ಕೋಗಿಲೆಯೇ
ಕೋಗಿಲೆಯೇ
ಓ ಪ್ರೀಯ ಕೋಗಿಲೆಯೆ ಹಾಡುನೀ ಎದೆತುಂಬಿ
ನಿನ್ನ ಕೂಹೂ ರವದಿ ಜಗದ ಪ್ರೇಮವು ಅರಳಲಿ ||
ನರ್ಮದಾ ನದಿಯು ತಾನುಕ್ಕಿ ಪ್ರವಹಿಸಿದಂತೆ
ಗುಹೆಯ ಬಾಗಿಲಿಗಿಟ್ಟ ಬಿಂದಿಗೆಯು ತುಂಬಿದ ಹಾಗೆ
ಗಗನದೆತ್ತರವೇರಿ ಸಾಗರದ ಅಗಲದಲಿ
ಹರಿದು ಹೊಮ್ಮಲಿ ನಿನ್ನ ಹಾಡು ಕೋಗಿಲೆಯೇ ||
ಸೊಂಪಾಗಿದೆ ನಿನ್ನ ಬನದಿ ಮಾಮರ ಚಿಗುರು
ನೀನುಂಡು ಸುಖವಾಗಿ ಹಾಡುತಿರು ಕುಕಿಲ
ಚಿಗುರುಂಡು ಸೊಗವುಂಡು ನಲಿದು ಚಿಮ್ಮಿಸುತುಸುರು
ನಿನ್ನ ಎದೆಯಾಳದಲಿ ಹೊಮ್ಮಿದುಸಿರುಗಳ ||
ನಿನ್ನ ಕೂಹೂರವದಿ ಎನ್ನ ಚೇತನವರಳಿ
ಘಮ್ಮಿಸಲಿ ಆನಂದ ಸೌಗಂಧದಿಂದ
ಇದು ನನ್ನ ಸೋಪಜ್ಞ ಅದು ನಿನ್ನ ನಿರ್ಮಜ್ಞ
ಇದಕಾಗಿಯೇ ಬಾಳಿ ಬದುಕಿದನು ಸರ್ವಜ್ಞ
ಬೇಕಿಲ್ಲ ದುಗುಡಗಳು ಸಂಕಟದ ನೋವುಗಳು
ನಲಿವೊಂದೆ ನಿನ್ನ ರವ ನೀಡುತಿರಲಿ
ಇದಕೆಂದು ಬದುಕಿರುವೆ ಉಲಿದೆಲ್ಲ ಕಳೆದಿರುವೆ
ನಿನ್ನ ಸ್ನೇಹದ ಸವಿಯ ಸವಿಯುತಿರಲಿ ||
- ಸದಾನಂದ
Rating