ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 13

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 13

ನನಗೆ ಕಣ್ಣುಗಳು ಭಾರವಾಗಿ ನೀರು ತಡೆಯಲು ಆಗದೆ ಆಚೆ ಬಂದು ಬಿಟ್ಟಿತ್ತು. ಅವಳು ನನ್ನ ಭುಜದ ಮೇಲೆ ಕೈ ಇಟ್ಟು ಹೇ ಯಾಕೋ ಏನಾಯಿತೋ, ಹೇ ಭಗತ್ ಪ್ಲೀಸ್ ಅಳಬೇಡ, ಅಳೋ ಅಷ್ಟು ಸೆಂಟಿಮೆಂಟ್ ಇದ್ದೀಯ ನಾನು ಹೇಳಿದ್ರಲ್ಲಿ. ಅಯ್ಯೋ ಹುಚ್ಚಪ್ಪ ಮೊದಲು ಅಳು ನಿಲ್ಲಿಸು ಎಂದಳು. ನಾನು ಕಣ್ಣೊರೆಸಿಕೊಂಡು ಪಾವಿ ದಯವಿಟ್ಟು ನನ್ನ ಕ್ಷಮಿಸು. ನಿನ್ನ ಹುಟ್ಟಿದ ಹಬ್ಬದ ದಿನ ನಿನ್ನ ಕೆಟ್ಟ ನೆನಪುಗಳನ್ನೆಲ್ಲ ನೆನಪಿಸಿ ನಿನಗೆ ನೋವುಂಟು ಮಾಡಿದೆ. i am extremely sorry ಪಾವಿ ಎಂದೆ. ಅದಕ್ಕವಳು ಅಯ್ಯೋ ಅದ್ರಲ್ಲಿ ನಿಂದೇನು ತಪ್ಪಿಲ್ಲ ಕಣೋ. ಬಾ ಮೊದಲು ಐಸ್ ಕ್ರೀಂ ಕೊಡಿಸು ಇಷ್ಟು ಹೊತ್ತು ಕಥೆ ಹೇಳಿ ಗಂಟಲೆಲ್ಲ ಒಣಗಿ ಹೋಗಿದೆ ಎಂದು ನನ್ನ ಕೈ ಹಿಡಿದು ಅಂಗಡಿಯ ಬಳಿ ಕರೆದುಕೊಂಡು ಹೋದಳು.

ನಾನಿನ್ನೂ ಆ ಶಾಕ್ ನಿಂದ ಹೊರಗೆ ಬಂದಿರಲಿಲ್ಲ. ಸಾರೀ ಕಣೋ ನಿನ್ನ ಮೂಡ್ ಎಲ್ಲ ಹಾಳು ಮಾಡಿ ಬಿಟ್ಟೆ. ಸುಮ್ಮನೆ ನಿನ್ನ ಕಣ್ಣಲ್ಲಿ ನೀರು ಹಾಕಿಸಿದೆ ಇದಕ್ಕೆ ಪೆನಾಲ್ಟಿ ಏನೆಂದರೆ ನಡೀ ಇವತ್ತು ಊಟ ನಂದೇ ಎಂದಳು. ಬೇಡ ಪಾವಿ ನಾನು ಮನೆಗೆ ಹೊರಡುತ್ತೇನೆ ನನಗೆ ಮೂಡ್ ಇಲ್ಲ ಎಂದೆ. ಅದಕ್ಕವಳು ಭಗತ್ ಲೂಸ್ ಹಾಗೆ ಆಡಬೇಡ, ಇವಾಗ ಬರ್ತ್ಯೋ ಇಲ್ವೋ ನನ್ ಜೊತೆ. ಇವಾಗ ನೀನು ಬರ್ದೇ ಇದ್ರೆ ಇನ್ಮೇಲೆ ನಂಜೊತೆ ಮಾತಾಡಬೇಡ ಎಂದಳು. ಸರಿ ನಡೀ ಎಂದು ಆಚೆ ಬಂದು ಗಾಡಿ ತೆಗೆದುಕೊಂಡು ಹೊರಟೆವು. ಗಾಡಿ ಓಡಿಸುತ್ತಿದ್ದಷ್ಟು ಹೊತ್ತು ನಾನು ಏನೂ ಮಾತಾಡಲಿಲ್ಲ.  ಯಾಕೋ ಸೈಲೆಂಟ್ ಆಗಿದ್ಯ ಏನಾದರೂ ಮಾತಾಡೋ ನೀನು ಹೀಗಿದ್ರೆ ಚೆನ್ನಾಗಿರಲ್ಲ ಪ್ಲೀಸ್ ನಗಪ್ಪ ಎಂದಳು.

ಅಷ್ಟರಲ್ಲಿ ಹೋಟೆಲ್ ಬಂತು. ಇಬ್ಬರೂ ಇಳಿದು ಒಳಗೆ ಹೋದೆವು. ಅವಳೇ ಊಟ ಆರ್ಡರ್ ಮಾಡಿದಳು. ನಾನು ಸುಮ್ಮನೆ ತಲೆ ತಗ್ಗಿಸಿ ಕುಳಿತಿದ್ದೆ. ಅವಳೇ ನನ್ನ ಗಲ್ಲ ಹಿಡಿದು ಮೇಲಕ್ಕೆತ್ತಿ ಭಗತ್ ಇವಾಗ ನಗ್ತ್ಯೋ ಇಲ್ಲವೋ ಎಂದಳು. ನಾನು ಬಲವಂತವಾಗಿ ನಕ್ಕು ಪಾವಿ ನನ್ನ ಮದುವೆ ಆಗ್ತೀಯ ಎಂದೆ. ಆಯಿತು ಮೊದಲು ನೀನು ನಗ್ತಾ ನಗ್ತಾ ಊಟ ಮಾಡು ಆಮೇಲೆ ಮಾತಾಡೋಣ ಎಂದಳು. ಪಾವಿ ತಮಾಷೆ ಬೇಡ ನಾನು ಸೀರಿಯಸ್ ಆಗಿ ಕೇಳ್ತಾ ಇದ್ದೀನಿ ನನ್ನ ಮದುವೆ ಆಗ್ತ್ಯ. ಭಗತ್ ಇದು ತಮಾಷೆಯ ವಿಷಯವಲ್ಲ ಸುಮ್ಮನೆ ನಿನ್ನ ಜೀವನ ಹಾಳು ಮಾಡಿಕೊಳ್ಳಬೇಡ ಒಬ್ಬ ಒಳ್ಳೆ ಫ್ರೆಂಡ್ ಆಗಿ ಹೇಳ್ತಾ ಇದ್ದೀನಿ ನಿಜವಾಗಿಯೂ ನೀನು ತುಂಬಾ ಒಳ್ಳೆ ಹುಡುಗ, ನಿನ್ನ ಮದುವೆ ಮಾಡಿಕೊಳ್ಳುವವಳು ಅದೃಷ್ಟ ಮಾಡಿರಬೇಕು. ನಿನಗೆ ಒಳ್ಳೆ ಹುಡುಗಿ ಸಿಗುತ್ತಾಳೆ, ನಾವಿಬ್ಬರೂ ಹೀಗೆ ಇರೋಣ ಎಂದಳು.

ಅಷ್ಟರಲ್ಲಿ ಊಟ ತಂದಿಟ್ಟ. ಊಟ ಮಾಡುತ್ತಾ ಪಾವಿ ನಾನು ನಿರ್ಧರಿಸಿ ಬಿಟ್ಟಿದ್ದೇನೆ ಮದುವೆ ಅಂತಾದರೆ ಅದು ಕೇವಲ ನಿನ್ನನ್ನು ಇಲ್ಲವಾದರೆ ಹೀಗೆ ಇದ್ದು ಬಿಡುತ್ತೇನೆ. ಭಗತ್ ಅದು ಅಷ್ಟು ಸುಲಭದ ಮಾತಲ್ಲ. ನಮ್ಮ ಮನೆಯಲ್ಲಿ ನಾನು ಮೊದಲು ಬೇಡ ಅಂದಿದ್ದೆ ಈಗ ಮಾಡಿಕೊಳ್ಳುತ್ತೇನೆ ಎಂದರೆ ಅವರು ಏನೆಂದುಕೊಳ್ಳುತ್ತಾರೆ, ಒಂದು ವೇಳೆ ಅವರು ಒಪ್ಪಿದರೂ ನಿಮ್ಮ ಮನೆಯಲ್ಲಿ ಒಪ್ಪುತ್ತಾರ? ನೋಡಿ ನೋಡಿ ಯಾರಾದರೂ ಎರಡನೇ ಮದುವೆಗೆ ಒಪ್ಪುತ್ತಾರ? ಇದೆಲ್ಲ ನಡೆಯುವ ಮಾತಲ್ಲ. ಸುಮ್ಮನೆ ಕನಸು ಕಟ್ಟಿಕೊಂಡು ಜೀವನ ಹಾಳು ಮಾಡಿಕೊಳ್ಳಬೇಡ. ನನ್ನ ಮಾತು ಕೇಳಿ ಯಾವುದಾದರೂ ಒಳ್ಳೆ ಹುಡುಗಿಯನ್ನು ಹುಡುಕಿ ಮದುವೆ ಮಾಡಿಕೊ. ಬೇಕಾದರೆ ಹೇಳು ನಾನೇ ನಿನಗೊಂದು ಒಳ್ಳೆ ಹುಡುಗಿ ಹುಡುಕುತ್ತೇನೆ. ಇಲ್ಲವಾದರೆ ನೀನೆ ನೋಡಿಕೋ ಆದರೆ ಮೊದಲು ನನಗೆ ತೋರಿಸಬೇಕು.

ಪಾವಿ ಅದೆಲ್ಲ ಬೇಡ, ಮನೆಯವರ ವಿಷಯ ನನಗೆ ಬಿಟ್ಟು ಬಿಡು. ಅವರನ್ನು ಒಪ್ಪಿಸುವ ಜವಾಬ್ದಾರಿ ನನ್ನದು ನಿನ್ನ ಒಪ್ಪಿಗೆ ಹೇಳು. ನಿನಗೆ ನನ್ನನ್ನು ಮದುವೆ ಆಗುವುದು ಇಷ್ಟ ಇದೆಯಾ ಇಲ್ಲವ ಅದನ್ನು ಹೇಳು. ಭಗತ್ ನನಗೆ ಸ್ವಲ್ಪ ಸಮಯ ಬೇಕು. ನಿಧಾನವಾಗಿ ಯೋಚಿಸಿ ಹೇಳುತ್ತೇನೆ. ಪಾವಿ ನಿನಗೆಷ್ಟು ಟೈಮ್ ಬೇಕೋ ಅಷ್ಟು ಟೈಮ್ ತಗೋ ಆದರೆ ಇಲ್ಲ ಅಂತ ಮಾತ್ರ ಹೇಳಬೇಡ ಎಂದು ಆ ಕಡೆ ಈ ಕಡೆ ನೋಡಿ ಎದ್ದು ಅವಳ ಹಣೆಗೊಂದು ಮುತ್ತಿಟ್ಟೆ. ಅದೇಕೋ ಹಾಗೆ ಮಾಡಿದೆನೋ ಗೊತ್ತಿಲ್ಲ. ಅವಳು ಒಂದು ಕ್ಷಣ ತೀಕ್ಷ್ಣವಾಗಿ ನನ್ನನ್ನು ನೋಡಿ ಒಳ್ಳೆ ಹುಡುಗ ನಡಿ ಹೋಗೋಣ ಎಂದು ಅಲ್ಲಿಂದ ಹೊರಟೆವು.

ಅವಳನ್ನು ಮಲ್ಲೇಶ್ವರಂ ೧೮ನೆ ಕ್ರಾಸ್ ನಲ್ಲಿ ಇಳಿಸಿ, ಪಾವಿ ನಿನ್ನ ಒಪ್ಪಿಗೆಗಾಗಿ ಕಾಯುತ್ತಿರುತ್ತೇನೆ ಎಂದು ಮನೆಗೆ ಹೊರಟು ಬಂದೆ.

Rating
No votes yet

Comments