ಒಂದು ಮಾತು ಮತ್ತೊಂದು ಮೌನದಾಚೆಗೆ.......!

ಒಂದು ಮಾತು ಮತ್ತೊಂದು ಮೌನದಾಚೆಗೆ.......!

ಮನು,
ನೀನು ಈ ಪತ್ರ ಓದಿ ಮುಗಿಸುವಷ್ಟರಲ್ಲಿ ನಾನು  ಬಹುಶಃ  ಅಮೆರಿಕದಲ್ಲಿ  ಲ್ಯಾಂಡ್ ಆಗಿರ್ತಿನೇನೋ .ನಿನ್ನೆಡೆಗಿನ ಬೇಸರ ಸಿಟ್ಟು ತಾತ್ಸಾರ ಎಲ್ಲದರಕ್ಕಿಂತ ಜಾಸ್ತಿ ಅಸಹ್ಯ ಎಲ್ಲವನ್ನು ತೆಕ್ಕೆಗೆಳೆದುಕೊಂಡು ಬರಿತಿರೋ ಮೊದಲ ಹಾಗೂ ಕೊನೆಯ ಪತ್ರ..ಪತ್ರವೇ ಬೇಕಿರಲಿಲ್ಲ...ಬಟ್ ನಿನ್ ಜೊತೆ ಮಾತಾಡೋಕೆ ಇಷ್ಟ ಇಲ್ಲ.
ಫೈನ್ ..ನೇರವಾಗಿ ವಿಷಯಕ್ಕೆ ಬರ್ತಿದೀನಿ.ನಿನ್ನ ಗೆಳೆಯರಿಂದ ತಿಳೀತು,ನೀನು ನನ್ನ ಪ್ರೀತಿಸುತ್ತಿರೋ ವಿಷಯ.ಕಳೆದ 6 ತಿಂಗಳಿಂದ ನನ್ನ ಪ್ರಾಣ ಸ್ನೇಹಿತೆಯ ಹಿಂದೆ ಮುಂದೆ ತಿರುಗಿದವನಿಗೆ ಈಗ ನನ್ನ ಮೇಲೆ ಅದು  ಹ್ಯಾಗೆ ಪ್ರೀತಿ ಬಂತೋ ??!ಅವಳ ಸಾವಿಗೆ ನೀನೆ ಕಾರಣ ಅಂತ ಗೊತ್ತಿದ್ರೂ ಏನೂ ಮಾಡಲಾಗಲಿಲ್ಲ ನಮಗೆ.ಒಬ್ಬರನ್ನು ಪ್ರೀತಿಸಿದ ಮನಸ್ಸು ಅದು ಹ್ಯಾಗೆ ಇನ್ನೊಬ್ಬರನ್ನು ಇಷ್ಟ ಪಡುತ್ತೋ ?!ಛೆ,ಸಾಯುವ ಮೊದಲ ದಿನ ಅವಳಾಡಿದ ಮಾತು ಇನ್ನೂ ನೆನಪಿದೆ ,"ಅವನ್ಯಾಕೆ ಹೀಗೆ ಆಡ್ತಿದಾನೆ ಅಂತ ಗೊತ್ತಾಗ್ತಿಲ್ಲ ಅನೂ,ತುಂಬಾ ಪ್ರೀತಿಸ್ತಾನೆ.ಹಾಗಂದುಕೊಂಡೇ ಡೈರೆಕ್ಟಾಗಿ ಕೇಳಿದ್ದೆ ಪ್ರೀತಿಸ್ತಿಯಾ  ಅಂತ..  ಇಲ್ಲ ಅಂದ ,ಅದಕ್ಕಿಂತಲೂ ನಂಗೆ ಅವನು ತಡವರಿಸಿದ ರೀತಿನೇ ಹೆಚ್ಚು ಯೋಚಿಸುವಂತೆ ಮಾಡ್ತಿದೆ ..ಮೋಸ್ಟ್ ಲಿ ಅವನಿಗೆ ನಂದು ಮೊದಲೇ ಒಂದು love failure ಅಂತ ಗೊತ್ತಾಗಿರಬೇಕು..ಪ್ರೀತಿ ಅನ್ನೋದು ನನ್ನ ಹಣೆಲಿ ಬರೆದಿಲ್ಲ ಅನಿಸುತ್ತೆ ಅಂತ "

ನಿನ್ನದೇ ಗುಂಗಿನಲ್ಲಿ ಇಡೀ ದಿನ ಮೌನಿಯಾಗಿದ್ಲು .ಅದ್ಯ್ಯಾವ ನಿನ್ನ ಮುದ್ದು ಮಾತನ್ನು ತಲೆಯಲ್ಲಿಟ್ಟುಕೊಂಡು ರಸ್ತೆ ದಾಟಿದಳೋ..ಬಂದ ಬಸ್ಸು ನಿಮಿಷದಲ್ಲಿ ಪ್ರಾಣ ತೆಗೆಯಿತಲ್ಲ !ಅವಳ ಮೇಲೆ ಪ್ರೀತಿ ಇಲ್ಲದಿದ್ದ ಮೇಲೆ ಅವಳ ಜೊತೆ ಯಾಕೆ ತಿರುಗಬೇಕಿತ್ತು?.ಈಗ ಫ್ರೆಂಡ್ ಶಿಪ್  ಅನ್ನಬಹುದು ನೀನು.ಆದ್ರೆ ಯಾವ ಹುಡುಗೀನು ಏನೂ ಇಲ್ಲದೆ ಪ್ರೀತಿ ಭಾವ ತಂದ್ಕೊಳ್ಳೋದಿಲ್ಲ..ಈಗಾ ಅದ್ಯಾವ ಬಾಯಲ್ಲಿ ನನ್ನ ಪ್ರೀತಿಸ್ತಿದೀನಿ ಅಂತಿದೀಯೋ??!ಪ್ರೀತಿ ಅಂದ್ರೇನು ಗೊತ್ತಾ?ನನ್ನ ಅವಳ ಮಧ್ಯೆ ಇರೋ ಪ್ರೀತಿಯನ್ನ ಅಳೆಯೋ ತಾಕತ್ತಿದೆಯ ನಿನಗೆ? ಅವಳ ರೂಮಿಗೆ ಹೋದಾಗ ಬೆಳಿಗ್ಗೆ  ಹೊಡೆದುಕೊಳ್ಳೋ  ಅಲಾರ್ಮನ್ನು ಎಲ್ಲಿ ನಂಗೆ ಎಚ್ಚರಿಕೆ ಆಗತ್ತೋ ಅಂತ ಓಡಿಹೋಗಿ ಆಫ್ ಮಾಡೋ ಗಡಿಬಿಡಿಯಲ್ಲಿತ್ತು ಪ್ರೀತಿ,ಅವಳು ಸೆಲೆಕ್ಟ್ ಮಾಡಿದ ಮರೂನ್  ಟಾಪ್ ನಂಗಿಷ್ಟ ಅಂತ ಗೊತ್ತಾದಾಗ  ,ಏ ಇದು ನೀ ಇಟ್ಕೋ ಯಾಕೋ ನಂಗೆ ಈಗೀಗ ಮರೂನ್ ಇಷ್ಟಾನೆ ಆಗ್ತಿಲ್ಲ ಅನ್ನೋ ಸುಳ್ಳಿನಲ್ಲಿತ್ತು ಪ್ರೀತಿ,ಜ್ವರಕ್ಕೆ ಇಂಜೆಕ್ಷನ್ ಕೊಡೋಕ್ ಬಂದ ಡಾಕ್ಟರ್ ಹತ್ತಿರ ಇಂಜೆಕ್ಷನ್ ಕೊಡಲೇ ಬೇಕಾ ,ಮಾತ್ರೆಯಿಂದ ಇವಳ ಜ್ವರ ಕಮ್ಮಿ ಆಗಲ್ವಾ ಅನ್ನೋ ಪ್ರಶ್ನೆಯಲ್ಲಿತ್ತು   ಪ್ರೀತಿ...ಬಿಡು,ಇದೆಲ್ಲ ಎಲ್ಲಿ ಹ್ಯಾಗೆ ಅರ್ಥ ಆಗಬೇಕು ನಿನಗೆ ..ಹೋಗು , ಇನ್ನೊಂದು ಹುಡುಗಿಗೆ ಹೋಗಿ ಪ್ರಪೋಸ್ ಮಾಡು.ಅದೇನೂ ಕಷ್ಟ ಅಲ್ಲ ನಿನಗೆ!


ಗುಡ್ ಬೈ
ಅನು
  """""""""""""""""""""""""""""""""""""""""""""""""""""""""""""""""""""""""""""""""""""""""""""""""""""""""""""""""""""""""""""""
ಪ್ರೀತಿಯ ಅನೂ ,
ಬದುಕು ಹೇಗೆಲ್ಲ ಚಂಚಲವಾಗಿರತ್ತೆ ಅಲ್ವಾ.ನಿನ್ನ ಪತ್ರವನ್ನೇ ನೋಡ್ತಿದ್ದೀನಿ ಕಣ್ತುಂಬಾ ನೀರು ತುಂಬಿಸಿಕೊಂಡು!ಭಾವನೆಗಳೆಲ್ಲ ನೀನು ಬಿಟ್ಟುಹೋದ ಬದುಕಿನಂತೆ ಖಾಲಿ ಖಾಲಿ !ನಾ ಅತಿಯಾಗಿ ಪ್ರೀತಿಸುವ ಯಾವ ವಸ್ತುವೂ ನನಗೆ ಸಿಗದೆಂಬ ಸತ್ಯ ಈಗ ಇನ್ನೊಮ್ಮೆ ಸಾಬೀತಾಗಿದೆ .ಹೇಯ್ ,ಹ್ಯಾಗೆ ಹೇಳಲಿ ನಾನು ಪ್ರೀತಿಸಿದ್ದು, ಪ್ರೀತಿಸುತ್ತಿರುವುದು ನಿನ್ನನ್ನೇ ಅಂತ.. ನಿನ್ನ ನೇರ ಮಾತುಗಳಿಗೆ ಹೆದರಿ ನಿನ್ನ ಸಲುವಾಗಿ ನಿನ್ನ ಗೆಳತಿಯ ಜೊತೆ ಮಾತಾಡ್ತಿದ್ದೆ..ದಿನೇ ದಿನೇ ಅವಳ ಜೊತೆ ಕ್ಲೋಸ್ ಆದಾಗಲೂ ನನ್ನಲ್ಲಿದ್ದದ್ದು ಒಂದೇ ಭಾವ "ನೀನು".ತಿಂಗಳುಗಳೇ ಸರಿದಾಗ ಕೊನೆಗೊಂದು ದಿನ ನಿನ್ನ ಪ್ರೀತಿಸುತ್ತಿರುವ  ವಿಷಯ ಹೇಳಲು  ಹೋದಾಗ ಸೇಮ್ ಮೂವಿಯ ರೀತಿ ಸಡನ್ ಆಗಿ ಕೇಳಿಬಿಟ್ಲು 'ಪ್ರೀತಿಸ್ತಿಯ 'ಅಂತ .ಶಾಕ್ ಆಗಿ ಏನೂ ಹೇಳಲಾಗದೆ ತಡವರಿಸಿದೆ.ಬಾಯಿಂದ ಅದು ಹೇಗೋ 'ಇಲ್ಲ' ಅನ್ನೋ ಶಬ್ದ ಬಂತು ಅಷ್ಟೇ ..ಅಳುತ್ತ ಹೋದ ಅವಳನ್ನು ಮತ್ತೆ ನೋಡಿದ್ದು ಹೆಣವಾಗಿಯೇ .ನಂದೇನೆ ತಪ್ಪಿತ್ತು ಅದರಲ್ಲಿ ?ಅವಳ ಹೆಣದ ಮುಂದೆ ನಾ ಅಳುತ್ತಿದ್ದರೆ ತಾತ್ಸಾರ ದಿಂದ ನನ್ನೆಡೆಗೆ ನೋಡಿದ ನಿನ್ನ ನೋಟವನ್ನು ಹ್ಯಾಗೆ ಮರೆಯಲಿ?ನಿಂಗೊತ್ತಿಲ್ಲ ಕಣೆ ಈ ಕಣ್ಣೀರು ,ನಿಟ್ಟುಸಿರು ಎಲ್ಲವೂ ನಿನಗಾಗಿ ಹಪಹಪಿಸಿದ ದುರ್ಬಲ ಮನದ ಪ್ರತೀಕಗಳು.ನನ್ನಂತಹ  ಭಾವುಕರಿಗೆ  ಹೀಗೇಯೇನೋ ಎಲ್ಲೋ  ಯಾರಿಂದಲೋ ದೊರೆತ ಬೊಗಸೆ ಪ್ರೀತಿಯ ನೆನಪಲ್ಲೇ ದಿನಗಳು  ಕಳೆದಿರುತ್ತದೆ.ಅದು ಯಾವತ್ತು ನಿನ್ನ ಪ್ರೀತಿಸಿದೆನೋ ಗೊತ್ತಿಲ್ಲ ,ಆ ಕ್ಷಣದಿಂದ ಇಲ್ಲಿವರೆಗೆ ಅದೆಷ್ಟು ವಾಕ್ಯಗಳು ಹಾಳೆ ಮೇಲೆ ಇಳಿದಿದೆಯೋ ಅದೆಷ್ಟು ಹಾಗೆ ಮನದಲ್ಲೇ ಕರಗಿದೆಯೋ ನೆನಪಿಲ್ಲ ,ನಿನ್ನಿಂದಲೇ ಈ ಸುಡುವ ಭಾವುಕತೆಯನ್ನು ಪಡೆದೆನೋ ಅಥವಾ ನನ್ನೊಳಗಿನ ಭಾವುಕತೆಯೇ ನಿನಗಾಗಿ ಇಷ್ಟು ತವಕಿಸುವಂತೆ ಮಾಡಿತೋ ತಿಳಿದಿಲ್ಲ ....ಆದ್ರೆ ಒಂದಂತೂ ತಿಳಿದಿದೆ ,,ಈಗ ಅದೇ ಭಾವುಕತೆ ಕೊಲ್ಲುತ್ತಿದೆ .ಈ ಪತ್ರವೆಂದೂ ನಿನಗೆ ಸಿಗದು..ನೀ ಚೆನ್ನಾಗಿರು ಅಷ್ಟೇ !ಕೊನೆಯವರೆಗೂ ನಿನ್ನ ಮನಸಲ್ಲಿ ನಾನೊಬ್ಬ ಫ್ಲರ್ಟ್ ಆಗಿಯೇ ಇರುತ್ತೆನೇನೋ..
ಸರಿ, ಸಿಗದ ನಿನಗಾಗಿ ಇನ್ನೇನನ್ನು ಬರೀಲಿ ?ಪತ್ರದೊಂದಿಗೆ ಬದುಕನ್ನೂ ಮುಗಿಸಿಕೊಳ್ಳುತ್ತಿರುವ,
ಮನು !

Rating
No votes yet

Comments