ಕೋಲೇ ಬಸವ
<a href="http://picasaweb.google.com/ishwar.shastri/KOULEBASAVA/photo?authkey=asVrV5eFEgY#5174151881877315426"><img src="http://lh3.google.com/ishwar.shastri/R85HuQU3X2I/AAAAAAAAAyY/droCxBBvPx4/s400/Copy%20of%2018%20FEB%202008%20202.jpg" /></a>
ಕೋಲೇ ಬಸವ
"ಅದೇನು. ಕೋಲೇ ಬಸವನ ಹಾಗೆ ಎಲ್ಲದಕ್ಕೂ ತಲೆ ಅಲ್ಲಾಡಿಸುತ್ತಿದ್ದೀಯಲ್ಲಾ" ಎನ್ನವ ಮಾತನ್ನು ಎಲ್ಲರೂ ಹೇಳಿರುತ್ತಾರೆ ಅಥವಾ ಕೇಳಿರುತ್ತಾರೆ.
ಚಿತ್ರದಲ್ಲಿರುವುದು ಕೋಲೇ ಬಸವ. ‘ಹೌದು ಬಸವಾ? ಎಂದರೆ ಅದು ಹೌದೆಂದು ತಲೆ ಹಾಕುತ್ತದೆ ಅಲ್ಲ ಬಸವಾ? ಎಂದರೆ ಅದು ಅಲ್ಲಾ ಎಂದು ತಲೆ ಅಲ್ಲಾಡಿಸುತ್ತದೆ’ ಹೀಗೆ ಎಲ್ಲದಕ್ಕೂ ತಲೆಹಾಕುವವರನ್ನು ಕೋಲೇಬಸವ ಎನ್ನುತ್ತಾರೆ. ಈ ಹೌದು ಅಲ್ಲಾಗಳ ಸೂತ್ರದ ದಾರ ಮೂಗುದಾಣ ಹಿಡಿದ ಅದರ ಸರದಾರನ ಕೈಯಲ್ಲಿ ಇರುತ್ತದೆ. ಇದೊಂದು ಆಟ. ಮನೆಬಾಗಿಲಿಗೆ ಬಂದ ಮನೋರಂಜನೆ.ಕೋಲೇಬಸವನ ಆಟ ಬಹಳ ಸೊಗಸಾಗಿರುತ್ತದೆ.
‘ಹೆಂಡತಿ ತವರಮನೆಗೆ ಹೊರಟಾಗ ಅವಳ ಹೆಜ್ಜೆ ಹೇಗಿರುತ್ತದೆ ತೋರಿಸು ಬಸವಾ’ ಎಂದರೆ ಬಸವನ ನಡಿಗೆ, ಮದ್ಯಾನ್ಹದ ಮ್ಯಾಟನಿ ಷೋಗೆ ಹೊರಟ ಆಂಟಿಯ ತರದಲ್ಲಿ ವೇಗವಾದ/ ಗೆಲುವಿನ ನಡುಗೆ ಇರುತ್ತದೆ. ‘ ಹೆಂಡತಿ ಗಂಡನ ಮನೆಗೆ ಹೊರಟಾಗ ಹೇಗೆ ನಡೆಯುತ್ತಾಳೆ’ ತೋರಿಸು ಎಂದರೆ, ಕಲ್ಲಿದ್ದಲು ತುಂಬಿದ ಗೂಡ್ಸಗಾಡಿ ಉಸ್ಸಪ್ಪೋ ಎಂದು ನಡೆಯುವಂತಿರುತ್ತದೆ, ಆ ಬಸವನ ನಡಿಗೆ . ಕೆಲವು ನೃತ್ಯಗಳು ಕೆಲವು ಆಟಗಳು- ಯಜಮಾನ ಹಾಗೂ ಅವನ ಕುಟುಂಬದ ಸದಸ್ಯರ ಹೊಟ್ಟೆ ತುಂಬುವ ಕುಲ ಕಸುಬು.
ಅಂಗಾತ ಮಲಗಿದ ಮಾಲಿಕನ ಎದೆಮೇಲೆ ಎರಡೂ ಮುಂಗಾಲನ್ನೂರಿ ಬಸವನಿಂತರೆ ನೋಡುತ್ತಿರುವ ಎಳೆ ಬಾಲಕರಿಗೆ ಸಣ್ಣನಡುಕ. ಹೊಟ್ಟೆಯಲ್ಲಿ ತಳಮಳ. ‘ಮದುವೆ ಆಟದಲ್ಲಿ’ ಕಪಿಲೆ ಹಾಗೂ ಬಸವನ ಮದುವೆ, ಹೆಂಗಳೆಯರಿಂದ ಮೊರ ತುಂಬಿದ ಬಾಗೀನ ಸ್ವೀಕಾರ-ಯಜಮಾನನಿಂದ!ಈ ಅಕಳು ಎತ್ತುಗಳ ಮಲಮೂತ್ರವನ್ನೂ ನಿಯಂತ್ರಿಸುವ ಶಕ್ತಿ ಅದರ ಮಾಲಿಕನಿಗಿದೆ. ಹಳ್ಳಿಯಲ್ಲಿ ದುಡ್ಡಿದ್ದವರ ಮನೆಗೆ ಇದ್ದPದ್ದಂತೆ ನುಗ್ಗಿ, ಒಳಗೆ ಪ್ರವೇಶಿಸಿ ಅಲ್ಲಿ ತಾಜಾ ತಾಜಾ ಗೋ ಮೂತ್ರ ಗೋ ಮಯಗಳನ್ನು ಕಪಿಲೆ ನೇರವಾಗಿ ಸಿಂಪಡಿಸಿದಾಗ ಮನೆಯಾತನ ಭಾಗ್ಯ ತೆರೆಯಿತೆಂದು
, ಮನೆಯಾತನಿಗೆ ಒತ್ತಾಯದಿಂದ ಮನವರಿಕೆ ಮಾಡಿಸಿ ೫೦-೧೦೦ ಕಕ್ಕಿಸುವ ಕೆಲಸವನ್ನು ಕಪಿಲೆ ತನ ಯಜಮಾನನ ನಿರ್ದೇಶನದಲ್ಲಿ ಸೊಗಸಾಗಿ ನಟಿಸುತ್ತದೆ . ಗುಲಬರ್ಗಾ ಜಿಲ್ಲೆಯ ಹತ್ತಿಕುಣಿಯಲ್ಲಿ ನನ್ನಮನೆಗೆ ಹೀಗೆ ನುಗ್ಗಿಸಿ ನನ್ನ ಕೈಯಿಂದಲೂ ಹಣ ಕಕ್ಕಿಸದೇ ಬಿಡಲಿಲ್ಲ. ಕಪಿಲೆ ಎಂದರೆ, ವಸಂತದಲ್ಲಿ ಕಾಣುವ ಚಿಗುರೆಲಯ ನಸುಗೆಂಪು ಬಣ್ಣ. ಜನರು ಈ ಬಣ್ಣದ ಅಕಳನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಜನಪದದಲ್ಲಿ ಕಪಿಲೆ ಎಂಬುದು ಹಸುವಿಗೆ ಪರ್ಯಾಯ ಪದವೂ ಆಗಿಬಿಟ್ಟಿದೆ. ಕಪಿಲೆಬಸವ ಎನ್ನುವ ಪದವು ಸವೆದು ಸವೆದು ಕೋಲೇಬಸವ ಆಗಿದೆ.
ಕೆಲವು ಪದಗಳು ನಶಿಸಿ ಹೋಗುತ್ತಿವೆ. ಕೆಲ ಕುಲಕಸುಬುಗಳೂ ನಶಿಸಿ ಹೋಗುತ್ತಿವೆ. ಚಿತ್ರದಲ್ಲಿ ನಿಂತ ಹೀರೋನಿಗೆ ಯಾವ ಆಟವೂ ಬರುವುದಿಲ್ಲ. ಕರ್ಕಶವಾಗಿ ಪ್ಯಾ ಆ ಆಆಆಆಆ ಎಂದು ಊದಿ ಬದುಕುವುದೊಂದೇ ಗೊತ್ತು.
ಇನ್ನೊಂದ್ಚೂರು;- ಶಬ್ಧಗಳು ಹುಟ್ಟುತ್ತವೆ. ಮುಂದೆ ಸಾಯಲೂಬಹುದು. ಬೇರೆ ಅರ್ಥ ಧರಿಸಬಹುದು. ಒಂದು ಉದಾಹರಣೆ. ನಾನು ಒಂದು ಸಾರೆ ಏರಿಯಲ್ ಎಂಬ ಪದವನ್ನು ಬಳಸಿದಾಗ ನನ್ನ ಮಗ ಹಾಗೆಂದರೇನು ಎಂದ. ಆತನು ಅದನ್ನು ನೋಡಿದ್ದಿಲ್ಲ.. ನಮ್ಮ ತಾತನೂ ನೋಡಿರಲಿಲ್ಲ. ತಾತ ನಮ್ಮ ಮನೆಗೆ ಬಂದಾಗ ಒಗೆದ ಬಟ್ಟೆಯನ್ನು ಅದರ ಮೇಲೆ ಒಣಗಿಸಹೋಗಿ ಕರಂಟ್ ಶಾಕ್ ಹೊಡೆಸಿಕೊಂಡಿದ್ದ. ಇಂದಿದ್ದವು ಮುಂದೆ ಇರದಿರಬಹುದು. ಅರ್ಥವ್ಯಾಪ್ತಿ ಬದಲಾಗಬಹುದು. ವಿರುದ್ಧ ಪದವೇ ಆಗಿಬಿಡಬಹುದು.
ಕರಂಟ ರೇಡಿಯೋಗೆ ತಾಮ್ರದ ತಂತಿಯನು ಎನ್ಟೆನಾ ಆಗಿ ಬಳಸುತ್ತಿದ್ದರು. ಮನೆಯ ಹೊರಗಡೆಗೆ ೨-೩ ಬಿದಿರು ಗಳಗಳನ್ನು ನೆಟ್ಟು ತಂತಿಯನ್ನು ಅದಕ್ಕೆ ಕಟ್ಟುತ್ತಿದ್ದರು. ಗೊತ್ತಿಲ್ಲದವರು ಅದನ್ನು ಬಟ್ಟೆ ಒಣ ಹಾಕಲು ಉಪಯೋಗಿಸುವ ತಂತಿ ಎಂದು ತಿಳಿದುಕೊಳ್ಳುತ್ತಿದ್ದರು. ಈ ಏರಿಯಲ್ ಎಂಬ ವಸ್ತು ಹಾಗೂ ಏರಿಯಲ್ ಎಂಬ ಪದವು ಕೇವಲ ೨೫-೩೦ ವರ್ಷಮಾತ್ರ ಚಲಾವಣೆಯಲ್ಲಿ ಇತ್ತು-ಅನಂತರ ಟ್ರಾನ್ಸಿಸ್ಟರ್ ಎನ್ಟೆನಾಗಳ ರೇಡಿಯೋಗಳ ಕಾಲ. ನನ್ನ ತಂದೆಯವರ ಬಾಲ್ಯದಲ್ಲಿಲ್ಲದ ಏರಿಯಲ್ ವೃದ್ಧಾಪ್ಯದಲ್ಲೂ ಇರಲಿಲ್ಲ. ಬಹುಶಃ ಇನ್ನು ಮುಂದಿನ ಮಕ್ಕಳು ಟ್ರಾನ್ಸಿಸ್ಟರ್ ರೇಡಿಯೋವನ್ನೂ ನೋಡದಿರಬಹುದು.