ಕನಸಿನ ಬೆನ್ನು ಹತ್ತಿ ಹೋದವನ ಕಥೆ ( ನಾನು ಓದಿದ ಒಳ್ಳೆಯ ಕಥೆ)

ಕನಸಿನ ಬೆನ್ನು ಹತ್ತಿ ಹೋದವನ ಕಥೆ ( ನಾನು ಓದಿದ ಒಳ್ಳೆಯ ಕಥೆ)

ಇದು ನಥೇನಿಯಲ್ ಹ್ಯಾಥೊರ್ನ್ ಎಂಬ ಲೇಖಕ ಬರೆದ ಕಥೆ .

ನಮ್ಮ ಕಥಾನಾಯಕ ಚಿಕ್ಕವನಿದ್ದಾಗ ಒಂದು ಕನಸು ಆಗಾಗ ಬೀಳುತ್ತಿತ್ತು. ಅದು ಹೀಗೆ- ಒಂದು ಕೆಳಮುಖವಾದ ಬಾಣದ ಗುರುತು . 'ಇಲ್ಲಿ ಅಗೆ' ಎಂಬ ಬರಹ . ಅಲ್ಲಿ ಅಗೆದಾಗ ನಿಧಿಯು ಸಿಗುತ್ತದೆ. ಮತ್ತು ಋಷಿ ತರಹದ ಜನರು ಹಿರಿಯರಿಂದೊಡಗೂಡಿ ಬಂದು ನಮ್ಮ ರಾಜ್ಯಕ್ಕೆ ರಾಜನಾಗು ಎಂದು ಕಿರೀಟ ಒಪ್ಪಿಸಿ ಬೇಡಿಕೊಳ್ಳುವರು. ಹಾಗೂ ಸುಂದರಿ ರಾಜಕುಮಾರಿಯೊಬ್ಬಳು ನನ್ನನ್ನು ಮದುವೆಯಾಗು ಎಂದು ಕೇಳಿಕೊಳ್ಳುವಳು.
ಈ ಕನಸನ್ನು ಅವನು ಮನಸ್ಸಿಗೆ ಬಹಳ ಹಚ್ಚಿಕೊಳ್ಳುತ್ತಾನೆ.ಅದು ತನ್ನ ಭವಿಷ್ಯ ಸೂಚಕ ಎಂದು ನಂಬಿ ಅದನ್ನು ನಿಜಮಾಡಲು ಹೊರಡುತ್ತಾನೆ. ಆ ಬಾಣದ ಗುರುತು , ಋಷಿ ತರಹದ ಜನರು , ರಾಜಕುಮಾರಿ ಎಲ್ಲಿ ಹೇಗೆ ದೊರೆಯುವರು ಎಂಬ ಸುಳಿವು ಇಲ್ಲ. ಇವನ್ನೆಲ್ಲ ಹುಡುಕಿ ಕಾಡುಮೇಡು , ದೇಶ ವಿದೇಶ , ಖಂಡಾತರ ಅಲೆದೂ ಅಲೆದೂ ಅನೇಕ ವರ್ಷಗಳನ್ನು ಕಳೆಯುತ್ತಾನೆ. ಕೊನೆಗೆ ದಣಿದು , ಸೋತು ಬರಿಗೈಯಲ್ಲಿ ನಿರಾಶನಾಗಿ ತನ್ನ ಹಳ್ಳಿಗೆ ಹಿಂತಿರುಗುತ್ತಾನೆ.
ಮಾಡಲು ಉದ್ಯೋಗವಿಲ್ಲ . ಅವನ ಹೊಲಗಳು ಹಾಳು ಬಿದ್ದಿವೆ. ಹೊಲದ ಅಂಚಿನ ಗಿಡಗಳ ಬೊಡ್ಡೆಗಳ ಮೇಲೆ ಇವನು ಬಾಲ್ಯದಲ್ಲಿ ಕೆತ್ತಿದ್ದ ಬಾಣದ ಗುರುತು ಮತ್ತು 'ಇಲ್ಲಿ ಅಗೆ' ಎಂಬ ಬಾಣದ ಗುರುತು ಅವನನ್ನು ಅಣಕಿಸುತ್ತಿದೆ. ಅವನ ಬಾಲ್ಯದ ಗೆಳತಿ ಇನ್ನೂ ಮದುವೆಯಾಗದೇ ಇದ್ದಾಳೆ.
ಊರಿನ ಜನರೆಲ್ಲ ವಿದೇಶ ಸಂಚಾರ ಮಾಡಿ ಬಂದ ಇವನ ಅನುಭವ ಕೇಳಲು ಇವನನ್ನು ಸುತ್ತುವರೆಯುತ್ತಾರೆ.
ಉದ್ಯೋಗವಿಲ್ಲದೆ ಪಾಳು ಬಿದ್ದ ಹೊಲಗಳನ್ನು ಸಾಗುವಳಿ ಮಾಡಲಾರಂಭಿಸುತ್ತಾನೆ . ಇದು ಅವನ ಪಾಲಿನ ನಿಧಿ!
ಕೆಲದಿನಗಳ ನಂತರ ಊರಿನ ಹಿರಿಯರು ಇವನನ್ನು ಭೇಟಿಯಾಗಿ ನಮ್ಮ ಊರಿನ ಶಾಲೆಗೆ ಮುಖ್ಯ ಅಧ್ಯಾಪಕರಿಲ್ಲ . ನೀನು ಬಹಳ ತಿಳಿವಳಿಕಸ್ಥನಿದ್ದು ನೀನೇ ಸೂಕ್ತ ಮನುಷ್ಯ . ದಯವಿಟ್ಟು ಒಪ್ಪಿಕೋ ಎಂದು ಕೇಳಿಕೊಳ್ಳುತ್ತಾರೆ. ಹಳ್ಳಿಗೆ ಅದು ಬಹಳ ಪ್ರತಿಷ್ಠೆಯ ಪದವಿ. ಅವರಿಗೂ ಕನಸಿನಲ್ಲಿ ಕಂಡ ಋಷಿಗಳಿಗೂ ಸಾಮ್ಯವಿರುತ್ತದೆ! .
ಬಾಲ್ಯದ ಗೆಳತಿ ಇವನಿಗೆ ಸಿಕ್ಕು ನಿನಗಾಗಿ ಮದುವೆಯಾಗದೆ ಕಾದಿದ್ದೇನೆ. ನನ್ನನ್ನು ಮದುವೆಯಾಗು ಎಂದು ಕೇಳಿಕೊಳ್ಳುತ್ತಾಳೆ. ಇವಳೇ ಕನಸಿನಲ್ಲಿ ಕಂಡ ರಾಜಕುಮಾರಿಯೇನೋ?!
ಹೀಗೆ ಒಂದು ಕನಸನ್ನು ನಂಬಿ ಜಗತ್ತನ್ನೆಲ್ಲ ಅಲೆದು ಹಳ್ಳಿಯನ್ನು ಸೇರಿ ಸಣ್ಣ ಪ್ರಮಾಣದ ಬದುಕಿನಲ್ಲಿ ತನ್ನ ಕನಸನ್ನು ನಿಜ ಮಾಡಿಕೊಳ್ಳುತ್ತಾನೆ.

Rating
No votes yet

Comments