ಎಚ್ಚರದಪ್ಪುತ್ತಿರುವ ಮಠಾಧೀಶರೂ, ಅವರ ಜಾತಿ ರಾಜಕಾರಣವೂ...
ಎಚ್ಚರದಪ್ಪುತ್ತಿರುವ ಮಠಾಧೀಶರೂ, ಅವರ ಜಾತಿ ರಾಜಕಾರಣವೂ...
ನಾನು ಬಾಲ್ಯದಿಂದ ಕಂಡ ಹಾಗೂ ತುಮಕೂರಿನ ನನ್ನ ಕೆಲವು ಸ್ನೇಹಿತರು ಏನೆಲ್ಲ ಪ್ರತಿಕೂಲ ಮಾಹಿತಿ ನೀಡಿದರೂ, ನಾನು ಗೌರವವನ್ನು ಕಳೆದುಕೊಳ್ಳದಿದ್ದಷ್ಟು ನನ್ನ ಕಣ್ಣಲ್ಲಿ ದೊಡ್ಡವರಾಗಿದ್ದ ಸಿದ್ಧಗಂಗಾ ಮಠಾಧೀಶರು, ಇತ್ತೀಚೆಗೆ ಶಿವಮೊಗ್ಗದಲ್ಲಿ ತಾಂತ್ರಿಕ ಕಾಲೇಜೊಂದನ್ನು ಉದ್ಘಾಟಿಸಲು ಬಂದು, ಸಮ್ಮಿಶ್ರ ಸರ್ಕಾರವನ್ನು ಹೊಗಳಿ ಹೋದಾಗ ತುಂಬ ಮುಜುಗರವೆನ್ನಿಸಿತು. ಉಪಮುಖ್ಯಮಂತ್ರಿ ಯಡಿಯೂರಪ್ಪನವರ ಕುಟುಂಬ ಬೇನಾಮಿಯಾಗಿ ಹಣ ಹೂಡಿ ಆರಂಭಿಸಲಾಗಿರುವುದೆಂದು ಇಲ್ಲಿ ಜನಜನಿತವಾಗಿರುವ, ತಾಂತ್ರಿಕ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಸ್ವಾಮೀಜಿಯವರಿಗೆ ಈ ಮಾತುಗಳನ್ನಾಡುವ ಔಚಿತ್ಯದ ಕಡೆಗಷ್ಟೇ ಅಲ್ಲ, ತಾವು ಆಡಿದ ಈ ಮಾತು ಇಂದಿನ ಜಾತಿವಾದಿ ರಾಜಕೀಯ ಸಂದರ್ಭದಲ್ಲಿ ಯಾವ ಯಾವ ಅರ್ಥಗಳನ್ನು ಪಡೆಯಬಹುದು ಎಂಬುದರ ಕಡೆಗೂ ಗಮನವಿರಬೇಕಿತ್ತು ಎಂದು ನನ್ನಂತಹ ಯಾರಿಗಾದರೂ ಅನ್ನಿಸದಿರದು.
ನಾನು ನನ್ನ ಬಾಲ್ಯದಿಂದ ನೋಡಿದಂತೆ, ಸಿದ್ಧಗಂಗಾ ಮಠ ಲಿಂಗಾಯ್ತರ ಮಠವಾದರೂ, ಲಿಂಗಾಯ್ತರದೇ ಮಠ ಎಂದು ಹೇಳುವಂತಿರಲಿಲ್ಲ. ಆದಿ ಚುಂಚನಗಿರಿ ಮಠ ಸ್ಥಾಪನೆಯಾಗುವವರೆಗೂ, ಆ ಮಠವನ್ನು ಲಿಂಗಾಯ್ತರಷ್ಟೇ ಒಕ್ಕಲಿಗರೂ ಪೋಷಿಸಿದರು. ಅಷ್ಟೇ ಅಲ್ಲ, ದಕ್ಷಿಣ ಬಯಲು ಸೀಮೆಯ ಎಲ್ಲ ಜಾತಿಗಳವರೂ ಆ ಮಠಕ್ಕೆ ವಾರ್ಷಿಕವಾಗಿ ತಮ್ಮ ಕೈಲಾದಷ್ಟು ದವಸ - ಧಾನ್ಯ, ಸೌದೆ, ಹಣ ಒದಗಿಸುತ್ತಾ ಬಂದು, ಅದರ ಅಪ್ರತಿಮ ರೀತಿಯ ವಿದ್ಯಾ ಸೇವೆಗೆ ಕಾರಣಕರ್ತರಾದರು. ಮೊದಮೊದಲು ಮಠ ಉಟೋಪಚಾರದ ವಿಷಯಗಳಲ್ಲಿ ಜಾತಿ ಭೇದದ ಟೀಕೆಯನ್ನು ಎದುರಿಸಿತದಾರೂ, ನಂತರ ಕಾಲಕ್ಕೆ ತಕ್ಕಂತೆ ಎಲ್ಲ ಜಾತಿಗಳ ವಿದ್ಯಾರ್ಥಿಗಳಿಗೂ ಸಮಾನ ಅವಕಾಶಗಳನ್ನಲ್ಲದಿದ್ದರೂ, ಸಮಾನ ಅನುಕೂಲಗಳನ್ನೊದಗಿಸುವ ವಿದ್ಯಾಕೇಂದ್ರವಾಗಿ ಬೆಳೆಯಿತು. ನನ್ನ ಬಾಲ್ಯ ಸ್ನೇಹಿತರಲ್ಲಷ್ಟೇ ಅಲ್ಲ, ನನ್ನ ಶಾಲಾ ಅಧ್ಯಾಪಕರಲ್ಲೂ ಅನೇಕರು ಆ ಮಠದ ಅನ್ನ ಉಂಡವರು. ಇವರಲ್ಲಿ ಬಹುಪಾಲು ಲಿಂಗಾಯ್ತರೇ ಆಗಿದ್ದರೂ, ಅವರೆಂದೂ ಜಾತಿವಾದಿಗಳಾಗಿರಲಿಲ್ಲ. ಸ್ವತಃ ಸ್ವಾಮೀಜಿ ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಎಂದೂ ವಚನಗಳನ್ನು ಉದ್ಧರಿಸಿದ ನೆನಪು ನನಗಿಲ್ಲ. ಹೆಚ್ಚಾಗಿ ಅವರದ್ದು ಸ್ವಾಮಿ ವಿವೇಕಾನಂದರ ಉಲ್ಲೇಖಗಳು - ಅದೂ ಇಂಗ್ಲಿಷಿನಲ್ಲಿ! ನಮಗಾಗ ಸ್ವಾಮೀಜಿಯೊಬ್ಬರು ಇಂಗ್ಲಿಷ್ ಮಾತುಗಳನ್ನು ಉಲ್ಲೇಖಿಸುವುದೇ ಬೆರಗಿನ, ರೋಮಾಂಚನದ ಸಂಗತಿ.
ಬಾಲ್ಯದ ಸುಮಾರು ಮುವ್ವತ್ತು ವರ್ಷಗಳ ನಂತರ ಮತ್ತೆ ಅವರನ್ನು ನಾನು ನೋಡಿದಾಗ, ಅವರಾಗಲೇ ವೃದ್ಧಾಪ್ಯ ಪ್ರವೇಶಿಸಿ ಹಣ್ಣಾಗಿದ್ದರು. ನಮ್ಮ ಗೆಳೆಯರ ಆಹ್ವಾನದ ಮೇರೆಗೆ ತುಮಕೂರಿನಲ್ಲಿ ಅವರ ಸಮ್ಮುಖದಲ್ಲಿ ನನ್ನ ಪತ್ನಿ ಬುದ್ಧನನ್ನು ಕುರಿತ ಪುಸ್ತಕವೊಂದನ್ನು ಬಿಡುಗಡೆ ಮಾಡಿದ ಸಮಾರಂಭದಲ್ಲಿ ನಾನು ಅವರನ್ನು ಮೊದಲ ಬಾರಿಗೆ ಹತ್ತಿರದಿಂದ ಕಂಡು ನಮಸ್ಕರಿಸಿದೆ. ಹೆಚ್ಚಾಗಿ ದಲಿತ ಗೆಳೆಯರೇ ತುಂಬಿದ್ದ ಆ ಸಮಾರಂಭದಲ್ಲಿ ಅವರು, ಅಂಗೂಲಿ ಮಾಲಾನನ್ನು ಬುದ್ಧ ಪರಿವರ್ತಿಸಿದ ರೀತಿಯನ್ನು ಎಷ್ಟು ಹೃದಯಂಗಮವಾಗಿ ವರ್ಣಿಸಿದರೆಂದರೆ, ಬುದ್ಧನ ಸಮಸ್ಥಿತಿಯನ್ನು ಒಂದರೆಗಳಿಗೆಯಾದರೂ ಅನುಭವಿಸದ ಮನುಷ್ಯ ಆ ರೀತಿ ಮಾತಾಡಲಾರ ಎಂದು ನನಗನ್ನಿಸಿ, ಸ್ವಾಮೀಜಿ ಕುರಿತ ನನ್ನ ಗೌರವ ಬೇರೆ ನೆಲೆಯನ್ನೇ ತಲುಪಿತು. ವಿದ್ಯಾರ್ಥಿಗಳನ್ನು ಬೆಳಗಿನ ಝಾವಕ್ಕೇ ಎಬ್ಬಿಸಿಕೊಂಡು ಕಾಡಿಗೆ ಹೋಗಿ ಸೌದೆ ತರುವ, ಬಾಲ ವಿದ್ಯಾರ್ಥಿಗಳಿಗೆ ಸ್ವತಃ ತಾವೇ ಸ್ನಾನ ಮಾಡಿಸಿ ಬಟ್ಟೆ ಹಾಕುವ, ಪಾಠ ಹೇಳುವ, ಆಲಸಿ ಹಾಗೂ ತುಂಟ ಹುಡುಗರಿಗೆ ನಿರ್ದಾಕ್ಷಿಣ್ಯವಾಗಿ ಬಡಿದು ಬುದ್ಧಿ ಕಲಿಸುವ ಗುರುವಾಗಿದ್ದ ಈ ಸ್ವಾಮೀಜಿ, ಜ್ಞಾನದಲ್ಲೂ ಉನ್ನತ ಹಂತಕ್ಕೆ ಏರಿದವರಾಗಿದ್ದರು. ಕರ್ಮಯೋಗದ ಮೂಲಕವೇ ಜ್ಞಾನಯೋಗ ಸಾಧಿಸಿದ್ದವರು ಅವರು. ಆದರೆ ಅಂಥವರಿಗೇಕೆ ಈಗ ಈ ಇಳಿವಯಸ್ಸಿನಲ್ಲಿ ರಾಜಕಾರಣಿಗಳನ್ನು ಓಲೈಸಿ ಮಾತನಾಡುವ ಒತ್ತಡ? ಕಾಲ ಧರ್ಮ ಗುರುಗಳನ್ನೂ ಬಿಡದೆ?
ಸ್ವಾಮೀಜಿಗಳು ಆಳುವವರನ್ನು ಒಳ್ಳೆಯ ಕೆಲಸ ಮಾಡಿ ಎಂದು ಆಸೀರ್ವದಿಸುವುದು ಬೇರೆ, ಒಳ್ಳೆಯ ಕೆಲಸ ಮಾಡುತ್ತೀದ್ದೀರಿ ಎಂದು, ಅದೂ ಕರೆದವರು ಏತಕ್ಕೆ ಮತ್ತು ಎಂತಹ ಕೆಲಸಕ್ಕೆ ಕರೆದಿದ್ದಾರೆ ಎಂಬುದನ್ನರಿಯದಂತೆ ಅರ್ಹತಾ ಪತ್ರ ನೀಡುವುದು ಬೇರೆ. ಸಾಮಾನ್ಯ ಜನರಿಗೇ ಜಿಗುಪ್ಸೆ ಬರುವಷ್ಟು ವಿಕ್ಷಿಪ್ತಗೊಂಡಿರುವ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಆಳುವವರಿಗೆ ಎಚ್ಚರಿಕೆಯ ಮಾತುಗಳಿಗೆ ಬದಲಾಗಿ ಅರ್ಹತಾ ಪತ್ರ ನೀಡುವುದು, ನನ್ನಂತಹ ಅವರ ಅಭಿಮಾನಿಗಳಿಗೆ ಮುಜುಗರವನ್ನುಂಟು ಮಾಡುವುದಷ್ಟೇ ಅಲ್ಲ; ಅವರ ಈ ವರ್ತನೆ ಹಲವರ ಕಣ್ಣಲ್ಲಿ ಅನುಮಾನಾಸ್ಪದ ಕೂಡಾ ಅನ್ನಿಸಿದರೆ ಆಶ್ಚರ್ಯವಿಲ್ಲ. ಇದಕ್ಕೆ ಪೂರಕವಾಗಿ, ಅಂದಿನ ಸಮಾರಂಭದಲ್ಲಿ ಯಡಿಯೂರಪ್ಪನವರು ಪ್ರಕಟಿಸಿದ ಸ್ವರ್ಣ ತುಲಾಭಾರಕ್ಕೆ, ಸ್ವಾಮೀಜಿ ತಲೆಯಲ್ಲಾಡಿಸಿ ಹೋಗಿದ್ದಾರೆ. ನಮ್ಮ ಅರ್ಥ ಮಂತ್ರಿಯೂ ಆದ ಯಡಿಯೂರಪ್ಪನವರು ಈಗಾಗಲೇ ಈ ಕಾರ್ಯಕ್ಕಾಗಿ ತಲಾ ಒಂದು ಕೇಜಿ ಚಿನ್ನ ಕೊಡಲೊಪ್ಪಿರುವ ನೂರೊಂದು ಜನರ ಪಟ್ಟಿಯನ್ನು ಸಿದ್ಧಪಡಿಸಿದ್ದಾರಂತೆ... ಇದು ವಿಪರ್ಯಾಸ! ಈ ತುಲಾಭಾರವೇನಾದರೂ ಕಾರ್ಯಗತವಾದರೆ, ಸಿದ್ಧಗಂಗಾ ಮಠದ ಸಾಧನೆಗೆ ಮಾಡಲಾಗುವ ಇದಕ್ಕಿಂತ ದೊಡ್ಡ ಅವಮಾನ ಇನ್ನೊಂದಿರಲಾರದು. ಉಳ್ಳವರ ಸಂಪತ್ತಿನ ಈ ಅಶ್ಲೀಲ ಆಡಂಬರದ ಪ್ರದರ್ಶನಕ್ಕೆ ಸ್ವಾಮೀಜಿ ನಿಮಿತ್ತವಾದರೆ, ಶ್ರೀಸಾಮಾನ್ಯನ ಆಸೆ ಭರವಸೆಗಳೊಂದಿಗೆ ಅವರೆಲ್ಲರ ಬೆವರು, ಕಣ್ಣೀರು ಹಾಗೂ ಕಾಣಿಕೆಗಳ ಮೇಲೇ ಕಟ್ಟಿರುವ ಮಹಾನ್ ಸಂಸ್ಥೆಯ ಘನತೆಗೆ ಕುಂದುಂಟಾದಂತೆಯೇ ಸರಿ. ಈ ಶತಾಯುಷಿ ಸ್ವಾಮೀಜಿ, ತಮ್ಮ ಎಂಭತ್ತು ವರ್ಷಗಳ ಅಪ್ರತಿಮ ಸಾಧನೆಯನ್ನು ಯಾವುದೋ ಒಂದು ದುರ್ಬಲ ಘಳಿಗೆಯಲ್ಲಿ ಯಾರಿಗೋ ಒತ್ತೆ ಇಟ್ಟಂತೆ ಕೂಡಾ ಆಗಿಬಿಡುತ್ತದೆ.
ಅಥವಾ ದೂರದ ಬೆಟ್ಟ ನುಣ್ಣಗೆಂಬಂತೆ, ಈ ಮಠದ ಬಗ್ಗೆ, ಈ ಮಠಾಧೀಶರ ಬಗ್ಗೆ ನನ್ನ ಕಲ್ಪನೆಯೇ ತಪ್ಪಾಗಿದೆಯೋ? ಹಾಗೆಂದು ಯೋಚಿಸಲೂ ನನಗೆ ಕಷ್ಟವಾಗುತ್ತಿದೆ. ಏಕೆಂದರೆ ಈಗಾಗಲೇ ಹಳೆಯ ನೈತಿಕತೆಯ ಬೇರುಗಳು ಅಲ್ಲಾಡುತ್ತಾ ಹೊಸದೊಂದು ನೈತಿಕತೆಯ ಉದಯವಾಗುತ್ತಿರುವಂತೆ ತೋರುತ್ತಿರುವ ಈ ಹೊತ್ತಿನಲ್ಲಿ, ನಮ್ಮ ನಿಲುವುಗಳೆಲ್ಲ ಇತರರಿಗೆ ಭೋಳೆ ಎನಿಸುತ್ತಿದಯೇ ಎಂಬ ಶಂಕೆಯ ನಡುವೆಯೇ ನನ್ನಂಥವರು ಸುತ್ತಮುತ್ತಲ ವಿದ್ಯಮಾನಗಳನ್ನು ಗಮನಿಸಬೇಕಾದ ಖಂಡನೆಯ ಹಿಂಸೆಯನ್ನು ಅನುಭವಿಸುತ್ತಿರುವುದರ ಮಧ್ಯೆಯೇ ಇಂತಹ ಹಿಂಸೆಗಳು ಮತ್ತೆ ಮತ್ತೆ ಎದುರಾಗುತ್ತಿವೆ. ಮೊನ್ನೆ ಬಳ್ಳಾರಿಯಲ್ಲಿ ಸಾಮೂಹಿಕ ವಿವಾಹದ ಹೆಸರಿನಲ್ಲಿ ನಡೆದ ಗಣಿ ಹಣದ ರಾಜಕೀಯ ವಿಜೃಂಭಣೆಯ ನಡುವೆ ನಾನು ಮೆಚ್ಚಿದ ಇನ್ನೊಬ್ಬ ಸ್ವಾಮೀಜಿ ಕಾಣಿಸಿಕೊಂಡಾಗ ನನಗೆ ಉಸಿರೇ ಕಟ್ಟಿದಂತಾಯಿತು. ಇವರಿಗೇನು ದರ್ದು, ಇಂತಹ ಪರೋಕ್ಷ ರಾಜಕೀಯ ಪ್ರದರ್ಶನಗಳಲ್ಲಿ ಭಾಗವಹಿಸಿ ಆಶೀರ್ವಚನ ನೀಡಲು ಎಂಬುದು ಅರ್ಥವಾಗದ ಹಿಂಸೆಯಿದು. ಇವರೂ ಹೊಸ ನೈತಿಕತೆಯನ್ನು ಇಷ್ಟು ಸುಲಭವಾಗಿ ಒಪ್ಪಿಕೊಂಡುಬಿಟ್ಟರೆ ಎಂಬ ದಿಗ್ಭ್ರಮೆಯ ಹಿಂಸೆ. ಬಳ್ಳಾರಿಯ ಸ್ವತಃ ಅವರ ಸಾಮಾನ್ಯ ಭಕ್ತರಿಗೇ ಅಧರ್ಮವಾಗಿ ಕಾಣುವುದು, ಇವರಿಗೆ ಧರ್ಮವಾಗಿ ಕಾಣುವುದರ ರಹಸ್ಯವಾದರೂ ಏನು? ಬಹುಶಃ ಭಕ್ತರಿಗೆ ಸಾಕಲು ತಮ್ಮ ಹೆಂಡತಿ ಮಕ್ಕಳಷ್ಟೇ ಇದ್ದರೆ, ಸ್ವಾಮಿಜಿಗೆ ಸಾಕಬೇಕಾದ ದೊಡ್ಡ ಸಾಮ್ರಾಜ್ಯವೇ ಇರುವುದು ಇದಕ್ಕೆ ಕಾರಣವಿರಬಹುದು!
ಸಂಸಾರ ಬಿಟ್ಟು ಬಂದ ಸ್ವಾಮೀಜಿಗಳೆನಿಸಿಕೊಂಡವರು ಇಂದು ಅತಿ ದೊಡ್ಡ ಸಂಸಾರಗಳ ಒಡೆಯರೇ ಆಗಿದ್ದಾರೆ. ಕೆಲವರಂತೂ ಎರಡೂ ರೀತಿಯ 'ಸಂಸಾರ'ಗಳನ್ನೂ 'ನೇಮ ನಿಷ್ಠೆ'ಗಳೊಂದಿಗೆ ಸರಿದೂಗಿಸಿಕೊಂಡು ಹೋಗುವಷ್ಟು 'ಸಮರ್ಥ'ರಾಗಿದ್ದಾರೆ! ಅನುಮಾನವಿದ್ದರೆ, ಉಡುಪಿಗೊಮ್ಮೆ ಹೋಗಿಬನ್ನಿ! ಭಕ್ತರೂ ಅದನ್ನು ಕೀಟಲೆಯ ಜೊತೆಗೋ ಅಥವ ಶಾಪ ಹಾಕುತ್ತಲೋ ಜಾತ್ಯಾಭಿಮಾನದ ಒತ್ತಡದಲ್ಲಿ ಅದನ್ನು ಒಪ್ಪಿಕೊಂಡಿಯೂ ಇದ್ದಾರೆ! ಹೀಗಾಗಿ ಮಠಗಳು ಇಂದು ಸರಳತೆಯ, ಸಭ್ಯತೆಯ ಶ್ರದ್ಧಾ ಕೇಂದ್ರಗಳಾಗದೆ, ವ್ಯಾಪಾರ - ವ್ಯವಹಾರಗಳ ದೊಡ್ಡ ಕೇಂದ್ರಗಳೆನಿಸಿಕೊಂಡಿವೆ. ಕೆಲವರದು ದೊಡ್ಡ ವ್ಯವಹಾರ, ಕೆಲವರದು ಚಿಕ್ಕ ವ್ಯವಹಾರ. ದೊಡ್ಡ ವ್ಯವಹಾರವೆಂದರೆ, ವಿದ್ಯಾ ಪ್ರಸಾರದ ಹೆಸರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ವ್ಯವಹಾರ. ಒಬ್ಬ ಸ್ವಾಮೀಜಿ ತಮ್ಮ ಹಿರಿಯ ಸ್ವಾಮೀಜಿ ಬಗ್ಗೆ ಮಾತನಾಡುತ್ತಾ, ಅವರು ಬರೀ ಹೆಣ್ಣುಮಕ್ಕಳನ್ನು (ಅಂದರೆ, ಬರೀ ಖರ್ಚಿನ ಶಾಲೆಗಳು ಮತ್ತು ಪದವಿ ಕಾಲೇಜುಗಳನ್ನು) ಹೆತ್ತು ಹೋದರೆ, ತಾವು ಗಂಡು ಮಕ್ಕಳನ್ನು (ಅಂದರೆ ಡೊನೇಷನ್ ಮೂಲದ ಇಂಜಿನಿಯರಿಂಗ್, ಮೆಡಿಕಲ್ ಇತ್ಯಾದಿ ಕಾಲೇಜುಗಳನ್ನು) ಹೆತ್ತು ಕೊಟ್ಟಿರುವುದಾಗಿ ತಮ್ಮ ಆಪ್ತರೊಂದಿಗೆ ಕೊಚ್ಚಿಕೊಳ್ಳುತ್ತಾರೆಂದರೆ? ಇಂದು ಕರ್ನಾಟಕದ ಅತ್ಯಂತ ಶ್ರೀಮಂತ ಸಂಸ್ಥೆಗಳ ಪಟ್ಟಿ ತಯಾರಿಸಿದರೆ, ಅದರಲ್ಲಿ ಈ ಅನೇಕ ಮಠಗಳು ಸೇರುವುದರಲ್ಲಿ ಅನುಮಾನವಿಲ್ಲ. ಒಂದು ಕಾಲದಲ್ಲಿ ಬಡಬಗ್ಗರ ಮಕ್ಕಳಿಗೆ ಊಟ ವಿದ್ಯೆ ಒದಗಿಸುವ ಆಶ್ರಯ ಧಾಮಗಳಾಗಿ, ಜ್ಞಾನ ವೈರಾಗ್ಯ ಬೋಧನೆಗಳ ತಾಣವಾಗಿ ಆರಂಭವಾದ ಮಠಗಳು ಇಂದು ಬೃಹತ್ ಉದ್ಯಮ ಸಂಸ್ಥೆಗಳಂತೆ, ಹಣವುಳ್ಳವರ, ದೊಡ್ಡ ವ್ಯಾಪಾರಿಗಳ, ದಲ್ಲಾಳಿಗಳ, ಕಂತ್ರಾಟುದಾರರ, ಭ್ರಷ್ಟ ರಾಜಕಾರಣಿಗಳ, ಜಾತಿವಾದಿ ನಿವೃತ್ತ ಅಧಿಕಾರಿಗಳ ಸಹಕಾರಿ ಸಂಘಗಳಂತಾಗಿವೆ. ಹಾಗೇ ಇವು ಉನ್ನತ ರಾಜಕಾರಣಿಗಳ ಹಾಗೂ ಅತಿ ಶ್ರೀಮಂತರ ಅಕ್ರಮ ಸಂಪತ್ತಿನ ತಂಗುದಾಣಗಳೂ ಆಗಿವೆ ಎಂಬ ಆಪಾದನೆ ಹೊಸದೇನಲ್ಲ.
ಈಗಿನ ಬಹಳಷ್ಟು ಮಠಗಳು ತಿಂಗಳ ಬಡ್ಡಿಯ ಲೇವಾದೇವಿ ಕೇಂದ್ರಗಳಾಗಿವೆ. ಅದಕ್ಕೆ ಬೇಕಾದ ಸೂಕ್ತ 'ವ್ಯವಸ್ಥೆ'ಯನ್ನೂ ಅವು ಮಾಡಿಕೊಂಡಿವೆ! ಅಸಹಾಯಕರ, ವಿಧವೆಯರ ಸಂಪತ್ತನ್ನು ಜಾಣತನದಿಂದಲೋ, ಬೆದರಿಕೆಯಿಂದಲೋ ಮಠಕ್ಕೆ ಲಪಟಾಯಿಸಿಕೊಂಡ ಎಷ್ಟು ಮಠಗಳಿಲ್ಲ? ಸಣ್ಣ ಮಠಗಳನ್ನು ದೊಡ್ಡ ಮಠಗಳು take over ಮಾಡಿದ ಎಷ್ಟು ಉದಾಹರಣೆಗಳಿಲ್ಲ? ಹೀಗೆ ಇವು, ಇತ್ತೀಚಿನ ಕಾರ್ಪೋರೇಟ್ ವಲಯದ ವ್ಯವಹಾರಗಳಿಗಿಂತ ಯಾವ ರೀತಿ ಕಡಿಮೆ ಇವೆ? ಹಾಗಾಗಿಯೇ ಇಂದಿನ ಮಠಾಧೀಶರಿಗೆ ನಿಜವಾಗಿಯೂ ಒಪ್ಪುವ ಅಭಿದಾನವೆಂದರೆ, ಕಂಪನಿ CEO! ಹೇಗೂ, ಅವು ಧಾರ್ಮಿಕ ಕೇಂದ್ರಗಳಾಗಿ ಎಂದೋ ತಮ್ಮ ಪ್ರಸ್ತುತತಯನ್ನು ಕಳೆದುಕೊಂಡಿವೆ. ಅವುಗಳಿಂದ ಇತ್ತೀಚಿನ ಇತಿಹಾಸದಲ್ಲಿ ರಾಜ್ಯದ ಜನತೆಯ ಪಾರಮಾರ್ಥಿಕ ದಾಹವನ್ನು ತೀರಿಸಬಲ್ಲ, ನಿಜವಾದ ಜ್ಞಾನಿಯೆಂದು ಕರೆಯಬಹುದಾದ ಒಬ್ಬನೇ ಒಬ್ಬ ವ್ಯಕ್ತಿ ಹೊರಬಂದಿರುವ ಉದಾಹರಣೆಯಿಲ್ಲ. ಹೀಗಿರುವಾಗ ಇವನ್ನು ಧಾರ್ಮಿಕ ಸಂಸ್ಥೆಗಳೆಂದು ಕರೆಯುವುದು ಧರ್ಮಕ್ಕೇ ಮಾಡುವ ಅಪಚಾರವಾಗುತ್ತದೆ. ಏಕೆಂದರೆ, ಜಾತಿ ಸಂಕುಚಿತತೆಯನ್ನು ಪ್ರೋತ್ಸಾಹಿಸುತ್ತಲೇ ಸಾಮಾಜಿಕ ಐಕ್ಯತೆಯನ್ನು ಸದಾ ಒಡೆದಿಟ್ಟುಕೊಂಡೇ ಬರುತ್ತಿರುವ ಈ ಮಠಗಳು, ಇಂದಿನ ಸಮಯಸಾಧಕ ಜಾತಿ ರಾಜಕಾರಣದ breeding centreಗಳಾಗಿವೆ.
ಇದೆಲ್ಲ ಗೊತ್ತಿದ್ದೂ ಜನ ಬಡ - ಶ್ರೀಮಂತರೆನ್ನದೆ, ಮಠಗಳಿಗೆ ಮುಗಿ ಬೀಳುತ್ತಿದ್ದಾರೆ. ಕೆಲವರು ತಮ್ಮ ಆಸ್ತಿ ಪಾಸ್ತಿಗಳನ್ನು ಇವುಗಳಿಗೆ ಬರೆದು ಕಣ್ಣು ಮುಚ್ಚುತ್ತಿದ್ದಾರೆ! ಇದಕ್ಕೆ ಮುಖ್ಯ ಕಾರಣ, ಜನರಿಗೆ ಬದಲಿ ಮತ್ತು ವಿಶ್ವಾಸಾರ್ಹ ಸಾಮಾಜಿಕ - ಸಾಂಸ್ಕೃತಿಕ ಸಂಘಟನೆಗಳು ಇಲ್ಲದೇ ಹೋಗಿರುವುದು. ಜೊತೆಗೆ, ಜಾತಿ ವ್ಯವಸ್ಥೆ ವಿರೋಧಿ ಆಂದೋಲನ ಮೀಸಲಾತಿ ಆಂದೋಲನದ ಗೊಂದಲದಲ್ಲ್ಲಿ ತನ್ನೆಲ್ಲ ತಾತ್ವಿಕತೆಯನ್ನು ಕಳೆದುಕೊಂಡು ಚದುರಿ ಹೋಗಿರುವುದು. ಜಾತಿಗೊಂದು ಮಠ ಮಾಡಿಕೊಟ್ಟು ಜಾತಿ ಘನತೆಯನ್ನು ಎತ್ತಿ ಹಿಡಿಯುವ, ಜಾತಿ ವ್ಯವಸ್ಥೆಯ ಹೊಸದೊಂದು ಮಾದರಿಯನ್ನು ಸೃಷ್ಟಿಸುತ್ತಿರುವ ಸ್ವಾಮೀಜಿಯೊಬ್ಬರ ಪ್ರಯತ್ನವನ್ನು 'ಪ್ರಗತಿಪರ' ಎಂದು ಮಾನ್ಯ ಮಾಡುವ ಮಟ್ಟಕ್ಕೆ ನಮ್ಮ 'ಪ್ರಗತಿಪರತೆ' ಮುಟ್ಟಿರುವುದರಿಂದಲೇ, ಮಠಗಳು ರಾಜಕಾಣಿಗಳೊಂದಿಗೆ ಸೇರಿ ಸಮಾಜವನ್ನು ಜಾತಿ ಜಾತಿಗಳಾಗಿ ಒಡೆಯಲು ಈಗ ಧೈರ್ಯವಾಗಿ ನಿಂತಿರುವುದು. ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸದಿದ್ದರೆ, ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಕೆಲವು ವೀರಶೈವ ಮಠಾಧೀಶರು ಬೆದರಿಸತೊಡಗಿರುವುದು ಸೂಚಿಸುವುದಾದರೂ ಇನ್ನೇನನ್ನು?
ರಾಜಕಾರಣಿಗಳು ಮತ್ತು ಮಠಾಧೀಶರು ಸಂಪತ್ತಿನ ಅಕ್ರಮ ಗುಡ್ಡೆಗಳ ಎಡಬಲ ನಿಂತು ಮಂದಸ್ಮಿತರಾಗಿ ಪತ್ರಿಕೆಗಳಿಗೆ ಫೋಟೊ ಪೋಸು ನೀಡುವಷ್ಟು ಪರಿಸ್ಥಿತಿ ನಿರ್ಲಜ್ಜವಾಗಿದೆ. ಕೆಲವು ಕಡೆಯಂತೂ ನಮ್ಮನ್ನಾಳುವವರು ಈ ಮಠಾಧೀಶರ ಸಿಂಹಾಸನದ ಕೆಳಗೆ ಕುರ್ಚಿ ಹಾಕಿಸಿಕೊಂಡು ಕೂತು ಹಲ್ಲು ಕಿರಿಯುವುದನ್ನು ನೋಡಿದರೆ, ನಮ್ಮ ಸಂವಿಧಾನವೇ ನಮ್ಮನ್ನು ನೋಡಿ ಹಲ್ಲು ಕಿರಿದಂತಾಗುತ್ತದೆ. ಅದರೇನು ಮಾಡುವುದು, ಇಂತಹ ಸಾಮಾಜಿಕ ಹಾಗೂ ಸಾಂವಿಧಾನಿಕ ಅವನತಿಯ ವಿರುದ್ಧದ ಪ್ರತಿಭಟನೆಗೆ ವೇದಿಕೆಗಳಾಗಬೇಕಾದ ನಮ್ಮ ಮಾಧ್ಯಮಗಳೇ ಹೊಸ ಕಾಲದ ಮಠಗಳಾಗಿ ಪರಿವರ್ತಿತವಾಗತೊಡಗಿವೆಯಲ್ಲ? ಮೊನ್ನೆ, ರಾಜಕಾರಣಿಗಳ ಭ್ರಷ್ಟತೆಯನ್ನು ಬಯಲು ಮಾಡುವ ಕನ್ನಡದ 'ಕ್ರಾಂತಿಕಾರಿ' ದಿನ ಪತ್ರಿಕೆಯೊಂದು ಇಂದಿನ ಭ್ರಷ್ಟ ರಾಜಕಾರಣದ ಆಟ - ಪಾಠಗಳಿಗೆ ಅಪಾರ ಹಣ ಪೂರೈಸುತ್ತಿರುವವರೆಂದು ಹೆಸರಾದ ಗಣಿ ಉದ್ಯಮದ ಶಾಸಕರೊಬ್ಬರ ಘನ ದಾನ - ಧರ್ಮದ ಕಾರ್ಯಗಳನ್ನು ಸ್ತುತಿಸುವ ವಿಶೇಷ ಪುರವಣಿಯನ್ನೇ ಹೊರತಂದು ಕೃತಾರ್ಥವಾಗಿದೆಯಲ್ಲ? ಅಲ್ಲಮ, ಶಬ್ದದ ಲಜ್ಜೆಯ ಬಗ್ಗೆ ಹೇಳಿದ. ಶಬ್ದದ ನಿರ್ಲಜ್ಜೆಯ ಬಗ್ಗೆ ಹೇಳಬೇಕಾದ ಕಾಲವೀಗ ಬಂದಂತಿದೆ!
ಅಂದಹಾಗೆ: ಯಡಿಯೂರಪ್ಪನವರಿಗೆ, ಮೆರಿಟ್ಟಿಲ್ಲದ ಗ್ರಾಮಾಂತರ ವಿದ್ಯಾರ್ಥಿಗಳು ಇಂಜಿನಿಯರಗಳೂ, ಡಾಕ್ಟರುಗಳು ಆಗುವುದನ್ನು ನೋಡಬೇಕೆಂಬ ಆಸೆಯಂತೆ! ಈ ಗ್ರಾಮೋದ್ಧಾರದ ಕಾರ್ಯಕ್ರಮದ ಮೊದಲ ಹೆಜ್ಜೆಯಾಗಿಯೇ ಈಗ ಶಿವಮೊಗ್ಗದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ ವಿಸ್ತರಣಾ ಶಾಖೆಯೊಂದನ್ನು ತೆರೆದು, ವಸೂಲಿ ಆರಂಭಿಸಲಾಗಿದೆ! ಇನ್ನು ಸರ್ಕಾರಿ ವೈದ್ಯಕೀಯ ಕಾಲೇಜಿನ ಜೊತೆಗೇ ಖಾಸಗಿ ಕಾಲೇಜೊಂದಕ್ಕೂ ಅನುಮತಿ ನೀಡಲಾಗಿದ್ದು, ಅಲ್ಲಿಯೂ ಗ್ರಾಮಾಂತರ ವಿದ್ಯಾರ್ಥಿಗಳ 'ಸೇವೆ' ಇಷ್ಟರಲ್ಲೇ ಆರಂಭವಾಗಬಹುದಾಗಿದೆ
Comments
ಉ: ಎಚ್ಚರದಪ್ಪುತ್ತಿರುವ ಮಠಾಧೀಶರೂ, ಅವರ ಜಾತಿ ರಾಜಕಾರಣವೂ...
ಉ: ಎಚ್ಚರದಪ್ಪುತ್ತಿರುವ ಮಠಾಧೀಶರೂ, ಅವರ ಜಾತಿ ರಾಜಕಾರಣವೂ...