ಕೇವಲ ಮನುಷ್ಯರು...

ಕೇವಲ ಮನುಷ್ಯರು...

ನಿಮಗೆಲ್ಲ ಗೊತ್ತು, ಕೆಲವು ಸಮಯದ ಹಿಂದೆ ಇಲ್ಲಿ ಒಬ್ಬ ಗೆಳೆಯ ತನ್ನ ಕಚೇರಿಯ ಒಳರಾಜಕೀಯದ ಬಗ್ಗೆ ನೊಂದು ಕೆಲವು ಮಾತು ಬರೆದಿದ್ದರು. ಯಾರೋ ಒಬ್ಬಳು ಬಾಸ್ ಮೇಲೆ ಹಿಡಿತ ಸಾಧಿಸಿ ತನ್ನಿಚ್ಛೆಯಂತೆ ಎಲ್ಲರನ್ನೂ ಆಳುತ್ತಿರುವ ಬಗ್ಗೆ, ಅನೇಕರನ್ನು ಮನೆಗೆ ಕಳಿಸುತ್ತಿರುವ ಬಗ್ಗೆ ಇವರು ಬರೆದಿದ್ದರು. ಆವತ್ತು ಅಲ್ಲೇ ಒಂದು ಪ್ರತಿಕ್ರಿಯೆ ಬರೆಯಬೇಕೆನಿಸಿದರೂ, ಆ ನಂತರ ಆ ಬಗ್ಗೆ ಮತ್ತೆ ಬರೆಯಬೇಕೆನಿಸಿದರೂ ಮನಸ್ಸಿನಲ್ಲಿ ಅನಿಸುತ್ತಿರುವುದನ್ನೆಲ್ಲ ಹೊರಹಾಕಬಹುದಾದ ಸುಲಭದ ರೀತಿ ಹೊಳೆಯದೆ ಸುಮ್ಮನಾದೆ.

ಈ ಒಬ್ಬಳು ಒಬ್ಬಳಾಗಿರದೆ ಯಾರೋ ಒಬ್ಬನು ಕೂಡಾ ಆಗಿರಬಹುದು ಮತ್ತು ತಮಿಳ ಆಗಿರದೆ ಕನ್ನಡಿಗನೂ/ಳೂ ಆಗಿರಬಹುದು. ಆದರೂ ಮನನೊಂದು ಬರೆಯುವಾಗ ಇದ್ದಕ್ಕಿದ್ದಂತೆ ಆತ/ಅವಳು ಗಂಡೋ, ಹೆಣ್ಣೋ, ಕನ್ನಡಿಗನೋ, ತಮಿಳನೋ, ಹಿಂದುವೋ, ಮುಸ್ಲಿಮೋ ಎಂಬುದೆಲ್ಲ ಮುಖ್ಯವಾಗಿ ಬಿಡುವುದನ್ನು ಗಮನಿಸಿ. ಇದು ತಪ್ಪು ಎಂದು ನಮಗೆಲ್ಲರಿಗೂ ಗೊತ್ತಿದೆ, ಅದನ್ನು ಹೇಳಬೇಕಿಲ್ಲ. ಹಾಗೆಯೇ ಸದ್ಯ ಈ ರೀತಿ ಹಿಡಿತ ಸಾಧಿಸಿ ಮೆರೆಯುತ್ತಿರುವ ವ್ಯಕ್ತಿಯ ಅವತರಣಕ್ಕಿಂತ ಮೊದಲಿನ ಸ್ಥಿತಿ ಹೆಚ್ಚೇನೂ ಭಿನ್ನವಾಗಿರುವುದಿಲ್ಲ ಎನ್ನುವುದು ಕೂಡ ಅಷ್ಟೇ ಕುತೂಹಲಕರ. ಇಷ್ಟೇ, ವ್ಯಕ್ತಿ ಮಾತ್ರ ಬೇರೆಯಾಗಿರುತ್ತಾನೆ/ಳೆ. ಉಳಿದಂತೆಲ್ಲ ಎಲ್ಲಾ ಕುತಂತ್ರ, ರಾಜಕೀಯ ಅಂತೆಲ್ಲ ನಮಗೇನು ಅನಿಸುತ್ತದೋ ಅದೇ ನಡೆಯುತ್ತಿರುತ್ತದೆ. ಹಾಗೇನೂ ನಡೆಯುತ್ತಿರಲಿಲ್ಲ, ಹಿಂದೆ ಎಲ್ಲವೂ ಸರಿಯಾಗಿಯೇ ಇತ್ತು ಅಂತ ಅನಿಸುವುದು ಯಾವಾಗ ಎಂದರೆ ಸ್ವತಃ ನಾವು ಆ ಹಿಂದಿನ ವ್ಯವಸ್ಥೆಯ beneficiaryಯಾಗಿದ್ದಾಗ ಮಾತ್ರ! ಆಗ ಇನ್ನೆಲ್ಲೋ ಇನ್ಯಾರೋ ಅನ್ಯಾಯದ ಬಗ್ಗೆ ಗೊಣಗುತ್ತಿರುತ್ತಾರೆ.

ಆದರೆ ಈ ನನ್ನ ಸ್ನೇಹಿತ ನನ್ನ ವ್ಯಕ್ತಿತ್ವದ ಒಳಪದರಗಳಲ್ಲೂ ಇರುವುದನ್ನು ಗಮನಿಸಿ, ಅವರ ನೋವು ಅನೇಕ ಬಾರಿ ನನ್ನ ನೋವೂ ಆಗಿತ್ತೆನ್ನುವ ಹಿನ್ನೆಲೆಯಲ್ಲಿ ಕೆಲವು ಮಾತುಗಳನ್ನು ಹೇಳಬೇಕೆನಿಸಿದೆ.

ಸಾಧಾರಣವಾದ ಒಂದು ಕೆಲಸ ಹಿಡಿದು ಆರಕ್ಕೇರದೆ ಮೂರಕ್ಕಿಳಿಯದೆ ದುಡಿಯುತ್ತಿರುವ ನನ್ನಂಥವರಿಗೆ ಮದುವೆಯಾಗಿ, ಮಕ್ಕಳು ಮರಿಯಾಗಿ ತಲೆಗೂದಲು ಬೆಳ್ಳಗಾಗಲು ತೊಡಗಿದಂತೆಲ್ಲ ಬದುಕಿನ ಕುರಿತ ಮಹತ್ವಾಕಾಂಕ್ಷೆಗಳು ಕರಗತೊಡಗುತ್ತವೆ. ಇಂಥಲ್ಲಿ ಬಾಸುಗಳ ಸ್ಥಿತಿ ಕೂಡಾ ಹೆಚ್ಚೇನೂ ಭಿನ್ನವಾಗಿರುವುದಿಲ್ಲ. ಹರೆಯದಲ್ಲಿ ಆಶೆಗಳ ವಿರುದ್ಧ ಹೋರಾಡುತ್ತ ಕಳೆಯುವ ನಾವುಗಳು ಈ ವಯಸ್ಸಿನಲ್ಲಿ ವೈರಾಗ್ಯದ ವಿರುದ್ಧ ಹೋರಾಟ ಸುರು ಮಾಡುವುದು ಕೂಡ ವಿಚಿತ್ರವಾಗಿರುತ್ತದೆ! ಇಂಥ ಸಂದರ್ಭದಲ್ಲಿ ಕೆಲಸ ಮಾಡುವ ಸ್ಥಳ ಹಿತವೆನ್ನಿಸುವಂತೆ ಇದ್ದರೆ ಮಾತ್ರ ಬದುಕು ಸಹ್ಯವೆನಿಸುತ್ತದೆ.

ಬದುಕಿನ 25-58ರ ನಡುವಿನ ಸುಮಾರು 33ವರ್ಷಗಳಲ್ಲಿ ಸೂರ್ಯ ಹೊಳೆಯುತ್ತಿರುವ ದಿನದ ಭಾಗವನ್ನೆಲ್ಲ ಈ ರೀತಿ ದುಡಿಯುವ ಸ್ಥಳದಲ್ಲೇ ಕಳೆಯುತ್ತೇವೆ. ಎಷ್ಟೋ ಬಾರಿ ನಮ್ಮದೇ ಸಂಸಾರದ ಜೊತೆ ನಾವು ಕಳೆಯುವ ಸಮಯ ಇದಕ್ಕಿಂತ ಕಡಿಮೆ! ಚೆನ್ನಾಗಿ ಬದುಕಬೇಕು ಎನ್ನುವ ಒಂದೇ ಆಸೆಯಿಂದ ಶೇಷ ಜಗತ್ತಿನ ಇರವನ್ನೇ ಮರೆತು ಹೀಗೆ ಹಣದ ಬೆನ್ನು ಹತ್ತಿ ಧೀಗುಟ್ಟಿ ಓಡುತ್ತಿರುವ ನಮಗೆ ಆ `ಚೆನ್ನಾದ' ಬದುಕು ಯಾವತ್ತು ತೊಡಗುತ್ತದೆಂಬುದು ಸ್ಪಷ್ಟವಿಲ್ಲದಿರುವುದು ಇನ್ನೊಂದು ವಿಪರ್ಯಾಸ. 58 ಕಳೆದು ನಿವೃತ್ತಿಯಾದ ನಂತರವೇ? ಆ ದಿನಗಳು ಎಷ್ಟೋ ಮಂದಿಯ ಬದುಕಿನಲ್ಲಿ ಬರುವುದೇ ಇಲ್ಲವಲ್ಲ,ಪಾಪ.

ಹೀಗೆ ದುಡಿಯುವ ಸ್ಥಳದ ನೆಮ್ಮದಿ ಬಹಳ ಮುಖ್ಯವಾದದ್ದು. ಅದು ನಮ್ಮ ವ್ಯಕ್ತಿತ್ವವನ್ನು, ಬದುಕಿನ ಉತ್ಸಾಹವನ್ನು, ಸ್ಫೂರ್ತಿಯನ್ನು, ಕನಸನ್ನು, ಹವ್ಯಾಸವನ್ನು ಪೊರೆಯುವ ಬಹುಮುಖ್ಯ ಸಂಗತಿ. ಇದು ಸರಿಯಿಲ್ಲ ಎನಿಸುವ ಭಾವ ನಮ್ಮನ್ನು ಕೊರೆಯುತ್ತಿದ್ದರೆ ಅದು ನಮ್ಮ ಆಯುಸ್ಸನ್ನೇ ನುಂಗಿಬಿಡುತ್ತದೆ ಮಾತ್ರವಲ್ಲ ಇವತ್ತು ನಾಳೆ ಎನ್ನುವುದರಲ್ಲಿ ವರ್ಷಗಳೇ ಕಳೆದಿರುತ್ತವೆ. ನಾವು ಪರಿಸ್ಥಿತಿಗೆ ಹೊಂದಿಕೊಂಡಿರುತ್ತೇವೆ ಮಾತ್ರವಲ್ಲ, ಯಾವುದನ್ನು ದ್ವೇಷಿಸುತ್ತಿದ್ದೆವೊ, ಏನನ್ನು ಕಂಡು ಅಸಹ್ಯ ಪಡುತ್ತಿದ್ದೆವೊ ನಾವೂ ಅದೇ ಆಗಿಬಿಟ್ಟಿರುತ್ತೇವೆ! ಇದು ದುರಂತ.

ಮನುಷ್ಯನ ಇನ್ನೊಂದು ವಿಚಿತ್ರ ಗಮನಿಸಿ. ಎಲ್ಲೋ ಇರುವ, ಪರಸ್ಪರ ಪರಿಚಯವೇ ಇಲ್ಲದ ಮಂದಿ ಇನ್ಯಾರದೋ ನೋವಿಗೆ, ಸಂಕಟಗಳಿಗೆ ಸ್ಪಂದಿಸುತ್ತಾರೆ. ಅರ್ಥಮಾಡಿಕೊಳ್ಳುವ ಸೌಜನ್ಯ, ಸಂವೇದನೆ ಎಲ್ಲ ತೋರಿಸುತ್ತಾರೆ. ಪ್ರೀತಿ ಕೊಡಲು, ಪಡೆಯಲು ಮನಸ್ಸು ಹೃದಯ ತೆರೆದಿಡುತ್ತಾರೆ. ಎಲ್ಲೋ ದೂರದಲ್ಲಿರುವ ಯಾರೋ ಒಬ್ಬರಾಗಿರುವಷ್ಟು ಹೊತ್ತು ಹಾಗೆ ಸ್ಪಂದಿಸಿ ಅಂತರಂಗ ಕಲಕಿತೆಂದು ಮುಚ್ಚುಮರೆಯಿಲ್ಲದೆ ಹೇಳಬಲ್ಲವರಾಗುತ್ತೇವೆ, ಎಲ್ಲರಂತೆ ತಾನೂ ಎಂಬ ನೆಲೆಯಲ್ಲಿ ನಗ್ನನಾಗಿ ನಿಲ್ಲಬಲ್ಲ ಸರಳ ಸಹಜ ಮನಸ್ಥಿತಿ ತೋರಿಸಬಲ್ಲವರಾಗುತ್ತೇವೆ. ಅದೇ ಮಂದಿ ತಮ್ಮ ದಿನನಿತ್ಯದ ಸಹವರ್ತಿಗಳ ಬಗ್ಗೆ ಅಷ್ಟು ಔದಾರ್ಯ ತೋರಿಸಲು ಹಿಂದೆ ಮುಂದೆ ನೋಡುತ್ತಾರೆ! ಇದೊಂದು ವಿಪರೀತ. ನಾವು ನೀವೆಲ್ಲ ದುಡಿಯುತ್ತಿರುವ ಪರಿಸರದಲ್ಲಿ `ಇನ್ನು ಇಲ್ಲಿ ದಿನ ತೆಗೆಯುವುದು ಸಾಧ್ಯವೇ ಇಲ್ಲ' ಅನಿಸುವಂತೆ ಮಾಡಿರುವ ಅದೇ ಮಂದಿ ಆಳದಲ್ಲಿ ಇಲ್ಲಿನ ಅಪರಿಚಿತರಿಗಿಂತ ಯಾವ ವಿಧದಲ್ಲೂ ಕಡಿಮೆಯವರಲ್ಲ ಎಂಬ ಸತ್ಯವನ್ನು ನಾವು ಯಾಕೆ, ಸ್ವತಃ ಅವರೇ ಮರೆತಿರುತ್ತಾರೆ! ಅಥವಾ ಇದನ್ನೇ ಹೀಗೆ ಹೇಳಬಹುದು, ಅವರೇ ಯಾಕೆ, ಸ್ವತಃ ನಾವೇ ಮರೆತಿರುತ್ತೇವೆ!

ಈ ಆಳವನ್ನು ನಾವು ಸ್ಪರ್ಶಿಸಲು ಸಾಧ್ಯವಾಗುವುದೆ? ಅಥವಾ ಕನಿಷ್ಠ ಈ ಆಳದ ಅರಿವು ನಮ್ಮನ್ನು ಕೊಂಚ ಸಮಾಧಾನದ ನಿಲುವಿಗೆ ತಲುಪಿಸಬಹುದೆ? ಯಾಕೆಂದರೆ ಕೊನೆಗೂ ನಾವೆಲ್ಲ `ಕೇವಲ ಮನುಷ್ಯರು'. ಎಲ್ಲರ ಆಳದಲ್ಲೂ ಹತಾಶೆ, ಹಪಹಪಿಕೆ, ಸುಖದ ನಿರೀಕ್ಷೆಯಲ್ಲಿ ನಿರಂತರ ನಡೆಯುವ ಅನೂಹ್ಯ ತಡಕಾಟ ನಡೆದೇ ಇರುತ್ತದೆ. ಅಷ್ಟೇಕೆ, ಮನುಷ್ಯ ತನ್ನದೇ ದೇಹವನ್ನು ನೋಡಿ ಅಸಹ್ಯ ಪಟ್ಟುಕೊಳ್ಳುವ ಕ್ಷಣಗಳಿರುತ್ತವೆ. ಹಾಗೆಯೇ ತನ್ನ ವರ್ತನೆಯನ್ನು ನೆನೆದು, ತನ್ನ ಮಾತನ್ನು ನೆನೆದು, ತನ್ನ ಸ್ಥಿತಿಗತಿಯನ್ನು ನೆನೆದು ಕುಗ್ಗುತ್ತಾನೆ. ರಾತ್ರಿ ಮಲಗುವ ಮುನ್ನ ಹಾಸಿಗೆಯ ಮೇಲೆಯೇ ಕೂತು ಹಣದ, ಸಾಲದ ಲೆಕ್ಕಾಚಾರ ಹಾಕಿ ಸುಸ್ತಾಗಿ, ಸುಸ್ತಾದರೂ ನಿದ್ದೆ ಬರದೆ ಕಂಗಾಲಾಗುತ್ತಾನೆ. ದಿನ ದಿನವೂ ನೆರಳಿನಂತೆ ಅಕ್ಕಪಕ್ಕದಲ್ಲೇ ಸುಳಿಯುತ್ತಿರಬಹುದಾದ ಸಾವನ್ನು ನೆನೆದು ಆತಂಕಗೊಳ್ಳುತ್ತಾನೆ. ಅಂಥ ಕ್ಷಣಗಳಲ್ಲಿ ಆತ ತೀರ ಒಬ್ಬಂಟಿ. ಥೇಟ್ ನಿಮ್ಮಂತೆಯೇ!

Rating
No votes yet

Comments