ಒಂದು ಶಬ್ದದ ಸುತ್ತ
ಬೆಳಗಾವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ನನಗುಂಟಾದ ಆಡುಭಾಷೆಯ ಪ್ರಾರಂಭಿಕ ತೊಂದರೆಗಳನ್ನು ನೆನೆಸಿಕೊಂಡರೆ ಈಗಲೂ ನಗು ಬರದೇ ಇರದು. ಒಂದೆರಡು, ಆಗ 'ವಿಚಿತ್ರ'ವೆನಿಸಿದ ಶಬ್ದಗಳ ಬಗ್ಗೆ ನಾನು ತಲೆ ಕೆಡಿಸಿಕೊಂಡ ಪರಿಯನ್ನು ಇಂದಿಗೂ ನೆನೆಸಿ ಗೆಳೆಯರು ಜೋಕ್ ಮಾಡುತ್ತಾ ಇರುತ್ತಾರೆ. ಬಾಗಲಕೋಟೆಯ ಅನಿಲ್ ಢಗೆ ನನ್ನ 'ರೂಮ್ ಮೇಟ್' ಆಗಿದ್ದ. ಈ ಮರಾಠ ಹುಡುಗನ ಕನ್ನಡವೇ ವಿಚಿತ್ರವಾಗಿತ್ತು. ಅತ್ತ ಹುಬ್ಬಳ್ಳಿದ್ದೂ ಅಲ್ಲದ, ಇತ್ತ ಬಾಗಲಕೋಟೆಗೂ ಸಲ್ಲದ, ಮಧ್ಯೆ ಬೆಳಗಾವಿಗೂ ಹೊಂದದ ಕನ್ನಡವನ್ನು ಅನಿಲ್ ವಟಗುಟ್ಟುತ್ತಿದ್ದ. ಕರಾವಳಿಯ 'ಬಿಡಿಸಿ ಮಾತನಾಡುವ' ಶೈಲಿಗೆ ಹೊಂದಿಕೊಂಡಿದ್ದ ನನಗೆ ಇವರೆಲ್ಲ ವಿಚಿತ್ರ 'ಮಂದಿ'ಗಳೆನಿಸತೊಡಗಿದರು. ಆದರೆ ಕನ್ನಡದ ಬಗ್ಗೆ ಹೆಚ್ಚಿನ ಆತ್ಮಾಭಿಮಾನ ನಮ್ಮ ಧಾರವಾಡ ಮಂದಿಗೆ ಇದೆ ಎನ್ನುವುದು ಮಾತ್ರ ನಿಜವಾದ ಮಾತು.
'ಕಟದ' ಎಂಬುದು ನನಗೆ ಬಹಳ ತೊಂದರೆಯನ್ನುಂಟುಮಾಡಿದ ಶಬ್ದ. ಅರ್ಥ ಯಾವ ಪುಸ್ತಕದಲ್ಲೂ ಸಿಗಲಾರದು. ಪ್ಯೂರ್ ಆಡುಭಾಷೆ. ಸಹಪಾಠಿಯೊಬ್ಬ ವೇಗವಾಗಿ ಬೈಕ್ ಚಲಾಯಿಸಿ ಬಂದಾಗ, ಉಳಿದವರು 'ಏನ್ ಗಾಡಿ ಕಟದ!' ಎಂದು ಹುಬ್ಬೇರಿಸುವರು. ಸಂಜೆ ರೂಮಿಗೆ ಮರಳಿದ ಬಳಿಕ ನನ್ನದು ಅನಿಲನೆದುರು ಪ್ರಶ್ನೆ - 'ಏನ್ ಗಾಡಿ ಕಟದ!', ಹಾಗೆಂದರೇನು? ಏನೂ ಅರಿಯದ ಮುಗ್ಧನೊಬ್ಬನಿಗೆ ತಿಳಿಹೇಳುವ ಮಾಸ್ತರನಂತೆ ಅನಿಲ್ ನನಗೆ ೫ ನಿಮಿಷ ವಿವರಿಸಿ ಎಳೆ ಎಳೆಯಾಗಿ ಬಿಡಿಸಿ ತಿಳಿಸುತ್ತಿದ್ದ ' ಹಾಗೆಂದರೆ, ಆಹ್ ಎನ್ ಫಾಸ್ಟ್ ಆಗಿ ಬೈಕ್ ಬಿಟ್ಕೊಂಡ್ ಬಂದ' ಎಂದು. ಅಂದ್ರೆ ವೇಗವಾಗಿ ದ್ವಿಚಕ್ರ ವಾಹನವನ್ನು ಚಲಾಯಿಸಿದರೆ 'ಕಟದ' ಅಂತಾರೆ, ಎಂದು ಹೊಸ ಶಬ್ದ ಕಲಿತಿದ್ದಕ್ಕೆ ಸಂತಸಪಟ್ಟೆ.
ಕೆಲವು ದಿನಗಳ ಬಳಿಕ ಗೆಳೆಯ ನವೀನ, ನನ್ನೊಂದಿಗೆ 'ರಾಜಾ, ನಿನ್ನೆ ರಾತ್ರಿ ಊಟಕ್ ಹೋಗಿದ್ವಿ ದೋಸ್ತ...... ಭಟ್ಟಾ ಕುಂತವ ಏಳ್ಲೇ ಇಲ್ಲ ದೋಸ್ತ....ಕಟದ ಕಟದ ಕಟದ...ಅವನವ್ವನ ಹೀಂಗ್ ಕಟದ ಅಂತೀನಿ' ಎನ್ನತೊಡಗಿದ. 'ಊಟಕ್ಕೆ ಕೂತಲ್ಲೇ ಭಟ್ಟ ವೇಗವಾಗಿ ಬೈಕ್ ಒಡಿಸಿದ್ನಾ?' ಎಂದು ಕೇಳಲಿಕ್ಕೆ ಬಾಯಿ ತೆರೆದವ, ಅದು ಹೇಗೆ ಸಾಧ್ಯ ಎಂದೆನಿಸಿ ಸುಮ್ಮನಾದೆ. ಈ ಬಾಗಲಕೋಟೆಯ ಬದ್ಮಾಶ್ ನನಗೇನಾದ್ರು ತಪ್ಪು ಅರ್ಥ ಹೇಳಿಕೊಟ್ಟಿತೊ ಹೇಗೆ? ವಿಚಾರಿಸೋಣ ಎಂದು ರೂಮಿಗೆ ಬಂದೊಡನೆ ಅನಿಲನಿಗೆ ಎಲ್ಲಾ ವಿವರಿಸಿದೆ. ಬಿದ್ದು ಬಿದ್ದು ನಕ್ಕ ಆತ, 'ಹೊಟ್ಟೆಬಾಕನಂತೆ ಊಟ ಮಾಡಿದರೂ' ಕಟದ ಅಂತಾರೆ ಎಂದು ಮತ್ತೊಂದು ಪಾಠ ಮಾಡಿದ.
ಮುಂದಿನ ದಿನಗಳಲ್ಲಿ, ಚೆನ್ನಾಗಿ ಬಾಡಿ ಹಾಗೂ ಕಟ್ಸ್ ಮೈಂಟೈನ್ ಮಾಡಿಕೊಂಡಿದ್ದ ಸುಪ್ರೀತ್ ತಾನು ಯಾರಿಗೋ ಧಾರವಾಡದಲ್ಲಿ ತದಕಿದ ಬಗ್ಗೆ 'ಹೀಂಗ್ ಕಟದೆ ದೋಸ್ತ ಅವಂಗೆ..... ' ಅಂದಾಗ, ಇಲ್ಲಿ ಬೈಕ್ ಮತ್ತು ಊಟ ಎರಡೂ ಮ್ಯಾಚ್ ಆಗ್ತಾ ಇಲ್ವಲ್ಲಾ ಎಂದು ಮತ್ತೆ ಅನಿಲನಲ್ಲಿ ಓಡಿದೆ. ಈ ಬಾರಿಯಂತೂ ಆತ, 'ಯೆ ಯಾವ್ವಲೇ ನೀನ' ಎಂದು ದೊಡ್ಡದಾಗಿ ನಗುತ್ತಾ 'ಚೆನ್ನಾಗಿ ಎರಡೇಟು ಕೊಟ್ಟರೂ ಕಟದ ಅಂತಾರೆ' ಅಂದ.
ಮತ್ತೆ ನನಗೆ ಅರಿವಾಗತೊಡಗಿತು - ಸ್ವಲ್ಪ ಅತಿಯಾಗಿ ಯಾವುದನ್ನು ಮಾಡಿದರೂ ಅದಕ್ಕೆ 'ಕಟದ' ಶಬ್ದವನ್ನು ಬಳಸಿ ವಾಕ್ಯ ರಚಿಸುತ್ತಾರೆ ಎಂದು. ಕ್ರಿಕೆಟ್ ಪಂದ್ಯದ ಸಮಯದಲ್ಲಿ 'ಸಚಿನ್ ಏನ್ ಕಟದ ದೋಸ್ತ', ಐದಾರು ಬಾಳೆಹಣ್ಣು ತಿಂದರೆ ' ಏನ್ ಬಾಳೆಹಣ್ ಕಟಿತೀಲೆ', ಅತಿಯಾಗಿ ಸ್ವೀಟ್ಸ್ ತಿಂದರೆ 'ಅಂವ, ಖತ್ರು ಸ್ವೀಟ್ ಕಟದ ದೋಸ್ತ', ಹೀಗೆ.....
ಅದೊಂದು ರಾತ್ರಿ ಅನಿಲ್ 'ಏನ್ಪಾ, ನಿಂದು ಕಟದ ಡೌಟ್ ಮುಗಿತೋ ಇಲ್ಲೊ?' ಎಂದು ಕೇಳಲು, ನಾನಂದೆ ' ನಿನಗೆ ಸರಿಯಾಗಿ ಅರ್ಥ ಹೇಳಲು ಬರುವುದಿಲ್ಲ. ಕಟದ ಅಂದರೆ ಏನು ಅಂತ ನಾನು ಕೇಳಿದಾಗ, 'ಯಾವುದನ್ನೂ ಅತಿಯಾಗಿ.........'' ನನ್ನ ಕರಾವಳಿ 'ಪ್ರತಿ ಶಬ್ದ ಬಿಡಿಸಿ ಹೇಳುವ' ಕನ್ನಡದಲ್ಲಿ, ನನ್ನ ಮಾತು ಮುಗಿಯುವ ಮೊದಲೇ ಆತ ಅಂದಿದ್ದು 'ಯಪ್ಪಾ, ನಮಸ್ಕಾರಪ್ಪ ನಿಂಗೆ....'