೀಪ " ಕಡಲೆ" ಗ್ರಾಮಕ್ಕೆ ಹೋಗುತ್ತೇವೆ. ಅಲ್ಲಿಯ ಅವರ ಮನೆ ನೋಡಿ ನನ್ನ ತಂಗಿ ಮನಸ್ಸು ಇಳಿ ಬಿಟ್ಟಳು " ಹೇಗಾದರೂ ಆಗಲೀ ಸುರೇಶ [ನನ್ನ ತಮ್ಮ] ಒಮ್ಮೆ ನೋಡಿದ ಮೇಲೆ ಒಪ್ಪಿಗೆ ಕೊಡೋಣ."
ಕಾರಣ ವಿತ್ತು. ಚಿಕ್ಕದೊಂದು ತೋಟದಲ್ಲಿ ಹೆಂಚಿನ ಪುಟ್ಟ ಮನೆ. ಮನೆ ಅಂದರೆ ಎರಡು ರೂಮುಗಳು. ಹೊರಗೆ ಜಗಲಿ. ಅದರ ಮುಂದೆ ಒಂದು ಚಪ್ಪರ. ಅದರ ಕೆಳಗೆ ಒಂದು ಚಿಕ್ಕ ಬಚ್ಚಲು ಮನೆ. ಅದಕ್ಕೆ ಹೆಂಚಿನ ಬದಲು ತೆಂಗಿನ ಗರಿ. ತೆಂಗಿನ ಗರಿಯದೇ ಬಾಗಿಲು.
ನನ್ನ ತಂಗಿ ಗಾಭರಿ ಯಾಗಿದ್ದಳು. ಆದರೆ ನನಗೆ ಧೈರ್ಯ ವಿತ್ತು. ಮನದಲ್ಲಿ ಆ ಹುಡುಗನ ಬಗ್ಗೆ ವಿಶ್ವಾಸ ಮೂಡಿತ್ತು. ನಾನು ನನ್ನ ತಂಗಿಗೆ ಹೇಳಿದೆ " ಆಗಲೀ ಸುರೇಶ ನೋಡಿದ ನಂತರವೇ ನಿರ್ಧರಿಸೋಣ."
ಮಲೆನಾಡಿನ ಅವರ ಮನೆಯ ಊಟದಿಂದ ಮನಸ್ಸಿಗೆ ಹಿತವಾಗಿತ್ತು.ಅಲ್ಲಿಂದ ಹಿಂದಿರುಗಿದ ಮೇಲೆ ನನ್ನ ತಂಗಿ ನನ್ನ ತಮ್ಮನೊದನೆ ಅಲ್ಲಿನ ಋಣಾತ್ಮಕ ಸಂಗತಿ ಗಳನ್ನೇ ಹೇಳಿದ್ದಾಳೆ. ಆದರೂ ಪಾಪ! ಅವರೆಲ್ಲಾ ಒಪ್ಪಿಬಿಟ್ಟಿದ್ದರು. ನನ್ನ ತಮ್ಮ ನನಗೆ ಫೋನ್ ಮಾಡಿ ಹೇಳಿದ. " ನಾವೆಲ್ಲಾ ಒಪ್ಪಿ ಯಾಗಿದೆ. ನೀವು ಮುಂದುವರೆಯ ಬಹುದೆಂದು. ಇದೇ ೯ ಕ್ಕೆ ನಿಶ್ಚಿತಾರ್ಥ ಹಾಸನದ ನಮ್ಮ ಮನೆಯಲ್ಲಿ . ಮದುವೆ ನಮ್ಮ ಹಳ್ಳಿಯಲ್ಲಿ ಮೇ ೬ ಕ್ಕೆ. ಅದರ ವಿಶೇಶತೆಬಗ್ಗೆ ಬರೆಯ ಬೇಕೆಂಬುದೇ ಈ ಬರಹದ ಉದ್ದೇಶವಾಗಿತ್ತು. ಆದರೆ ಈಗ ಸಮಯದ ಅಭಾವವಿದೆ. ನಾಳೆ ಊರಿನ ಜನರ ಸಹಕಾರದೊಡನೆ ಹೇಗೆ ಮದುವೆ ಮಾಡುತ್ತೇವೆಂದು ಬರೆಯುವೆ. ನಿಜಕ್ಕೂ ಅದನ್ನು ನೀವು ಓದಲೇ ಬೇಕು.

Rating
No votes yet

Comments