ಕನಸುಗಳ ಮಾತು ಮಧುರ
ಬಹುಷಃ ಬಹಳ ದಿನಗಳ ನಂತರ ಬೆಳಗ್ಗೆ ನಿದ್ದೆ ಮಾಡ್ತಾ ಇದ್ದೆ… ಮೊ’ಭಯ’ಲು ದರ ದರನೆ ನನ್ನ ಕಿವಿ ಹಿಡಿದು ಎಬ್ಬಿಸ್ತಾ ಇತ್ತು… ಅಮ್ಮನ ನೆನಪಾಗ್ತಾ ಇತ್ತು… ಚಿಕ್ಕವನಿದ್ದಾಗ ಕಿವಿ ಹಿಂಡಿ, ಪ್ರುಷ್ಟಕ್ಕೆ ತಿವಿದು ನನ್ನನ್ನೆಬ್ಬಿಸುವ ವ್ಯರ್ಥ ಪ್ರಯತ್ನ ಮಾಡ್ತಾ ಇದ್ದ ನೆನಪು ಹೊದಕೆಯೊಳಗೆ ತಿವಿದು ಬಂದು ಕಿವಿಯೊಳಗೆ ಹೊಕ್ಕು ನನ್ನೆದೆಯಲ್ಲಿ ಅದೇನನ್ನೋ ಹೇಳ್ತಾ ಇತ್ತು… ಇಲ್ಲ… ಇದೆಲ್ಲ ಬರೀ ಕನಸಲ್ಲ… ನೆನಪಿನ ಬುತ್ತಿಯಲ್ಲಿ ಬರೀ ಇಂತದ್ದೆ ಪುಟ್ಟ ಪುಟ್ಟ ತುತ್ತು… ತಿನ್ನೋದಕ್ಕೆ ಸಿಗದಿದ್ದರೂ ಮೆಲ್ಲೋದಕ್ಕೆ ಮನಸಿಗೇನೋ ಕಾತರ… ಅದೇನೋ… ಗೊತ್ತಿಲ್ಲ ಯಾಕೆ ಅಂತ… ಇದೀಗ ಪೆನ್ನು ಪೇಪರಿನ ಜಾಗವನ್ನು ಕಂಪ್ಯೂಟರಿನ ಕೀಲಿಮಣೆ, ಮೌಸ್, ತೆಳ್ಳಗಿನ ಪರದೆ ಆಕ್ರಮಿಸಿಕೊಂಡಿದೆ… ಹಾಗೇ ಕನಸಿನ ಜಾಗಕ್ಕೆ ನನ್ನ ಚಿಕ್ಕಂದಿನಿಂದ ನಾನು ಯಾವುದೇ alternative ಪದೆಯೋದ್ರಲ್ಲಿ ಸಫಲನಾಗಿಲ್ಲ… ಹೆ ಹೆ… ನಗಬೇಡಿ… ಕನಸಿಗೊಂದು ಬದಲಿ ವ್ಯವಸ್ಥೆ ಇದ್ದಿದ್ದರೆ ಮನಸಿಗೆಲ್ಲಿ ಕೆಲಸವಿರ್ತಿತ್ತು…
ಕನಸಿನಲ್ಲೇ ನಮ್ಮ ಬದುಕು… ಅಲ್ವ… ಗೆಳತಿಯೊಬ್ಬಳು ಹೇಳ್ತಾ ಇದ್ದ ಮಾತು ಆಗಾಗ ಕಾಡ್ತಾ ಇರ್ತವೆ… ಆಕೆ ಹೇಳ್ತಾ ಇದ್ದಳು, ಕನಸು ಕಾಣುವುದಿದ್ರೆ ದೊಡ್ಡ ದೊಡ್ಡದನ್ನು ಕಾಣಬೇಕಂತೆ… ಆಗಲೇ ದೊಡ್ಡ ಸೋಲು ನಮ್ಮದಾಗೋದು ಅಂತ… ಕನಸು ಕಾಣುವುದಕ್ಕೆ… ಅಂಥಾ ಛಾತಿ ಬೇಕು… ಆಗ ತಾನೆ ಏನನ್ನೂ ಎದುರಿಸೋದಕ್ಕೆ ಧೈರ್ಯ ಬರೋದು… ಹಾಗಾಗಿ, long live dreams… ಕನಸುಗಳು ಎಂದೆಂದೂ ಬಾಳಲಿ… ಇಲ್ಲೇನು ಕನಸಿನ ಮಾರ್ಕೆಟಿಂಗ್ ಮಾಡೋದಕ್ಕೆ ನಾನಿಲ್ಲಿ ಬಂದಿಲ್ಲ… ಆದರೆ ಪ್ರತಿ ಕ್ಷಣ ಕನಸನ್ನು ಕಾನುವುದಿದೆಯಲ್ಲ… ಅದರ ಸುಖ ಅನುಭವಿಸಿದವನೇ ಬಲ್ಲ…