ಕೊಳಲನೂದುವ ಚದುರನಾರೇ ಪೇಳಮ್ಮ?

ಕೊಳಲನೂದುವ ಚದುರನಾರೇ ಪೇಳಮ್ಮ?

 ಕೇಳ್ದವರ ಹಿಗ್ಗಿಸಿತು ನಾದದಲಿ

ವೇದಗಳ ಹೊಮ್ಮಿಸುತ
ಮರಗಿಡಗಳನೂ ನಲಿಸಿತು;
 
ಕಲ್ಲ ಕರಗಿಸಿತು ನೆರೆನಿಂತ
ಮಿಗಗಳ ಮೈಮರೆಸುತ
ತುರುಗಳಿಗೆ ಸಂತಸವೀಯಿತು;
 
ಗೋವಳರ ಸಡಗರಿಸಿ ಮತ್ತೆಲ್ಲ
ಮುನಿಗಳಿಗೆ ನೆಮ್ಮದಿ ತರುತ
ಸಪ್ತ ಸ್ವರಗಳನೆಲ್ಲೆಲ್ಲು ಹರಡಿತು;
 
ಆ ಮಗುವಿನ ಕೊಳಲ ಉಲಿ
ಸ್ಲಕಲ ಲೋಕಗಳನೂ ಗೆಲ್ಲುತಲಿ
ಓಂಕಾರದೊಳಹುರುಳ ಸಾರಿತು!

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತದ ಶ್ಲೋಕ 2-110):

ಲೋಕಾನುನ್ಮುದಯನ್ ಶ್ರುತೀರ್ಮುಖರಯನ್ ಕ್ಷೋಣೀರುಹಾನ್ ಹರ್ಷಯನ್ 
ಶೈಲಾನ್ವಿದ್ರವಯನ್ ಮೃಗಾನ್ವಿವಶಯನ್ ಗೋಬೃಂದಮಾನಂದಯನ್ | 
ಗೋಪಾನ್ಸಂಭ್ರಮಯನ್ ಮುನೀನ್ ಮುಕುಲಯನ್ ಸಪ್ತಸ್ವರಾನ್ಜೃಂಭಯನ್ 
ಓಂಕಾರಾರ್ಥಮುದೀರಯನ್ವಿಜಯತೇ ವಂಶೀನಿನಾದಃ ಶಿಶೋಃ ||
 
-ಹಂಸಾನಂದಿ
 
ಕೊ: ಕೊಳಲನೂದುವ ಚದುರನಾರೇ ಪೇಳಮ್ಮ ಎನ್ನುವುದು ವ್ಯಾಸರಾಯರ ಒಂದು ಜನಪ್ರಿಯ ಪದ
 
ಕೊ.ಕೊ: ಮೂಲದ ಲಾಲಿತ್ಯ ಕನ್ನಡ ದಲ್ಲಿ ಮಾಯವಾಗಿದ್ದರೂ, ಅದರ ಅರ್ಥವನ್ನು ಆದಷ್ಟೂ ಸರಳವಾಗಿ ತರಲು ಒಂದು ಪ್ರಯತ್ನ ಮಾಡಿರುವೆ ಅಷ್ಟೆ. ಕೃಷ್ಣ ಹುಟ್ಟಿದ ಶ್ರಾವಣ ಕೃಷ್ಣ ಅಷ್ಟಮಿ ಬರುವ ಮುನ್ನ ಈ ಅನುವಾದ ಮಾಡಿದ ಹಿಗ್ಗು ನನಗಿದೆ.
 
ಕೊ.ಕೊ.ಕೊ: ಕೃಷ್ಣನ ಕೊಳಲು ಕಲ್ಲನ್ನೂ ಕರಗಿಸಬಲ್ಲುದಂತೆ. ಅಂತೆಯೇ ಬಾಲಮುರಳಿಕೃಷ್ಭ ಅವರ ಹಾಡುಗಾರಿಕೆಯೂ ಅಂದರೆ ಹೆಚ್ಚೇನಿಲ್ಲ. ಕೃಷ್ಣ ಕರ್ಣಾಮೃತದ ಈ ಶ್ಲೋಕ, ನಂತರ ಕನಕ ದಾಸರ ಒಂದು ದೇವರ ನಾಮವನ್ನು ಇಲ್ಲಿ ಕೇಳಿ ಈ ವರ್ಷದ ಕೃಷ್ಣಾಷ್ಟಮಿಯ ಸಂತಸದಲ್ಲಿ!
 
 
Rating
No votes yet