ಒಂದು ಪಿಗ್ಗಿನ ಕತೆ!

ಒಂದು ಪಿಗ್ಗಿನ ಕತೆ!

ಈಚೆಗೆ ಕನ್ನಡಪ್ರಭ ದ ಛಾಯಾಂಕಣವೊಂದರಲ್ಲಿ ತಾಯಿ ಹಂದಿ ತನ್ನ ಮುದ್ದುಮರಿಗಳಿಗೆ ಹಾಲುಣಿಸುತ್ತಿರುವ ಚಿತ್ರ ನೋಡಿದೊಡನೆಯೇ ನನ್ನ ಅತ್ಯಂತ ಮೆಚ್ಚಿನ ಇಂಗ್ಲಿಷ್ ಲೇಖಕ ಚಾರ್ಲ್ಸ್ ಲ್ಯಾಂಬ್ ನೆನಪಾದ.

ಲ್ಯಾಂಬ್ ಬರವಣಿಗೆಯೇ ಹಾಗೆ. ನಮ್ಮ ಎಸ್.ಎಲ್. ಬೈರಪ್ಪ ಅವರ ಬರವಣಿಗೆಯಂತೆ. ಓದುತ್ತ ಹೋದರೆ ಅದು ನಮ್ಮದೇ ಕತೆಯೇನೋ ಎಂಬಂತೆ ಓದಿಸಿಕೊಂಡು ಹೋಗುತ್ತವೆ.

ಸ್ವತಃ ಜೀವನದಲ್ಲಿ ಹೊರಲಾರದಷ್ಟು ಕಷ್ಟದ ಮೂಟೆಯನ್ನೇ ಹೊತ್ತರೂ ಲ್ಯಾಂಬ್‌ನ ಬರಹಗಳಲ್ಲಿ ಮಾನವೀಯತೆ, ವ್ಯಂಗ್ಯ, ಮೊನಚು, ಹಾಸ್ಯ ಹಾಸು ಹೊಕ್ಕಾಗಿವೆ.

"A Desertation Upon a Roast Pig" ಎಂಬ ಪ್ರಬಂಧದಲ್ಲಿ ಲ್ಯಾಂಬ್ ಹಂದಿ ಮರಿಗಳು ಹಾಗೂ ಅವುಗಳ ಮಾಂಸದ ಬಗ್ಗೆ ಸ್ವಾರಸ್ಯಕರವಾಗಿ ಬರೆದಿದ್ದಾನೆ.

ಚಿತ್ರದಲ್ಲಿನ ಸುಂದರ ಹಂದಿ ಮರಿಗಳನ್ನು ನೋಡಿದಾಗ ನೆನಪಾಗಿದ್ದೇ ಈ ಪ್ರಬಂಧ.

ಲ್ಯಾಂಬ್‌ಗೆ ಹಂದಿ ಮಾಂಸ ಅದೂ ಎಳೆ ಹಂದಿಯ ಮಾಸವೆಂದರಂತೂ ಪಂಚಪ್ರಾಣವಂತೆ. ತನ್ನ ಜಿಹ್ವಾ ಚಾಪಲ್ಯದ ಜೊತೆಗೆ ಬೇಯಿಸಿದ ಮಾಂಸವನ್ನು ಮನುಷ್ಯ ತಿನ್ನಲು ಆರಂಭಿಸಿದ್ದು ಹೇಗೆ ಎಂಬುದರ ಬಗ್ಗೆಯೂ ಲೇಖಕ ಸ್ವಾರಸ್ಯಕರ ಕತೆಯೊಂದನ್ನು ನೀಡಿದ್ದಾನೆ.

ಸುಮಾರು ಎಪ್ಪತ್ತು ಸಾವಿರ ವರ್ಷಗಳಷ್ಟು ಕಾಲ ಮಾನವ ಹಸಿ ಮಾಂಸವನ್ನೇ ತಿನ್ನುತ್ತಿದ್ದನಂತೆ, ಮಾಂಸ ಬೇಯಿಸುವುದನ್ನು ಕಲಿತಿದ್ದು ತುಂಬಾ ಆಕಸ್ಮಿಕ. ಈ ವಾದಕ್ಕೆ ಪುಷ್ಠಿ ನೀಡಲು ಲ್ಯಾಂಬ್ ಚೀನೀ ಕತೆಯೊಂದರಲ್ಲಿನ ಹೋಟಿ ಮತ್ತು ಬೊಬೊ ಎಂಬ ಅಪ್ಪ-ಮಗನ ಪ್ರಯೋಗದ ಉದಾಹರಣೆ ನೀಡಿದ್ದಾನೆ.

ಕತೆ ಹೀಗಿದೆ-
ಎಂದಿನಂತೆ ಒಂದು ದಿನ ಹೋಟಿ ಮನೆಯತ್ತ ನೋಡಿಕೊಳ್ಳುವಂತೆ ಮಗ ಬೊಬೊ ನಿಗೆ ಹೇಳಿ ಕಾಡಿಗೆ ಹೋದ. ಸದಾ ಆಟದಲ್ಲೇ ಮೈಮರೆಯುತ್ತಿದ್ದ ಬಾಲಕ ಬೊಬೊ ಅಂದೂ ಕೂಡ ಗುಡಿಸಲಿನಲ್ಲಿ ಬೆಂಕಿಯ ಕಿಡಿಗಳೊಂದಿಗೆ ಆಡುತ್ತಿರುವಾಗ ಇಡೀ ಗುಡಿಸಲಿಗೇ ಬೆಂಕಿ ಹತ್ತಿಕೊಂಡಿತು. ಬೊಬೊ ಪ್ರಾಣಾಪಾಯದಿಂದ ಪಾರಾದನಾದರೂ ಒಂಬತ್ತು ಎಳೆ ಹಂದಿ ಮರಿಗಳೊಂದಿಗೆ ಜೋಪಡಿ ಸುಟ್ಟು ಬೂದಿಯಾಯಿತು. ಆ ದಿನಗಳಲ್ಲಿ ಚೀನಾದಲ್ಲಿ ಮನೆಯಲ್ಲಿ ಹಂದಿಗಳನ್ನು ಸಾಕುವುದೆಂದರೆ ಕುದುರೆಗಳನ್ನು ಸಾಕಿದಷ್ಟೇ ಪ್ರತಿಷ್ಠೆ-ಬೆಲೆ ಯಾಗಿದ್ದರಿಂದ ಬಾಲಕ ಬೊಬೊ ಬೋರೆಂದು ಅಳುತ್ತ ಕುಳಿತುಬಿಟ್ಟ. ಅಳುತ್ತಿರುವಾಗಲೇ ಗುಡಿಸಲಿನ ಅವಶೇಷಗಳಿಂದ ಒಂದು ಹಿತವಾದ ಸುಟ್ಟ ವಾಸನೆ ಬರುತ್ತಿದ್ದುದು ಆತನ ಗಮನಕ್ಕೆ ಬಂತು. ಕುತೂಹಲ ತಡೆಯಲಾರದ ಬೊಬೊ ಸುಟ್ಟ ವಾಸನೆ ಬರುತ್ತಿರುವೆಡೆ ಕೈ ಯಿಟ್ಟ. ಆ ಶಾಖಕ್ಕೆ ಬೆರಳುಗಳು ಸುಟ್ಟವು. ಸುಟ್ಟ ಬೆರಳುಗಳನ್ನು ತಂಪಾಗಿಸಲು ಕೂಡಲೇ ಬಾಯಲ್ಲಿಟ್ಟುಕೊಂಡ. ಹಿತವಾಗಿ ಬೆಂದಿದ್ದ ಹಂದಿಯ ಎಳೆಮಾಂಸದ ರುಚಿಯಿಂದ ಬೊಬೊ ಬ್ರಹ್ಮಾನಂದ ಪಡೆದ. ಈ ಹಿಂದೆ ಎಂದೂ ಆತ ಮಾಂಸದಲ್ಲಿ ಆ ರುಚಿಯನ್ನೇ ಕಂಡಿರಲಿಲ್ಲ. ಮನೆ ಸುಟ್ಟು ಹೋದ ಪರಿವೆಯೇ ಇಲ್ಲದೇ ಆತ ಬೆಂದ ಹಂದಿ ಮಾಂಸವನ್ನು ಮನಗಂಡ ಉಂಡ!

ಕಾಡಿನಿಂದ ಮರಳಿದ ಹೋಟಿ ತನ್ನ ಪುತ್ರರತ್ನನ ಅವತಾರ ಕಂಡು ಬೆಚ್ಚಿದ. ಗುಡಿಸಲು ಸುಟ್ಟು ಹೋಗಿದ್ದರೂ ಅದರ ಪರಿವೆಯೇ ಇಲ್ಲದೇ ತನ್ನಷ್ಟಕ್ಕೆ ತಾನು ಕೂತು ಅವಶೇಷಗಳಿಂದ ಏನೋ ತಿನ್ನುತ್ತಿರುವುದನ್ನು ಕಂಡ ಆತನ ಪಿತ್ತ ನೆತ್ತಿಗೇರಿತು. ಪರಿಣಾಮ ಮಗನಿಗೆ ಉಗಿದ, ಬಾರಿಸಿದ. ಉಹ್ಜ್ಞೂ, ಪ್ರಯೋಜನವಾಗಲಿಲ್ಲ. ಬೊಬೊ ತನ್ನ ಕಾಯಕವನ್ನು ಮುಂದುವರಿಸಿದ್ದ. ಆತ ತಲೆ ಎತ್ತಿದ್ದು ಹೊಟ್ಟೆ ತುಂಬ ತಿಂದು ತೇಗಿದ ಮೇಲೆಯೇ. ನಂತರ ತನ್ನ ಉತ್ಕೃಷ್ಟ ರುಚಿಯನ್ನು ಅಪ್ಪನಿಗೆ ಹೇಳಿದರೂ ಆತ ಅದನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಈತನಿಗೆ ತಿಳಿಹೇಳುವುದು ಅಸಾಧ್ಯ ಎಂದರಿತ ಬೊಬೊ, ಅವನನ್ನೇ ಬೆಂದ ಮಾಂಸವಿದ್ದ ಸ್ಥಳಕ್ಕೆ ಕರೆತಂದು ಆತನ ಕೈಯನ್ನು ಸುಡುವ ಮಾಂಸದ ಮೇಲಿರಿಸಿದ. ಕೈಸುಟ್ಟುಕೊಂಡ ಹೋಟಿಯೂ ಅದನ್ನು ತಂಪಾಗಿಸಿಕೊಳ್ಳಲು ಎಂದಿನಂತೆ ಬಾಯಲ್ಲಿಟ್ಟುಕೊಂಡ. ಬಾಯಲ್ಲಿಟ್ಟಿದ್ದೇ ತಡ ಆತನಿಗೂ ಬ್ರಹ್ಮಾನಂದ ದರ್ಶನ! ನಂತರ ಅಪ್ಪ-ಮಗ ಚಕ್ಕಳ ಮಕ್ಕಳ ಹಾಕಿ ಕೂತು ಭೂರಿ ಭೋಜನ ಸವಿದಿದ್ದೇ ಸವಿದಿದ್ದು!!

ಮಾಂಸ ಬೇಯಿಸುವುದನ್ನು ಅವರು ಎಂದೂ ಕಂಡು, ಕೇಳಿರದಿದ್ದರಿಂದ ತಮ್ಮ 'ಪ್ರಥಮ ಅನುಭವ' ವನ್ನು ನೆರೆಹೊರೆಯವರಿಗೆ ಹೇಳಲು ಹೆದರಿಕೆಯಾಯಿತು. ಈ ರಹಸ್ಯವನ್ನು ತಮ್ಮಲ್ಲೇ ಬಚ್ಚಿಟ್ಟುಕೊಂಡರು. ಅಪ್ಪ-ಮಗನಿಗೆ ಬೇಯಿಸಿದ ಹಂದಿಯನ್ನು ತಿನ್ನುವ ಮನಸ್ಸಾದಾಗಲೆಲ್ಲ ಗುಡಿಸಲನ್ನೇ ಸುಟ್ಟು ಬಿಡುತ್ತಿದ್ದರು! ಹೋಟಿಯ ಗುಡಿಸಲು ಆಗಾಗ ನಿಗೂಢವಾಗಿ ಬೆಂಕಿಗೆ ಆಹುತಿಯಾಗುತ್ತಿದ್ದುದನ್ನು ಗಮನಿಸಿದ ನೆರೆಯವರಿಗೆ ಸಹಜವಾಗಿಯೇ ಕುತೂಹಲ ಉಂಟಾಯಿತು, ಇದರ ಬೆನ್ನ ಹಿಂದೆಯೇ ಅನೇಕ ವದಂತಿಗಳೂ ಶುರುವಾದವು. ಇದೂ ಕೋರ್ಟ್ ಮೆಟ್ಟಿಲನ್ನೂ ಹತ್ತಿತು. ಈ ಬಗ್ಗೆ ತೀರ್ಪು ನೀಡುವ ಮುನ್ನ ಬೆಂದ ಹಂದಿ ಮಾಂಸದ ಸ್ಯಾಂಪಲ್ ಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ನ್ಯಾಯಾಧೀಶರು ಆದೇಶಿಸಿದರು. ಅದೂ ಆಯಿತು. ನ್ಯಾಯಮಂಡಳಿಯ ಎಲ್ಲಾ ಸದಸ್ಯರೂ ತಮ್ಮ ಬೆರಳುಗಳನ್ನು ನೆಕ್ಕಿದರು. ನೆಕ್ಕಿದ್ದೇ ತಡ, ಹಿಂದೆಂದೂ ಕಂಡಿರದ ರುಚಿ ಕಂಡ ಅವರು ಹೋಟಿ ಮತ್ತು ಬೊಬೊ ತಪ್ಪಿತಸ್ಥರಲ್ಲ ಎಂದು ಘೋಷಿಸಿ ಬಿಟ್ಟಿರು.

ನ್ಯಾಯಾಲಯದಲ್ಲಿ ಮಾಂಸದ ರುಚಿ ನೋಡಿದ ಜಡ್ಜಿ, ತನ್ನ ಮನೆಯನ್ನೇ ಸುಟ್ಟು ಬಿಡುವುದೇ! ಕ್ರಮೇಣ ಇದೇ ಪದ್ಧತಿ ಆ ಪ್ರಾಂತ್ಯದಲ್ಲಿ ಹಬ್ಬಿಬಿಟ್ಟಿತು. ಪರಿಣಾಮವಾಗಿ ಸೀಮೆ ಎಣ್ಣೆ- ಹಂದಿ ಮರಿಗಳು ತುಟ್ಟಿಯಾದವು, ವಿಮಾ ಕಂಪನಿಗಳು ಬಾಗಿಲು ಮುಚ್ಚಿದವು. ಈ ಎಲ್ಲಾ ಅನಾಹುತಗಳಾದ ಮೇಲಷ್ಟೇ ವ್ಯವಸ್ಥಿತವಾಗಿ ಮಾಂಸ ಬೇಯಿಸುವ ಪದ್ಧತಿಯನ್ನು ಕಂಡು ಹಿಡಿಯಲಾಯಿತು.

ಹೀಗಿದೆ ಮಾಂಸ ಬೇಯಿಸುವ ಪದ್ಧತಿ ಜಾರಿಗೆ ಬಂದ ಪುರಾಣ.

ಪರಮಶ್ರೇಷ್ಠ:
ಲ್ಯಾಂಬ್ ಗೆ, ಬೇಯಿಸಿದ ಹಂದಿ ಮಾಂಸ ಶ್ರೇಷ್ಠ ಖಾದ್ಯಗಳಲ್ಲೇ ಪರಮ ಶ್ರೇಷ್ಠ. ತಿನ್ನಲು ಯೋಗ್ಯವಾದ ಹಂದಿ ಹೇಗಿರಬೇಕೆಂದೂ ಆತ ಹೇಳುತ್ತಾನೆ ಓದಿ, "ಬೇಯಿಸಬೇಕಾಗಿರುವ ಹಂದಿ ಎಳೆಯದಾದಷ್ಟೂ ಒಳ್ಳೆಯದು, ಎಷ್ಟು ಎಳೆಯದು ಎಂದರೆ ಅದು ಒಂದು ತಿಂಗಳಿಗಿಂತ ಕಡಿಮೆ ವಯಸ್ಸಿನದಾಗಿರಬೇಕು". ಬೆಂದ ಈ ಮಾಂಸವನ್ನು ಊಟದ ಮೇಜಿನ ಮೇಲೆ ಸುಂದರವಾಗಿ ಇರಿಸಿದರೆ ಅದರ ಸವಿ ಬಲ್ಲವನೇ ಬಲ್ಲ. ಮಾಂಸವಿರಿಸಿದ ತಟ್ಟೆಯೇ ನನಗೆ ತೊಟ್ಟಿಲು ಎಂಬುದು ಲ್ಯಾಂಬನ ಅಂಬೋಣ.

ಹದವಾಗಿ ಬೆಂದ, ಗರಿಗರಿಯಾದ ಹಂದಿ ಮಾಂಸಕ್ಕೆ ಸಾಟಿಯೇ ಇಲ್ಲ. ಲ್ಯಾಂಬ್ ಪ್ರಕಾರ, ಎಳೆ ಹಂದಿ ಮರಿಯನ್ನು ಬೆಳೆದು ದೊಡ್ಡದಾಗಲು ಬಿಡಲೇ ಬಾರದು! ದೊಡ್ಡದಾಗಿ, ಹೊಲಸಾಗಿ, ಬಲಿತು ಅದನ್ನು ಬೇಯಿಸಿದರೆ ರುಚಿಯೇ ಹೊರಟು ಹೋಗಿಬಿಡುತ್ತದೆ. ಆತ ಇನ್ನೂ ಮುಂದುವರಿದು ಹೀಗೆ ಹೇಳುತ್ತಾನೆ, ಬೆಂಕಿಯಲ್ಲಿ ಎಳೆ ಹಂದಿಯ ಕಣ್ಣುಗಳು ಸುಟ್ಟು ಅದರಿಂದ ಜೆಲ್ಲಿಯಂಥ ದ್ರವ ಬಸಿಯುತ್ತಿದ್ದರೆ ಅದನ್ನು ಕಲ್ಪಿಸಿಕೊಳ್ಳುವುದೇ ಮಹದಾನಂದ. ನನಗೆ ಪೈನಾಪಲ್ ಎಂದರೆ ಇಷ್ಟ. ಆದರೆ ಇದು ನನ್ನ ಹಸಿವನ್ನು ಇಂಗಿಸುವುದಿಲ್ಲ. ಮಟನ್ ಚಾಪ್ ಕೂಡ ಅಷ್ಟಕ್ಕಷ್ಟೇ. ಹದವಾಗಿ ಬೆಂದ, ಗರಿಗರಿಯಾದ ಹಂದಿ ಮಾಂಸವಷ್ಟೇ ನನ್ನ ಹಸಿವಿನ ತಂತಿಯನ್ನು ಮೀಟುವುದು. ಹಂದಿ ಮಾಂಸ ತಿಂದರೆ, ಬಲಿಷ್ಠ ಮನುಷ್ಯ ಇನ್ನೂ ಬಲಿಷ್ಠನಾಗುತ್ತಾನೆ, ಪೇಲವ ಮನುಷ್ಯ ಚುರುಕಾಗುತ್ತಾನೆ ಎಂಬುದು ಲ್ಯಾಂಬ್ ವೈದ್ಯಕೀಯ ಅನುಭವ!

ಲ್ಯಾಂಬ್‌ನ ಈ ಸುಂದರ ಪ್ರಬಂಧ ನೆನಪಿಸಿದ ಕನ್ನಡಪ್ರಭದ ಚಿತ್ರಕ್ಕೆ ಮತ್ತೊಮ್ಮೆ ಧನ್ಯವಾದ.
----
ವಿ.ಸೂ.: ಚಿತ್ರಸಹಿತ ಲೇಖನಕ್ಕೆ ದಯವಿಟ್ಟು http://vishwaputa.blogspot.com ಗೆ ಭೇಟಿ ಕೊಡಿ.

Rating
No votes yet