ಕಾದಿರುವಳು ತರುಣಿ ...
ಕೈಯ ಬಳೆಗಳು ಸರಿದ ರೀತಿಯೆ ಬಾಳುವಾಸೆಯೆ ಸರಿದಿರೆ
ಕಣ್ಣ ಕಾಡಿಗೆ ಅಳಿಸಿದಂತೆಯೆ ನಿದ್ದೆಯೆಂಬುದು ಕಳೆದಿರೆ
ಮನೆಯ ಹೊಸ್ತಿಲಿನಲ್ಲಿ ಇನಿಯನ ದಾರಿ ಕಾಯುತ ನಿಂತಿರೆ
ಹೆಣ್ಣಿವಳು ನಿಂದಂತೆ ತೋರಿದೆ ಬದುಕು ಸಾವಿನ ಅಂಚಲೆ!
ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ. ಶಂಕರ್ ರಾಜಾರಾಮನ್ ಅವರದ್ದು) :
ವಹತ್ಯಾಶಾಬಂಧೋ ವಲಯ ಇವ ಶೈಥಿಲ್ಯಮಧುನಾ
ದೃಶೌ ನಿದ್ರಾಮುದ್ರಾ ಪರಿಹರತಿ ನೀಲಾಂಜನಮಿವ
ಶ್ರಯಿತ್ಯೇಷಾ ದೇಶಾಂತರಜುಷಿ ನಿಜೇ ಪ್ರೇಯಸೀ ವಧೂಃ
ಸ್ಥಿತಿಂ ಗೇಹದ್ವಾರೇ ಜನಿ ಮರಣಯೋಃ ಸೀಮನಿ ಯಥಾ ||
वहत्याशाबन्धो वलय इव शैथिल्यमधुना
दृशौ निद्रामुद्रा परिहरति नीलाञ्जनमिव ।
श्रयत्येषा देशान्तरजुषि निजे प्रेयसि वधूः
स्थितिं गेहद्वारे जनिमरणयोः सीमनि यथा ॥
ವಿರಹದ ಬಣ್ಣನೆ ಸಂಸ್ಕೃತ ಕವಿಗಳ ಕಲ್ಪನೆಯನ್ನು ಶತಮಾನಗಳಿಂದ ಸೆಳೆದಿದೆ; ಇಂದಿಗೂ ಸೆಳೆಯುತ್ತಿದೆ ಎಂಬುದಕ್ಕೆ ೨೧ನೇ ಶತಮಾನದ ಕವಿ ಡಾ.ಶಂಕರ್ ಅವರ ಈ ಕವಿತೆಯೇ ಸಾಕ್ಷಿ!
ಈ ಇಪ್ಪತ್ತೊಂದನೆಯ ಅಷ್ಟಾವಧಾನವನ್ನು ಮಾಡಬಲ್ಲ ಕೆಲವೇ ವಿದ್ವಾಂಸರಲ್ಲಿ ಡಾ.ಶಂಕರ್ ಒಬ್ಬರು. ಅಮರುಕ ಶತಕದಲ್ಲಿ ಬಳಸಲಾಗಿರುವ, ವಿರಹದ ನೋವಿನಿಂದ ಕೈಬಳೆಗಳೂ ಸಡಿಲವಾಗಿಹೋಗುವ ಒಂದು ಚಿತ್ರಣವನ್ನು ಈ ಕವಿತೆಯಲ್ಲಿ ತಂದರೂ, ಅವರು ಅದನ್ನು ಬಳಸುವ ರೀತಿ ವಿಶಿಷ್ಟವಾಗಿದೆ.
ಮೂರು ಉಪಮೆಗಳೊಂದಿಗೆ ಅವರು ಹೆಣ್ಣೊಬ್ಬಳ ವಿರಹದ ನೋವನ್ನ ಕಣ್ಣುಮುಂದೆ ತಂದಿಟ್ಟಿದ್ದಾರೆ. ಇನಿಯನು ಬಲುಕಾಲದಿಂದ ದೂರಾಗಿರುವುದರಿಂದ, ಅವಳಿಗೆ ಬದುಕಿ ಬಾಳುವಾಸೆಯೂ ಕೈಬಳೆಗಳು ಸಡಿಲವಾಗಿ ಸರಿದುಹೋದಂತೆ, ಸರಿದುಹೋಗಿದೆ. ಅವನಿಲ್ಲದೇ ಅಲಂಕಾರ ಮಾಡಿಕೊಳ್ಳಲು ಆಸಕ್ತಿಯಿಲ್ಲದೇ ಕಣ್ಣಿಗೆ ಹಚ್ಚುವ ಕಾಡಿಗೆ ಕರಗಿಹೋದಂತೆ, ಅವಳ ನಿದ್ದೆಯೂ ಅವಳಿಂದ ದೂರವಾಗಿ ಹೊರಟು ಹೋಗಿದೆ. ಇಷ್ಟೇ ಅಲ್ಲ, ಅವನ ದಾರಿಯನ್ನೇ ಕಾಯುತ್ತ, ಮನೆಯ ಮುಂಬಾಗಿಲಿನಲ್ಲಿ ನಿಂತಿರುವ ನಿಂತ ಅವಳು, ಜೀವನ ಮರಣದ ನಡುವಿನ ಬಾಗಿಲಿನಲ್ಲಿ ನಿಂತಂತೆ ಕಾಣುತ್ತಿದ್ದಾಳೆ ಕವಿಗೆ.
-ಹಂಸಾನಂದಿ
ಕೊ: ಸಂಸ್ಕೃತವು "ಸತ್ತ" ಭಾಷೆ ಎಂಬ ಹಳೆಯ ವಾದವನ್ನೇ ಮಂಡಿಸುತ್ತಿರುವವರಿಗೆ, ಈ ಕಾಲದಲ್ಲೂ ಈ ಭಾಷೆಯಲ್ಲಿ ಸುಲಲಿತವಾಗಿ ಬರೆಯುವಂತಹ ಕವಿಗಳ ಇಂತಹ ಕವಿತೆಗಳೇ ಉತ್ತರ ನೀಡಬಲ್ಲವು!
ಕೊ,ಕೊ: ಅನುವಾದವು ಮತ್ತಕೋಕಿಲ/ಮಲ್ಲಿಕಾಮಾಲೆ ಎಂದು ಕರೆಸಿಕೊಳ್ಳುವ ಭಾಮಿನೀನಡಿಗೆಯ ಚೌಪದಿಯ ಛಂದಸ್ಸಿನಲ್ಲಿದೆ. ಪ್ರಾಸವನ್ನಿಟ್ಟಿಲ್ಲ
ಕೊ.ಕೊ.ಕೊ: ಕುವೆಂಪು ಅವರ ಪ್ರಸಿದ್ಧವಾದ ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ಎಂಬ ಪದ್ಯವನ್ನು ಕೇಳಿದವರಿಗೆ ಈ ಪದ್ಯದ ಭಾಮಿನೀ ನಡಿಗೆ ಸುಪರಿಚಿತವೇ ಆಗುತ್ತದೆ.
Comments
ಉ: ಕಾದಿರುವಳು ತರುಣಿ ...
ಡಾ. ಶಂಕರ್ ಅವರ ಕವಿತೆ ಹಾಗೂ ತಮ್ಮ ಅನುವಾದ ಚೆನ್ನಾಗಿದೆ. ಹಾಗೇ ರಾಗ ತಾಳದ ಜ್ಞಾನವಿಲ್ಲದ ನಮ್ಮಂತಹವರಿಗೆ "ಕೊಕೊ+ಕೊಕೊಕೊ" ಸಹ ಸಹಾಯವಾಗುವುದು. ಜತೆಯಲ್ಲಿ ಹಾಕಿರುವ ಸುಂದರ ಚಿತ್ರದ ವಿವರವಿಲ್ಲ..:(
In reply to ಉ: ಕಾದಿರುವಳು ತರುಣಿ ... by ಗಣೇಶ
ಉ: ಕಾದಿರುವಳು ತರುಣಿ ...
ಕ್ಷಮಿಸಿ ಗಣೇಶ ಅವರೆ, ಅದು ಹೇಗೋ ಚಿತ್ರದ ವಿವರ ಕಾಪೀ ಪೇಸ್ಟ್ ಮಾಡುವಾಗ ತಪ್ಪಿಹೋಗಿತ್ತು. ನೆನಪಿಸಿದ್ದಕ್ಕೆ ಧನ್ಯವಾದಗಳು. ಈ ಚಿತ್ರ ಶುಭಾ ಗೋಖಲೆ ಅವರದ್ದು.
ಚಿತ್ರಕೃಪೆ: ಇಲ್ಲಿ ಬಳಸಿರುವ ಚಿತ್ರ ಕಲಾವಿದೆ ಶುಭಾ ಗೋಖಲೆ ಅವರದ್ದು ( http://shubhagokhale.com/Inner/Paintings.asp?pcId=9)