ಕವಿತೆ ಸತ್ತುಹೋಯಿತು!

ಕವಿತೆ ಸತ್ತುಹೋಯಿತು!

(ಪ್ರೇಮಿಗಳ ದಿನಕ್ಕೊಂದು ಕವಿತೆ)
 
ಕವಿತೆ ಅಂದು ಸತ್ತುಹೋಯಿತು
ಅಕ್ಷರಗಳು ಮೊದಲೇ ಸತ್ತಿದ್ದವು
ಒಡಲಲ್ಲಿ ಬೆಚ್ಚಗಿದ್ದ ಭಾವನೆಗಳು
ಬಿಕ್ಕಿಬಿಕ್ಕಿ ಅಳುತ್ತಿದ್ದವು
 
ಬಹಳ ದಿನಗಳಿಂದ ಈ ಅಕ್ಷರಗಳು 
ರೋಗಪೀಡಿತವಾಗಿದ್ದವು
ಬಳಲಿದ್ದವು, ಬೇಸರಗೊಂಡಿದ್ದವು
ಬದುಕಿನಲ್ಲಿ ಭರವಸೆ ಕಳೆದುಕೊಂಡಿದ್ದವು
 
ಒಮ್ಮೆ ಸಿಡಿಗುಂಡುಗಳಾಗಿದ್ದವು ಇವು
ಹೊಟ್ಟೆಯಿಂದ ಚಿಮ್ಮಿ ಕಿಡಿಗಳಾಗುತ್ತಿದ್ದವು
ಉದರ ತುಂಬಿ ಹೃದಯಕ್ಕೇರಿ
ಅಧರದಿಂದ ಹೊರಟು ಹಾಡಾಗುತ್ತಿದ್ದವು
 
ಅವತ್ತು ಹೃದಯ ಒಡೆಯಿತು
ಆಶ್ರಯ ತಪ್ಪಿ ಅಕ್ಷರಗಳೂ ಅತ್ತವು
ಎದೆ ಸೋರಿಹೋಗಿ ಖಾಲಿಯಾಯಿತು
ಅವತ್ತೇ ಅಕ್ಷರಗಳೂ ಸತ್ತವು
 
ಈಗ ಕವಿತೆಯೂ ಸತ್ತುಹೋಗಿದೆ
ಹೆಣ ನೋಡಲೆಂದೇ ಸೂರ್ಯ ಬಂದಿದ್ದ
ಕಾಗೆಗಳು ಮತ್ತು ಕನಸುಗಳು ಚೀರುತ್ತಿದ್ದವು
ನಾನು ಸುಮ್ಮನೇ ನಿಂತುಕೊಂಡಿದ್ದೆ
 
ಹೌದು ಗೆಳೆಯಾ, ಕವಿತೆ ಸತ್ತುಹೋಯಿತು
ಎದುರಿಗೇ ಶವವಾಗಿ ಮಲಗಿದೆ
ಭಾವನೆಗಳೆಲ್ಲ ಸೋರಿ ಮಡುಗಟ್ಟಿವೆ
ಬಿಟ್ಟುಹೋಗಲಾಗದೇ ಚಡಪಡಿಸುತ್ತಿವೆ
 
ಮತ್ತೆಂದಾದರೂ ಹುಟ್ಟಿಬರಲಿ ಕವಿತೆ
ಹೊಸ ಹೃದಯದಲ್ಲಿ ಅಥವಾ ಕನಸಿನಲ್ಲಿ
ಮತ್ತೆ ಮುಂದೆ ನಿಲ್ಲಲಿ, ಮುಗುಳ್ನಗಲಿ
ಹೊಸ ಕಿಚ್ಚು ಹಬ್ಬಿಸಿ ಬೆಚ್ಚಗಾಗಿಸಲಿ
 
- ಚಾಮರಾಜ ಸವಡಿ
(ಹತ್ತು ವರ್ಷಗಳ ಹಿಂದೆ ಬರೆದಿದ್ದು)
Rating
No votes yet

Comments