ಕಾಲದ ಜೊತೆಯಲ್ಲಿ

ಕಾಲದ ಜೊತೆಯಲ್ಲಿ

ಕಾಲು ಹಾಕುತ್ತಿದ್ದೇನೆ ಕಾಲ ಎಳೆದೆಡೆಯಲ್ಲಿ .

ಮುಂದಿನದೆಲ್ಲಾ ಒಳ್ಳೇಯದೇ ಆಗುತ್ತದೆಂಬ ನಿರೀಕ್ಶೆಯಲ್ಲಿ .

ಅಲ್ಲಲ್ಲಿ ಕಂಡ ಪಯಣಿಗರೊಡನೆ ನಗೆ ವಿನಿಮಯಿಸಿ

ಹತ್ತಕ್ಕೇರದ ಆರಕ್ಕಿಳಿಯದ ಸ್ನೇಹದಲ್ಲಿ

 

ಹೊಸ ನಂಟುಗಳು ಅಂಟಾಗುತ್ತಿದ್ದಂತೆ ಬಂಧನವೋ

 ಬಂಧವೋ ಎಂದು ತಿಳಿಯುವ ಮುಂಚೇಯೇ 

ಹಳೇ ಎಳೆಗಳು ಅರಿವಿಲ್ಲದೆ ಹರಿದು

ಚೂರಾಗಿ ಕಣ್ಣಲ್ಲಿ ನೀರಾಗಿ ಧೂಳಾಗಿವೆ

 

ಕಲ್ಪನೆಗೆ ಮನಸ ಕೊಡುತ್ತಾ

ವಾಸ್ತವಕ್ಕೆ  ಬುದ್ದಿಯನ್ನು  ಒಡ್ಡಿಕೊಂಡು

ಹಗಲುಗನಸಿಗೆ ವಿದಾಯ ಕೋರುವ 

ದಿನಗಳ ಎಣಿಕೆ 

 

ಅಂದಿದ್ದ ಆ ನಂಬಿಕೆ ಆತ್ಮ ವಿಶ್ವಾಸಗಳು

ಇಂದೆಲ್ಲೋ ಮೂಲೆಯಲ್ಲಿ 

ಕಾಲು ಮುರಿದುಕೊಂಡು ಬಿದ್ದಿವೆ.

ಪರಾವಲಂಬನೆ, ಪರಾಧೀನತೆ

ಕುಣಿಯುತ್ತಾ ಗಹಗಹಿಸಿ ನಗುತ್ತಿವೆ

 

ನಾನೇ ಎಲ್ಲಾ ನನ್ನಿಂದ ಎಲ್ಲಾ 

ಎಂಬ ಹಾಡೀಗ

ನೀನಿಲ್ಲದೇ ನನಗೇನೂ ಇಲ್ಲ

ಎಂದಾಗಿ ಬದಲಾದ ಪರಿಯ 

ಬೆರಗಾಗಿ ನೋಡಲೂ 

ಸಮಯ ಸಾಲದಾಗಿದೆ

 

’ಅಷ್ಟೊಂದು ’  ಹೋಗಿ  ’ಇಷ್ಟೇನಾ?’

ಆಗಿ  ಇನ್ನೇನು ಬಂದರೂ  ಅಷ್ಟೇ

 ಎಂಬರಿವು ಉಂಟಾಗಿ  ಮನಸು ಸಪ್ಪೆ ಸಪ್ಪೆ

ಮುಂದೇನು ಎಂಬ ಪ್ರಶ್ನೆಯೊಂದಿಗೆ

 

ಕಾಲು ಹಾಕುತ್ತಿದ್ದೇನೆ ಕಾಲ ಎಳೆದೆಡೆಯಲ್ಲಿ .

ಮುಂದಿನದೆಲ್ಲಾ ಒಳ್ಳೇಯದೇ ಆಗುತ್ತದೆಂಬ ನಿರೀಕ್ಶೆಯಲ್ಲಿ .

 

Rating
No votes yet