ಕಂಪ್ಯೂಟರಿನ ಕಾವ್ಯವನ್ನು ವೈರಸ್ ಎಂದು ತಪ್ಪರ್ಥ ಮಾಡಿಕೊಳ್ಳುತ್ತೇವೆ - ಗಾದೆಗೊಂದು ಗುದ್ದು ೬೭
(೩೪೧) ಬದುಕಿನ ನಿಜವಾದ ಗುಟ್ಟೆಂದರೆ ಅದರಲ್ಲಿ ಗುಟ್ಟೆಂಬುದೇ ಇಲ್ಲದಿರುವುದು. ಅದು ತಿಳಿದಿದ್ದೂ ಮತ್ತೊಬ್ಬರಿಗೆ ತಿಳಿಸದವರೇ ನಿಜವಾದ ಮಾನವಾಧಿಕಾರದ ಪಾತ್ರ ವಹಿಸಿದ ಜೀವಿಗಳು.
(೩೪೨) ಕಾರ್ಯವೊಂದನ್ನು ಪೂರ್ಣಗೊಳಿಸಲಾಗದ ಎಲ್ಲ ಸೋಲುವ ಮಾರ್ಗಗಳನ್ನು ಕುರಿತ ಜ್ಞಾನವನ್ನು ಪಕ್ಕಕ್ಕೆ ಸರಿಸುವ ಕ್ರಮವೇ ಗೆಲುವು.
(೩೪೩) ಜ್ಞಾನವನ್ನು ಕುರಿತ ಹೇಗೆ? ಏನು? ಮತ್ತು ಏಕೆ? ಎಂಬ ಮೂರು ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಬೇಕಾದಂತಹವುಗಳು. ಇತರರು ನಿಮ್ಮ ಪರವಾಗಿ ಅದನ್ನು ಕೇಳಿಕೊಳ್ಳುವುದನ್ನು ಶಿಕ್ಷಣವೆನ್ನುತ್ತೇವೆ. ಇತರರು ಮತ್ತು ನೀವುಗಳು ಒಟ್ಟಾಗಿಯೂ ಈ ಮೂರನ್ನೂ ಕೇಳದಿರುವ ಉಪಾಯವೇ ಕಲಾಶಿಕ್ಷಣ.
(೩೪೪) ಲಾಭವನ್ನಾಗಿ ಮಾತ್ರ ಪರಿವರ್ತಿಸಲಾಗುವ ಯಾವುದೇ ವ್ಯವಹಾರದಲ್ಲಿ ತೊಡಗಿಕೊಳ್ಳುವ ಮನುಷ್ಯ ಗಣಕಯಂತ್ರವಷ್ಟೇ ಆಗಿಬಿಡುತ್ತಾನೆ. ಇತರರ ದೃಷ್ಟಿಯಲ್ಲಿ ಅದು ಸಾಧನೆಯಾದರೆ ಆತನಿಗೆ ಮಾತ್ರ ಅದು ಅಂತಿಮವಾಗಿ ವೇದನೆಯೇ.
(೩೪೫) ಕಾವ್ಯವನ್ನು ಸೃಷ್ಟಿಸುವಾಗಿ ಮಾತ್ರ ಗಣಕಯಂತ್ರ ಮಾನವೀಯವೆನಿಸಿಬಿಡುವುದು. ದುರಂತವೆಂದರೆ ಅವುಗಳನ್ನು ’ವೈರಸ್ಸಿನ ಪರಿಣಾಮವೆಂದು’ ಪರಿಗಣಿಸಿಬಿಡಲಾಗುತ್ತದೆ!