ಕವನ : ಜಗತ್ ಸೃಷ್ಟಿ

ಕವನ : ಜಗತ್ ಸೃಷ್ಟಿ

ಕವನ : ಜಗತ್ ಸೃಷ್ಟಿ
 
ಕತ್ತಲನ್ನುಳಿದು ಬೇರಾವುದಲ್ಲಿಲ್ಲ ಬರಿ-
ಕರಿಗತ್ತಲೇ ಎಲ್ಲೂ, ಕಪ್ಪುಕಪ್ಪೊಳುಕಪ್ಪು
ಕರಿಕಪ್ಪು ಕಾಳ್ಗಪ್ಪು ಅಡುಕರಿಯವೋಲ್ಗಪ್ಪು
ನೀಳ್ಗಪ್ಪು ನೀಳ ಕುಂತಳಗಪ್ಪು ಕಡಲತಳ-
ವನ್ನಾವರಿಸಿ ನಿಂತ ದಟ್ಟ ನೀಲಿಯಗಪ್ಪು
ಕಂಡು ದಿಗ್ಭ್ರಮೆಗೊಂಡ ಲೋಗರಾರಿಲ್ಲ.
 
ಸತ್ತುದನು ಸಾವೆಂದು, ಇದ್ದುದನು ಇರುವೆಂದು
ಸತ್ಯವನು ನಿಜವೆಂದಸತ್ಯವನು ಸುಳ್ಳೆಂದು
ಬಿಳಿಯೆನಲು ಬಿಳುಪನ್ನು ಕರಿಯೆನಲು ಕಪ್ಪನ್ನು
ಉತ್ತುಂಗ ಮೇಲೆನಲು ಅತಳಾದಿ ಕೆಳಗೆನಲು
ಸನ್ನಡತೆಯೊಳು ಧರ್ಮ ದುರ್ನಡತೆಯೊಳಧರ್ಮ
ಎಂದು ಭಿನ್ನತೆಗಾಣಲೆರಡು ಅಲ್ಲಿಲ್ಲ.
ಇದ್ದುದೊಂದೇ ಇರುವು ಬೆಳಕೆನಲು ಬೆಳಕಹುದು
ಕತ್ತಲೆನೆ ಕತ್ತಲೆಯೆ ಆಗಿಹುದು, ದ್ವಂದ್ವಕ್ಕೆ
ಎಡೆಮಾಡಿಕೊಡುವ ಪರ ವಸ್ತುವಲ್ಲಿಲ್ಲ.
 
ಇದ್ದುದೊಂದೇ ಎಲ್ಲ ಎಲ್ಲವೆನೆ ಹಲವಿಲ್ಲ
ತಾನೊಂದೆ ತಾನೊಂದೆ ತಾನೊಂದೆ ತಾನೊಂದೆ
ಇದ್ದುದೊಂದೇ  ಎಲ್ಲ ತಾನೊಂದೆ ಎಲ್ಲ.
ಹೆಸರಿಡಲು ಹೆಸರಿಲ್ಲ ಹೆಸರಿಸುವ ಪರನಲ್ಲ
ತಾನೊಂದೆ ತಾನೊಂದೆ ತಾನೊಂದೆ ಎಲ್ಲಾ..
 
ಗುಣಗಳೆಣಿಕೆಗೆ ಇಲ್ಲ ರಸಗಳರಿವಲ್ಲಿಲ್ಲ
ಸಾಸಿರಾರ್ ಗುಣ ರಸಗಳ್ ಅಲ್ಲಿ ಆಗಿವೆ ಸುಪ್ತ.
ಶಾಂತರಸ ಮೈದೋರಲಾಯ್ತು  ಮುನ್ನುಡಿಯು.
ಸೃಷ್ಟಿಕಾರ್ಯಕೆ ಸತ್ಯ ಬರೆದ ಪೀಠಿಕೆಯು
ಸತ್ಯವೆತ್ತುದು ಶಾಂತಿ ಶಾಂತಿ ಹೆತ್ತುದು ಬಯಕೆ.
ಬಯಕೆ ಹೆತ್ತುದು ಬಯಕೆ, ಆ ಬಯಕೆ ಮರುಬಯಕೆ,
ಬಯಕೆ ಬಯಕೆಯ ನಡುವೆ ಸತ್ಯ ಬಂಧಿ.
 
ಮೈವೆತ್ತು ಭಾವಿಸೆ ನಿರಾಕಾರ ಸಾಕಾರ,
ಹುಟ್ಟಿದವು  ಪಂಚಭೂತಾದಿ ವಸ್ತುಗಳ್ ಅಲ್ಲಿ
ಆದ್ಯಂತ ಸತ್ಯಾತ್ಮನನು ಬಂಧಿಗೊಳಿಸಿ.
ಆಕಾರ ರಹಿತಕ್ಕೆ ಆಕಾರಗೊಟ್ಟು ಬಹು-
ಬಗೆಬಗೆಯ ರೂಪದೊಳು  ಸತ್ಯಾತ್ಮವನು ಬೆಳಸಿ
'ಅದು' ಎಂಬುದನು 'ಅವನು, ಅವಳಾಗಿ' ಸರಿ ಸೀಳಿ
ಆಯ್ತೊಂದು ಎರಡಾಗಿ ತಾನೆರಡು  ಅಲ್ಲಿ.
 
ಅವನಾಗಿ ಅವಳಾಗಿ ಬಯಕೆಗಳು ನೂರಾಗಿ
ವ್ಯಕ್ತಗೊಂಡವು ಹಲವು 'ಅವನಾಗಿ ಅವಳಾಗಿ'.
ಕಪ್ಪುಬಿಳುಪಾಗಿ, ಬಿಳಿ ಸಪ್ತವರ್ಣಗಳಾಗಿ
ಸಪ್ತವರ್ಣಗಳೊಡೆದು ಕೋಟಿ ಬಣ್ಣಗಳಾಗಿ
ಬಣ್ಣ ಬಣ್ಣದಿ ಬಣ್ಣ ಬಣ್ಣ ಬಣ್ಣದಿ ಬಣ್ಣ
ಸೇರಿ ಜಗ ಕಂಗೊಳಿಸಿತೆಲ್ಲ ಬಣ್ಣದಲಿ
 
ಬೆಳಗುವಿಚ್ಚೆಯೆ  ಸೂರ್ಯ ತಂಪಿನಿಚ್ಚೆಯೆ ಚಂದ್ರ
ಮಿನುಗುವಿಚ್ಚೆಯೆ ತಾರೆ  ಬೀಸುವಿಚ್ಚೆಯೆ ಗಾಳಿ
ಹರಿಯುವಿಚ್ಚೆಯೆ ನೀರು ಉರಿಯುವಿಚ್ಚೆಯೆ ಬೆಂಕಿ
ನಿರ್ವಿಕಾರದ ರೂಪಿನಿಚ್ಚೆಯಾಗಸವು.
ಬಯಸುವಿಚ್ಚೆಯೆ ಕಾಮ ಮುನಿಯುವಿಚ್ಚೆಯೆ  ಕ್ರೋಧ
ಅತಿಯಿಚ್ಚೆಯೇ ಲೋಭ  ಬಿಡದಿಚ್ಚೆಯೇ ಮೋಹ
ಅಹಮಿಚ್ಚೆಯೇ ಮದವು ತನಗೆ ತಾ ಕೊಡಲರಿಯೆ
ಅದುವೆ ಮಾತ್ಸರ್ಯ.
 
ಬಯಕೆ ಬಯಕೆಯ ಹಡೆದು ಆ ಬಯಕೆ ಮರು ಹಡೆದು
ಒಂದಾಯ್ತು ಸಾವಿರಾರ್, ಸಾಸಿರವು  ಹಲ ಕೋಟಿ
ಕೋಟಿ ಹಡೆದುದು ಕೋಟಿ, ಕೋಟಿ ಬಯಸಿತು ಕೋಟಿ
ತಾನೊಂದೆ ಎಂಬ ಸತ್ಯವು ಮರೆತು ಹೋಯ್ತು.
ಬಂದುದೆಲ್ಲಿಂದ ತಾನ್, ಇರುವುದಾದರು ಎಲ್ಲಿ
ಹೋಗುವುದು ಮತ್ತೆಲ್ಲಿ ಪ್ರಶ್ನೆಗಳು ನೂರು.
 
ಅಲ್ಲೆಲ್ಲೊ ನದಿ ತಟದಿ, ಹೆಬ್ಬಂಡೆಯನು ಒರಗಿ
ಮಸಣದಾ ಕೂಳುಂಡು.. ಬೆತ್ತಲಿಗರಾಗಿ ಬರಿ-
ನೀರ್ಕುಡಿದು ಹುಲ್ಲುಂಡು ಒಮ್ಮೊಮ್ಮೆ ಕೂಗುವರು
ತಾನೊಂದೆ ತಾನೊಂದೆ ತಾನೊಂದೆ ಎಂದು
ಒಂದ ಕಂಡಿಹ ಗಡ್ಡದಲೆಮಾರಿ ತಿರುಕರು.

 

 

Rating
No votes yet

Comments

Submitted by nageshamysore Thu, 06/11/2015 - 03:25

ಜಗತ್ ಸೃಷ್ಟಿಯನ್ನು ಬಿಚ್ಚಿಡುವ ಅದ್ಭುತ ಸೃಷ್ಟಿ! ಏಕಬೀಜ ಮೂಲದ ಸೃಷ್ಟಿಯೆಲ್ಲ ಸೋಜಿಗ, ಹಲವಾಗುವ ಹಂಬಲದಲ್ಲಿ ಚದುರಿ ಚೆಲ್ಲಾಡಿ ಅತಂತ್ರವಾದ ಬಗೆ ಮನೋಜ್ಞವಾಗಿ ಮೂಡಿಬಂದಿದೆ - ಅದರೆಲ್ಲ ಅಚ್ಚರಿ-ಅಸ್ಥಿರತೆ,  ಬಲ-ತಳಮಳ, ಕಳವಳ-ಕುತೂಹಲಗಳ ಸಮೇತ. ಅಭಿನಂದನೆಗಳು !

Submitted by kavinagaraj Sat, 06/13/2015 - 18:46

ಚೆನ್ನಾಗಿದೆ. ಸೃಷ್ಟಿಯ ಗೂಢವ ಕಂಡು ಬೆರಗಾಗುವುದಷ್ಟೆ ನಮ್ಮಂತಹ ಹುಲುಮಾನವರಿಗೆ ಸಾಧ್ಯ.