ಕನ್ನಡ ನುಡಿಗೆ ಮುಂದಿನ ದಿಕ್ಕು

ಕನ್ನಡ ನುಡಿಗೆ ಮುಂದಿನ ದಿಕ್ಕು

ಕನ್ನಡಭಾಷೆಯ ಮೇಲಿನ ಸಂಸ್ಕೃತ ಹೊರೆಯನ್ನು ಕಳಚಿಕೊಳ್ಳುವ ವಿಚಾರ ಸಂಪದದ ಒಳಗೂ , ಹೊರಗೂ ನಡೆಯುತ್ತಿದೆ.

ಶ್ರೀ ಕೆ.ವಿ.ನಾರಾಯಣರು ತಮ್ಮ 'ಪದಗತಿ'ಅಂಕಣದಲ್ಲಿ ಹೀಗೆ ಬರೆದಿದ್ದಾರೆ .  

 [quote]ಒಂದೊಮ್ಮೆ ನಾವು ಹಿಡಿದು ಹೋಗುತ್ತಿರುವ ದಾರಿ ತಪ್ಪಾಗಿದ್ದರೆ ಹಿಂದೆ
 ಹೋಗಿ ಸರಿದಾರಿಯನ್ನು ಹಿಡಿಯಬೇಕಲ್ಲವೇ? ಕನ್ನಡ ಪದಗಳನ್ನೇ ಬಳಸುವುದೆಂದರೆ 
ಎಲ್ಲ ಸಂಸ್ಕೃತ ಪದಗಳನ್ನು ಹೊರಗಿಡುವುದೆಂದಲ್ಲ. ಕನ್ನಡ ಪದಗಳನ್ನು ಹೆಚ್ಚಾಗಿ ಬಳಸುವುದು;
 ಸಂಸ್ಕೃತ ಪದಗಳನ್ನು ಬಳಸಿದರೂ ಅವು ಕನ್ನಡದ ನುಡಿಜಾಡಿಗೆ ಹೊಂದಿಕೊಳ್ಳುವಂತೆ ಮಾಡಿ 
ಆಮೇಲೆ ಬಳಸುವುದು ನಮ್ಮ ಮುಂದಿನ ದಾರಿಯಾಗಬೇಕು.ಹೀಗೆ ಸಂಸ್ಕೃತ ಪದಗಳ 
ಸವಾರಿಯಿಂದ ತಪ್ಪಿಸಿಕೊಳ್ಳುವುದರಿಂದ ಮತ್ತೊಂದು ಗೊಂದಲದಿಂದ ಪಾರಾಗಬಹುದು.
 ಅದೆಂದರೆ ಈಗಿರುವ ಮಾತಿನ ಕನ್ನಡ ಮತ್ತು ಬರಹದ ಕನ್ನಡ ಬೇರೆಬೇರೆಯಾಗಿರುವುದನ್ನು 
ತಪ್ಪಿಸಬಹುದು. ಎರಡು ಒಂದೇ ಆಗದಿದ್ದರೂ ಅವುಗಳ ನಡುವೆ ಅಷ್ಟೊಂದು ದೊಡ್ಡ ತೆರಪು 
ಇಲ್ಲದಂತೆ ಮಾಡಬಹುದು. ಈಗ ಇವೆರಡು ಒಂದಕ್ಕೊಂದು ಬೆನ್ನು ಮಾಡಿ ನಡೆದಿವೆ. 
ಮಾತಾಡುವ ಕನ್ನಡಿಗರು ಕನ್ನಡ ಬರಹವನ್ನು ಓದಲು ಹಿಂಜರಿಯುತ್ತಿರುವುದು ಇದರಿಂದಾಗಿಯೇ
ಇರಬೇಕು. ಹೆಚ್ಚು ಜನ ಕನ್ನಡವನ್ನು ಓದ ಬೇಕೆಂದರೆ ಅವರು ಮಾತಾಡುವ ಕನ್ನಡ ಮತ್ತು 
ಓದುತ್ತಿರುವ ಕನ್ನಡಗಳು ಬೇರೆಬೇರೆ ಎನ್ನಿಸಬಾರದಲ್ಲವೇ? ಕನ್ನಡವನ್ನು ಉಳಿಸಬೇಕೆಂದು 
ಪಣತೊಡುತ್ತಿರುವ ನಾವೆಲ್ಲ ಈ ದಿಕ್ಕಿನಲ್ಲಿ ಕೆಲಸ ಮಾಡಬೇಕಲ್ಲವೆ? [\quote] 

ಸಂಪದದಲ್ಲಿ ನಡೆಯುತ್ತಿರುವ ಚರ್ಚೆಗೆ ಇಲ್ಲಿ ಒಂದು ದಿಕ್ಕು ಕಾಣುತ್ತಿರುವಂತಿದೆ.

ನನಗೆ ಬಂದ ವಿಚಾರ ಹೀಗಿದೆ.
ನಾವು ಅಚ್ಚ ಕನ್ನಡದ ಶಬ್ದಗಳಿಗಾಗಿ ನಮ್ಮ ಜನ ಆಡುವ ಮಾತುಗಳನ್ನು ಗಮನಿಸಬೇಕು . ಅಲ್ಲಿ ಅನೇಕ ಅಪ್ಪಟ ಕನ್ನಡದ ಮಾತುಗಳು ಸಿಗುತ್ತವೆ. ಅವುಗಳನ್ನು ಬಳಸಲಾರಂಭಿಸಬೇಕು . ಕನ್ನಡದಲ್ಲಿ ಇರುವ ೪೦ ಬಗೆಗಳು ನಮ್ಮ ನೆರವಿಗೆ ಬಂದೇ ಬರುವದು .

ಸಂಪದದಲ್ಲಿ ಈ ಬಗೆಗಳನ್ನು ಆಡುವ ಗಮನಿಸುವ ಜನರಿಲ್ಲವೇ ? ಅವರೆಲ್ಲ ದಿನಕ್ಕೆ ಒಂದಿಷ್ಟು ಮಾತುಗಳನ್ನು ಏಕೆ ಬರೆಯಬಾರದು ?
ಸಂಸ್ಕೃತವಲ್ಲದ ಶಬ್ದಗಳನ್ನು ಅಲ್ಲಿಂದ
ನಮ್ಮ ಬರೆಯುವ ನುಡಿಗೆ ಏಕೆ ಸೇರಿಸಬಾರದು ?

ಬೆರಳೆಣಿಕೆಯಷ್ಟಾದರೂ ಸರಿ , ಪ್ರಾದೇಶಿಕ ಭಾಷೆಯ ಕತೆ/ಕಾದಂಬರಿಗಳು ಇವೆ . ಅಲ್ಲಿಯೂ ನಾವು ನೋಡಬಹುದಲ್ಲ ?

ನೀವೇನಂತೀರಿ ?

ಉದಾಹರಣೆಗೆ ,

for the time being / ಸದ್ಯಕ್ಕೆ / ತಾತ್ಫುರ್ತಿಕ ಎಂಬುದಕ್ಕೆ 'ಅನಕಾತ' ಒಂದು ಪದ ಧಾರವಾಡ ಕನ್ನಡದಲ್ಲಿದೆ .

ಉದಾ. ಅನಕಾತ ಈ ಸಾಮಾನು ನಿನ್ನ ಹತ್ರನೇ ಇರಲಿ .

ಬೇರೆ ಏನಾದರೂ ಈ ಅರ್ಥದ ಶಬ್ದ ಇದ್ದರೆ ತಿಳಿಸಿ.

ಹೀಗೆಲ್ಲ ನಾವು ಏಕೆ ಮುಂದುವರೆಯಬಾರದು?

Rating
No votes yet

Comments