ಕಚೇರಿ ಎಂದರೆ ಸುಮ್ಮನೇನಾ?
ಅದೊಂದು ಕಚೇರಿ. ತನ್ನದೇ ಲೆಕ್ಕದಲ್ಲಿ ಅದೊಂದು ಪ್ರತ್ಯೇಕ ಜಗತ್ತು.
ಹಾಗಂದರೆ, ಅಲ್ಲಿ ಎಲ್ಲವೂ ಉಂಟು ಎಂದರ್ಥ. ಒಳ್ಳೆಯವರು, ಕೆಟ್ಟವರು, ಕೆಲಸಗಾರರು, ಸೋಮಾರಿಗಳು, ಶೂನ್ಯ ಪ್ರತಿಭೆಗಳು, ಮೊದ್ದುಮಣಿಗಳು, ಪೆದ್ದು ಮುಂಡೆಯರು- ಹೀಗೆ ಎಲ್ಲರೂ ಇರುತ್ತಾರೆ. ಕೆಲವರು ಕೆಲಸ ಮಾಡುತ್ತಲೇ ಇರುತ್ತಾರೆ. ಅದು ಮುಗಿಯುವುದೇ ಇಲ್ಲ. ಇನ್ನು ಕೆಲವರು ಹಾಗೇ ಕೂತಿರುತ್ತಾರೆ, ಅವರ ಕೆಲಸ ಪ್ರಾರಂಭವಾಗುವುದೇ ಇಲ್ಲ.
ಇಂಥಪ್ಪ ಕಚೇರಿಯಲ್ಲಿ ಹಲವಾರು ದೃಶ್ಯಗಳು ನಿತ್ಯ ನಡೆಯುತ್ತವೆ. ಕೆಲವೊಂದು ಪುನರಾವರ್ತನೆಯಾದರೆ, ಇನ್ನು ಕೆಲವು ನಿರೀಕ್ಷಿತ. ಅಪರೂಪಕ್ಕೊಮ್ಮೆ ಅನಿರೀಕ್ಷಿತ ಘಟನೆಗಳು ನಡೆಯುವುದುಂಟು.
ಒಳ ಬರುತ್ತಲೇ ಬೂಟಾಟಿಕೆಯ ವಾಸನೆ ಬಡಿಯುವುದಷ್ಟೇ ಅಲ್ಲ, ಕಣ್ಣೆದುರು ರಾಚಲೂತೊಡಗುತ್ತದೆ. ’ನಿನ್ನೆ ಪಾರ್ಟಿಗೆ ಹೋಗಿದ್ದೆ ಕಣೆ, ಏನ್ ಚೆನ್ನಾಗಿತ್ತು ಅಂತೀಯಾ’ ಎಂದು ಲಲನೆಯೊಬ್ಬಳು ಹೇಳುತ್ತಿದ್ದರೆ, ಅವಳ ಗೆಳತಿಯರ ಪೈಕಿ ಒಬ್ಬಿಬ್ಬರು ಮುಖವರಳಿಸಿ ಕೇಳಿಸಿಕೊಂಡರೆ, ಉಳಿದವರು ತಮ್ಮ ಕೆಲಸದಲ್ಲಿ ಬಿಜಿಯಾಗಿರುವ ನಟನೆ ಮಾಡುತ್ತಲೇ ಕಿವಿ ಅತ್ತ ತೇಲಿಬಿಟ್ಟಿರುತ್ತಾರೆ. ಇನ್ನೊಂದೆಡೆ, ಬ್ರೆಕಿಂಗ್ ನ್ಯೂಸ್ ಕೊಡುವ ಇರಾದೆಯಲ್ಲಿ ವರದಿಗಾರ ಗಂಭೀರತೆ ನಟಿಸುತ್ತ ಸರಭರ ಓಡಾಡುತ್ತಿರುತ್ತಾನೆ. ಸರಿಯಾಗಿ ಹುಡುಕಿದರೆ, ಅಂದಿನ ದಿನಪತ್ರಿಕೆಯ ಯಾವುದೋ ಒಂದೆಡೆ, ’ಬ್ರೆಕಿಂಗ್ ನ್ಯೂಸ್’ ಸುಳಿವು ಸಿಗುತ್ತದೆ.
ಎಲ್ಲರಿಗಿಂತ ತಡವಾಗಿ ಹಿರಿಯ ತಲೆಗಳು ಬರುತ್ತವೆ. ಜಗತ್ತಿನ ಭಾರವೆಲ್ಲ ತಮ್ಮ ತಲೆಯ ಮೇಲಿದೆ ಎಂಬಂತೆ ಮುಗುಳ್ನಗು ಮನೆಯಲ್ಲಿಟ್ಟು, ಗಂಭೀರವದನರಾಗಿ ಬರುತ್ತಾರೆ. ಬಂದವರೇ ಬ್ಯಾಗಿಟ್ಟು, ಕಾರಣವಿಲ್ಲದೇ ಆ ಕಡೆಯಿಂದ ಈ ಕಡೆ ಓಡಾಡುತ್ತಾರೆ. ಸುಳ್ಳು ಸುಳ್ಳೇ ಕಂಪ್ಯೂಟರ್ ಪರದೆಗಳನ್ನು ದಿಟ್ಟಿಸುತ್ತಾರೆ. ಸಹೋದ್ಯೋಗಿಗಳನ್ನು ಕರೆಯುತ್ತಾರೆ. ಅರ್ಥವಿಲ್ಲದ ವಿಷಯಗಳನ್ನು ಮಾತನಾಡಿ ಅವರಲ್ಲಿ ಗೊಂದಲ ಮೂಡಿಸುತ್ತಾರೆ. ಇದ್ದಕ್ಕಿದ್ದಂತೆ ಅವರನ್ನು ಅದೇ ಸ್ಥಿತಿಯಲ್ಲಿ ಬಿಟ್ಟು, ಇನ್ನಿಲ್ಲದ ಸೀರಿಯೆಸ್‌ನೆಸ್‌ನಲ್ಲಿ ಕಂಪ್ಯೂಟರ್ ತೆರೆ ಮೇಲೆ ದೃಷ್ಟಿ ಇಟ್ಟು ಕೂತುಬಿಡುತ್ತಾರೆ.
’ಅರೆರೆ, ನೀವು ನಮ್ಮ ಬಾಸ್ ಬಗ್ಗೆ ಹೇಳುತ್ತಿಲ್ಲ ತಾನೆ?’ ಎಂದು ನಿಮಗೆ ಅನ್ನಿಸಿದರೆ, ಅಚ್ಚರಿ ಬೇಡ. ಮಿತ್ರರೇ, ಎಲ್ಲರ ಬಾಸ್‌ಗಳೂ ಸಾಮಾನ್ಯವಾಗಿ ಇರೋದೇ ಹೀಗೆ. ಎಲ್ಲೋ ಓದಿದ ವಾಕ್ಯವೊಂದು ಈ ಸಂದರ್ಭದಲ್ಲಿ ನೆನಪಾಗುತ್ತಿದೆ: ನಮಗಿಂತ ದಡ್ಡರು, ತಿಕ್ಕಲರು, ಪೆದ್ದರು, ಮೂರ್ಖರು, ದುಷ್ಟರು, ಅತ್ತೆ ಮನಃಸ್ಥಿತಿಯವರು ಸಾಮಾನ್ಯವಾಗಿ ನಮ್ಮ ಸೀನಿಯರ್ ಆಗಿರುತ್ತಾರಂತೆ. ಅನುಮಾನ ಬಂದರೆ ಕೊಂಚ ಗಮನಿಸಿ ನೋಡಿ: ನಮ್ಮ ಬಹುತೇಕ ಸೀನಿಯರ್‌ಗಳು ಹೀಗೆ ತಾನೇ ಇರೋದು!
ನೀವು ಉತ್ತಮ ವಿಚಾರ ಹೇಳಿದರೆ, ಆ ಮನುಷ್ಯನಿಗೆ ಕೇಳಿಸಿಕೊಳ್ಳುವ ಸಹನೆಯೂ ಇರುವುದಿಲ್ಲ. ’ಮೊದಲು ನಾನು ಹೇಳೋದು ಕೇಳಿ’ ಎಂದೋ, ’ಅದೆಲ್ಲ ನಡೆಯೋಲ್ಲ’ ಎಂದೋ, ’ಅದನ್ನು ಮಾಡುತ್ತ ಕೂತರೆ ತಡವಾಗುತ್ತದೆ’ ಎಂದೋ ತನ್ನ ಕೆಳಮಟ್ಟದ ಐಡಿಯಾವನ್ನೇ ಹೇರಿ ಹೋಗುತ್ತಾನೆ. ಮನಸ್ಸಿಲ್ಲದಿದ್ದರೂ ನೀವು ಅದನ್ನೇ ಮಾಡಬೇಕು.
ಸಾಮಾನ್ಯವಾಗಿ, ಯಾವ ಕಚೇರಿಯಲ್ಲೂ ಹೊಸ ವಿಚಾರಗಳನ್ನು ಸ್ವಾಗತಿಸುವುದಿಲ್ಲ. ನೀವು ಬಾಸ್‌ಗಿಂತ ಜಾಣರಾಗಿದ್ದರೆ ದಯವಿಟ್ಟು ಅದನ್ನು ತೋರಿಸಿಕೊಳ್ಳಬೇಡಿ. ಬಾಸ್ ತಪ್ಪು ಮಾಡಿದ್ದರೆ, ಮಾಡುತ್ತಿದ್ದರೆ ಯಾವ ಕಾರಣಕ್ಕೂ ಬಾಯಿ ಬಿಡಬೇಡಿ. ಅದರಿಂದ ನಿಮಗೆ ಕಷ್ಟ ಕಟ್ಟಿಟ್ಟ ಬುತ್ತಿ.
ಇಂಥ ಹಲವಾರು ಘಟನೆಗಳನ್ನು ಇನ್ನು ಮುಂದೆ ವಿವರವಾಗಿ ಬರೆಯುತ್ತ ಹೋಗುತ್ತೇನೆ. ಅದಕ್ಕೂ ಮುನ್ನ ಒಂದು ಸಲಹೆ: ಸಾಧ್ಯವಾದರೆ 'ಒನ್ ನೈಟ್ ಎಟ್ ಕಾಲ್ ಸೆಂಟರ್’ ಎಂಬ ಪುಸ್ತಕ ಸಿಕ್ಕರೆ ಓದಿ. ಇಂಥ ಕಚೇರಿ, ಅಂಥ ಬಾಸ್‌ಗಳ ಬಗ್ಗೆ ಉತ್ತಮ ವಿವರಣೆ ಇದೆ ಅದರಲ್ಲಿ.
- ಚಾಮರಾಜ ಸವಡಿ
Comments
ಉ: ಕಚೇರಿ ಎಂದರೆ ಸುಮ್ಮನೇನಾ?