ಕತ್ತೆ ಜೊತೆ ಸೇರಿ ಅಮೇಧ್ಯ ತಿಂದ ಕರು

ಕತ್ತೆ ಜೊತೆ ಸೇರಿ ಅಮೇಧ್ಯ ತಿಂದ ಕರು

ಕತ್ತೆ ಜೊತೆ ಸೇರಿ ಅಮೇಧ್ಯ ತಿಂದ ಕರು :
--------------------------------

ಇದು ಎಸ್.ಬಿ.ಐ.ಕ್ರೆಡಿಟ್ ಕಾರ್ಡ್ಸ್ ಕಥೆ. ನಮ್ಮ ದೇಶದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಸಹವರ್ತಿ ಬ್ಯಾಂಕುಗಳ ಹತ್ತಾರು ಸಾವಿರ ಶಾಖೆಗಳು ಅನೇಕ ದಶಕಗಳಿಂದ ಕಾರ್ಯ ನಿರ್ವಹಿಸುತ್ತಿವೆ. ನಮ್ಮ ದೇಶದ ಕೃಷಿ - ಕೈಗಾರಿಕಾ ಕ್ಷೇತ್ರಗಳ ಬೆಳವಣಿಗೆಗೆ ಇವುಗಳ ಕೊಡುಗೆ ಬಹಳ ದೊಡ್ಡದು. ದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯಲ್ಲೂ ಈ ಬ್ಯಾಂಕುಗಳ ಪಾತ್ರ ಮೆಚ್ಚುವಂತಹುದು. ಹೀಗಿರುವಾಗ, ಭಾರತೀಯ ಸ್ಟೇಟ್ ಬ್ಯಾಂಕ್ ಪ್ರವರ್ತಿಸಿರುವ ಈ ಎಸ್.ಬಿ.ಐ.ಕ್ರೆಡಿಟ್ ಕಾರ್ಡ್ಸ್ ಮಾತ್ರ ಹಳಿ ತಪ್ಪಿ, ಇನ್ನುಳಿದ ಕುಖ್ಯಾತ ಕ್ರೆಡಿಟ್ ಕಾರ್ಡ್ಸ್ ಗಳ ವಂಚನೆಯ ಕೂಟಕ್ಕೆ ಸೇರಿರುವುದು, ಸೇರುತ್ತಿರುವುದು ವಿಷಾದಪೂರ್ಣ ಮತ್ತು ಖಂಡನೀಯ.

ನನ್ನದೇ ಅನುಭವ ಕೇಳಿ. ನಾನು ಈ ಎಸ್.ಬಿ.ಐ.ಕ್ರೆಡಿಟ್ ಕಾರ್ಡ್ ಗೆ ಏಳೆಂಟು ವರ್ಷಗಳಿಂದ ಸದಸ್ಯ. ಯಾವಾಗಲೂ ಮುಂಚೆಯೇ ಹಣ ಪಾವತಿ ಮಾಡಿದ್ದೇನೆ ಮತ್ತು ಮಾಡುತ್ತಿದ್ದೇನೆ. ಎಷ್ಟೋ ಬಾರಿ ನಾನು ಜಾಸ್ತಿ ಹಣ (ಖಾತೆ ಕ್ರೆಡಿಟ್ ಬ್ಯಾಲೆನ್ಸಿನಲ್ಲಿತ್ತು, ಹಲವಾರು ಬಾರಿ )ಕಟ್ಟಿದ್ದುಂಟು. ಈ ಕ್ರೆಡಿಟ್ ಕಾರ್ಡೇ ಬೇಡ ಎನ್ನಿಸಿದರೂ ರೈಲುಗಾಡಿಗಳ ಟಿಕೇಟ್ಟಿಗಾಗಿ ಇಟ್ಟುಕೊಂಡಿದ್ದೇನೆ. ಈ ಕಾರ್ಡಿನವರು ಸಾಲ ತೆಗೆದುಕೊಳ್ಳಿ ಎಂದು ಅನೇಕ ಬಾರಿ ಸತಾಯಿಸುತ್ತಾರೆ, ಹಾಗೆಯೇ ನನಗೂ ತುಂಬಾ ಫೋನುಗಳು ಬಂದು ಕೊನೆಗೊಮ್ಮೆ "ಆಗಲಿ, ನಿಮ್ಮ ಬಡ್ಡಿ ದರ ಎಷ್ಟು ?" ಎಂದು ವಿಚಾರಿಸಿದೆ. 8.5% ಎಂಬ ಉತ್ತರ ಬಂದಿತು. "ಸಾಮಾನ್ಯವಾಗಿ ಕಾರ್ಡಿನವರು ಮೋಸದ ಚಾರ್ಜುಗಳನ್ನು (Hidden Charges) ಹಾಕುತ್ತಾರೆ, ನೀವೇನು ಮಾಡುತ್ತೀರಿ?", ಎಂದೆ. ಅವರು, No Hidden charges ಎಂದು ಖಚಿತಪಡಿಸಿದ ನಂತರವೇ ಸಾಲಕ್ಕೆ ಒಪ್ಪಿಗೆ ನೀಡಿದೆ. ಅಫ್ ಕೋರ್ಸ್ ನಾನೇನೂ ಅರ್ಜಿ ಹಾಕಿರಲಿಲ್ಲ, ಕೇಳಿರಲಿಲ್ಲ.

ನಾಲ್ಕಾರು ದಿನಗಳಲ್ಲೇ ಸಾಲದ ಹಣ 34,000 ಬಂದಿತು, ಆದರೆ ಅಡಕಪತ್ರದಲ್ಲಿ (Enclosing letter)ಬಡ್ಡಿ ದರ, ಕಂತಿನ ವಿವರ, ಸಾಲದ ತೀರುವಳಿ ಅವಧಿ ಇತ್ಯಾದಿ ವಿವರಗಳೇ ಇರಲಿಲ್ಲ. ಅನುಮಾನ ಬಂದಿತು. ತಕ್ಷಣವೇ ಈಮೇಲ್ ಕಳುಹಿಸಿ, ಬಡ್ಡಿ ದರ, ಕಂತಿನ ವಿವರ, ಸಾಲದ ತೀರುವಳಿ ಅವಧಿಗಳ ವಿವರ ಕೇಳಿದೆ. ಬಡ್ಡಿದರ 17%, ಎರಡು ವರ್ಷ ತೀರುವಳಿ ಅವಧಿ ಎಂಬ ಉತ್ತರ ಬಂದಿತು. ನಾನು ತಕ್ಷಣವೇ ಮತ್ತೆ ಈಮೇಲ್ ಕಳುಹಿಸಿ, ಬಡ್ಡಿದರ 8.5% ಎಂದು ಹೇಳಿದ್ದಕ್ಕೆ ಸಾಲಕ್ಕೆ ಒಪ್ಪಿಕೊಂಡೆ, ಇಲ್ಲವಾದರೆ ಒಪ್ಪಿಕೊಳ್ಳುತ್ತಿರಲಿಲ್ಲ, 17% ಬಡ್ಡಿಯ ಸಾಲ ಬೇಕಾಗಿಲ್ಲ, ಎಂದು ಖಾರವಾಗಿ ಪತ್ರ ಬರೆದೆ. ಕಾರ್ಡಿನ "ಸಜ್ಜನ"ರು, "ಒಂದು ವರ್ಷಕ್ಕೆ 8.5%, ಎರಡು ವರ್ಷಕ್ಕೆ 17%" ಎಂದರು. ನಗು ಬಂದಿತು, ಸಿಟ್ಟೂ ಬಂದಿತು. "ನೀವೂ ಬೇಡ, ನಿಮ್ಮ ಸಾಲವೂ ಬೇಡ" ಎಂದು ತಕ್ಷಣವೇ ಪೂರ್ತಿ ಹಣ 34,000 ವಾಪಸ್ ಕಳುಹಿಸಿದೆ. ನಾನು ಆ ಹಣ ಉಪಯೋಗಿಸಿಯೇ ಇರಲಿಲ್ಲ. ಹಳೆಯ ಗ್ರಾಹಕನಾದ ನನಗೆ ಹೀಗೆ ಮೋಸ ಮಾಡಿದರಲ್ಲಾ ಎಂದು ತುಂಬಾ ಬೇಸರವಾಯಿತು. ಪ್ರತಿಭಟಿಸಿ ಪತ್ರ ಬರೆದೆ, ಮತ್ತೆ ಈ ಮೇಲ್ ಕಳುಹಿಸಿದೆ.

ಈ ಕಾರ್ಡಿನವರು ದೊಡ್ಡ ಮೋಸಗಾರರು. ಆರು ತಿಂಗಳಾದರೂ ಇವತ್ತಿನವರೆಗೆ ಸಾಲಕ್ಕೆ ಸಂಬಂಧಿಸಿದ ಬಡ್ಡಿ, ಸರ್ವಿಸ್ ಚಾರ್ಜು ಇತ್ಯಾದಿಗಳನ್ನು ರಿವರ್ಸ್ ಮಾಡಿಯೇ ಇಲ್ಲ. ನಾನು ಬರೆದ ಪತ್ರಗಳನ್ನು, ದೂರುಗಳನ್ನು ಅವರು ಓದುವುದೂ ಇಲ್ಲ, ಬಗೆಹರಿಸುವುದೂ ಇಲ್ಲ. ಗ್ರಿವೆನ್ಸ್ ಸೆಲ್ ಇತ್ಯಾದಿ ಇವೆ, ಅವುಗಳ ಯೋಗ್ಯತೆಯೂ ಅಷ್ಟೇ.

ಇದೀಗ ನಾನು ಬ್ಯಾಂಕಿಂಗ್ ಓಂಬುಡ್ಸ್ ಮನ್ ಗೆ ದೂರು ನೀಡಿದ್ದೇನೆ. ಇದೇ ರೀತಿ ವಂಚನೆಗೆ ಒಳಗಾಗಿರುವ ಗ್ರಾಹಕರು ಸಹ ದೂರು ಸಲ್ಲಿಸಲು ಈ ಕೆಳಗೆ ವಿಳಾಸವನ್ನೂ ನೀಡುತ್ತಿದ್ದೇನೆ:

The Banking Ombudsman for Karnataka,
(Care : RBI),
10/3/8, Nrupatunga Road,
Bangalore 560 001

ಉಳಿದ ಕುಖ್ಯಾತ ಕ್ರೆಡಿಟ್ ಕಾರ್ಡ್ ಕೂಟಕ್ಕೆ, ಎಸ್.ಬಿ.ಐ.ನವರೂ ಸೇರಿರುವುದು ದುರಂತ. 8.5% ಬಡ್ಡಿ ಎಂದು ಹೇಳಿ, 17%ಬಡ್ಡಿ ಹಾಕುವುದು, ಮತ್ತು ಸಾಲ ಮಂಜೂರಾತಿ ಪತ್ರದಲ್ಲಿ ಬಡ್ಡಿ ದರ, ಅವಧಿ ತೋರಿಸದಿರುವುದು ಕಾನೂನಿಗೆ ವಿರುದ್ಧವಾದುದು, ಅನೀತಿಯುತವಾದುದು.

ಸಾರ್ವಜನಿಕ ಹಿತದೃಷ್ಟಿಯಿಂದ ಈ ವಿವರಗಳನ್ನು ನೀಡಬೇಕಾಯಿತು. ಗ್ರಾಹಕರು ಮುನ್ನೆಚ್ಚರಿಕೆ ವಹಿಸಲು, ತಮ್ಮ ಖಾತೆಗಳನ್ನು ಗಮನಿಸುತ್ತಿರಲು ಸಹ ಇಲ್ಲಿ ಸೂಚಿಸಬಹುದು.

ಎ.ಎನ್.ಮಂಜುನಾಥ್, ಬೆಂಗಳೂರು.
9901055998

(ಅಡಕಗಳನ್ನು ಗಮನಿಸಬಹುದು.)(Card No. 4006661134021000)

Rating
No votes yet

Comments