ಏನಂತೀರಿ ?

ಏನಂತೀರಿ ?

ಕನ್ನಿಂಗ್ಹ್ಯಾಂ ರೋಡ್ ಜಂಕ್ಷನ್ನ ಎದುರಿನಲ್ಲಿ 'ನಿಟಾನ್ 'ಎಂಬ ಬಂಗ್ಲೆಯಿದೆ. ಅದರಲ್ಲೇನೂ ವಿಶೇಷ ಕಾಣದಿದ್ದರೂ ಅದರ ಹೆಸರೇ ವಿಶಿಷ್ಟವಾಗಿದೆ. 'ನಿಟಾನ್'ಎಂಬ ಹೊಸ ಮೂಲಧಾತು (Element) ಅನ್ನು ಕಂಡುಹಿಡಿದ ವಿಲಿಯಂ ರಾಮ್ಸೆಗೆ ೧೯೦೪ ರಲ್ಲಿ ನೊಬೆಲ್ ಪುರಸ್ಕಾರ ಸಿಕ್ಕಿತ್ತು. ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ನ (ಇಂದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ಸ್ಥಾಪಕರಾದ ಸರ್ ಜೇಮ್ಶೇಠ್ಜಿ ಟಾಟಾರವರು ಅದರ ರಾಸಾಯನ ಶಾಸ್ತ್ರ ವಿಭಾಗದ ಹುಟ್ಟಿಗಾಗಿ ವಿಲಿಯಂ ರಾಮ್ಸೆಯನ್ನು ಆಹ್ವಾನಿಸಿದ್ದರು. ರಾಮ್ಸೆ ಕೆಲವರ್ಷ ಈ ಬಂಗಲೆಯಲ್ಲಿ ನೆಲೆಸಿದ್ದರಿಂದ ಇದಕ್ಕೆ 'ನಿಟಾನ್'ಎಂಬ ಹೆಸರಿಟ್ಟದ್ದು ಸೂಕ್ತವಾಗಿದೆ.
ನನ್ನ ಸ್ನೇಹಿತನೊಬ್ಬ ಅವನ ಮಗಳಿಗೆ ಸೌಚ ಎಂದು ಹೆಸರಿಟ್ಟಿದ್ದಾನೆ. ಆ ಹೆಸರಿಗೆ ಅರ್ಥವೇನಿರಬಹುದು ಎಂದು ತಿಣುಕಾಡಿದೆ. ಅವನನ್ನೇ ವಿಚಾರಿಸಿದಾಗ ತಿಳಿದುಬಂದದ್ದು ಸೌಮ್ಯ ಮತ್ತು ಚನ್ನೇಗೌಡರ ಸುಪುತ್ರಿಯಾಗಿರುವ ಅವಳಿಗೆ ಈ ಹ್ರಸ್ವರೂಪದ ಹೆಸರಂತೆ. ತುಂಬಾ ಚೆನ್ನಾಯಿತು ಎಂದುಕೊಂಡೆ. ಬೆಂಗಳೂರಿನ ಶೌಚಾಲಯಗಳೇ ನಿರ್ಮಲ ಎಂದು ಹೆಸರಿಟ್ಟುಕೊಳ್ಳುತ್ತಿರುವಾಗ ಇವನ್ಯಾವ ಸೀಮೆ ಗೂಬೆ ಅಂತೀರಾ?
ಟಿವಿ ನೋಡೋ ಚಟ ಇದ್ಮೇಲೆ ಧಾರವಾಹಿ ನೋಡೋ ಚಟಾನೂ ಇದ್ದದ್ದೇ. ಕೊನೆಯಲ್ಲಿ ಅವರು ಮುಂದುವರೆಯುವುದು ಎಂದು ತೋರಿಸುತ್ತಾರೆ, ನೋಡಿದ್ದೀರಾ? ಏನದು ಈ ಮುಂದುವರೆಯುವ ವಿಚಾರ? ನಿಂತಲ್ಲಿಯೇ ನಿಲ್ಲದೆ ಮುಂದಕ್ಕೆ ಹರಿಯುತ್ತಾ ಸಾಗುವುದು ಎನ್ನುವುದನ್ನೇ ಮುಂದುವರಿಯುವುದು ಎನ್ನಬಹುದಲ್ಲದೇ ಮುಂದುವರೆಯುವುದು ಎಂದರೆ ಏನಂತೀರಿ?

Rating
No votes yet

Comments