ಕನ್ನಡಕ್ಕೆ ಅಳಿಲುಸೇವೆ-12500 ಜ್ಞಾನ ಪುಟಗಳ ಲೋಕಾರ್ಪಣೆ

ಕನ್ನಡಕ್ಕೆ ಅಳಿಲುಸೇವೆ-12500 ಜ್ಞಾನ ಪುಟಗಳ ಲೋಕಾರ್ಪಣೆ

ನಮ್ಮ ನುಡಿ ಕನ್ನಡದ ಮತ್ತೊಂದು ಹಬ್ಬ ಬಂದಿದೆ. ಎಲ್ಲರಿಗೂ ಶುಭ ಹಾರೈಕೆಗಳು.

ಮೈಸೂರು ವಿಶ್ವವಿದ್ಯಾನಿಲಯದವರು ಹತ್ತು ವರ್ಷಗಳ ಹಿಂದೆ ವಿಶ್ವಕೋಶವೊಂದನ್ನು ಪ್ರಕಟಿಸಿದ್ದರು. ಅದರಲ್ಲಿನ ಅನೇಕ ಸಂಪುಟಗಳಲ್ಲಿ ಸುಮಾರು ಹದಿನೈದು ಸಾವಿರ ಜ್ಞಾನ ಲೇಖನಗಳು ಇದ್ದವು. ಅವನು ಅನೇಕ ವಿದ್ವಾಂಸರು ಬರೆದಿದ್ದರು. ಆದರೆ ಈ ಬೃಹತ್ ಗಾತ್ರದ ಹದಿನಾಲ್ಕೋ ಹದಿನೈದೋ ಸಂಪುಟಗಳನ್ನು ಕೊಂಡು ಅದರಲ್ಲಿ ಬೇಕಾದ ಮಾಹಿತಿಬರಹವನ್ನು ಹುಡುಕಿ ಓದುವವರು ಯಾರು ? ಮುದ್ರಿತ ಮಾಹಿತಿಯು ಕ್ರಮೇಣ ಹಳತು ಆಗುತ್ತದೆ. ಅದರ ಪರಿಷ್ಕರಣೆ ಆಗುವುದು , ಅದು ಮುದ್ರಣ ಆಗಿ ಜನರನ್ನು ತಲುಪುವುದು ಯಾವಾಗ ?
ಅಷ್ಟು ಹೊತ್ತಿಗೆ ಅಂತರ್ಜಾಲವೂ ಅದರಲ್ಲಿ ವಿಕಿಪೀಡಿಯವೂ ಶುರುವಾಗಿತ್ತು. ಮನುಕುಲದ ಎಲ್ಲ ಜ್ಞಾನವನ್ನು ಎಲ್ಲಾ ಜನರಿಗೂ ಅವರವರ ಭಾಷೆಯಲ್ಲಿಯೇ ತಲುಪಿಸುವುದು ಅದರ ಗುರಿ. ಯಾರು ಬೇಕಾದರೂ ಅದರಲ್ಲಿ ಮಾಹಿತಿ ಸೇರಿಸಬಹುದು , ಪರಿಷ್ಕರಿಸಬಹುದು,

ಇತ್ತ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದ ಮಾಹಿತಿಪೂರ್ಣ ಬರಹಗಳನ್ನು ಕನ್ನಡ ವಿಕಿಪೀಡಿಯ ದವರು ಬಳಕೆ ಮಾಡಿಕೊಳ್ಳಲು ಮೈಸೂರು ವಿಶ್ವವಿದ್ಯಾನಿಲಯದವರು ಅನುಮತಿ ಕೊಟ್ಟರು. ಆದರೆ ಇಷ್ಟೊಂದು ಪಠ್ಯವನ್ನು ಕಂಪ್ಯೂಟರ್ ಗೆ ಯೂನಿಕೋಡ್ ಸ್ವರೂಪ ಕ್ಕೆ ಬದಲಾಯಿಸುವುದು ಹೇಗೆ ? ಕನ್ನಡ ವಿಕಿಪೀಡಿಯ ದವರು ಪ್ರತಿ ಪುಟದ scan ಮಾಡಿದ ಇಮೇಜ್ ಅನ್ನು ಒಂದು ಬದಿಯಲ್ಲಿ ಕೊಟ್ಟು ಇನ್ನೊಂದು ಕಡೆ ಆಸಕ್ತ ಸ್ವಯಂಸೇವಕರು ಕೀಇನ್ ಮಾಡಲೂ , ಹಾಗೆ ಕೀ ಇನ್ ಮಾಡಿದ್ದನ್ನು ಪರಿಶೀಲಿಸಲೂ ಕನ್ನಡ ವಿಕಿಸೋರ್ಸ ನಲ್ಲಿ ವ್ಯವಸ್ಥೆ ಮಾಡಿದರು. ಕೆಲವರು ಸ್ವಲ್ಪ ಮಟ್ಟಿಗೆ ಮಾಡಿದರು. ಆದರೆ ಇಷ್ಟೊಂದು ದೊಡ್ಡ ಪ್ರಮಾಣದ ಕೆಲಸ ಆಗುವುದು ಹೇಗೆ ? ಯಾವಾಗ ? ಮಾಡುವವರು ಯಾರು ? ಕಂಪ್ಯೂಟರ್ ಯುಗದಲ್ಲಿ ಕಂಪ್ಯೂಟರ್ ಸೌಲಭ್ಯಗಳನ್ನು ಬಳಸದೇ ಜನ ಕೀ ಇನ್ ಮಾಡಲಿ ಎಂದು ಅಪೇಕ್ಷಿಸುವುದು ಜಾಣತನವೇ ?

ಇದು ಸುಮಾರು ಮೂರು ವರ್ಷಗಳ ಹಿಂದಿನ ಮಾತು. ಆಗ ನಾನು ಅವರು ಕನ್ನಡ ವಿಕಿಸೋರ್ಸ ತಾಣದಲ್ಲಿ ಇಟ್ಟ ಪುಟಗಳ ಒಂದೊಂದೇ ಚಿತ್ರದಿಂದ ಪಠ್ಯವನ್ನು ನಕಲಿಸಬಹುದೆಂದೂ , ಅದನ್ನು ಅಂತರ್ಜಾಲದಲ್ಲಿ http://aravindavk.in/ascii2unicode/ ಎಂಬ ವಿಳಾಸದಲ್ಲಿ ಅರವಿಂದ್ ವಿ. ಕೆ. ಎಂಬುವವರು ಒದಗಿಸಿದ ಸೌಲಭ್ಯ ಬಳಸಿಕೊಂಡು ಯೂನಿಕೋಡ್ ಗೆ ಬದಲಿಸಬಹುದೆಂದೂ ಕಂಡುಕೊಂಡೆನು. ಆದರೆ ಅದು ಬಹುಮಟ್ಟಿಗೆ ಅಂದರೆ ಸುಮಾರು 98 % ಸರಿಯಾಗಿ ಮಾಡುತ್ತಿತ್ತು. ಉಳಿದ ಅಂಶವನ್ನು ನನ್ನ ಚೂರುಪಾರು ಕಂಪ್ಯೂಟರ್ ಪ್ರೋಗ್ರಾಮಿಂಗ್ ಜ್ಞಾನದಿಂದ ಮಾಡಲಾರಂಭಿಸಿದೆ.

ಸ್ವಲ್ಪ ಕಾಲದ ನಂತರ ಕನ್ನಡ ವಿಕಿಪೀಡಿಯದವರೇ ಯೂನಿಕೋಡ್ ಗೆ ಪರಿವರ್ತಿಸಿದ್ದ , ಇನ್ನೂರು ಮುನ್ನೂರು ಪುಟಗಳ ಎರಡು-ಮೂರು ಕಡತಗಳನ್ನು ನನಗೆ ಕೊಟ್ಟರು. ಲೇಖನಗಳನ್ನು ಪ್ರತ್ಯೇಕಿಸಿ , ಸೂಕ್ತ ಅಂತರ್ಜಾಲ ವಿಳಾಸ ಗಳಲ್ಲಿ ಕನ್ನಡ ವಿಕಿಸೋರ್ಸ ಗೆ ಅಪ್ಲೋಡ್ ಮಾಡುವ ಕೆಲಸ ಸ್ವಲ್ಪ ವೇಗವನ್ನು ಹೊಂದಿತು! ಆದರೆ ಅದೇಕೋ ಆ ನಂತರ ಆ ತರಹ ಕಡತಗಳನ್ನು ಅವರಿಗೆ ಕೊಡಲಾಗಲಿಲ್ಲ . ಆದರೆ ಕನ್ನಡ ವಿಕಿಪೀಡಿಯದಲ್ಲೂ ಸಕ್ರಿಯರಾಗಿರುವ ಇನ್ನೊಬ್ಬ ಸಂಪದಿಗರು ಗೆಳೆಯರು ವಿಷಯವಾರು ಪ್ರತ್ಯೇಕಿಸಿದ ಎಲ್ಲಾ ಸುಮಾರು 15000 ಕಡತಗಳನ್ನು ನನನ್ನೊಂದಿಗೆ ಹಂಚಿಕೊಂಡರು ! ಆದರೆ ಅವೆಲ್ಲವೂ ASCII ಸ್ವರೂಪದಲ್ಲೇ ಇದ್ದವು. ಛಲ ಬಿಡದ ವಿಕ್ರಮನಂತೆ ಒಂದೊಂದಾಗಿ ಅವನ್ನು ತರೆದು ಅಲ್ಲಿನ ಪಠ್ಯ ವನ್ನು ನಕಲಿಸಿ ಅರವಿಂದರ ಜಾಲತಾಣದಲ್ಲಿ ಅಂಟಿಸಿ ಅಲ್ಲಿ ಪರಿವರ್ತನೆ ಮಾಡಿ ಅಲ್ಲಿಂದ ನಕಲಿಸಿ ವಿಕಿಸೋರ್ಸ ಗೆ ಅಪ್ಲೋಡ್ ಮಾಡತೊಡಗಿದೆ. ಇದೆಲ್ಲವನ್ನೂ ಮಾಡಿದ್ದು ಬಹುತೇಕ ಮೊಬೈಲ್ ನಲ್ಲೇ , ಬೆಳಿಗ್ಗೆ ಮತ್ತು ಸಂಜೆಯ ಪ್ರಯಾಣದ ವೇಳೆ , ಸುಮಾರು 700 ದಿನ , ದಿನಕ್ಕೆ ಒಂದೆರಡು ಗಂಟೆ! ದಿನಕ್ಕೆ ಇಪ್ಪತ್ತು-ಮೂವತ್ತು ಲೇಖನಗಳನ್ನು ಅಪ್ಲೋಡ್ ಮಾಡುತ್ತ ಬಂದಿದ್ದೇನೆ.
ನಾನು ಈ ಕೆಲಸ ಮಾಡಲು ಆರಂಭಿಸಿದರಾಗ ಅಲ್ಲಿ ಇತರರು ಕೀ ಇನ್ ಮಾಡಿಟ್ಟಿದ್ದ ಲೇಖನಗಳ ಸಂಖ್ಯೆಯನ್ನು ಸರಿಯಾಗಿ ಗಮನಿಸಿಲ್ಲ . ಆದರೆ ಅದು 1500 ರ ಒಳಗೆ ಇತ್ತು ಎಂಬುದಂತೂ ಖಂಡಿತ. ಈ ಸಂಖ್ಯೆಯನ್ನು ಇದೇ 2017ರ ಕನ್ನಡ ರಾಜ್ಯೋತ್ಸವ ದ ವೇಳೆಗೆ ನಾನು 14000 ಅನ್ನು ದಾಟಿಸಿದ್ದೇನೆ.

ಈ ಹದಿನಾಲ್ಕು ಸಾವಿರ ಲೇಖನಗಳಲ್ಲಿ ರಸಾಯನಶಾಸ್ತ್ರ ಮತ್ತು ಗಣಿತಕ್ಕೆ ಸಂಬಂಧಪಟ್ಟ ಸುಮಾರು ಒಂದು ಸಾವಿರ ಲೇಖನಗಳು ಕೆಲ ತಾಂತ್ರಿಕ ಕಾರಣಗಳಿಂದಾಗಿ ಇರುವದಿಲ್ಲವಾದರೂ ಉಳಿದೆಲ್ಲ ವಿಷಯಗಳ ಲೇಖನಗಳು ಬಹುಮಟ್ಟಿಗೆ ಇರುತ್ತವೆ.

ಮುಂದೇನು ?
ಈ ಲೇಖನಗಳನ್ನು ವಿಕಿಪೀಡಿಯ ಶೈಲಿಗೆ ತಕ್ಕಂತೆ ಬದಲಿಸಿ ಮತ್ತು ಇವು ಸುಮಾರು ಹತ್ತು ವರ್ಷಗಳ ಹಿಂದಿನ ವಾದ್ದರಿಂದ ಮಾಹಿತಿಯನ್ನು ಅಗತ್ಯ ಇದ್ದಲ್ಲಿ ಪರಿಷ್ಕರಿಸಿ, ಸಾಧ್ಯವಿದ್ದಲ್ಲಿ ಚಿತ್ರಗಳನ್ನು ಸೇರಿಸಿ, ಮೂಲವನ್ನು ಸ್ಮರಿಸಿ ಕನ್ನಡ ವಿಕಿಪೀಡಿಯದಲ್ಲಿ ಬಳಸಿಕೊಳ್ಳ ಬೇಕಾಗಿದೆ. ಇದನ್ನು ಆಸಕ್ತರು ಯಾರು ಬೇಕಾದರೂ ಮಾಡಬಹುದಾಗಿದೆ.

ನಾನು ಸದ್ಯಕ್ಕೆ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದೇನೆ. ದಿನಕ್ಕೆ ಒಂದೆರಡು ಲೇಖನಗಳಂತೆ ಕನ್ನಡ ವಿಕಿಪೀಡಿಯವನ್ನು ಸಮೃದ್ಧ ಗೊಳಿಸುತ್ತಿದ್ದೇನೆ.ಇದರಿಂದ ಕನ್ನಡಿಗರಿಗೆಲ್ಲೋ, ಕನ್ನಡಕ್ಕೋ, ಕೊಂಚ ಉಪಯೋಗವಾದೀತೆಂದು ನನ್ನ ಎಣಿಕೆ.

Rating
No votes yet