ಕಾರ್ಗಾಲದ ಹಂಬಲ

ಕಾರ್ಗಾಲದ ಹಂಬಲ

ಕಾರಮೋಡಗಳು ; ನೆಲಮರೆಸಿರುವ ಹೂವುಗಳಹಾಸು; ಅರಳಿದ ಕದಂಬ ಕಾಡುಮಲ್ಲೆಗಳ ಕಂಪ ಬೀರುವ ಗಾಳಿ; ಮಾರುದನಿಸುವ ಕುಣಿವ ನವಿಲುಗಳ ಕೇಕೆಯ ಸೊಲ್ಲು - ತರುವುವು ಹಂಬಲವ ಕೊರಗು ಸಂತಸದಲ್ಲಿಹರೆಲ್ಲರಿಗು ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) ವಿಯದುಪಚಿತ ಮೇಘೋ ಭೂಮಯಃ ಕಂದಲಿನ್ಯೋ ನವಕುಟಜ ಕದಂಬಾಮೋದಿನೋ ಗಂಧವಾಹಾಃ | ಶಿಖಿಕುಲಕಲ ಕೇಕಾರವರಮ್ಯಾ ವನಾಂತಾಃ ಸುಖಿನಮಸುಖಿನಂ ವಾ ಸರ್ವಮುತ್ಕಂಠಯಂತಿ || -ಹಂಸಾನಂದಿ  ಕೊ: ಕಂದಲಿನ್ಯೋ - ಕಂದಲಿ ಎಂಬುದು ಮಳೆಗಾಲದಲ್ಲಿ ಅರಳುವ ಒಂದು ಹೂಜಾತಿ. ನೆಲದ ಮೇಲೆ ಹರಡಿ ಬೆಳೆಯುವ ಈ ಕಾಡು ಹೂಗಳ ಹಲವು ಜಾತಿಗಳು ಇವೆಯೆಂದು ತೋರುತ್ತದೆ.ಅದರಲ್ಲಿ ಒಂದು ಜಾತಿ ಹನ್ನೆರಡು ವರ್ಷಕ್ಕೊಮ್ಮೆ ಹೂಬಿಡುತ್ತದಂತೆ! ಆದರೆ ಈ ಪದ್ಯದಲ್ಲಿ ಪ್ರತಿವರ್ಷ ಹೂವರಳುವ, ನೆಲವನ್ನೆಲ್ಲ ಹೂ ಹಾಸಿಗೆಯಂತಾಗಿಸುವ ಬೇರೆ ಹೂಗಳ ಬಗ್ಗೆ ಹೇಳಿದ್ದಾನೆಂದು ನನ್ನೆಣಿಕೆ. ಅದಕ್ಕಾಗಿ, ಕಂದಲಿ ಹೂಗಳ ಬದಲು, ಹೆಸರಿಸದೇ "ಹೂಗಳ ಹಾಸು" ಎಂದು ಹೇಳಿದ್ದೇನೆ.  ಕೊ.ಕೊ: ಕದಂಬ = ಕರ್ನಾಟಕದ ಮೊದಲ ಅರಸುಮನೆತನವಾದ ಕದಂಬರಿಗೆ ಆ ಹೆಸರು ಬರಲು ಕಾರಣವಾದ ಮರ ಇದೇ. ಹೆಚ್ಚಿನ ವಿವರಕ್ಕೆ, ವಿಕಿಪೀಡಿಯಾದಲ್ಲಿರುವ ಈ ಬರಹವನ್ನುನೋಡಿ. ಜೊತೆಗೆ, ಕುಟಜ ಎನ್ನುವುದು ಮಲ್ಲಿಗೆಯ ಹೋಲುವ, ಕಂಪಾದ ಹೂವುಗಳನ್ನು ಬಿಡುವ ಒಂದು ಗುಂಪಿನ ಗಿಡಗಳು. ಇವುಗಳಲ್ಲಿ ಎರಡರ ಚಿತ್ರವನ್ನು ಇಲ್ಲಿ , ಮತ್ತೆ ಇಲ್ಲಿ ನೋಡಬಹುದು. 
Rating
No votes yet