ಕಪ್ಪು ಹುಲಿ
ವಿಶ್ವದ ಆಗ್ರ ಶ್ರೇಯಾಂಕದ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಈಗ ಸುದ್ದಿಯಲ್ಲಿ. ಗಾಲ್ಫ್ ಮೈದಾನದಲ್ಲಿ ತನ್ನ ಅಪೂರ್ವ ಪ್ರತಿಭೆ ಪ್ರದರ್ಶಿಸುವ ಮೂಲಕ ಅಲ್ಲ, ಬದಲಿಗೆ ಲಲನಾಮಣಿಗಳ ಹಿಂದೆ ಹೋಗಿದ್ದಕ್ಕೆ. ವುಡ್ಸ್ ವಿವಾಹಿತ, ೨ ಪುಟಾಣಿಗಳ ತಂದೆ. ಆದರೆ ಇದರಲ್ಲೇನು ವಿಶೇಷ, ಬಿಳಿಯರಿಗೆ ಇದು ಮಾಮೂಲು ಎಂದಿರಾ? ನನ್ನ ಧರ್ಮ ಪತ್ನಿಯೂ ಇದನ್ನೇ ಹೇಳಿದ್ದು, ಅವರಿಗೆ ಇದು ಮಾಮೂಲಿ ಅಂತ. ಇದಕ್ಕೇ stereotype ಅನ್ನೋದು. ಈ stereotype ಗಳಿಂದಲೇ ಪ್ರಪಂಚದಲ್ಲಿ ಇಷ್ಟೊಂದು ಅನಾಹುತ, ಕೋಲಾಹಲ. ಪರಸ್ಪರರಲ್ಲಿ ಶಂಕೆ, ಸಂಶಯ. ಬಿಳಿಯರಲ್ಲೂ ಸತಿ ಸಾವಿತ್ರಿಯರೂ, ಏಕ ಪತ್ನೀ ವೃತಸ್ಥರೂ ಇದ್ದಾರೆ. ಆದರೆ ನಾವು ಕಾದಂಬರಿಗಳನ್ನೂ, ಆಂಗ್ಲ ಮೂವಿಗಳನ್ನೂ, ಮಾಧ್ಯಮಗಳು ಬಡಿಸುವುದನ್ನೂ ಕೇಳಿಯೇ ಅಲ್ಲವೇ ನಿರ್ಣಯಕ್ಕೆ ಬರೋದು. ಅದಿರಲಿ ಈಗ, ಪ್ರಶ್ನೆ ಇರೋದು ಅದಲ್ಲ. ಟೈಗರ್ ಎಬ್ಬಿಸಿದ ರಾದ್ಧಾಂತದ ಬಗ್ಗೆ. ಈ ಹುಲಿಗಳೇ ಹೀಗೆ ಏನೋ? "ಧರಣಿ ಮಂಡಲ..." ದ ಹುಲಿ ಗೋವಿನ ಹಿಂದೆ ಹೋಗಿ ಕೊನೆಗೆ ತನ್ನ ಪ್ರಾಣ ತೆಗೆದುಕೊಳ್ಳುವಂತಾಗಿದ್ದು, ಕಳೆದ ವರ್ಷ ಅರವಿಂದ ಅಡಿಗ ಬರೆದ "ಬಿಳಿ ಹುಲಿ" ಕಾದಂಬರಿ ನಮ್ಮ ದೇಶದ ಮಾನ ಹರಾಜಿಗೆ ಹಾಕಿದ್ದು, ಈಗ ನೋಡಿದರೆ ಗಾಲ್ಫ್ ಹುಲಿಯ ಪ್ರಣಯ. ಮತ್ತೆ ಈ ಹುಲಿಯ ಆಟ ಎಲ್ಲರಿಗೂ ಆಸಕ್ತವಾಗಲೂ ಒಂದು ಕಾರಣ ಇದೆ. ಅದೆಂದರೆ ಈ ಹುಲಿ ಬಣ್ಣದಲ್ಲಿ ಕಪ್ಪು. black american. ನಮ್ಮ ಅಮೆರಿಕೆಯ ಅಧ್ಯಕ್ಷ ಮಹೋದಯರ ಪೈಕಿಯವನು. ಈ ಪೈಕಿಯವರು ಏನು ಮಾಡಿದರೂ ಸುದ್ದಿ, ಅದರಲ್ಲೂ ಎಡವಟ್ಟು ಮಾಡಿಕೊಂಡರಂತೂ ಕೇಳಬೇಡಿ, ಮಾಧ್ಯಮದವರಿಗೆ ಸುಗ್ಗಿಯೋ ಸುಗ್ಗಿ. ಇವರು ಹುಟ್ಟಿರೋದೇ ತಪ್ಪು ಮಾಡಲು ಎಂದು ಬಿಂಬಿಸಿ ಬಿಡುತ್ತಾರೆ. ಕ್ಷಮಿಸಿ, ವಿಷಯಕ್ಕಿಂತ ಹೆಚ್ಚು ವಿಷಯಾಂತರ ಆಗ್ತಾ ಇದೆ. ಟೈಗರ್ ವುಡ್ಸ್ PGA TOUR ( ಗಾಲ್ಫ್ ಆಟಗಾರರು ಹೋಗುವ ಟೂರ್, ನಮ್ಮ ಕ್ರಿಕೆಟಿಗರು "ಸೀರೀಸ್" ಅಂತ ಹೋಗ್ತಾರಲ್ಲ ಹಾಗೆ ) ಮೇಲೆ ಹೋದಾಗ ಕಣ್ಣಿಗೆ ಬಿದ್ದಿರಬೇಕು ಲಲನೆಯರು. ಪಾಪ ಆತನೂ ಉಪ್ಪು ಹುಳಿ ತಿಂದು ಬೆಳೆದವನಲ್ಲವೇ? ಒಂಚೂರು distraction ಆಗಿರಬೇಕು. distracted driving ಅಂತಾರಲ್ಲ ಹಾಗೆ.
ಈ ಗೊಂದಲ, ಸ್ಕ್ಯಾಂಡಲ್ ಬಗ್ಗೆ ಟೈಗರ್ ಅವರ ಪತ್ನಿ ಯಾವ ಹೇಳಿಕೆಯನ್ನು ಕೊಡದೆ ಇದ್ದರೂ ಏಳಂಕಿಯ ಮೊತ್ತ ಪೀಕಿದರೆ ಮಾತ್ರ ಬಿಡುಗಡೆ ಇಲ್ಲದಿದ್ದರೆ ಸೋಡಾ ಚೀಟಿ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ನ್ಯೂಸು. ತನ್ನ ಪ್ರತಿಷ್ಠೆ ಕಾಪಾಡಿಕೊಂಡು ಹೋಗಲು ಯಾವ ಅಂಕಿಯಾದರೂ ಕೊಡಲು ಟೈಗರ್ ತಯಾರಂತೆ.
ಒಂದುಕಡೆ ಅಮೆರಿಕೆಯ ಗೋತಾ ಹೊಡೆಯುತ್ತಿದ್ದ ಕಂಪೆನಿಗಳನ್ನು ಮೇಲಕ್ಕೆತ್ತಲು ಅಮೆರಿಕೆಯ ಅಧ್ಯಕ್ಷ ಚೆಕ್ ಬರೆದೂ ಬರೆದೂ ಸುಸ್ತಾಗಿರುವಾಗ ತನ್ನ ರಾಸಲೀಲೆ ಕಾರಣ ತನ್ನ ಪತ್ನಿ ಹೆಸರಿನಲ್ಲಿ ಚೆಕ್ ಬರೆಯಲು ಟೈಗರ್ ತಯಾರಾಗುತ್ತಿದ್ದಾನೆ.
Rating