ಕೊಳಲ ನಾದದ ಗುಂಗು..

ಕೊಳಲ ನಾದದ ಗುಂಗು..

ಕೃಷ್ಣ ಗೋಕುಲ ತೊರೆದು ಹೊರಟಿದ್ದಾನೆ, ಜಗತ್ತನ್ನು ಉದ್ಧರಿಸಲಂತೆ.ಸಂಭ್ರಮದಲ್ಲಿದ್ದಾನೆ. ಈ ಮರುಳು ರಾಧೆಯೋ ಅಂಗಲಾಚುತ್ತಿದ್ದಾಳೆ "ಬೇಡ ನನ್ನುಸಿರೆ,ತೊರೆಯ ಬೇಡ ನನ್ನನ್ನ. ಬದುಕುವ,ಜೀವಿಸುವ ಹಂಬಲ ನನಗೆ.ಬಿಟ್ಟು ಹೋಗಬೇಡ ನನ್ನ..."
ಮೊದ ಮೊದಲು ಹಾಗೆ ಹೀಗೆ ಎಂದು ಹಲವಾರು ಕಾರಣಗಳನ್ನು ಕೊಟ್ಟು ರಾಧೆಯಿಂದ ಬಿಡುಗಡೆ ಹೊಂದಲು ನೋಡಿದ ಮೋಹನ. ಉಸಿರುಗಟ್ಟಿಸುತ್ತಿತ್ತು ರಾಧೆಯ ಪ್ರೀತಿ. ಅವನೂ ಬದುಕಬೇಡವೆ?!
ಎಲ್ಲ ಗೋಪಿಯರಂತೆ ಅವಳೂ ಒಬ್ಬಳು ಎಂದಂದುಕೊಂಡ ನಂದಕಂದನಿಗೆ ಬರಬರುತ್ತಾ ಇವಳದ್ಯಾಕೊ ಅತಿಯಾಯಿತು ಎನಿಸಿತು. ಇರಬಾರದೆ ಇವಳೂ ಉಳಿದೆಲ್ಲರಂತೆ? ಇದೇನು ವಿಪರೀತ..." ಕೃಷ್ಣ ಇಂದೇಕೆ ತಡಾ ಮಾಡಿದೆ?", " ಕೃಷ್ಣ ಉಳಿದ ಗೋಪಿಯರೊಡನೆ ಅದೇನು ಅಷ್ಟೋಂದು ಸಲುಗೆ? ಎಷ್ಟು ಬೇಕೊ ಅಷ್ಟಿದ್ದರೆ ಸಾಲದೆ?", "ಮೋಹನ ನಿನ್ನ ಮುರಳಿಗೆ ಉಸಿರು ನಾನಾಗಬೇಕು,ನಿನ್ನಲ್ಲಿ ಸಂಪೂರ್ಣ ಒಂದಾಗಿಸಿಕೊ ನನ್ನ. ಇಲ್ಲಾ ನನ್ನನ್ನ ನಿನ್ನ ಮುರುಳಿಯನ್ನಾದರೂ ಮಾಡಿಕೊಂಡುಬಿಡು ನನ್ನೊಳಗೆ ನಿನ್ನುಸಿರು ತುಂಬಲಿ. ಜೀವಿಸುತ್ತೇನೆ ರಾಗವಾಗಿ ನಿನ್ನೊಂದಿಗೆ"...
ಬರೀ ಇಂಥ ಉಸಿರುಗಟ್ಟಿಸುವ ಮಾತುಗಳೆ ಎಲ್ಲ. ನಿಜ ನಾನೂ ಅವಳನ್ನ ಪ್ರೀತಿಸುತ್ತೇನೆ. ಹಾಗಂತ ನನ್ನ ಜಗತ್ತು ಅವಳಿದ್ದಲ್ಲಿಗೇ ಸೀಮಿತವಾಗಿಬಿಡಬೇಕೆ?! ಬೇಡವೆ ಉಳಿದವರಿಗೂ ನನ್ನ ಪ್ರೀತಿ? ಪಾಪ ಅವರ್ಯಾಕೆ ಇವಳಿಗಾಗಿ ನನ್ನ ಪ್ರೀತಿಯಿಂದ(!?)ವಂಚಿತರಾಗಬೇಕು? ಜಗತ್ತು ನನಗಾಗಿ ಕಾಯುತ್ತಿದೆ ಆಚೆ ಕಾತರದಿಂದ. ಉದ್ಧರಿಸಬೇಕಿದೆ ಲೋಕವನ್ನು.ಇಲ್ಲಾಡಿದ ನಾಟಕವನ್ನೇ ಎಲ್ಲೆಡೆ ಆಡಬೇಕಿದೆ ನಾನು ಭಾಷೆ ಬದಲಿಸಿ. ಇವಳನ್ನು ಉದ್ಧರಿಸಿ ಆಯಿತಲ್ಲ ಮತ್ತೇನಿಲ್ಲಿ ನನ್ನ ಕೆಲಸ. ದುಷ್ಟರನು ಸಂಹರಿಸಬೇಕಿದೆ ತುರ್ತಾಗಿ! ನಿರ್ಗಮಿಸಿದ ಜಗದ್ಧೋಧಾರಕ ಗೋಕುಲದಿಂದ... ರಾಧೆ ಏನಾದಳು?

Rating
No votes yet

Comments