ಕಾಣೆಯಾದ ಕಾಗದಗಳು !!!

ಕಾಣೆಯಾದ ಕಾಗದಗಳು !!!

ಚಿತ್ರ

ಕಾಣೆಯಾದ ಕಾಗದಗಳು


ಕಾಗದಗಳು ! ಅರ್ಥಾತ್ ಕಾಗದದ ಕಾಗದಗಳು (ಪೇಪರ್ ಲೆಟರ್ಸ್) ಮರೆಯಾಗಿ ಹೋಗಿವೆ. ಈ- ಪತ್ರಗಳ ಕಾಟದಿಂದ ಅವುಗಳು ಔಟ್ ಡೇಟೆಡ್ ಆಗಿ ಸತ್ತು ಹೋಗಿವೆ. ಅದನ್ನು ನೆನೆಸಿಕೊಂಡರೆ ಒಂದು ತರಹ ವ್ಯಥೆಯಾಗುವುದಷ್ಟೇ ಅಲ್ಲ, ಭಾವುಕತೆ ಕಟ್ಟೆ ಒಡೆದು ಕಣ್ಣಿನಲ್ಲಿ ನೀರೇ ಬರುತ್ತೆ. ಕಾಗದಗಳು ಎಷ್ಟೊಂದು ಎಮೋಶನಲ್ ಅಂದರೆ, ನೀವು ಹಳೆಯದೊಂದು ಪತ್ರವನ್ನು ಓದಿ ನೋಡಿ, ಆಗ ಅನುಭವವಾಗುತ್ತೆ. ಕೈಬರಹದಿಂದ ಬರೆದ ಕಾಗದಗಳು ವಿಷಯವಷ್ಟೇ ಅಲ್ಲ,  ಭಾವನೆಗಳನ್ನು ಕಟ್ಟಿ, ಒದುವಾಗ ಒಂದು ದೃಶ್ಯವನ್ನೇ ತರಿಸುವಂತಹ ಶಕ್ತಿಯನ್ನು ಹೊಂದಿರುತ್ತಿದ್ದವು. ಮನಸ್ಸಿನ ಮೇಲೆ ಪರಿಣಾಮ ಬೀರುವುದರಲ್ಲೂ ಯಶಸ್ವಿಯಾಗಿದ್ದವು. ಕಾಗದಗಳ ನೆನಪಿನ ದಾರಿಯಲ್ಲಿ ಪಯಣಿಸಿದಾಗ........

ಅಣ್ಣನಿಗೆ ಅಂಚೆಯವನು ಮನೆ ಹತ್ತಿರ ಬಂದು ಪತ್ರ ಕೊಡುವರೆಗೂ ಸಮಾಧಾನವಿರಲಿಲ್ಲ. ನಮ್ಮಲ್ಲಿ ಯಾರನ್ನಾದರೂ ಪೋಸ್ಟ್ ಆಫೀಸ್ ಗೆ ಕಳಿಸಿ ಪತ್ರ ತರಿಸಿಕೊಳ್ಳುತ್ತಿದ್ದರು. ನಮ್ಮ ಅಕ್ಕ ಬೇರೆ ಊರಿಗೆ ಕಾಲೇಜ್ಗೆಂದು ಹೋದಾಗಲಂತೂ, ವಾರಕ್ಕೊಂದು ಕಾಗದ ಬರೆದು ಯೋಗಕ್ಷೇಮ ತಿಳಿಸಬೇಕೆಂದು ಹೇಳಿದ್ದರಿಂದ ವಾರಕ್ಕೊಂದಾದರೂ ಪತ್ರ ಬರುತ್ತಿತ್ತು. ಹೀಗೆ ಒಂದಲ್ಲ ಒಂದು ಪತ್ರಗಳು ಇದ್ದೇ ಇರುತ್ತಿದ್ದವು. ಒಂದು ರೀತಿಯ ಕುತೂಹಲ ಬೆಳಗ್ಗೆ ೮ ಗಂಟೆಯಾದಾಗ ಯಾವ ಪತ್ರ ಬರತ್ತೆ ಇವತ್ತು ಅಂತ?. ಪರೀಕ್ಷೆ ಫಲಿತಾಂಶ ಕ್ಕೆ ಕಾಯುವಾಗಲಂತೂ ( ಕಾಲೇಜ್ ನಲ್ಲಿ ಓದುವಾಗ) ತುಂಬಾ ತಮಾಷೆಗಳಾಗುತ್ತಿತ್ತು. ಸರಿಯಾದ ಸಮಯಕ್ಕೆ ಪತ್ರ ಬರಲಿಲ್ಲ ಅಂದರೆ, "ಎಲ್ಲೋ ಫೇಲ್ ಆಗಿರಬೇಕು, ಅದನ್ನೇನ್ ತಿಳಿಸೋದು ಅಂತ ಪತ್ರ ಬರೆದಿಲ್ಲ" ಅಂತ ಯಾರಾದರು ಶುರು ಮಾಡ್ತಾ ಇದ್ದರು. ಕೆಲವು ಸಲ ಮಕ್ಕಳು ಕಾಗದ ಬರೆದಿದ್ದರೆ, "ನಮಸ್ಕಾರ" ಬರೆಯುವ ಜಾಗದಲ್ಲಿ "ಆಶೀರ್ವಾದ" ಅಂತ ಬರೆದಿರುವುದು ಮತ್ತು ಕೆಲವು ಶಾರ್ಟ್ ಫಾರ್ಮ್ ಗಳು "ಮಾತೋಶ್ರೀ" ಅಂತ ಪೂರ್ತಿ ಹೇಳುವ ಬದಲು "ಮಾರವರು" ಅಂತ ಬರೆಯುವುದು ಎಲ್ಲ ರೂಢಿಯಲ್ಲಿತ್ತು. ಕೆಲವು ಸಲ ಮನಿ ಆರ್ಡರ್, ಚೆಕ್ ಬರುವುದಿದ್ದಾಗಂತೂ, ದಿನಾ ಮೈಲ್ ಗೆ ಕಾದು ಕುಳಿತಿರುವುದು, ಹೀಗಿತ್ತು ಆ ದಿನಗಳು.

ಪೋಸ್ಟ್ ಆಫೀಸ್ ಹತ್ತಿರ ಗುಂಪು ಗುಂಪಾಗಿ ಜನ ಕಾದು ಕುಳಿತಿರುತ್ತಿದ್ದರು. ಅಂಚೆಯವನು ಎಲ್ಲ ಪತ್ರಗಳನ್ನು ತನ್ನ ದೊಡ್ದ ಅಂಚೆ ಚೀಲಕ್ಕೆ ಹಾಕಿಕೊಂಡು, ಕೈಯಲ್ಲಿ ಕೆಲವು ಹಿಡಿದು ಕಟ್ಟಡದಿಂದ ಹೊರಗೆ ಬಂದು ಅಲ್ಲೇ ಜಗುಲಿಯ ಮೇಲೆ ಕೂತು "ಎಲ್ಲರಿಗೂ ನಿಮ್ಮ ಪತ್ರಗಳನ್ನು ಕೊಡುತ್ತೇನೆ, ಸ್ವಲ್ಪ ಗಲಾಟೆ ಮಾಡೆಬೇಡಿ ಅಂತ ಹೇಳಿ " ಪೇಟೆ ಸೂರಿ", "ಕೋಟೆ ಶೇಷಗಿರಿ", ರಂಗೇ ಗೌಡ್ರು, ತಿಮ್ಮಾಪ್ಪಯ್ಯ, ಅಂಗಡಿ ಶಂಕ್ರು, ಕರಿಯಪ್ಪ, ಅಂತ ಕರೆದು, ಕರೆದು ಎಲ್ಲರಿಗು ಅವರವರ ಪತ್ರಗಳನ್ನು ಕೊಡುವುದು ಒಂದು ತರ "ಕಡ್ಲೇ ಪುರಿ" ಹಂಚಿದಹಾಗಿತ್ತು. ಕಡೆಗೆ ಗುಂಪೆಲ್ಲ ಕದರಿದಾಗ, ಕಡಿಮೆಯಾದಾಗ ನಮ್ಮನ್ನೆಲ್ಲ ( ಹುಡುಗಿಯರನ್ನೆಲ್ಲ) ಕೇಳುತ್ತಿದ್ದ: "ನಿಮ್ಮಪ್ಪ ಬರಲಿಲ್ವಾ ಇವತ್ತು, ಅವರು ನೋಡುತ್ತಿದ್ದ ಪತ್ರ ಇವತ್ ಬಂದಿದೆ ಅಂತ ನಮಗೆ ಕೊಟ್ಟು ಆಮೇಲೆ ಸೈಕಲ್ ಹತ್ತಿ ಮಿಕ್ಕ ಪತ್ರಗಳನ್ನು ಹಂಚಲು ಹೋಗುವ. ಅರ್ಧದಷ್ಟು ಪತ್ರಗಳು ಅಲ್ಲೇ ಖಾಲಿಯಾಗುತ್ತಿತ್ತು. ಆಮೇಲೆ ಸಂಧಿ ಗೊಂದಿಯಲ್ಲಿ ನುಸುಳಿ ಎಲ್ಲರಿಗೂ ಅವರವರ ಅಪತ್ರಗಳನ್ನು ತಲುಪಿಸುತ್ತಿದ್ದ. ಅವನ ಕೆಲಸ ಏನು ಸುಲಭ ಅಲ್ಲ, ಕೆಲವು ಸಲ ಪೂರ್ತಿ ವಿಳಾಸವೇ ಇರುತ್ತಿರಲಿಲ್ಲ ಲಕೋಟೆಯ ಮೇಲೆ. ಬೆಂಗಳೂರಿಂದ ಬರೆದವ್ರೆ "ಹೆಸರೇ ಬರೆದಿಲ್ಲ" ಚೆನ್ನಪ್ಪನ ವಠಾರ ಅಂತಷ್ಟೇ ಬರೆದಿದ್ದರೆ, ನಿಮಗೇನಾದ್ರೂ ಗೊತ್ತಾಗತ್ತ ಅಂತ ನಮಗೂ ತೋರಿಸುತ್ತಿದ್ದ. ವಠಾರದಲ್ಲಿ ಎಲ್ಲರಿಘು ಒಂದ್ ರೌಂಡ್ ತೋರಿಸಿ ಕಡೆಗೆ ತಲುಪಬೇಗಾದವರಿಗೆ ತಲುಪಿಸುತ್ತಿದ್ದ. ಇದನ್ನೆಲ್ಲ ನೆನೆಸಿಕೊಂಡರೆ ನಮ್ಮ ಭಾರತದ ಮೈಲ್ ಮನ್ ಅಷ್ಟು ಶ್ರದ್ಧೆವಹಿಸಿ ಪ್ರಪಂಚದಲ್ಲಿ ಯಾವ ದೇಶದ ಅಂಚೆಯವನೂ ಕೆಲಸ ಮಾಡುವುದಿಲ್ಲ. ಪೂರ್ಣ ವಿಳಾಸವಿದ್ದೇ ಇಲ್ಲಿ (ಅಮೇರಿಕಾದಲ್ಲಿ) ಮೈಲ್ ಗಳು ಮಿಸ್ ಆಗುತ್ತಿರುತ್ತೆ. ಕಾಗದಗಳ ಮಜವೇ ಬೇರೆ. ಕಾಗದ ಬರೆಯುವ ಶೈಲಿ, ಓದುವ ಧಾಟಿ, ಅವುಗಳು ತರುವ ಮನೋಲ್ಲಾಸ ಎಲ್ಲ ಒಂದು ತರಹ ಮನೋರಂಜನೆಯ ವಸ್ತುವಾಗಿತ್ತು. ಹಳೆಯ ಪತ್ರಗಳನ್ನು ಗಟ್ಟಿಯಾಗಿ ಶೇಕರಿಸಿಡಿ. ಇನ್ನು ಮುಂದೆ ಅವುಗಳು ಸಿಗುವುದಿಲ್ಲ. "ಅಪರೂಪದ ಅಮೂಲ್ಯವಾದ ಆಸ್ತಿ" ಎಂದರೆ ತಪ್ಪಾಗಲಾರದು !!!

Rating
No votes yet

Comments