ಕನ್ನಡ ಸಾಹಿತ್ಯ ಸಮ್ಮೇಳನವಲ್ಲ, ಕನ್ನಡ ಜನ ಸಮ್ಮೇಳನ!

ಕನ್ನಡ ಸಾಹಿತ್ಯ ಸಮ್ಮೇಳನವಲ್ಲ, ಕನ್ನಡ ಜನ ಸಮ್ಮೇಳನ!

ಕನ್ನಡ ಸಾಹಿತ್ಯ ಸಮ್ಮೇಳನವಲ್ಲ, ಕನ್ನಡ ಜನ ಸಮ್ಮೇಳನ!

ಕನ್ನಡಿಗರ ಸ್ವಾಭಿಮಾನ ಮತ್ತೊಮ್ಮೆ ಪ್ರದರ್ಶನವಾಗಿದೆ - ಮೊನ್ನೆ ನಡೆದ ಕನ್ನಡ ರಕ್ಷಣಾ ವೇದಿಕೆಯ ಬೃಹತ್ ಸಮಾವೇಶದಲ್ಲಿ! ಜೈಕಾರ ಹಾಕುವ ಜನಜಂಗುಳಿ, ಕನ್ನಡ ಧ್ವಜಗಳ ಹಾರಾಟ, ಜನಪದ ಕಲಾವಿದರ ಕುಣಿತ, ಸಿನೆಮಾ ನಟನಟಿಯರ ಹಾಜರಾತಿ, ಮಠಾಧೀಶರ ಹಾಗೂ ಕೆಲವು ವೃತ್ತಿಪರ ಭಾಷಣಕಾರರ ಧೀರ ಕರೆಗಳು, ಒಂದಿಷ್ಟು ಸನ್ಮಾನಗಳು, ನಿರ್ಣಯಗಳು ಇವೇ ಸ್ವಾಭಿಮಾನದ ಪ್ರದರ್ಶನ ಎನ್ನುವುದಾದರೆ, ಹಣವಿದ್ದ ಯಾರಾದರೂ ಇದನ್ನೊಂದು ದಂಧೆಯನ್ನಾಗಿ ಮಾಡಿಕೊಂಡು ಇನ್ನೂ ದೊಡ್ಡ ಪ್ರದರ್ಶನಗಳನ್ನು ನಡೆಸಬಹುದು. ಕರ್ನಾಟಕದ ಹೆಚ್ಚೂ ಕಡಿಮೆ ಎಲ್ಲ ಊರುಗಳಲ್ಲೂ ಶಾಖೆಗಳನ್ನು ಹೊಂದುವಷ್ಟು ಹಾಗೂ ಆಗಾಗ್ಗೆ ಕನ್ನಡಕ್ಕೆ ಸಂಬಂಧಿಸಿದಂತಷ್ಟೇ ಅಲ್ಲ, ವಿವಿಧ ಸಾಮಾಜಿಕ ಕಾರಣಗಳಿಗೂ ಪ್ರದರ್ಶನಗಳನ್ನು ನಡೆಸುವಷ್ಟು 'ಸಂಪದ್ಭರಿತ'ವಾಗಿರುವ ಈ ವೇದಿಕೆ, ಕನ್ನಡವನ್ನು ಬೆಳೆಸುವ ಕೆಲಸಕ್ಕಿಂತ ಹೆಚ್ಚಾಗಿ 'ಇತರರ ಆಕ್ರಮಣ'ದಿಂದ ಕನ್ನಡವನ್ನು ರಕ್ಷಿಸುವ ಕೆಲಸಕ್ಕೇ ತನ್ನನ್ನು ತೆತ್ತುಕೊಂಡಂತಿದೆ! ಕನ್ನಿಡಿಗರಿಂದಲೇ ಕನ್ನಡಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮೌನದಿಂದಿರುವ ಈ ವೇದಿಕೆಗೆ ಅನ್ಯಭಾಷಿಕರ ಭಾಷಾಭಿಮಾನವೇ ಸಮಸ್ಯೆಯಾದಂತಿದೆ!

ಕನ್ನಡ ಆಡಳಿತ ಭಾಷೆಯಾಗಲು ಒತ್ತಾಯ ಮಾಡದ, ಕನ್ನಡ ಶಿಕ್ಷಣ ಮಾಧ್ಯಮಕ್ಕಾಗಿ ದನಿ ಎತ್ತದ, ಕನ್ನಡ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಸುವ ಸರ್ಕಾರದ ಕ್ರಮದ ವಿರುದ್ದ ಪ್ರತಿಭಟಿಸದ, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಟಿಕೆಟ್ನಿಂದಲೇ ಕನ್ನಡ ಕಳೆದು ಹೋದ, ಕೇಂದ್ರ ಸರ್ಕಾರ ರೈಲ್ವೇ ಟಿಕೆಟ್ನಿಂದ ಕನ್ನಡವನ್ನು ಹಿಂತೆಗೆದುಕೊಂಡ ಬಗೆಗೆ ಸಾಂಕೇತಿಕ ಪ್ರತಿಭಟನೆ ನಡೆಸಿ ಸುಮ್ಮನಾದ ಈ ವೇದಿಕೆಗೆ, ಕನ್ನಡ ಅಭಿಮಾನದ ಪ್ರದರ್ಶನವೆಂದರೆ ಅನ್ಯಭಾಷಿಕರ ಭಾಷಾಭಿಮಾನ ಪ್ರದರ್ಶನದ ಹಕ್ಕನ್ನು ಪ್ರಜಾಪ್ರಭುತ್ವ ವಿರೋಧಿ ವಿಧಾನಗಳ ಮೂಲಕ ಹತ್ತಿಕ್ಕುವ ಪೌರುಷವೇ ಆಗಿದೆ. ನಾವು ಕನ್ನಡಿಗರು, ಕನ್ನಡವನ್ನು ಎಲ್ಲ ಹಂತಗಳಲ್ಲಿ ಆಡಳಿತ ಭಾಷೆಯನ್ನಾಗಿ, ಶಿಕ್ಷಣ ಮಾಧ್ಯಮವನ್ನಾಗಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಗಣಕ ಯಂತ್ರಗಳ ಭಾಷೆಯನ್ನಾಗಿ ಬೆಳಸಿ ಬಳಸದ ಹೊರತು, ಕನ್ನಡ ಸ್ವಾಭಿಮಾನದ ಹೆಸರಲ್ಲಿ ಎಂತಹುದೇ ಬೃಹತ್ ಪ್ರದರ್ಶನ ನಡೆಸಿದರೂ, ರಾಜ್ಯದ ಅನ್ಯಭಾಷಿಕರ ಭಾಷಾಭಿಮಾನದ ವಿರುದ್ಧ ಎಂತಹ ದಾಳಿ ನಡೆಸಿದರೂ, ಕನ್ನಡ ಉಳಿಯುವುದಿಲ್ಲ ಎಂಬ ಪ್ರಾಥಮಿಕ ಅರಿವೇ ಇವರಿಗೆ ಇಲ್ಲವಾಗಿದೆ. ದಿನೇ ದಿನೇ ಕನ್ನಡಿಗರೇ ಕನ್ನಡವನ್ನು ಒಂದೊಂದೇ ಕ್ಷೇತ್ರದಿಂದ ಕೈಬಿಡುತ್ತಿರುವುದರ ಹಿಂದಿನ ಕಾರಣಗಳಾದರೂ ಏನು ಎಂಬ ಆತ್ಮನಿರೀಕ್ಷ್ಷಣೆಯ ಪ್ರಶ್ನೆಯನ್ನೂ ಹಾಕಿಕೊಳ್ಳಲಾಗದಷ್ಟು ಸ್ವಯಂವ್ಯಸನಕ್ಕೀಡಾಗಿರುವ ಕನ್ನಡ ಚಳುವಳಿ, ಕನ್ನಡಕ್ಕೆ ಸಂಬಂಧಿಸಿದಂತೆ ಶಾಸ್ತ್ರೀಯ ಭಾಷಾ ಸ್ಥಾನಮಾನದಂತಹ ಬರೀ ತೊಗಟೆಯ ವಿಷಯಗಳನ್ನಷ್ಟೇ ಹಿಡಿದು ಕೂಗಾಡುತ್ತಿರುವುದು ಅದರ ಮನಸ್ಸು ಇನ್ನೂ ಮಧ್ಯಯುಗೀನತೆಯಲ್ಲೇ ಸಿಕ್ಕಿಹಾಕಿಕೊಂಡಿರುವುದನ್ನು ತೋರಿಸುತ್ತದಷ್ಟೆ. ಕನ್ನಡಿಗರೇ ಆತ್ಮತಃ ಕನ್ನಡೇತರರಾಗುತ್ತಿರುವಾಗ ಕನ್ನಡದ ರಕ್ಷಣೆ ಯಾರಿಗಾಗಿ, ಯಾರಿಂದ?

ಈ ವಿಷಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಗಂಭೀರವಾಗಿ ಯೋಚಿಸಿದಂತಿಲ್ಲ. ಅದೂ ಆಗಾಗ್ಗೆ ಈ ತೊಗಟೆ ಚಳುವಳಿಕಾರರ ಜೊತೆಗೇ ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ಅಸಹಾಯಕವಾಗಿದೆ, ದುರ್ಬಲವಾಗಿದೆ! ವರ್ಷಕ್ಕೊಮ್ಮೆ ನಡೆಸುವ ಸಾಹಿತ್ಯ ಸಮ್ಮೇಳನಗಳ ಹೊರತಾಗಿ ಅದರಿಂದ ಕನ್ನಡದ ಕೆಲಸವೆಂದು ಕರೆಯಬಹುದಾದ ಯಾವ ಕೆಲಸವೂ ನಡೆಯುತ್ತಿಲ್ಲ. ಅದರ ಸ್ಥಳೀಯ ಶಾಖೆಗಳಂತೂ, ಆಡಳಿತ ಮಾಧ್ಯಮ, ಶಿಕ್ಷಣ ಮಾಧ್ಯಮ, ಗಣಕ ಮಾಧ್ಯಮದಂತಹ ಪ್ರಾಣದಾಯಿ ವಿಷಯಗಳ ಪರಿವೆಯೇ ಇಲ್ಲದಂತೆ, ದತ್ತಿ ಉಪನ್ಯಾಸ, ವಸಂತೋತ್ಸವ, ಸಾಹಿತ್ಯ ಹುಣ್ಣಿಮೆಗಳಂತಹ ಸ್ಥಳಿಯ ಪುಢಾರಿಗಳನ್ನು ಒಲೈಸುವ ಪುಡಿ ಕಾರ್ಯಕ್ರಮಗಳನ್ನಷ್ಟೇ ಹಾಕಿಕೊಂಡು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಸಾರಿಕೊಳ್ಳಲು ಯತ್ನಿಸುತ್ತಿವೆ. ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಸರ್ಕಾರದ ಕ್ರಮದ ವಿರುದ್ದ ದೊಡ್ಡ ಗುಟುರು ಹಾಕಿದ ಸಾಹಿತ್ಯ ಪರಿಷತ್ತು ನಂತರ ಮಾಡಿದ್ದಾದರೂ ಏನು?

ಈಗ ಸಾಹಿತ್ಯ ಪರಿಷತ್ತು ಉಡುಪಿಯಲ್ಲಿ ಮತ್ತೊಂದು ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ನಡೆಸಿದೆ. ಇದಕ್ಕೆ ಪ್ರತಿಯಾಗಿ ಕೆಲವು ಸ್ಥಳೀಯರು 'ಸೌಹಾರ್ದ ಸಾಹಿತ್ಯ ಸಮ್ಮೇಳನ' ನಡೆಸಲು ಹೊರಟಿದ್ದಾರೆ. ಅಂದರೆ ಪರಿಷತ್ತಿನ ಸಮ್ಮೇಳನದಲ್ಲಿ ಸೌಹಾರ್ದದ ಕೊರತೆ ಇದೆ ಎಂದೆ? ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳ ವಿರುದ್ಧ ಸಮ್ಮೇಳನ ನಡೆಸುತ್ತಿರುವುದು ಇದು ಮೊದಲ ಸಲವೇನಲ್ಲ. ಮೊದಲ ಬಂಡಾಯ ಸಮ್ಮೇಳನದ ಪೌರೋಹಿತ್ಯ ವಹಿಸಿದ್ದವರೇ ಇಂದು ಪರಿಷತ್ತಿನ ಸಮ್ಮೇಳನದ ಪೌರೋಹಿತ್ಯ ವಹಿಸಿದ್ದರೂ, ಈ ಬಂಡಾಯದ ಹಾವಳಿ ನಿಂತಿಲ್ಲವೆಂದರೆ, ಪರಿಷತ್ತಿನ ಮೂಲ ಸ್ವರೂಪದಲ್ಲೇ ಏನೋ ಐಬಿದೆ ಎಂದರ್ಥ. ಅದು ಬದಲಾದ ಕಾಲ ಸಂದರ್ಭಕ್ಕೆ ತನ್ನನ್ನು ಒಗ್ಗಿಸಿಕೊಳ್ಳಲು ನಿರಾಕರಿಸುವಂತಹ ಮೂಲ ಜಡತೆ ಅದರಲ್ಲಿದ್ದಂತಿದೆ. ಈಚಿನ ವರ್ಷಗಳಲ್ಲಿ ಇದರ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ, ಅದರಲ್ಲಿ ನಡೆಯುವ ವಿವಿಧ ರೀತಿಯ ಚಿತಾವಣೆಗಳನ್ನು ಗಮನಿಸಿದವರಾರಿಗೂ ಪರಿಷತ್ತಿನ ಪದಾಧಿಕಾರಿಗಳ ಬಗ್ಗೆ ಗೌರವ ಮೂಡಲಾರದು.

ಆದರೂ ಇದು ನಡೆಸುವ ಸಮ್ಮೇಳನಗಳಿಗೆ ಜನ ಮುಗಿ ಬೀಳುತ್ತಾರೆ. ಕಾರಣ ಅದನ್ನು ಒಂದು ಜನ ಜಾತ್ರೆಯಂತೆಯೇ ಏರ್ಪಡಿಸಲಾಗುತ್ತಿದೆ. ಸರ್ಕಾರದಿಂದ ಕೋಟ್ಯಾಂತರ ಧನ ಸಹಾಯ ಪಡೆದು ಏರ್ಪಾಡಾಗುವ ಈ ವಾರ್ಷಿಕ ಸಾಹಿತ್ಯ ಜಾತ್ರೆ ಬಹುಶಃ ಕರ್ನಾಟಕಕ್ಕೇ ವಿಶಿಷ್ಟವಾದದ್ದು. ಬೇರೆ ಯಾವ ರಾಜ್ಯದಲ್ಲೂ ಸಾಹಿತ್ಯದ ಹೆಸರಲ್ಲಿ ಈ ಪ್ರಮಾಣದಲ್ಲಿ ಜನ ಸೇರುವುದಿಲ್ಲ. ಸೇರಿದರೆ ಸಾಹಿತಿಗಳಷ್ಟೇ ಸೇರುವುದು. ಆದರೆ ನಮ್ಮ ಸಾಹಿತ್ಯ ಸಮ್ಮೇಳನಗಳಿಗೆ ಸಾಹಿತಿಗಳಿಗಿಂತ ಸಾರ್ವಜನಿಕರೇ ಹೆಚ್ಚು ಸೇರುವುದು. ಅದೂ ಲಕ್ಷ ಲಕ್ಷಗಟ್ಟಲೆ! ಸರ್ಕಾರಿ ನೌಕರರಿಗೆ 'ರಜೆ' ಸೌಲಭ್ಯವನ್ನೂ ಒದಗಿಸುವುದರಿಂದ ಬಹುಜನಕ್ಕೆ ಇದು ವಾರ್ಷಿಕ ಸಾಂಸ್ಕೃತಿಕ ವಿಹಾರ ಯಾತ್ರೆಯೂ ಹೌದು. ನಾಲ್ಕಾರು ವರ್ಷಗಳ ಹಿಂದೆ ತುಮಕೂರು ಸಾಹಿತ್ಯ ಸಮ್ಮೇಳನಕ್ಕಾಗಿ ಸರ್ಕಾರಿ ನೌಕರರಿಂದ ದೇಣಿಗೆ ಪಡೆದದ್ದೇ ತಪ್ಪಾದಂತೆ, ಅವರ ದೂರದೂರಿನ ಬಂಧು - ಬಾಂಧವರೂ ಸಮ್ಮೇಳನಕ್ಕೆ ಮುಗಿ ಬಿದ್ದು ಊಟ - ತಿಂಡಿಗಳ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿದ್ದನ್ನು ನೆನಪಿಸಿಕೊಳ್ಳಬಹುದು.

ಸಾಹಿತ್ಯ ಸಮ್ಮೇಳನದ ನಿಜವಾದ ಆಕರ್ಷಣೆ ಎಂದರೆ ಊಟ ತಿಂಡಿಗಳೇ! ಸಮ್ಮೇಳನದ ಸಾಹಿತ್ಯ ಕಾರ್ಯಕ್ರಮಗಳಿಗಿಂತ ಮುಂಚೆ ಪ್ರಚಾರ ಸಿಗುವುದು ಸಮ್ಮೇಳನದ ವಿಶಿಷ್ಟ ಭಕ್ಷ್ಯ ಭೋಜ್ಯಗಳಿಗೇ! ಹಾಗಾಗಿಯೇ, ನಾಲಿಗೆ ರುಚಿಯ ಮುದುಕ ಮುದುಕಿಯರು ಸುಲಭ ದರದಲ್ಲಿ ಭಕ್ಷ್ಯ ಭೋಜ್ಯ ಸವಿಯುವ ದೃಷ್ಟಿಯಿಂದ ನೂರಾರು ಮೈಲಿಗಳ ದೂರದಿಂದ ಸಮ್ಮೇಳನಕ್ಕಿಂತ ಒಂದೆರಡು ದಿನ ಮುಂಚೆಯೇ ಹಾಜರಾಗಿ ಊಟ - ವಸತಿಗಳಿಗಾಗಿ ಸ್ಥಳೀಯ ಸಂಘಟಕರನ್ನು ಕಾಡುವುದು ಪ್ರತಿ ಸಮ್ಮೇಳನದಲ್ಲೂ ಸಾಮಾನ್ಯ ದೃಶ್ಯ! ಹೋದ ಬಾರಿಯ ಶಿವಮೊಗ್ಗ ಸಮ್ಮೇಳನ ನಮ್ಮ ಹಿರಿಯ ಜಾನಪದ ತಜ್ಞ ಮುದೇನೂರು ಸಂಗಣ್ಣ ಅವರ ಮಾತುಗಳಲ್ಲೇ ಹೇಳುವುದಾದರೆ, 'ದೆವ್ವನಂತಹ ಸಮ್ಮೇಳನ'! ಆ ಜನ, ಆ ಧೂಳು, ಆ ವಿವಾದ, ಆ ಹೊಡೆದಾಟ, ಆ ಪೋಲೀಸು, ಆ ಊಟ, ಅದಕ್ಕಾಗಿ ಆ ಉದ್ದನೆ ಸರತಿ ಸಾಲು, ನಿದ್ದೆಯಲ್ಲಿದ್ದ ಜನರಿಗೆ ತೊಂದರೆ ಕೊಡುತ್ತ ಬೆಳಗಿನ ಜಾವದವರೆಗೆ ನಡೆದ ಆ ಬುರ್ನಾಸು ಕವಿಗೋಷ್ಠಿ , ಪುಸ್ತಕ ಹಾಗೂ ಬಟ್ಟೆಯಂಗಡಿಗಳಲ್ಲಿ ನಡೆದ ವ್ಯಾಪಾರ ಹಾಗೂ ಕಳ್ಳತನದ - ಹೀಗೆ ಎಲ್ಲ ವಿಷಯಗಳಲ್ಲೂ ದಾಖಲೆ ನಿರ್ಮಿಸಿದ ಸಮ್ಮೇಳನವದು. ಇಲ್ಲಿ ಯಾರಿಗೂ ವಿಚಾರ ಮುಖ್ಯವಿರಲಿಲ್ಲ. ಸದ್ದು - ಗದ್ದಲ - ಸಡಗರ - ಸಂಭ್ರಮ ಮುಖ್ಯ. ಊಟ - ನಿದ್ದೆ - ವಿಚಾರ - ಗ ದ್ದಲ - ಜಗಳ - ವ್ಯಾಪಾರ - ಕಳ್ಳತನ ಒಟ್ಟಿಗೇ ನಡೆಯುವ ಇಲ್ಲಿ ಯಾರೋ ಭಾಷಣ ಮಾಡುತ್ತಿರುತ್ತಾರೆ, ಯಾರದೋ ಪುಸ್ತಕ ಬಿಡುಗಡೆಯಾಗುತ್ತಿರುತ್ತದೆ, ಯಾರಿಗೋ ಸನ್ಮಾನ ನಡೆದಿರುತ್ತದೆ, ಯಾರೋ ನಿರ್ಣಯ ಓದುತ್ತಿರುತ್ತಾರೆ, ಯಾರೋ ಚಪ್ಪಾಳೆ ತಟ್ಟಿ ಅನುಮೋದಿಸುತ್ತಿರುತ್ತಾರೆ, ಯಾರೋ ಸಮಾರೋಪ ಭಾಷಣ ಮಾಡುತ್ತಿರುತ್ತಾರೆ. ಜನ ಸುಮ್ಮನೆ ನಿದ್ದೆಗಣ್ಣಲ್ಲೋ ಬೆರಗುಗಣ್ಣಲ್ಲೋ ನೋಡುತ್ತಿರುತ್ತಾರೆ. ಎಚ್ಚರ ಕಾಪಾಡಿಕೊಳ್ಳಲು ಆಗಾಗ್ಗೆ ತಾವೂ ಚಪ್ಪಾಳೆ ತಟ್ಟುತ್ತಿರುತ್ತಾರೆ.

ಹೀಗಾಗಿ ಸಾಹಿತ್ಯ ಸಮ್ಮೇಳನವೆಂದರೆ ಜನ ಸಾಮಾನ್ಯರೂ ಆನಂದಿಸಬಲ್ಲ ಒಂದು ಯಶಸ್ವಿ ಅಸಂಗತ ನಾಟಕವಿದ್ದಂತೆ. ಆದರೂ ನನ್ನಂತಹವರು ಇಷ್ಟಪಟ್ಟು ಸಾಹಿತ್ಯ ಸಮ್ಮೇಳನಕ್ಕೆ ಹೋಗುತ್ತೇವೆ. ಜೀವನದಲ್ಲಿ ಆಗಾಗ್ಗೆ ಇಂತಹ ಅಸಂಗತ ಸಂಭ್ರಮ - ಸಂತೋಷಗಳು ಅಗತ್ಯವಾದ್ದರಿಂದ. ಅಲ್ಲಿ ಕರ್ನಾಟಕದ ವೈವಿಧ್ಯಮಯ ಭೌತಿಕ, ಸಾಮಾಜಿಕ, ಸಾಂಸ್ಕೃತಿಕ ರೂಪಗಳು ಎದುರಾಗುತ್ತವೆ. ಅಲ್ಲಿ ತಮ್ಮ ಪುಸ್ತಕ, ಔಷಧಿ, ಬಟ್ಟೆ ಇತ್ಯಾದಿಗಳನ್ನು ಮಾರಾಟ ಮಾಡಲು ಬರುವ ಜನರನ್ನು ಜನರನ್ನು ಗಮನಿಸುವುದೇ ಒಂದು ಮೋಜಿನ ಸಂಗತಿ. ಇನ್ನು ವಿಚಾರಗಳಿಗೆ, ವಿವಾದಗಳಿಗೆ, ಕಾವ್ಯಕ್ಕೆ, ಪುಸ್ತಕಗಳಿಗೆ ಜನಸ್ತೋಮ ಪ್ರತಿಕ್ರಿಯಿಸುವ ರೀತಿ - ನೀತಿಗಳನ್ನು ನೋಡುವುದೇ ಇನ್ನೊಂದು ಮೋಜು! ಬಹುದಿನಗಳಿಂದ ಕಾಣದ ಸ್ನೇಹಿತರನ್ನು ಕಾಣಲು, ನಮ್ಮೂರಿನಲ್ಲಿ ಸಿಗದ ಪುಸ್ತಕ ಕೊಳ್ಳಲು, ಎಲ್ಲೋ ಓದಿ ಮೆಚ್ಚಿದ್ದ ಲೇಖಕರ ಮುಖ ದರ್ಶನ ಮಾಡಲು - ಸಾಧ್ಯವಾದರೆ ಮಾತಾಡಿಸಲು, ಸಹನೆ ಹಾಗೂ ತ್ರಾಣ ಇದ್ದರೆ ಸುಲಭ ದರದಲ್ಲಿ ಭಕ್ಷ್ಯ ಭೋಜ್ಯ ಸವಿಯಲು - ಹೀಗೆ ವಿವಿಧ ಉದ್ದೇಶಗಳಿಂದ ಜನ ಬರುತ್ತಾರೆ. ಹಾಗೆ ನೋಡಿದರೆ ಇದನ್ನು ಕನ್ನಡ ಸಾಹಿತ್ಯ ಸಮ್ಮೇಳನವೆಂದು ಕರೆಯುವುದು ಉಚಿತವಾಗಲಾರದು. ಇದು ಕರ್ನಾಟಕ ಜನ ಸಮ್ಮೇಳನ. ಇದನ್ನು ಹಾಗೆಂದು ಭಾವಿಸಿ ಬರುವುದೇ ಒಳ್ಳೆಯದು. ಈ ಬಾರಿಯ ಸಮ್ಮೇಳನದ ಕಾರ್ಯಕ್ರಮಗಳು ಹಾಗೂ ಆಹ್ವಾನ ಪತ್ರಿಕೆಯಲ್ಲಿನ ಅಸಂಖ್ಯಾತ ತಪ್ಪು - ಒಪ್ಪುಗಳೂ ಇದನ್ನು ಸಮರ್ಥಿಸುತ್ತಿರುವಂತೆಯೇ ಇರುವುದು ಒಂದು ವಿಶೇಷ!

ಪರಿಸ್ಥಿತಿ ಹೀಗಿರುವಾಗ, ಕೆಲವು ಗೆಳೆಯರು ಉಡುಪಿಯಲ್ಲಿ ಪ್ರತಿ ಸಮ್ಮೇಳನವೊಂದನ್ನು ಏಕೆ ಮಾಡಹೊರಟಿರುವರೋ ತಿಳಿಯದು! ಸ್ಥಳೀಯ ಸಂಘಟಕರು ಒಂದು ರಾಜಕೀಯ ನಿಲುವಿಗೆ ಬದ್ಧರಾದವರೆಂದೇ? ಹಾಗಾದರೆ, ಪ್ರತಿ ಸಮ್ಮೇಳನ ಮಾಡಹೊರಟಿರುವವರು? ಇವರು ಪರಿಷತ್ತಿನ ಸಮ್ಮೇಳನಕ್ಕೆ ಸಲ್ಲದ ರಾಜಕೀಯ ಹಾಗೂ ಸಾಂಸ್ಕೃತಿಕ ಮಹತ್ವ ಕೊಟ್ಟು ತಾವೂ ಮಹತ್ವ ಪಡೆಯಲು ಹೊರಟಂತಿದೆ. ಹಾಗೆ ನೋಡಿದರೆ, ಈ ಪ್ರತಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಮಹನೀಯರ ಸಾಹಿತ್ಯಿಕ ಮಹತ್ವವಾದರೂ ಏನು? ಇಂತಹ ಅಸಾಹಿತ್ಯಕ ನೆಲೆಯ ಸವಾಲಿನಿಂದ ಸಾಹಿತ್ಯ ಸಮ್ಮೇಳನದ ಗುಣಮಟ್ಟವನ್ನು ಸುಧಾರಿಸಲು ಸಾಧ್ಯವೇ? ಅಥವಾ ಇವರ ಉದ್ದೇಶವೇ ಬೇರೆ ಏನಾದರೂ ಇದೆಯೇ? ಕಾದು ನೋಡಬೇಕು. ಆದರೆ ಕರ್ನಾಟಕದ ಈ ವಿಶಿಷ್ಟ ಜನ ಜಾತ್ರೆ, ಸಮ್ಮೇಳನದಿಂದ ಸಮ್ಮೇಳನಕ್ಕೆ ರಾಜಕೀಯ ಮೇಲಾಟದ ವೇದಿಕೆಯಾಗಿ ಪರಿವರ್ತಿತವಾಗುತ್ತಿರುವುದು ಮಾತ್ರ ದುರದೃಷ್ಟಕರ.

ಅಂದಹಾಗೆ: ಸಾಹಿತ್ಯ ಸಮ್ಮೇಳನ ಆರಂಭವಾಗುವ ಮುನ್ನವೇ ಅದಕ್ಕೆ ಪೂರ್ವಭಾವಿಯಾಗಿ ಜನರನ್ನು ಸಿದ್ಧಗೊಳಿಸಲೆಂಬಂತೆ, ಉಡುಪಿಯಲ್ಲಿ ಅಸಂಗತ ನಾಟಕವೊಂದು ಆರಂಭವಾಗಿದೆ. ಸಾಗರೋಲ್ಲಂಘನೆ (ಅಂದರೆ ಸಮುದ್ರ ದಾಟಿ ವಿದೇಶಕ್ಕೆ ಹೋಗಿ ಬಂದವರೆಂದು) ಮಾಡಿದವರೆಂದು ಪರ್ಯಾಯ ಪೀಠಾರೋಹಣ ಮಾಡಬೇಕಾದ ಒಬ್ಬ ಸ್ವಾಮಿಗೆ ಕೃಷ್ಣ ಪೂಜೆಯ ಹಕ್ಕನ್ನು ನಿರಾಕರಿಸಲಾಗುತ್ತಿದೆ! ಯಾವ ಕಾಲದಲ್ಲದ್ದಾರೆ ಇವರು? ಧರ್ಮವೆಂದರೆ, ಯಾವುದೋ ಪ್ರಾಚೀನ ಕಾಲದ ಶಾಸ್ತ್ರಾಚಾರವಷ್ಟೆ ಎಂದು ನಂಬಿದಂತೆ ತೋರುವ ಈ ಉಡುಪಿ ಮಠದ ಪ್ರಭುತ್ವ, ಸಾಮಾನ್ಯ ಪರಿಜ್ಞಾನವುಳ್ಳ ಸಾರ್ವಜನಿಕರೆದರು ನಗೆಪಾಟಲಿಗೆ ಈಡಾಗಿರುವುದು ಸಹಜವೇ ಆಗಿದೆ. ಉಡುಪಿ ಅಷ್ಟ ಮಠಗಳಲ್ಲಿ ಬಹುದಿನಗಳಿಂದಲೂ ಆಗುತ್ತಿರುವ ಸಂನ್ಯಾಸ ಧರ್ಮದ ವಿವಿಧ ರೀತಿಯ ಬಹಿರಂಗ ಉಲ್ಲಂಘನೆಗಳ ಮುಂದೆ ಸಾಗರೋಲ್ಲಂಘನೆ ಯಾವ ದೊಡ್ಡ ಅಪರಾಧ? ಹಿಂದೂ ಧರ್ಮ ಪರಿಪಾಲಕರೆಂದು ಹೇಳಿಕೊಳ್ಳುವ ಪೇಜಾವರರು ಈ ವಿಷಯದಲ್ಲಿ ಅನಗತ್ಯವಾಗಿ ಹಠಕ್ಕೆ ಬಿದ್ದಿರುವ ಮೂಲಕ ತಮ್ಮ ಹಿಂದೂ ಧರ್ಮ ಇನ್ನೂ ಎಷ್ಟು ಮೂಢ, ಭೋಳೆ ಹಗೂ ಆತ್ಮದ್ರೋಹಿ ಧರ್ಮವಾಗಿದೆ ಎಂದು ಹೆಮ್ಮೆಯಿಂದ ಸಾರಿ ಹೇಳುತ್ತಿದ್ದಾರಷ್ಟೆ! ಉಡುಪಿ ಅಷ್ಟ ಮಠದ ಆವರಣದಲ್ಲಿ ಇತ್ತೀಚೆಗೆ ಜನ್ಮಾಷ್ಟಮಿ ಸಂದರ್ಭದಲ್ಲಿ ಒಬ್ಬ ಸ್ವಾಮಿ 'ಅನಿಸುತಿದೆ ಯಾಕೋ ಇಂದು' ಎಂದು ಬ್ಯಾಂಡ್ ಬಜಾಯಿಸಿದಾಗಲೇ, ಪೇಜಾವವರು ನಂಬುವ ಧಾರ್ಮಿಕ ಮರ್ಯಾದೆ ಚಿಂದಿ ಚಿಂದಿಯಾಗಿ ಹೋಗಿದೆ. ಹೀಗಿರುವಾಗ ಮಠದ ಇನ್ನಾವ ಮರ್ಯಾದೆ ಉಳಿಸಿಕೊಳ್ಳಲು ಈ ಎಲ್ಲ ಜಿಜ್ಞಾಸೆಯ ನಾಟಕ?

Rating
No votes yet