ಕಣ್ಣುಗಳಲ್ಲಿ ಕನಸುಗಳಿವೆ, ಆದರೆ.......

ಕಣ್ಣುಗಳಲ್ಲಿ ಕನಸುಗಳಿವೆ, ಆದರೆ.......

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಎಂಬ ಊರಲ್ಲಿರುವ ಒಂದು ಬಡ ಕುಟುಂಬ. ಗಂಡ ಟ್ಯಾಕ್ಷಿ ಡ್ರೈವರ್. ಹೆಸರು ಬಿಜು ಎಂ.ಎಸ್. ಪತ್ನಿ ಲಲಿತಾ ಬಿ.ಎಮ್. ಲ್ಯಾಬ್ ಟೆಕ್ನೀಷಿಯನ್. ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದವರಿಗೆ ೨೦೦೭ ನವಂಬರ್ ೬ ಸಂತೋಷದ ದಿನವಾಗಿತ್ತು. ಆದರೆ ಸಂತೋಷದ ಜತೆಗೆ ತಾಪತ್ರಯಗಳ ಸುರಿಮಳೆಯೇ ಸುರಿಯಲು ತೊಡಗಿತು. ಈ ಬಡ ಕುಟುಂಬಕ್ಕೆ ಒಂದನೇಯ ಹೆರಿಗೆಯಲ್ಲಿಯೇ ಎರಡು ಅವಳಿ ಜವಳಿ ಮಕ್ಕಳು ಹುಟ್ಟಿದವು. ಅಂದರೆ ಒಟ್ಟಿಗೆ ನಾಲ್ಕು, ಎರಡು ಗಂಡು, ಎರಡು ಹೆಣ್ಣು. ಹೆಸರು ಇಡಲಾಯಿತು. ಒಳ್ಳೆಯ ಹೆಸರುಗಳನ್ನು ಆಯ್ಕೆಮಾಡಿದ್ದರು. ಶ್ರೀಕೃಷ್ಣಕುಮಾರ್, ಶ್ರೀ ವಿಷ್ಣುಕುಮಾರ್, ಶ್ರೀಲಕ್ಷ್ಮೀ ಮತ್ತು ಶ್ರೀದೇವಿ. ಈಗ ದುಡಿಯುವ ಕೈ ಒಂದಾಯಿತು. ಈ ನಾಲ್ಕು ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ತಾಯಿ ಕೆಲಸ ಬಿಡಬೇಕಾಯಿತು. ಒಂದು ಸಣ್ಣ ಹಳ್ಳಿಯಲ್ಲಿ ಟ್ಯಾಕ್ಷಿ ಡ್ರೈವರ್ ಕೆಲಸ ಮಾಡಿ ಬರುವ ಆದಾಯದಲ್ಲಿ ಸಣ್ಣ ಕುಟುಂಬ ನಿರ್ವಹಣೆಯೇ ಕಷ್ಟವಾಗಿರುವ ಈ ಕಾಲದಲ್ಲಿ ಒಂದೇ ವಯಸ್ಸಿನ ನಾಲ್ಕು ಮಕ್ಕಳನ್ನು ಸಾಕುವ ಮತ್ತು ಮಕ್ಕಳ ಆರೋಗ್ಯದ ಕಡೆಯೂ ಗಮನಕೊಡುವುದು ಹಣಕಾಸಿನ ವಿಷಯದಲ್ಲಿ ಮಾತ್ರವಲ್ಲ ಸಲಹಿ ಸಾಕುವ ಕಷ್ಟ ಕೆಲಸವೇ ಸರಿ. ಪಾಪ! ಈ ಬಡಕುಟುಂಬದ ಸಂಕಷ್ಟಕ್ಕೆ ನೆರವಿಗೆ ಬಂದವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆಯವರು ಮಕ್ಕಳ ಪೋಷಣೆಗಾಗಿ ಪ್ರತಿ ತಿಂಗಳು ರೂ. ೧,೦೦೦/= ನೀಡುತ್ತಿದ್ದಾರೆ. ಹೆಣ್ಣು ಮಕ್ಕಳಿಗಾಗಿ ರಾಜ್ಯ ಸರಕಾರದ ಭಾಗ್ಯಲಕ್ಷ್ಮೀ ಯೋಜನೆಯ ಲಾಭವೂ ಈ ಕುಟುಂಬಕ್ಕೆ ಸಿಗುವಲ್ಲಿ ಕಾನೂನಿನ ತೊಡಕು ಬಂದು ಅದೂ ಮಂಜೂರಾಗಲೂ ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಯಸ್. ಯಡಿಯೂರಪ್ಪ ಇದೊಂದು ವಿಶೇಷ ಪ್ರಕರಣ. ಎರಡಕ್ಕಿಂತ ಹೆಚ್ಚು ಮಕ್ಕಳು ಇರಬಾರದು ಎಂಬ ಶರ್ತ ಇಲ್ಲಿ ಅನ್ವಯವಾಗುವುದಿಲ್ಲಾ, ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಾಗಿರುವುದರಿಂದ ಭಾಗ್ಯಲಕ್ಷ್ಮೀ ಯೋಬನೆಯಂತೆ ಇಬ್ಬರು ಹೆಣ್ಣು ಮಕ್ಕಳನ್ನು ಫಲಾನುಭವಿಯಾಗಿ ಆಯ್ಕೆ ಮಾಡುವಂತೆ ಆದೇಶಿಸಿದ್ದಾರೆ. ಇದು ಈ ನಾಲ್ಕು ಮಕ್ಕಳಲ್ಲಿ ಎರಡು ಹೆಣ್ಣು ಮಕ್ಕಳಿಗೆ ಒಂದನೇಯ ಹುಟ್ಟುಹಬ್ಬದ ಕೊಡುಗೆ ಎಂದೇ ಹೇಳಬೇಕು, ದಿನಕ್ಕೆ ಮಕ್ಕಳ ಆರೈಕೆಗೆ, ಔಷಧಿಗೆ ಎಂದು ರೂ.೩೦೦/= ಬೇಕಾಗುತ್ತದೆ. ನಾಲ್ಕು ಮಕ್ಕಳಿಗೂ ಡಬ್ಬಿ ಹಾಲೇ ಕೊಡಬೇಕಾಗಿದೆ. ಕಷ್ಟವು ಯಾವಗಲೂ ಬಡವರಿಗೇ ಬರುವುದೆಂದು ಹೇಳುವುದು ಇಲ್ಲಿ ಸರಿಯಾಗಿ ಅನ್ವಯಿಸುತ್ತಿದೆ. ನಾಲ್ಕು ಮಕ್ಕಳನ್ನು ಸಾಕಿ ಸಲಹುವುದರ ಜತೆಗೆ ಒಂದು ಮಗು ಶ್ರೀಕೃಷ್ಣಕುಮಾರನಿಗೆ ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಔಷದಿಗಾಗಿ ಪುತ್ತೂರು, ಮಂಗಳೂರಿಗೇ ಹೋಗಬೇಕಾಗಿದೆ. ಸರಕಾರದ ಭಾಗ್ಯಲಕ್ಷ್ಮಿ ಯೋಜನೆಯ ಮೊಬಲಗು ಹೆಣ್ಣು ಮಕ್ಕಳಿಗೆ ಅವರ ಈಗಿನ ಕಷ್ಟಗಳಿಗೆ ಉಪಯೋಗಕ್ಕೆ ಬೀಳದ ಕಾರಣ ಆರ್ಥಿಕವಾಗಿ ಸರಕಾರದ ಸಹಾಯವು ಈ ಕುಟುಂಬಕ್ಕೆ ಪ್ರತಿತಿಂಗಳು ಬೇಕಾಗಿದೆ. ಈ ಕುಟುಂಬದ ಸಧ್ಯದ ಪರಿಸ್ಥಿತಿಯನ್ನು ಅವರಾಗಿ ತಂದು ಕೊಂಡ ತಾಪತ್ರಯವಲ್ಲ. ಎಲ್ಲಾ ಭಗವಂತನ ಇಚ್ಛೆ ಎಂದು ಹಿಂದಿನ ಕಾಲದ ಹಿರಿಯರು ಹೇಳುವ ಹಾಗೆ ಆಗಿದೆ. ಬಡತನದಲ್ಲಿಯೇ ಕಾಲಕಳೆಯುವ ಈ ಕುಟುಂಬದ ಜೀವನ ಮಾತ್ರ ಕತ್ತಲಲ್ಲಿಲ್ಲಾ. ಮನೆಯೂ ಕತ್ತಲಲ್ಲಿದೆ. ವಿದ್ಯುತ್ ಇಲ್ಲದ ಕತ್ತಲಮನೆಯಲ್ಲಿ ಮಕ್ಕಳು ಸಹಜವಾಗಿ ಬಯಸುವ ಬೆಳಕು ಇಲ್ಲವಾಗಿದೆ. ಜೀವನನಿರ್ವಹಣೆಯೇ ಕಷ್ಟಕರವಾಗಿರುವಾಗ ವಿದ್ಯುತ್ ಸಂಪರ್ಕ ಪಡೆಯುವುದಾದರೂ ಹೇಗೆ? ಹಲವರು ಉಪಕಾರ ಮಾಡಿರುತ್ತಾರೆಂದು ಹೇಳಿಕೊಳ್ಳುವ ಮಕ್ಕಳ ತಂದೆ ಬಿಜು ಮಂಗಳೂರಿನ ಡಾ|ರತಿದೇವಿಯವರ ಆರಂಭದಿಂದಲೂ ಮಾಡಿರುವ ಸಹಾಯವನ್ನು ಮರೆಯದೇ ನೆನೆಸುತ್ತಾರೆ.

ಈ ಮಕ್ಕಳ ಕಣ್ಣುಗಳಲ್ಲಿ ಕನಸುಗಳಿವೆ. ಆದರೆ ಅದನ್ನು ನನಸಾಗಿಸಲು ಹೆತ್ತವರಿಗೆ ಮಾತ್ರ ಕಷ್ಟವಾಗುತ್ತದೆ. ಒಂದು ಮಗುವಿನ ಕನಸ್ಸನ್ನೇ ನನಸಾಗಿಸಲು ಇಂದಿನ ಕಾಲದಲ್ಲಿ ಕಷ್ಟವಾಗಿರುವಾಗ ಒಂದೇ ದಿನದಲ್ಲಿ ಜನಿಸಿರುವ ಈ ನಾಲ್ಕು ಮಕ್ಕಳ ಕನಸ್ಸನ್ನು ನನಸಾಗಿಸಲು ಕೂಲಿ ಮಾಡಿ ಜೀವನ ಸಾಗಿಸುವ ಈ ಕುಟುಂಬಕ್ಕೆ ಸರಕಾರದ, ಸಮಾಜದ ನೆರವು ಸಿಕ್ಕಿದರೆ ಮಾತ್ರ ಸಾಧ್ಯವಾದೀತು.

ದುರದೃಷ್ಟಕ್ಕೆ ಈ ಲೇಖನ ಬರೆದಿರುವ ಸಿಂಧುಶ್ರೀ ನೆಲ್ಯಾಡಿ ಇವರು ಎಲ್ಲಿಯೂ ನೆರವನ್ನು ಹೇಗೆ, ಯಾರಿಗೆ ಕಳಿಸಬೇಕೆಂದು ತಿಳಿಸಿಲ್ಲಾ. ಅದನ್ನು ತಿಳಿಯುವ ಪ್ರಯತ್ತವನ್ನು ಮಾಡುತ್ತಿದ್ದೇನೆ.

ನಾಲ್ಕೂ ಮಕ್ಕಳು ಮುದ್ದಾಗಿ ಅಂಬೆಗಾಲಿಟ್ಟು ಆಟ ಆಡುವ ಪೋಟೊವನ್ನು ಪೇಪರಿನಲ್ಲಿ ಹಾಕಿರುತ್ತಾರೆ.

ಬಿ.ವೆಂಕಟ್ರಾಯ

Rating
No votes yet