ಕೊರಗು

ಕೊರಗು

ಕೊರಗು!! ಎಲ್ಲರಿಗೂ...ಎಲ್ಲರಲ್ಲೂ...ಎಲ್ಲದಕ್ಕೂ ಇರುವಂಥದ್ದೇ..


ಆದರೆ ಆ ಕೊರಗು...ಒಳ್ಳೆಯದಕ್ಕೆ ಆದರೆ ಕೊರಗಿದರೂ ತಪ್ಪಿಲ್ಲ...ಅದೇ ಕೊರಗು ಸ್ವಾರ್ಥಕ್ಕಾದರೆ...ಇಡೀ ಜೀವನವೆಲ್ಲ ಕೊರಗುವಂತೆ ಮಾಡಿ...ದೇಹ ಹಾಗೂ ಮನಸು ಎರಡನ್ನೂ ಕೊರಡಿನಂತೆ ಮಾಡಿ ಬಿಡುತ್ತದೆ.


ಅವನಿಗಿದ್ದದ್ದೂ ಅದೇ ರೀತಿಯ ಕೊರಗು...ಅದೇ ರೀತಿ ಎಂದರೆ ಇಂಥದೇ ರೀತಿ ಎಂದಲ್ಲ...ಅದಕ್ಕೊಂದು ವಿಶ್ಲೇಷಣೆ...ನಿರ್ಧಾರ....ಕೊಡಲು ಸಾಧ್ಯವಿಲ್ಲ. 


ಅವನಿಗೆ ಚಿಕ್ಕಂದಿನಿದಲೂ ಕೊರಗಿತ್ತು...ಒಂದು ಕೊರಗನ್ನು ಮರೆಯುವಷ್ಟರಲ್ಲಿ ಮತ್ತೊಂದು ಕೊರಗು ಅವನನ್ನು ಕಾಡುತ್ತಿತ್ತು.


ಸಣ್ಣವನಿದ್ದಾಗ...ಅಂದರೆ ಅವನು ಬರೀ ಮೈಯಲ್ಲಿ ಓಡಾಡುವುದನ್ನು ನಿಲ್ಲಿಸಿ...ಒಂದು ಚಡ್ಡಿ ಹಾಕಿಕೊಂಡು ಓಡಾಡುವ ವಯಸ್ಸಿನಲ್ಲಿದ್ದಾಗ ಪಕ್ಕದ ಮನೆಯ ಅವನದೇ ವಯಸಿನ ಹುಡುಗ ಪ್ಯಾಂಟ್ ತೊಟ್ಟು ಓಡಾಡುತ್ತಿದ್ದಾಗ ತನ್ನ ಬಳಿ ಪ್ಯಾಂಟ್ ಇಲ್ಲವಲ್ಲ!!! ಎಂಬ ಕೊರಗು ಕಾಡುತ್ತಿತ್ತು.


ಆ ಕೊರಗನ್ನು ತನ್ನ ಅಪ್ಪ..ಅಮ್ಮನ ಬಳಿ ಹೇಳಿಕೊಂಡು ಆ ಕೊರಗನ್ನು ಮರೆತು ಬಿಡುತ್ತಿದ್ದ...ಆ ವಯಸಿನಲ್ಲಿ ಅವನಿಗದು ತಾನು ಕೊರಗುತ್ತಿದ್ದೇನೆ ಎಂದು ಅನಿಸುತ್ತಿರಲಿಲ್ಲ...


ಆ ವಯಸಿಗೆ ಅವನಿಗೆ "ಪ್ಯಾಂಟ್" ಎಂಬ ವಸ್ತು ಅದ್ಭುತ ವಸ್ತುವಿನಂತೆ ಕಂಡಿತ್ತು....ಕಾಲಾಂತರದಲ್ಲಿ ಅವನಿಗೆ ಅದೊಂದು ಮಾಮೂಲಿ ವಸ್ತು ಎಂದು ತಿಳಿದು ಆ ಕೊರಗು ಮಾಯವಾಗಿತ್ತು.


ಆದರೆ ಮುಂದೆ ಅವನಿಗೆ ಸಣ್ಣ ಸಣ್ಣ ವಸ್ತುಗಳು ಸಿಗುತ್ತಿಲ್ಲವೆಂಬ ಕೊರಗು...ಬೀಜ ರೂಪದಿಂದ ಶುರುವಾಗಿ...ಮೊಳಕೆಯೊಡೆದು...ಗಿಡವಾಗಿ...ಮರವಾಗಿ...ಹೆಮ್ಮರವಾಗಿ ಕಾಡಲು ಆರಂಭಿಸಿದಾಗ ಅವನು ಮಾನಸಿಕವಾಗಿ ಜರ್ಜರಿತನಾಗಿ ಹೋದ.


ಉನ್ನತ ಶಿಕ್ಷಣ ಪಡೆಯಲು ಆಗಲಿಲ್ಲವೆಂಬ ಕೊರಗು...


ಉನ್ನತ ಹುದ್ದೆಯ ಕೊರಗು...


ಸ್ವಂತ ಮನೆ ಇಲ್ಲವೆಂಬ ಕೊರಗು...


ನೋಡಲು ಚೆಂದ ಇಲ್ಲವೆಂಬ ಕೊರಗು..


ಓಡಾಡಲು ಸ್ವಂತ ವಾಹನ ಇಲ್ಲವೆಂಬ ಕೊರಗು...


ಬೇಕೆನಿಸಿದ ವಸ್ತು ಕೊಳ್ಳಲು ಆಗಲಿಲ್ಲವೆಂಬ ಕೊರಗು...


ಅಂದದ ಹುಡುಗಿ ಸಿಗುತ್ತಿಲ್ಲವೆಂಬ ಕೊರಗು...


ಒಳ್ಳೆಯ ಸಂಬಳ ಇಲ್ಲವೆಂಬ ಕೊರಗು...


ಹೀಗೆ ಅವನಿಗೆ ಕೊರಗಲು ಸಾಕಷ್ಟು ವಿಷಯಗಳಿದ್ದವು...ಈಚೆಗೆಂತೂ ಅವನು ಕೊರಗಿ...ಕೊರಗಿ...ಕೊರಗಿನಿಂದ, ವೇದನೆಯಿಂದ, ರೋದನೆಯಿಂದ...ಕೃಶವಾಗಿ,ಬಡವಾಗಿ, ರೋಸಿ ಹೋಗಿ, ಬಳಲಿ ಬೆಂಡಾಗಿ ಹೋಗಿದ್ದ..


ಕೊರಗಿಗೇ ಅವನ ಮೇಲೆ ಬೇಸರ ಬರುವಷ್ಟು ಕೊರಗಿ ಹೋಗಿದ್ದ....


ಕೊರಗನ್ನು ಹತ್ತಿಕ್ಕಲು ಮಾಡದ ಪ್ರಯತ್ನವಿಲ್ಲ...ಸುತ್ತದ ಊರಿಲ್ಲ...ಬೇಡದ ದೇವರಿಲ್ಲ...ತೀರದ ಹರಕೆಗಳಿಲ್ಲ...ಸೇವಿಸದ ಮಾತ್ರೆಗಳಿಲ್ಲ...ಕಾಣದ ಮಾನಸಿಕ ತಜ್ಞರಿರಲಿಲ್ಲ...ಹುಡುಕದ ಅಂತರ್ಜಾಲ ತಾಣವಿಲ್ಲ....


ಕೊನೆಗೆ ತನ್ನ ಕೊರಗನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಮತ್ತಷ್ಟು ಕೊರಗುವಂತೆ ಮಾಡಿತ್ತು...


ಇನ್ನು ತನ್ನ ಕೊರಗಿಗೆ ಸಾವೇ ಪರಿಹಾರ ಎಂದು ನಿರ್ಧರಿಸಿ...ಮರದ ಕೊರಡೊಂದಕ್ಕೆ ಹಗ್ಗವನ್ನು ಬಿಗಿದು ತನ್ನ ಕೊರಳನ್ನು ಅದರೊಳಕ್ಕೆ ಇಟ್ಟು ತನ್ನ ಕೊರಗಿಗೆ ಮುಕ್ತಾಯ ಹಾಡಬೇಕೆಂದು ನಿರ್ಧರಿಸಿ ಮರದ ಬಳಿ ಬಂದಾಗ ಅಲ್ಲೊಬ್ಬ ಭಿಕ್ಷುಕ ಒಂದು ಕಾಲಿಲ್ಲದೆ ಭಿಕ್ಷೆ ಬೇಡುತ್ತಿದ್ದದ್ದು ಕಂಡು ಇವನು ಅವನ ಬಳಿ ಹೋಗಿ ನಿನಗೆ ಕಾಲಿಲ್ಲವೆಂಬ ಕೊರಗು ಕಾಡುತ್ತಿಲ್ಲವೇ ಎಂದು ಕೇಳಿದ


ಅದಕ್ಕೆ ಆ ಭಿಕ್ಷುಕ ಕೊಟ್ಟ ಉತ್ತರದಿಂದ ಇವನ ಕೊರಗೆಲ್ಲ ಕರ್ಪೂರದಂತೆ ಕರಗಿ ಕಾಣದಂತಾಯಿತು...


ಅಸಲಿಗೆ ಭಿಕ್ಷುಕ ಹೇಳಿದ ಮಾತಾದರೂ ಏನು?


ಇವನು ಹೋಗಿ ಭಿಕ್ಷುಕನನ್ನು ಕೇಳಿದಾಗ...ಭಿಕ್ಷುಕ ತನ್ನ ಪಕ್ಕದಲ್ಲಿದ್ದ ಮತ್ತೊಬ್ಬ ಭಿಕ್ಷುಕನನ್ನು ತೋರಿಸಿ..ಅಲ್ಲಿ ನೋಡಿ ಸ್ವಾಮಿ ನಂಗೆ ಒಂದು ಕಾಲಾದರೂ ಇದೆ...ಅವನಿಗೆ ಎರಡೂ ಕಾಲಿಲ್ಲ...ಅವನೇ ಕೊರಗಿಲ್ಲದೆ ಬದುಕುತ್ತಿರುವಾಗ ನಾನೇಕೆ ಕೊರಗಬೇಕು...ಯಾವತ್ತೂ ನಮಗಿಂತ ಕೆಳಗಿರುವವರನ್ನು ನೋಡಿ ನಾವು ತೃಪ್ತಿ ಪಟ್ಟರೆ...ನಮಗೆ ಕೊರಗೆನ್ನುವುದೇ ಇರುವುದಿಲ್ಲವಲ್ಲ ಸ್ವಾಮಿ ಎಂದ...

Rating
No votes yet

Comments

Submitted by partha1059 Tue, 10/09/2012 - 20:12

ನಿಜ‌ ಜಯಂತ್ ಸದಾ ಯಾವುದಕ್ಕಾದರು ಕೊರಗುವುದು ಮನುಷ್ಯನ ಸ್ವಭಾವ. ಅದು ನಿಂತ ದಿನ ಅವನು ತೃಪ್ತ.

Submitted by lpitnal@gmail.com Wed, 10/10/2012 - 06:45

ಶ್ರೀ ಜಯಂತ್ ರಾಮಾಚಾರ್ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಕೊರಗು ಉತ್ತಮ ಲೇಖನ. ನಮಗಿಂತ ಕೆಳಗಿನ ಸ್ಥರದಲ್ಲಿರುವವರನ್ನು ನೋಡಿ ಬದುಕಿನಲ್ಲಿ ತೃಪ್ತಿ ಎಂಬುದಿರಬೇಕೆನ್ನುವ ಪರಿಕಲ್ಪನೆ ಭಿಕ್ಷುಕನಿಂದ ಸಿಕ್ಕಿದ್ದು, ಎಲ್ಲರಿಗೂ ಒಂದು ಅನನ್ಯ ಪಾಠ. ತುಂಬ ಚನ್ನಗಿದೆ. ಉತ್ತಮ ಲೇಖನಮೊಂದನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

Submitted by swara kamath Wed, 10/10/2012 - 16:54

ಜಯಂತ ಅವರೆ ವಂದನೆಗಳು,
ಸುಂದರ ವಾದ ಅರ್ಥಪೂರ್ಣವಾದ ವಿಚಾರವನ್ನು ಮನಸ್ಸಿಗೆ ನಾಟುವಂತೆ ಬರೆದಿರುವಿರಿ.ಇದ್ದುದರಲ್ಲೇ ಸಂತೃಪ್ತ ಜೀವನ ನಡೆಸುವವ ಎಂದೂ ಕೊರಗುದಿಲ್ಲಾ ಅಲ್ಲವೆ? ..................................................ರಮೇಶ್ ಕಾಮತ್

Submitted by bhalle Wed, 10/10/2012 - 18:55

ಸೀಟು ಕೊಡದಿದ್ರೆ ಕೊರಗು, ಸೀಟು ಕೊಟ್ರೆ ಕೊರಗು

ಸೀಟು ಕೊಟ್ರೆ ಒಳ್ಳೇ ಖಾತೆ ಕೊಡಲಿಲ್ಲ ಅನ್ನೋ ಕೊರಗು

ಒಳ್ಳೇ ಖಾತೆ ಕೊಟ್ರೆ ಹಲವಾರು ಜನ ದುಡ್ಡೂ ಹೊಡೆವವರು ಇದ್ದಾರೆ ಅನ್ನೋ ಕೊರಗು

ಖಾತೆ ಚೆನ್ನಾಗಿದೆ, ಮು.ಮ೦. ಸ್ಥಾನ ಸಿಗಲಿಲ್ಲ ಅನ್ನೋ ಕೊರಗು

ಮು.ಮ೦. ಸ್ಥಾನ ಸಿಕ್ರೆ ಐದು ವರ್ಷ ಕೂಡ್ಲಿಕ್ಕೆ ಆಗಲಿಲ್ಲ ಅನ್ನೋ ಕೊರಗು

ಮು.ಮ೦ ಸ್ಥಾನ ಸಿಕ್ರೆ ಪ್ರಾ.ಮ೦. ಸ್ಥಾನ ಸಿಗಲಿಲ್ಲ ಅನ್ನೋ ಕೊರಗು

ಎಲ್ಲ ಅಗ್ಗಿ ಹೋದ ಮೇಲೆ, ತಾನು ಹೋಗಿದ್ದಕ್ಕೆ 'ಜಯ೦ತಿ' ಆಚರಿಸಲಿಲ್ಲ ಅನ್ನೋ ಕೊರಗು (ಇರುವವರಿಗೆ)

ಜಯಂತಿ ಅದ್ದರೆ, ಸರ್ಕಾರಿ ರಜ ಇಲ್ಲ ಅನ್ನೋ ಕೊರಗು

ಯಪ್ಪಾ ... ಶಂಬುಲಿಂಗ ... ಮುಗಿಯೋಣೇ ಇಲ್ಲ

Submitted by Jayanth Ramachar Wed, 10/10/2012 - 19:38

ಕಾವೇರಿ ನೀರು ಬಿಡುತ್ತಿದ್ದಾರೆ ಎಂದು ಕರ್ನಾಟಕದ ರೈತರ ಕೊರಗು, ಕೋರ್ಟಿನ ತೀರ್ಪಿಗೆ ವಿರುದ್ಧವಾಗಿ ಹೋದರೆ ಸೀಟು ಹೋಗುವುದೆಂಬ ಕೊರಗು, ನೀರು ಬಿಡಲು ಒಪ್ಪಿಗೆ ಕೊಡದಿದ್ದರೆ ಮುಂದಿನ ಬಾರಿ ಸಪೋರ್ಟ್ ಕೊಡುವುದಿಲ್ಲ ಎಂಬ ಕೊರಗು...ಹೀಗೆ ಕೊರಗಿನ ಪಟ್ಟಿ ಸಾಗುತ್ತಲೇ ಇರುತ್ತದೆ...ಸಿವನೇ ಸಂಬು ಲಿಂಗ...

Submitted by Chikku123 Thu, 10/11/2012 - 11:56

ನಿಮ್ಮ ಕೊರಗು ಚೆನ್ನಾಗಿದೆ!!
ಸಾಯುವವರೆಗೂ ಕೊರಗೇ, ಅದೂ ಇತ್ತೀಚಿನ ವರ್ಷಗಳಲ್ಲಿ ಕೊರಗಿನ ಪ್ರಮಾಣ ಜಾಸ್ತಿಯಾಗಿದೆ ಜಯಂತ್