ಕಾವೇರಿ ಪ್ರತಿಭಟನೆ ಮತ್ತು ಕರಾವಳಿ ಜಿಲ್ಲೆಗಳು
ಕಾವೇರಿ ನ್ಯಾಯ ಮಂಡಳಿಯ ತೀರ್ಪು ಬಂದ ನಂತರ 'ಕರ್ನಾಟಕಾದ್ಯಂತ ಪ್ರತಿಭಟನೆಗಳು ನಡೆದವು' ಆದರೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮಾತ್ರ ಇದಕ್ಕೆ ಸಂಬಂಧಿಸಿ ಏನೂ ನಡೆಯಲಿಲ್ಲ. ಸರಕಾರ ಪರೋಕ್ಷ ಬೆಂಬಲ ನೀಡಿದ್ದ ಬಂದ್ ನಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಭಾಗವಹಿಸಲಿಲ್ಲ. ಅರ್ಥಾತ್ ಯಾರೂ ಬಂದ್ ಮಾಡಲಿಲ್ಲ. ಇದೆಲ್ಲಾ ಏನನ್ನು ತೋರಿಸುತ್ತದೆ?
ಕರಾವಳಿ ಜಿಲ್ಲೆಗಳವರಿಗೆ ಕರ್ನಾಟಕದ ಹಿತದ ಕುರಿತು ಯಾವ ಕಾಳಜಿಯೂ ಇಲ್ಲವೇ?
ಈ ಮೊದಲು ವರ ನಟ ಡಾ.ರಾಜ್ ಕುಮಾರ್ ರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗಲೂ ಕರಾವಳಿ ಜಿಲ್ಲೆಗಳು ಹೆಚ್ಚು ಕಡಿಮೆ ಇಂಥದ್ದೇ ಪ್ರತಿಕ್ರಿಯೆಯನ್ನು ತೋರಿದ್ದವು. ಇದನ್ನು ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸಾ.ರಾ. ಗೋವಿಂದು ಅವರು ಕರಾವಳಿ ಜಿಲ್ಲೆಯ ಜನಗಳ ವರ್ತನೆಯನ್ನು ಖಂಡಿಸಿದ್ದರು. ಕಾವೇರಿ ವಿಷಯದಲ್ಲಿ ಕರಾವಳಿ ಜಿಲ್ಲೆಗಳ ಜನರು ತೋರಿಸಿದ ನಿರ್ಲಿಪ್ತ ಮನೋಭಾವವನ್ನೂ ಹಲವರು ಖಂಡಿಸಿದರು. ಆದರೆ ಇದು ಹಿಂದಿನಷ್ಟು ಸುದ್ದಿಯಾಗಲಿಲ್ಲ.
ಕರ್ನಾಟಕದ ಇತಿಹಾಸ ಮತ್ತು ರಾಜಕಾರಣದ ಕುರಿತು ಬಹಳ ಅಧ್ಯಯನ ನಡೆಸಿರುವ ಜೇಮ್ಸ್ ಮೇನರ್ ಕೂಡಾ ಒಮ್ಮೆ ಕರಾವಳಿ ಜಿಲ್ಲೆಗಳನ್ನು ಸೋಷಿಯಲೀ ಎಕ್ಸೆಂಟ್ರಿಕ್ ಡಿಸ್ಟ್ರಿಕ್ಟ್ಸ್ ಎಂದು ಹೇಳಿದ್ದರು. ಕರಾವಳಿ ಜಿಲ್ಲೆಗಳು ಕರ್ನಾಟಕದ ಮುಖ್ಯವಾಹಿನಿಯ ಜತೆಗೆ ಒಂದಾಗಿಲ್ಲ ಎಂಬುದನ್ನು ಈ ಎಲ್ಲಾ ಅಂಶಗಳು ಎತ್ತಿ ತೋರಿಸುತ್ತಿವೆ. ಆದರೆ ಇದರ ಕಾರಣಗಳು ಮೈನ್ ಲ್ಯಾಂಡ್ ಕರ್ನಾಟಕ ಎಂದು ಕರೆಯಬಹುದಾದ ಪ್ರದೇಶಗಳ ಸಾಮಾಜಿಕ ಮನಸ್ಥಿತಿಯಲ್ಲಿದೆ ಎಂದು ನನಗನ್ನಿಸುತ್ತದೆ.
ಕರಾವಳಿಯ ಜನರು ರಾಜ್ ಕುಮಾರ್ ಅಪಹರಣಕ್ಕೆ ಸ್ಪಂದಿಸಲಿಲ್ಲ, ಕಾವೇರಿ ತೀರ್ಪಿಗೆ ಸ್ಪಂದಿಸಲಿಲ್ಲ ಎಂದು ಆರೋಪಿಸುವಾಗ ಮೈನ್ ಲ್ಯಾಂಡ್ ಕರ್ನಾಟಕ ಕರಾವಳಿಯ ಯಾವ ಸಮಸ್ಯೆಗೆ ಸ್ಪಂದಿಸಿದೆ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ. ಕರಾವಳಿಯ ಉದ್ದಕ್ಕೂ ಸ್ಥಾಪಿಸಲು ಉದ್ದೇಶಿಸಲಾಗಿರುವ ಉಷ್ಣ ವಿದ್ಯುತ್ ಸ್ಥಾವರಗಳು ಕರ್ನಾಟಕದ ಜೀವನದಿಗಳನ್ನು ಬತ್ತಿಸುತ್ತದೆ ಎಂಬ ಅಂಶ ಇಡೀ ಕರ್ನಾಟಕಕ್ಕೇ ತಿಳಿದಿದ್ದರೂ ಕರಾವಳಿ ಜಿಲ್ಲೆಗಳ ಜನರು ಮಾತ್ರ ಇದರ ವಿರುದ್ಧ ಹೋರಾಡುತ್ತಿದ್ದಾರೆ. ಈ ಹೋರಾಟವನ್ನು ಜನರ ಹೋರಾಟ ಎಂದು ಅರ್ಥ ಮಾಡಿಕೊಳ್ಳುವ ಬದಲಿಗೆ 'ಅಭಿವೃದ್ಧಿ ವಿರೋಧಿ ಪರಿಸರವಾದಿಗಳ ಹೋರಾಟ' ಎಂದು ಸತತವಾಗಿ ಬಿಂಬಿಸಲಾಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಕರಾವಳಿಯ ಮೀನುಗಾರರು ಮತ್ಸ್ಯ ಕ್ಷಾಮವನ್ನು ಎದುರಿಸುತ್ತಿದ್ದಾರೆ. ಕರಾವಳಿ ಆರ್ಥಿಕತೆಯ ಆದಾರ ಸ್ತಂಭವಾಗಿರುವ ಮತ್ಸೋದ್ಯಮ ಅನುಭವಿಸುತ್ತಿರುವ ಸಮಸ್ಯೆ ಮೈನ್ ಲ್ಯಾಂಡ್ ಕರ್ನಾಟಕದ ಜನರನ್ನು ಯಾವತ್ತಾದರೂ ಕಾಡಿದೆಯೇ?
ದಕ್ಷಿಣ ಕನ್ನಡ ಮಾನವ ಅಭಿವೃದ್ಧಿ ಸೂಚಿಯಲ್ಲಿ ಯಾವಾಗಲೂ ಮೊದಲ ಐದು ಸ್ಥಾನಗಳ ಒಳಗೇ ಇರುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳು ಉತ್ತರ ಕರ್ನಾಟಕದ ಹಿಂದುಳಿದ ತಾಲೂಕುಗಳಷ್ಟೇ ಹಿಂದುಳಿದಿವೆ ಎಂಬುದು ಎಷ್ಟು ಮಂದಿಗೆ ಗೊತ್ತು. ಇಲ್ಲಿ ಇನ್ನೂ ಜೀತ ಪದ್ಧತಿ ಜೀವಂತವಾಗಿ ಎಂಬುದು ಯಾರಿಗೆಲ್ಲಾ ತಿಳಿದಿದೆ?
ಕರಾವಳಿಯ ಹೆಣ್ಣು ಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯ ಒದಗಿಸಿದ್ದ ಬೀಡಿ ಉದ್ಯಮ ಈಗ ಶರಮಂಚದಲ್ಲಿ ಮಲಗಿದೆ. ಈ ಕುರಿತಂತೆ ಕರ್ನಾಟಕದ ಯಾವೆಲ್ಲಾ ಮಂತ್ರಿಗಳು ಮಾತನಾಡಿದ್ದಾರೆ?
ಉತ್ತರ ಕರ್ನಾಟಕ ಹಿಂದುಳಿದಿದೆ ಎಂದು ಬೊಬ್ಬೆ ಹೊಡೆದಾಗಲಾದರೂ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಕನ್ನಡ ಪತ್ರಿಕೋದ್ಯಮದ ಹುಟ್ಟೂರಿನ ಸಮಸ್ಯೆಗಳೇ ಮಾಧ್ಯಮಗಳಲ್ಲಿ ಕಾಣಿಸುತ್ತಿಲ್ಲ.
ಕಾವೇರಿಗೂ ಕರಾವಳಿ ಜಿಲ್ಲೆಗಳಲ್ಲಿ ಸ್ಥಾಪಿಸಲಾಗುತ್ತಿರುವ ಬೃಹತ್ ಉದ್ಯಮಗಳಿಗೂ ಹತ್ತಿರದ ಸಂಬಂಧವಿದೆ. ಕರಾವಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಉದ್ಯಮಗಳೆಲ್ಲಾ ಸಾಕಾರಗೊಂಡರೆ ಅದರ ಮೊದಲ ಪೆಟ್ಟನ್ನು ಅನುಭವಿಸುವುದು ಪಶ್ಚಿಮ ಘಟ್ಟಗಳು. ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರ ನಾಶವಾದರೆ ಕಾವೇರಿಗಾಗಿ ಜಗಳವಾಡುವ ಪ್ರಶ್ನೆಯೇ ಇರುವುದಿಲ್ಲ. ಏಕೆಂದರೆ ಕಾವೇರಿಯೇ ಇರುವುದಿಲ್ಲ...
Comments
Re: ಕಾವೇರಿ ಪ್ರತಿಭಟನೆ ಮತ್ತು ಕರಾವಳಿ ಜಿಲ್ಲೆಗಳು
Re: ಕಾವೇರಿ ಪ್ರತಿಭಟನೆ ಮತ್ತು ಕರಾವಳಿ ಜಿಲ್ಲೆಗಳು
ಉ: ಕಾವೇರಿ ಪ್ರತಿಭಟನೆ ಮತ್ತು ಕರಾವಳಿ ಜಿಲ್ಲೆಗಳು