ಎಂದೂ ಮರೆಯದ ಹಾಡು: ಸ್ವಾಮಿ ದೇವನೆ ಲೋಕ ಪಾಲನೆ...

ಎಂದೂ ಮರೆಯದ ಹಾಡು: ಸ್ವಾಮಿ ದೇವನೆ ಲೋಕ ಪಾಲನೆ...

ಚಿತ್ರಗೀತೆಗಳೆಂದರೆ ಕೇವಲ ಕಾಲಕಳೆಯಲು ಇರುವ ಗೀತೆಗಳಲ್ಲ; ಅಥವಾ ಬರಿದೇ ಮನರಂಜನೆಗಾಗಿ ಇರುವ ಹಾಡುಗಳೂ ಅಲ್ಲ. ಉತ್ತಮ ಜೀವನ ತತ್ವಗಳನ್ನು, ಸಾಮಾಜಿಕ-ನೈತಿಕ ಸಂದೇಶಗಳನ್ನು, ಆದರ್ಶದ ಹೊಂಗನಸುಗಳನ್ನು ಜನಸಾಮಾನ್ಯರಿಗೆ ಅತಿಬೇಗನೆ, ಮನಮುಟ್ಟುವಂತೆ ತಲುಪಿಸುವ ಸಾಮರ್ಥ್ಯ ಚಿತ್ರಗೀತೆಗಳಿಗಿದೆ. ಆದರೆ ಅವುಗಳ ಸತ್ವವನ್ನು ಅರಿತು ದುಡಿಸಿಕೊಳ್ಳುವ ನಿರ್ದೇಶಕರು ಬೇಕಷ್ಟೇ! ಇತ್ತೀಚಿನ ದಿನಗಳಲ್ಲಂತೂ ಚಿತ್ರಗೀತೆಗಳಲ್ಲಿನ ಸಾಹಿತ್ಯದ ಪಾಡು "ಹೇಳಬಾರದು, ಕೇಳಬಾರದು" ಎಂಬಂತಾಗಿದೆ. ಎಲ್ಲೋ ಒಮ್ಮೊಮ್ಮೆ "ಮುಂಗಾರು ಮಳೆ" ಸುರಿದು ಕಾದ ಮನಗಳಿಗೆ ತಂಪೆರದರೂ, ಆ ರೀತಿಯ ಮಳೆ ಸುರಿಯುವುದು ವರ್ಷದಲ್ಲಿ ಎರಡು ಇಲ್ಲವೆ ಮೂರು ಬಾರಿ ಮಾತ್ರ ಎನ್ನುವಂತಹ ಸ್ಥಿತಿ ಬಂದೊದಗಿದೆ.

ಸುಮಾರು 1955 ರಿಂದ 1985 ರ ಅವಧಿಯಲ್ಲಿ, ಅಪಾರವಾದ ಸಾಮಾಜಿಕ ಕಳಕಳಿಯುಳ್ಳ ನಿರ್ದೇಶಕರು ತಮ್ಮ ಚಿತ್ರಗಳಿಂದ, ಚಿತ್ರಗಳಲ್ಲಿನ ಹಾಡು-ಸಂಭಾಷಣೆಗಳಿಂದ ಕನ್ನಡ ಚಲನಚಿತ್ರರಂಗವನ್ನು ಶ್ರೀಮಂತಗೊಳಿಸಿದರು. ಪಂತುಲು, ಪುಟ್ಟಣ್ಣ ಕಣಗಾಲ್, ಹುಣಸೂರು ಕೃಷ್ಣಮೂರ್ತಿ ಇವರಂತಹ ನಿರ್ದೇಶಕರು (ಹೆಸರುಗಳ ಪಟ್ಟಿ ಪೂರ್ಣವೇನಲ್ಲ) ಮನರಂಜನಾತ್ಮಕ ಚಿತ್ರಗಳನ್ನೇ ಸದಭಿರುಚಿಯ ಮೂಸೆಯಲ್ಲಿ ಕರಗಿಸಿ, ಹೊಸ ಆಯಾಮವನ್ನೀಯಲು ಶ್ರಮಿಸಿದರು. ಇಂತಹ ನಿರ್ದೇಶಕರಿಗೆ ತಕ್ಕಂತೆ ವಿಜಯನಾರಸಿಂಹ, ಕಣಗಾಲ್ ಪ್ರಭಾಕರ ಶಾಸ್ತ್ರಿ, ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್ ಮುಂತಾದ ಗೀತರಚನೆಕಾರರು ಆರೋಗ್ಯಕರ ಪೈಪೋಟಿಯೇನೋ ಎಂಬಂತೆ ಒಬ್ಬರಿಗಿಂತ ಒಬ್ಬರು ಉತ್ತಮ ಚಿತ್ರಗೀತೆಗಳನ್ನು ಬರೆದು, ಚಲನಚಿತ್ರಗೀತೆಗಳ ಸಾಹಿತ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಚಿತ್ರವೊಂದರ ಪ್ರತಿ ವಿಭಾಗದಲ್ಲೂ - ಸಂಭಾಷಣೆಯಾಗಲಿ, ಚಿತ್ರಗೀತೆಗಳಾಗಲೀ, ಪ್ರತಿಯೊಂದರಲ್ಲೂ - ಕಲೆಯನ್ನು ಅನಾವರಣಗೊಳಿಸಲು ನಿರ್ದೇಶಕರು ತಮ್ಮ ತಂಡಗಳೊಡಗೂಡಿ ಪ್ರಯತ್ನಿಸಿದರು. ಅದರಲ್ಲಿಯೂ ಗೀತಸಾಹಿತ್ಯವೆನ್ನುವುದು, ಅಂದಿನ ಪ್ರಮುಖ ನಿರ್ದೇಶಕರಿಗೆ, ತಮ್ಮ ಸಂದೇಶಗಳನ್ನು ಸಾರುವ ಒಂದು ಮಾಧ್ಯಮವಾಗಿತ್ತು. ಉದಾಹರಣೆಗೆ: "ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು..." ಮತ್ತು "ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು..." ಹಾಡುಗಳನ್ನು ತೆಗೆದುಕೊಳ್ಳಿ. ಇವು ಮೂಡಿಸಿದ ದೇಶಪ್ರೇಮದ, ನಾಡು-ನುಡಿಯ ಕಿಚ್ಚು ಈ ಹಾಡುಗಳಿಗೆ ಜನಮಾನಸದಲ್ಲಿ ಯಾವ ದೇಶಭಕ್ತಿಗೀತೆಗಳಿಗೂ ಕಡಿಮೆಯಿಲ್ಲದಂತಹ ಸ್ಥಾನವನ್ನು ದೊರಕಿಸಿಕೊಟ್ಟಿದೆ. ಇದು ಕೇವಲ ಒಂದು ಸಣ್ಣ ಉದಾಹರಣೆಯಷ್ಟೇ. ಹಳೆಯ ಹಾಡುಗಳ "ನಾಸ್ಟಾಲ್ಜಿಯಾ" ಇದ್ದವರನ್ನೊಮ್ಮೆ ಕೇಳಿ ನೋಡಿ; ನಾಲಗೆಯ ತುದಿಯಲ್ಲೆ ಇಂತಹ ನೂರಾರು ಹಾಡುಗಳ ಭಂಡಾರ ಸಿದ್ಧವಾಗಿರುತ್ತದೆ. ಎಷ್ಟೋ ಬಾರಿ ಇಂತಹ ಹಾಡುಗಳನ್ನು ಕೇಳಿ "ಇವು ಬರಿಯ ಚಿತ್ರಗೀತೆಗಳಲ್ಲ, ಖಂಡಿತ ಯಾರಾದರೊಬ್ಬ ಕವಿಯ ಸಾಹಿತ್ಯಿಕ ರಚನೆಯಿರಬೇಕು" ಎಂದು ಭ್ರಮಿಸಿ ಮೋಸಹೋದ ಸಂದರ್ಭಗಳೂ ಉಂಟು!

ಹಾಗಾಗಿಯೇ ಈ ಮೂರು-ಮೂರೂವರೆ ದಶಕಗಳನ್ನು "ಕನ್ನಡ ಚಲನಚಿತ್ರಗೀತೆಗಳ ಸುವರ್ಣಯುಗ" ಎಂದರೆ ಉತ್ಪ್ರೇಕ್ಷೆಯಾಗಲಾರದು. ಈ ಮೂರೂವರೆ ದಶಕಗಳಿಂದ ಆಯ್ದ ಕೆಲವು ಮರೆಯಲಾಗದ ಹಾಡುಗಳ ಸಾಹಿತ್ಯವನ್ನು ಎಲ್ಲರೊಂದಿಗೆ ಏಕೆ ಹಂಚಿಕೊಳ್ಳಬಾರದು ಎನಿಸಿತು. ಅದರ ಫಲವೇ ಈ ಕಿರು ಪ್ರಯತ್ನ. ಹಾಡುಗಳ ಬಗ್ಗೆ ಏನಾದರೂ ವಿಶೇಷ ವಿವರಗಳಿದ್ದಲ್ಲಿ, ಅಥವಾ ಸ್ವಾರಸ್ಯಕರ ಸಂಗತಿಗಳಿದ್ದಲ್ಲಿ, ಅವನ್ನೂ ಕಲೆಹಾಕಿ ಬರೆಯುವ ಯೋಚನೆಯೇನೋ ಇದೆ. ನಿಮಗೇನಾದರೂ ಹೆಚ್ಚಿನ ಮಾಹಿತಿ ಗೊತ್ತಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ. ಎಲ್ಲರಿಗೂ ಇನ್ನಷ್ಟು ವಿಚಾರಗಳು ತಿಳಿಯುವಂತಾಗಲಿ.

ಮಾಲಿಕೆಯ ಮೊದಲ ಕಂತಿನಲ್ಲಿ ಯಾವ ಹಾಡನ್ನು ನಿಮ್ಮ ಮುಂದಿಡಲಿ ಎಂದು ಯೋಚಿಸುತ್ತಿದ್ದಾಗ ಹೊಳೆದದ್ದು ಶ್ರೀ.ಬಿ.ಆರ್.ಪಂತುಲು ಅವರ ಅವಿಸ್ಮರಣೀಯ "ಸ್ಕೂಲ್ ಮಾಸ್ಟರ್" ಚಿತ್ರದ "ಸ್ವಾಮಿ ದೇವನೆ ಲೋಕ ಪಾಲನೆ" ಗೀತೆ. ಈ ಹಾಡು ನಾಡಿನಾದ್ಯಂತ ಸಾವಿರಾರು ಶಾಲೆಗಳಲ್ಲಿ "ಪ್ರಾರ್ಥನಾ ಗೀತೆ"ಯಾಗಿ ಸರಿಸುಮಾರು ಮೂರು ದಶಕಗಳ ಕಾಲ ಬಳಕೆಯಲ್ಲಿತ್ತು.

ಚಿತ್ರ ಬಿಡುಗಡೆಯಾದ ವರ್ಷ ೧೯೫೮. ಗೀತರಚನೆಕಾರರು ಯಾರೆಂದು ಖಚಿತವಾಗಿ ತಿಳಿದಿಲ್ಲ (ಅನಾಮಧೇಯ ಕವಿ). ಸಂಗೀತ ಶ್ರೀ.ಟಿ.ಜಿ.ಲಿಂಗಪ್ಪ.

ಸಾಹಿತ್ಯ ಕೇವಲ ಎಂಟೇ ಎಂಟು ಸಾಲುಗಳಾದರೂ ಅದರಲ್ಲಿನ ಪದಗಳ ಜೋಡಣೆ, ಹಿತ-ಮಿತವಾದ ಬಿನ್ನಹ, ಗೀತೆಯ ಮೂಲ ಆಶಯ, ಗೇಯತೆ ಇವುಗಳನ್ನು ಗಮನಿಸಿ; ಆನಂದಿಸಿ.

ಸ್ವಾಮಿ ದೇವನೆ ಲೋಕ ಪಾಲನೆ,
ತೇ ನಮೋಸ್ತು ನಮೋಸ್ತು ತೇ |
ಪ್ರೇಮದಿಂದಲಿ ನೋಡು ನಮ್ಮನು
ತೇ ನಮೋಸ್ತು ನಮೋಸ್ತು ತೇ ||                  ||ಪ||

ದೇವದೇವನೆ ಹಸ್ತಪಾದಗಳಿಂದಲೂ, ಮನದಿಂದಲೂ,
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ    ||ಸ್ವಾಮಿ...||

ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ,
ಮನೆಯ ಮಕ್ಕಳ ಐಕ್ಯಗಾನವ ಲಾಲಿಸಿ, ಪರಿಪಾಲಿಸೈ   ||ಸ್ವಾಮಿ...||

ಓದಿ ಮುಗಿಸುವ ಮುನ್ನ ಕೊನೆಯದಾಗಿ ನನ್ನದೊಂದು ವಿನಂತಿ. ಈ "ಎಂದೂ ಮರೆಯದ ಹಾಡು" ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸುತ್ತೀರಾ?

Rating
Average: 3.3 (3 votes)

Comments