ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 9

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 9

ಅಂತೂ ಸಿನೆಮಾ ಮುಗಿಸಿಕೊಂಡು ಆಚೆ ಬರುವಷ್ಟರಲ್ಲಿ ಕತ್ತಲಾಗಿತ್ತು. ಆಚೆ ಬಂದು ಇಬ್ಬರೂ ಒಬ್ಬರ ಮುಖ ಇನ್ನೊಬ್ಬರು ನೋಡಿ ಮುಗುಳ್ನಕ್ಕು ಪಾವಿ ನಿನ್ನ ಮನೆ ಹತ್ರ ಡ್ರಾಪ್ ಮಾಡಿ ನಾನು ಮನೆಗೆ ಹೋಗ್ತೀನಿ ಎಂದೆ. ಅದಕ್ಕವಳು ಬೇಡ ಕಣೋ ನೀನು ಹೀಗಿಂದ ಹೀಗೆ ಮನೆಗೆ ಹೊರಡು ನಾನು ಆಟೋಲಿ ಹೋಗ್ತೀನಿ ಎಂದಳು. ಯಾಕೆ ಬೇಡ ಎಂದು ಕೇಳೋಣ ಎಂದುಕೊಂಡರೂ ಬಹುಶಃ ಮನೆಯವರ ಸಮಸ್ಯೆ ಇಂದ ಬೇಡ ಎನ್ನುತ್ತಿದ್ದಾಳೆ ಎಂದುಕೊಂಡು ಬೈ ಪಾವಿ ಎಂದೆ. ಅದಕ್ಕವಳು it was a  great evening ಭಗತ್ thanks for your time . ನಾನು ರಾತ್ರಿ ಕಾಲ್ ಮಾಡ್ತೀನಿ ಎಂದು ಹೊರಟಳು. ಅವಳು ಆಟೋ ಹತ್ತುವ ತನಕ ಅಲ್ಲೇ ಇದ್ದು ನಂತರ ಮನೆ ಕಡೆ ಹೊರಟೆ.

ರಸ್ತೆಯಲ್ಲೆಲ್ಲ ಹೂ ಹಾಸಿದ ಹಾಗೆ, ಎಲ್ಲೆಲ್ಲೂ ಮೋಡಗಳು ತುಂಬಿರುವ ಹಾಗೆ ನಾನು ಎಲ್ಲೋ ತೇಲುತ್ತಿರುವ ಹಾಗೆ ಏನೇನೋ ಆಗುತ್ತಿತ್ತು ನನಗೆ. ಮಧ್ಯಾಹ್ನದಿಂದ ಸಂಜೆಯವರೆಗೂ ಪಾವನಿ ಜೊತೆ ಕಳೆದ ಆ ಅಮೂಲ್ಯ ಕ್ಷಣಗಳು ನನ್ನ ಬಾಳಿನ ಅತ್ಯಮೂಲ್ಯ ಕ್ಷಣಗಳು. ಅದೇ ಗುಂಗಿನಲ್ಲಿ ಮನೆಗೆ ಬಂದು ಊಟ ಮಾಡಿ ಪೂಜಾ ಗೆ ಒಂದ್ ಚಾಕೋಲೆಟ್ ಕೊಟ್ಟೆ. ಏನಪ್ಪಾ ಒಂದೊಂದ್ ಸಲ ಕೇಳಿದ್ರು ತಂದು ಕೊಡಲ್ಲ. ಇವತ್ತು ಕೇಳದೆನೆ ತಂದು ಕೊಟ್ಟಿದ್ಯ ಅಂದರೆ ಏನೋ ವಿಶೇಷ ಇರಬೇಕು ಎಂದಳು. ಅಷ್ಟರಲ್ಲಿ ಅಪ್ಪ ಬಂದು ಏನಪ್ಪಾ ಹೇಗೆ ನಡೀತಿದೆ ಕೆಲಸ ಎಂದರು. ಅಪ್ಪ, ಏನೂ ತೊಂದರೆ ಇಲ್ಲಪ್ಪ ಆರಾಮಾಗಿದೆ ಎಂದೆ. ನೋಡು ಭಗತ್ ಈ ವೀಕೆಂಡ್ ಅಲ್ಲಿ ತುಮಕೂರಿಗೆ ಹೋಗಬೇಕು ಎಲ್ಲೂ ಪ್ಲಾನ್ ಹಾಕೋಬೇಡ ಎಂದರು. ಏನಪ್ಪಾ ತುಮಕೂರಿಗೆ ಯಾವುದಾದರೂ ಮದುವೆ ಇದ್ಯಾ ಎಂದೆ. ಹೌದಪ್ಪ ನನ್ನ ಮಗನಿಗೆ ಅಂದರೆ ನಿನಗೆ ಮದುವೆ ಮಾಡಲು ಹುಡುಗಿ ನೋಡಲು ಹೋಗುತ್ತಿದ್ದೇವೆ ಎಂದರು.

ನನಗೆ ಇದ್ದ ಸಂತೋಷ ಉತ್ಸಾಹ ಎಲ್ಲ ಗಾಳಿ ತೆಗೆದ ಬಲೂನಿನಂತೆ ಟುಸ್ ಎಂದಿತು. ಅಪ್ಪ ನನಗೆ ಈಗಲೇ ಮದುವೆ ಬೇಡ ಇನ್ನೊಂದು ವರ್ಷ ಆದಮೇಲೆ ಮಾಡಿಕೊಳ್ಳುತ್ತೇನೆ ಎಂದೆ. ಲೋ ನಿನಗೇನೂ ಕಮ್ಮೀನ ವಯಸ್ಸು ನಿನಗಿಂತ ಚಿಕ್ಕವರಿಗೆಲ್ಲ ಮದುವೆ ಆಗ್ತಾ ಇದೆ ಮಕ್ಕಳು ಆಗ್ತಾ ಇದೆ ನೀನು ಮಾತ್ರ ಹಿಂಗೆ ಇರ್ತ್ಯ? ಈಗಲೇ ಆಚೆ ಜನಕ್ಕೆ ಉತ್ತರ ಕೊಡಲು ಆಗುತ್ತಿಲ್ಲ. ಎಲ್ಲೇ ಹೋದರು ಏನಪ್ಪಾ ಯಾವಾಗ ಮಾಡ್ತ್ಯ ಮಗನಿಗೆ ಮದುವೆ? ಯಾಕೆ ತಡ ಮಾಡ್ತಾ ಇದ್ಯಾ? ಅಥವಾ ಯಾವುದಾದರೂ ಹುಡುಗಿಯನ್ನು ಇಷ್ಟ ಪಡುತ್ತಿದ್ದಾನ? ಎಂದೆಲ್ಲ ಕೇಳುತ್ತಿದ್ದಾರೆ ನನಗೆ ಉತ್ತರ ಕೊಟ್ಟೂ ಕೊಟ್ಟೂ ಸಾಕಾಗಿದೆ. ಇನ್ನು ನನ್ನ ಕೈಲಿ ಆಗಲ್ಲ ಅದಕ್ಕೆ ನನ್ನ ಸ್ನೇಹಿತ ತುಮಕೂರಿನಲ್ಲಿ ಇದ್ದಾನೆ. ಅವನ ಮಗಳಿಗೆ ಗಂಡು ಹುಡುಕುತ್ತಿದ್ದಾನೆ ಎಂದು ಗೊತ್ತಾಯಿತು. ಅದಕ್ಕೆ ನಾನೇ ಫೋನ್ ಮಾಡಿ ನನ್ನ ಮಗ ಇದ್ದಾನಪ್ಪ ಎಂದು ಹೇಳಿದ್ದಕ್ಕೆ ಈ ವೀಕೆಂಡ್ ಬಾ ಎಂದು ಹೇಳಿದ್ದಾನೆ. ಯಾಕೆಂದರೆ ಅವನ ಮಗಳೂ ಬಿ.ಇ ಮಾಡಿಕೊಂಡು ಇಲ್ಲೇ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದಾಳಂತೆ. ಅವಳಿಗೂ ಬಿಡುವಾಗುವುದು ವೀಕೆಂಡ್ ಮಾತ್ರವಂತೆ. ಅದಕ್ಕೆ ಒಂದು ಸಾರಿ ಹೋಗಿ ನೋಡಿಕೊಂಡು ಬರೋಣ ಎಂದು ನನ್ನ ಕೈಗೆ ಒಂದು ಕವರ್ ಕೊಟ್ಟರು. ಇದೇನಿದು ಎಂದೆ ಆ ಹುಡುಗಿ ಜಾತಕ ಮತ್ತೆ ಫೋಟೋ. ನಾನು ಒಳಗಿನಿಂದ ಫೋಟೋ ತೆಗೆದೆ. ಒಂದು ನೀರಿನ ಡ್ರಮ್ಮಿಗೆ ಸೀರೆ ಉಡಿಸಿದ ಹಾಗಿತ್ತು.

ಅಪ್ಪ ಏನು ತಮಾಷೆ ಮಾಡ್ತಾ ಇದ್ಯಾ? ಅವಳ ಫೋಟೋ ನೋಡಿದ್ಯ ನೀನು ಒಂದ್ ಸಲ ನೋಡು ನೀರಿನ ಡ್ರಂ ಜೊತೆ ಚಮಚ ಇದ್ದ ಹಾಗೆ ಇರ್ತೀನಿ. ಎಲ್ಲಕ್ಕೂ ಮೊದಲು ಸಧ್ಯಕ್ಕೆ ಮದುವೆ ಬೇಡ. ಈ ಹುಡುಗಿಯಂತೂ ಅಪ್ಪಿ ತಪ್ಪಿ ಬೇಡ ಎಂದೆ. ಅದಕ್ಕೆ ಅಪ್ಪ ನೋಡಪ್ಪ ನಿನ್ನಿಷ್ಟ ನೀನು ಯಾವಾಗ ಆಗ್ತೀನಿ ಅಂತ್ಯೋ ಅವಾಗ ಮಾಡ್ತೀನಿ ನನ್ನದೇನು ಬಲವಂತವಿಲ್ಲ. ಯಾಕಂದ್ರೆ ಸಂಸಾರ ಮಾಡಬೇಕಾದವರು ನೀವು ಆಮೇಲೆ ನಮ್ಮನ್ನು ಬೈಯ್ಯುವ ಹಾಗಾಗಬಾರದು. ಒಟ್ಟಿನಲ್ಲಿ ನೀವು ಚೆನ್ನಾಗಿದ್ದರೆ ಅಷ್ಟು ಸಾಕು.ಅಪ್ಪ ಅಮ್ಮನಿಗೆ ಮಕ್ಕಳ ಸುಖಕ್ಕಿಂತ ಬೇರೇನೂ ಬೇಕು ಹೇಳು. ನೀನು ಯಾವುದಾದರೂ ಹುಡುಗಿಯನ್ನು ಇಷ್ಟ ಪಟ್ಟಿದ್ದರೆ ಹೇಳು ಎಲ್ಲ ಸರಿ ಹೊಂದಿದರೆ ಮದುವೆ ಮಾಡೋಣ ಎಂದರು. ಅಪ್ಪ, ಹಾಗೆಲ್ಲ ಏನೂ ಇಲ್ಲ ನನಗೆ ಸ್ವಲ್ಪ ಸಮಯ ಬೇಕು ಅಷ್ಟೇ ಎಂದೆ.(ಪಾವನಿಯ ವಿಷಯ ಹೇಳಿಬಿಡಬಹುದಿತ್ತು ಆದರೆ ಇನ್ನೂ ಅವಳಿಗೆ ವಿಷಯ ತಿಳಿಸಿಲ್ಲ. ಆತುರ ಏಕೆಂದು ಸುಮ್ಮನಾದೆ)

ನಾನು ರೂಮಿಗೆ ಹೋದ ತಕ್ಷಣ ಹಿಂದೆಯೇ ಪೂಜಾ ಬಂದು ಯಾಕೋ ಅಪ್ಪನ ಹತ್ತಿರ ಪಾವನಿಯ ವಿಷಯ ಹೇಳಲಿಲ್ಲ. ಅಲ್ಲ ಪೂಜಾ  ನಾನಿನ್ನೂ ಪಾವನಿಗೇ ವಿಷಯ ತಿಳಿಸಿಲ್ಲ ಸುಮ್ಮನೆ ಅಪ್ಪನ ಹತ್ತಿರ ಏನೆಂದು ಹೇಳಲಿ. ಅದೂ ಅಲ್ಲದೆ ಪಾವನಿಗೆ ನನ್ನನ್ನು ಕಂಡರೆ ಇಷ್ಟ ಇದೆಯೋ ಇಲ್ಲವೋ ಎಂದೂ ಗೊತ್ತಿಲ್ಲ. ಅಲ್ವೋ ಭಗತ್ ನೀನ್ಯಾಕೆ ತಡ ಮಾಡ್ತಿದ್ಯ ಪಾವನಿ ಹತ್ತಿರ ನಿನ್ನ ವಿಷಯ ಹೇಳಬಾರದ. ಸುಮ್ಮನೆ ತಡ ಮಾಡದೆ ಹೇಳಿಬಿಡು ಇಲ್ಲ ಅಂದರೆ ಅಪ್ಪ ಅಮ್ಮನ ಒತ್ತಡ ಜಾಸ್ತಿ ಆಗತ್ತೆ. ನೀನು ಎಷ್ಟು ಬೇಗ ಹೇಳುತ್ತೀಯೋ ಅಷ್ಟು ಒಳ್ಳೆಯದು. ಯಾಕೆಂದರೆ ನೀನು ಅವಳಿಗೆ ಹೇಳಿ ಅವಳ ಒಪ್ಪಿಗೆ ಪಡೆದು, ನಮ್ಮ ಮನೆಯಲ್ಲಿ ಒಪ್ಪಿಸಿ ಅವರ ಮನೆಯಲ್ಲಿ ಒಪ್ಪಿಸಿ ಇದಕ್ಕೆಲ್ಲ ಬಹಳ ಸಮಯ ಬೇಕಾಗುತ್ತದೆ ಕಣೋ ಎಂದಳು. ಅಲ್ವೇ ಪೂಜಾ ನಿನಗೆ ಹೇಗೆ ಇದೆಲ್ಲ ಗೊತ್ತು. ನೀನು ಯಾರನ್ನಾದರೂ ಲವ್ ಮಾಡ್ತಿದ್ಯ ಎಂದು ಕಣ್ಣು ಹೊಡೆದೆ. ಸ್ವಾಮಿ ನೀವೊಬ್ರು ಮಾಡಿದಿರಾ ಅದೇ ಸಾಕು. ನಂಗೆ ಅಪ್ಪ ಯಾರನ್ನು ತೋರಿಸುತ್ತಾರೋ ಅವರನ್ನೇ ಆಗುವುದು, ಗುಡ್ ನೈಟ್ ಮಲ್ಕೋ ಎಂದು ಹೊರಟಳು.

Rating
No votes yet