ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?

ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?

ಮಾಧ್ಯಮದಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ ಇಂಥದೊಂದು ಪ್ರಸ್ತಾವನೆ ಇಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಗೊಂದಲದಲ್ಲಿಯೇ ವಿಷಯವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.

ಪತ್ರಿಕೋದ್ಯಮ ತುಂಬ ವ್ಯಾಪಕವಾಗಿ ಬೆಳೆದಿದೆ. ನಾಗರಿಕರೇ ನೇರವಾಗಿ ವರದಿ ಮಾಡುವಂಥ ’ನಾಗರಿಕ ಪತ್ರಿಕೋದ್ಯಮ’ (citizen journalism) ಬಂದಾಗಿದೆ. ಕನ್ನಡದ ಮಟ್ಟಿಗೆ ಅದಿನ್ನೂ ಬರಬೇಕಾಗಿದೆ. ಮಾಧ್ಯಮದ ಅತಿರೇಕಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯೂ ನಡೆದಿದೆ. ಈ ಸಂದರ್ಭದಲ್ಲಿ, ಒಬ್ಬ ಓದುಗ ಅಥವಾ ನೋಡುಗರಾಗಿ ಮಾಧ್ಯಮದಲ್ಲಿ ಬರುತ್ತಿರುವ ವರದಿ, ಕಾರ್ಯಕ್ರಮಗಳ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯುವ ಪ್ರಯತ್ನ ಏಕೆ ಪ್ರಾರಂಭವಾಗಬಾರದು?

ಈ ವೃತ್ತಿಯಲ್ಲಿ ಇರುವವನಾಗಿದ್ದರಿಂದ, ಇದರ ಲೋಪದೋಷ ಹಾಗೂ ಸಾಮರ್ಥ್ಯಗಳ ಅರಿವು ನನಗೆ ಸ್ಪಷ್ಟವಾಗಿದೆ. ಆದರೆ, ವೃತ್ತಿಪರನಾಗಿ ಲೋಪಗಳನ್ನು ಅಥವಾ ಸಾಮರ್ಥ್ಯವನ್ನು ನೋಡುವುದಕ್ಕೂ, ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಜನರ ಮನಸ್ಸಿನಲ್ಲಿ ಏನಿದೆ ಎಂಬುದು ಕಂಠಪೂರ್ತಿ ವೃತ್ತಿಯಲ್ಲಿ ಮುಳುಗಿರುವವರಿಗೆ ಸುಲಭವಾಗಿ ಗೊತ್ತಾಗುವುದಿಲ್ಲ.

ನನ್ನ ವಿಚಾರ ಸ್ಪಷ್ಟವಾಗಲು ಒಂದೆರಡು ಉದಾಹರಣೆಗಳನ್ನು ಕೊಡುತ್ತೇನೆ.

ಯಾವುದೋ ಒಂದು ಕಾರ್ಯಕ್ರಮ ಬರುತ್ತಿರುತ್ತದೆ. ಅದರ ಆಶಯದ ಬಗ್ಗೆ ಕೆಲವರಿಗೆ ತಕರಾರು. ಅದನ್ನು ಪ್ರಸ್ತುತಪಡಿಸುವ ವಿಧಾನದ ಬಗ್ಗೆ ಕೆಲವರಿಗೆ ಬೇಸರ. ಬಳಸುವ ಭಾಷೆ, ವಿಷಯ ಮಂಡನೆಯ ಗುಣಮಟ್ಟ, ತೋರಿಸುವ ಚಿತ್ರಗಳು ಅಥವಾ ದೃಶ್ಯಗಳ ಬಗ್ಗೆ ಇನ್ನು ಕೆಲವರಿಗೆ ಅಸಮಾಧಾನ ಇರುತ್ತದೆ. ಇದನ್ನು ಸಂಬಂಧಿಸಿದವರಿಗೆ ತಲುಪಿಸುವುದು ಹೇಗೆ?

ಏಕೆಂದರೆ, ನಾನು ಪ್ರಸ್ತುತಪಡಿಸುವುದು ತುಂಬ ಚೆನ್ನಾಗಿದೆ ಎಂದೇ ಮಾಧ್ಯಮದ ಬಹಳಷ್ಟು ದಡ್ಡರು ಭಾವಿಸಿಕೊಂಡಿರುತ್ತಾರೆ. ಅವರ ಮೆದುಳಿಗೆ ವಾಸ್ತವ ಇಳಿಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಸಹೋದ್ಯೋಗಿಗಳ ಅಭಿಪ್ರಾಯವನ್ನು ಅವರು ಅಸೂಯೆ ಎಂದೋ, ಅತಿ ಬುದ್ಧಿವಂತಿಕೆ ಎಂದೋ ತಿರಸ್ಕರಿಸುವ ಸಂದರ್ಭಗಳು ದಿನಾ ನಡೆಯುತ್ತಿರುತ್ತವೆ.

ಇಂತಹ ಅಭಿಪ್ರಾಯಗಳು ಓದುಗ/ನೋಡುಗರಿಂದ ಬಂದರೆ ಅದಕ್ಕೊಂದು ಮೌಲ್ಯ ಇರುತ್ತದೆ. ಹಕ್ಕೊತ್ತಾಯ ಇರುತ್ತದೆ ಎಂದು ನಾನು ಭಾವಿಸಿಕೊಂಡಿದ್ದೇನೆ. ಸಹೋದ್ಯೋಗಿಗಳು ಹೇಳುವುದಕ್ಕೂ, ಸಾರ್ವಜನಿಕರು ಹೇಳುವುದಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಅಂತಹ ಕೆಲಸವನ್ನು ಜವಾಬ್ದಾರಿಯುತ ಸಂಪದ ಸದಸ್ಯ/ಸದಸ್ಯೆಯರು ಮಾಡಲು ಮುಂದಾಗಬೇಕು ಎಂಬುದು ನನ್ನ ಆಶಯ.

ನಾನು ಬಲ್ಲಂತೆ ಸಾಂಸ್ಕೃತಿಕ ವರದಿಗಾರಿಕೆಯ ಹದವೇ ಬಹಳಷ್ಟು ಜನರಿಗೆ ಗೊತ್ತಿಲ್ಲ. ಸಾಹಿತ್ಯ, ಸಂಸ್ಕೃತಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಬಹುಶಃ ಕನ್ನಡ ಟಿವಿ ಚಾನೆಲ್‌ಗಳ್ಯಾವವೂ ಸರಿಯಾಗಿ ವರದಿ ಮಾಡುತ್ತಿಲ್ಲ. ಅಥವಾ ಈಗಿರುವ ವ್ಯಕ್ತಿಗಳಿಗೆ ಅಂತಹ ವರದಿಗಾರಿಕೆ ಮಾಡುವುದು ಹೇಗೆಂಬುದು ಗೊತ್ತಿಲ್ಲ. ಕನಿಷ್ಟಪಕ್ಷ ಇಂಗ್ಲಿಷ್‌ ಅಥವಾ ಹಿಂದಿ ಚಾನೆಲ್‌ಗಳನ್ನು ನೋಡಿಯಾದರೂ, ಅವುಗಳ ಉತ್ತಮಾಂಶಗಳನ್ನು ನಕಲು ಮಾಡಿದರೆ ಕನ್ನಡಕ್ಕೆ ಎಷ್ಟೋ ಉಪಕಾರವಾಗುತ್ತದೆ. ಆದರೆ, ಅಹಂ ಅಥವಾ ದಡ್ಡತನಗಳಿಂದಾಗಿ ಅದೂ ಸಾಧ್ಯವಾಗುತ್ತಿಲ್ಲ. ನಾವು ಮಾಡುವುದೇ ಸರಿ ಎಂಬ ಭ್ರಮೆ ನೋಡುಗರ ಹಕ್ಕೊತ್ತಾಯ ಕಸಿದುಕೊಂಡಿದೆ.

ಕನ್ನಡವನ್ನು ಸರಿಯಾಗಿ ಬರೆಯಲು ಬಾರದ, ಒಳ್ಳೆಯ ಬರವಣಿಗೆಯನ್ನು ಸಾಧಿಸಲು ಆಗದ ತುಂಬ ಜನ ಇಂತಹ ಕ್ಷೇತ್ರಗಳನ್ನು ತುಂಬಿಕೊಂಡಿದ್ದಾರೆ. ಅವರ ವಿಷಯ ಮಂಡನೆಯಂತೂ ದೇವರಿಗೇ ಪ್ರೀತಿ. ಇಂಥ ದಡ್ಡರು ನಡೆಸಿಕೊಡುವ ಕಾರ್ಯಕ್ರಮಗಳನ್ನು ಇನ್ನೂ ಎಷ್ಟು ದಿನ ಅಂತ ಸಹಿಸಿಕೊಳ್ಳುವುದು? ಈ ಕಾರ್ಯಕ್ರಮ ಹೀಗಿದ್ದರೇ ಚೆನ್ನ, ಇದು ಸರಿಯಾಗಿರಲಿಲ್ಲ ಎಂಬ ಸಲಹೆಗಳು ನೋಡುಗರಿಂದ ಬರುವಂತಾದರೆ ಹಾಗೂ ಇವನ್ನೆಲ್ಲ ಒಂದು ಸೂಕ್ತ ವೇದಿಕೆ ಅಥವಾ ಅಂಕಣದಡಿ ನಿಯಮಿತವಾಗಿ ಪ್ರಕಟಿಸುವಂತಾದರೆ ಕಾರ್ಯಕ್ರಮಗಳ ಗುಣಮಟ್ಟದ ಮೇಲೆ ನಿಗಾ ಇಡಬಹುದು ಎಂಬುದು ನನ್ನ ಅನಿಸಿಕೆ.

ಮೊದಲೇ ಹೇಳಿದಂತೆ, ಮಾಧ್ಯಮದಲ್ಲಿ ಇರುವ ವ್ಯಕ್ತಿಯಾಗಿ ನಾನು ನೇರವಾಗಿ ಇಂಥದೊಂದು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಕಷ್ಟ. ನನ್ನಂಥ ಹಲವಾರು ಜನರು ತಮ್ಮದೇ ಮಿತಿಯಲ್ಲಿ ಗುಣಮಟ್ಟ ಸುಧಾರಣೆಗೆ ಸಾಕಷ್ಟು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ ವೃತ್ತಿ ಮಾತ್ಸರ್ಯ ಅದಕ್ಕೆ ತಡೆಯಾಗಿದೆ. ಕೊನೆಗೆ, ನೋಡುಗರಾದರೂ ಕ್ಯಾಕರಿಸಿ ಉಗಿದರೆ, ಈ ಅಧಃಪತನ ಕೊಂಚ ಹತೋಟಿಗೆ ಬಂದೀತೇನೋ ಎಂಬ ದೂರದ ಆಸೆ ನನ್ನದು.

ನಿರ್ವಾಹಕರಾದ ಹರಿಪ್ರಸಾದ ನಾಡಿಗ್‌ ಹಾಗೂ ಕಳಕಳಿಯ ಸಂಪದ ಮಿತ್ರರು ಪರಸ್ಪರ ಸಮಾಲೋಚನೆ ನಡೆಸಿ ಇಂಥದೊಂದು ಪ್ರಯತ್ನಕ್ಕೆ ಚಾಲನೆ ನೀಡಿದರೆ, ಅದು ಕನ್ನಡಕ್ಕೆ ಸಲ್ಲಿಸಿದ ಉತ್ತಮ ಸೇವೆಗಳಲ್ಲಿ ಒಂದಾಗಲಿದೆ.

- ಚಾಮರಾಜ ಸವಡಿ

Rating
No votes yet

Comments