ಕರ್ನಾಟಕ ಸಂಗೀತದ ರಸಾನುಭವ
ದಾಕ್ಷಿಣಾತ್ಯ ಸಂಗೀತ ಕರ್ನಾಟಕ ಸಂಗೀತವೆಂದೇ ಪ್ರಸಿದ್ಧವಾದರೂ, ನಮ್ಮಲ್ಲಿ ಬಹುಪಾಲು ಜನಕ್ಕೆ ಶಾಸ್ತ್ರೀಯ ಸಂಗೀತದ ರಸಾಸ್ವಾದನೆ ಕಷ್ಟಸಾಧ್ಯ ಎಂಬುದು ಗಮನಕ್ಕೆ ಬಂದಿರುವ ವಿಷಯವೇ. ಹಾಗೆಂದು ನಮ್ಮವರಿಗೆ ಸಂಗೀತ ಪ್ರೀತಿ ಇಲ್ಲದೇ ಇಲ್ಲ. ಆದರೆ, ಸಾಮಾನ್ಯವಾಗಿ ಯಾವುವೇ ಶಾಸ್ತ್ರೀಯ ಕಲೆಯನ್ನು ಅನುಭವಿಸಿ ಆನಂದಿಸಲೂ ಒಂದು ಸ್ವಲ್ಪ ಮಟ್ಟಿನ ತಯಾರಿ ಬೇಕಾಗುತ್ತೆ ಎಂಬುದು ನನ್ನ ಅನುಭವ. ಇದು ಸಂಗೀತ-ಸಾಹಿತ್ಯ-ನೃತ್ಯ ನಾಟಕ ಎಲ್ಲಕ್ಕೂ ಹೊಂದಬಹುದಾದ ಮಾತಿದು. ಕೇಳುತ್ತ ಕೇಳುತ್ತ, ಸಂಗೀತಾನುಭವ ಹೆಚ್ಚಾಗುವುದು ಖಂಡಿತ.
ಹಿಂದೂಸ್ತಾನಿ ಸಂಗೀತವನ್ನು ಜನಸಾಮಾನ್ಯರಿಗೆ ಪರಿಚಯಿಸಲು ೨ ದಶಕಗಳ ಹಿಂದೆ ವಿವಿಧ ಭಾರತಿಯಲ್ಲಿ ಸಂಗೀತ್ ಸರಿತಾ ಎಂಬ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಅದರಲ್ಲಿ ಒಂದು ರಾಗವನ್ನು ಪರಿಚಯಿಸುತ್ತ, ಆ ರಾಗದಲ್ಲಿ ನಿಯೋಜಿಸಿರುವ ಕೆಲವು ಚಿತ್ರಗೀತೆಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಆ ರೀತಿಯಲ್ಲಿ ಕರ್ನಾಟಕ ಸಂಗೀತದ ಪರಿಚಯ ರೇಡಿಯೋದಲ್ಲಿ ಆಗಿತ್ತೋ ಇಲ್ಲವೋ ತಿಳಿಯದು. ದೂರದರ್ಶನದಲ್ಲಿ ಸ್ವರರಾಗ ಸುಧಾ ಎಂದು ಡಾ.ಬಾಲಮುರಳಿಕೃಷ್ಣರು ನಡೆಸಿಕೊಟ್ಟಿದ್ದ ಒಂದು ಕಾರ್ಯಕ್ರಮ (೧೩ ಕಂತುಗಳು ಇರಬಹುದು) ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಈಚಿನ ದಿನಗಳಲ್ಲಿ ಹೊಸದಾಗಿ ಈ ರೀತಿಯ ಕಾರ್ಯಕ್ರಮಗಳು ಬಂದಿವೆಯೋ ಅರಿಯೆ.
ಕಳೆದ ಎರಡು ವರ್ಷಗಳಿಂದ ನೋಡುತ್ತಿರುವ ಉದಯ ಟೀವಿಯನ್ನು ಮಾಪನವಾಗಿಟ್ಟುಕೊಂಡರೆ ಶಾಸ್ತ್ರೀಯ ಸಂಗೀತಕ್ಕೆ ಅವರು ಕೊಡುವ ಸಮಯ ಪ್ರತಿದಿನಕ್ಕೆ ೨೦ ನಿಮಿಷಗಳು ಮಾತ್ರ! ಅದೂ ಕೂಡ ಬೆಳಗಿನ ಜಾವ ೫ ಗಂಟೆಯ ಸಮಯದಲ್ಲಿ. ನಮಗೆ ಇಲ್ಲಿ ಸಿಗುವುದು ಉದಯ ಟೀವಿ ಒಂದೇ, ಹಾಗಾಗಿ ಇತರೆ ವಾಹಿನಿಗಳ ಬಗ್ಗೆ ಮಾತಾಡಲಾರೆ. ಶನಿವಾರ ಭಾನುವಾರ ದಿನಕ್ಕೆ ೨೦ ಗಂಟೆ ಸಿನಿಮಾ ಆಧಾರಿತ ಕಾರ್ಯಕ್ರಮಗಳು ಪ್ರಸಾರವಾಗುವ ಉದಯ ವಾಹಿನಿಯಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಈ ಗತಿ ಇರುವುದು ಈಗ ಜನಕ್ಕೆ ಇರುವ ಅಭಿರುಚಿಯನ್ನು ತೋರಿಸುತ್ತದೋ ಅಥವಾ ಈ ವಾಹಿನಿಯವರ ಮನಸ್ಥಿತಿಯ (ದುಸ್ಥಿತಿ?) ಕನ್ನಡಿಯೋ ನಾನರಿಯೆ.
ನಾನು ಈ ಬರಹವನ್ನು ಸೇರಿಸಲು ಯಾವುದಾದರೂ ಸಂಗೀತ ಸಂಬಂಧಿ ವರ್ಗವಿದೆಯೇ ಎಂದು ನೋಡಿದರೆ ಸಂಪದದಲ್ಲೂ ಅದು ಕಾಣೆ ಮಾರಾಯ್ರೆ. ಆದರೆ ಇಲ್ಲಿಯ ಓದುಗರಲ್ಲಿ ಕರ್ನಾಟಕ ಸಂಗೀತದ ರಾಗಗಳ ಪರಿಚಯ ಮಾಡಿಕೊಟ್ಟರೆ, ಅದನ್ನು ತಿಳಿಯುವ ಆಸಕ್ತಿಯಿರುವ ಓದುಗರ ವರ್ಗವಿದೆಯೇ? ಇದ್ದರೆ ನಾನು ಪ್ರಯತ್ನಿಸಬಲ್ಲೆ. ಕನ್ನಡ ಚಿತ್ರಗಳಲ್ಲಿ ಬಂದಿರುವ ಪ್ರಸಿದ್ಧ ಗೀತೆಗಳನ್ನೇ ಆಧರಿಸಿ ರಾಗಗಳ ಪರಿಚಯ ಮಾಡಬಹುದು ! ಅನಂತರ, ನೀವು ಶಾಸ್ತ್ರೀಯ ಕಚೇರಿಯೊಂದರಲ್ಲಿ ಯಾವುದಾದರೂ ಕೃತಿಯನ್ನು ಕೇಳಿದರೆ, ಶ್ರವಣಜ್ಞಾನದಿಂದ (pattern-matching) ರಾಗದ ಪತ್ತೆ ಹಚ್ಚುವುದೂ ಸಾಧ್ಯ ...
ಏನಂತೀರಿ? ಇಲ್ಲಿ ಪ್ರತಿಕ್ರಿಯೆಗಳು ಬಂದಲ್ಲಿ, ನಾನು ಪ್ರಮುಖವಾದ ಕೆಲವು ರಾಗಗಳನ್ನು ಪರಿಚಯಿಸುವಲ್ಲಿ ನನ್ನ್ಯ ಪ್ರಯತ್ನ ಮಾಡುತ್ತೇನೆ :-)
-ಹಂಸಾನಂದಿ
Comments
ಸ್ವಾಗತ: ಕರ್ನಾಟಕ ಸಂಗೀತದ ರಸಾನುಭವ
In reply to ಸ್ವಾಗತ: ಕರ್ನಾಟಕ ಸಂಗೀತದ ರಸಾನುಭವ by Shyam Kishore
Re: ಸ್ವಾಗತ: ಕರ್ನಾಟಕ ಸಂಗೀತದ ರಸಾನುಭವ