ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹದಿನಾಲ್ಕು

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹದಿನಾಲ್ಕು

“ಹೌದು. ಮನುಷ್ಯ ಮನುಷ್ಯನ ಹಾಗೆ ಬದುಕದೆ ಇದ್ದಾಗ ಅವನು ಪ್ರಾಣಿಗಿಂತ ಕೀಳು. ನಾನು ಹೀಗೆ, ಹಂದಿಯ ಹಾಗೆ ಇದ್ದೆ. ಬೇರೆಯ ಹೆಂಗಸರು ನನಗೆ ಪ್ರಲೋಭನೆ ಒಡ್ಡುವುದಕ್ಕೆ ಅವಕಾಶ ಕೊಟ್ಟಿಲ್ಲ. ಆದ್ದರಿಂದ ನಾನು ಪ್ರಾಮಾಣಿಕ, ನೀತಿವಂತ. ನಾವು ಆಗಾಗ ಜಗಳವಾಡಿದರೂ ಅದು ನನ್ನ ಹೆಂಡತಿಯ ತಪ್ಪೇ ಹೊರತು ನನ್ನದಲ್ಲ ಎಂದು ನಂಬಿಕೊಂಡಿದ್ದೆ, ಅದನ್ನು ನೆನೆದರೆ ಭಯವಾಗುತ್ತದೆ.
“ಆದರೆ ತಪ್ಪು ಅವಳದಲ್ಲ. ಅವಳು ಹೆಂಗಸರು ಹೇಗಿರುತ್ತಾರೋ ಹಾಗೇ ಇದ್ದಳು. ನಮ್ಮ ಶ್ರೀಮಂತ ಸಮಾಜದ ಪರಿಸ್ಥಿತಿಯಲ್ಲಿ ಯಾವ ತತ್ವಗಳಿಗೆ ಅನುಸಾರವಾಗಿ ಹೆಂಗಸರನ್ನು ಬೆಳೆಸುತ್ತಾರೋ ಹಾಗೇ ಬೆಳೆದಿದ್ದಳು. ನಮ್ಮ ಹೆಣ್ಣುಮಕ್ಕಳಿಗೆ ಹಾಗೆ ಬೆಳೆಯುವುದಲ್ಲದೆ ಬೇರೆ ದಾರಿಯೂ ಇಲ್ಲ. ಹೆಂಗಸರ ಹೀನ ದೀನ ಸ್ಥಿತಿಯ ಬಗ್ಗೆ ಎಷ್ಟೊಂದು ಮಾತು ಕೇಳುತ್ತೇವೆ, ಹೆಂಗಸರು ಹೇಗೆ ಇರಬೇಕು ಅನ್ನುವ ಬಗ್ಗೆ ಎಷ್ಟೊಂದು ಆದರ್ಶದ ಮಾತು ಕೇಳುತ್ತೇವೆ. ಎಲ್ಲವೂ ಬರೀ ಬುರುಡೆ. ನಮ್ಮ ಹೆಂಗಸರ ಶಿಕ್ಷಣ ನಿಜವಾದ ಜಗತ್ತಿನಲ್ಲಿ ಅವರ ಬಗ್ಗೆ ನಿಜವಾದ ಯಾವ ಭಾವನೆಗಳು ಧೋರಣೆಗಳು ಇವೆಯೋ ಅದರಿಂದ ದೊರೆಯುತ್ತಿದೆಯೇ ಹೊರತು ಹೆಂಗಸರ ಬಗ್ಗೆ ನಾವು ಕಟ್ಟಿಕೊಂಡಿರುವ ಆದರ್ಶಗಳಿಂದಲ್ಲ. ಹೆಣ್ಣು ಇರುವುದೇ ಗಂಡಸಿಗೆ ಸಂತೋಷ ಕೊಡುವುದಕ್ಕಾಗಿ ಅನ್ನುವುದು ಜಗತ್ತಿನಲ್ಲಿರುವ ನಿಜವಾದ ಧೋರಣೆ. ಅದನ್ನು ನೆರವೇರಿಸುವಂಥ ಶಿಕ್ಷಣವೇ ಹೆಂಗಸರಿಗೆ ದೊರೆಯುತ್ತಿದೆ. ಚಿಕ್ಕಂದಿನಿಂದಲೂ ಅವಳು ತನ್ನ ಚೆಲುವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಅನ್ನುವ ಲೆಕ್ಕಾಚಾರವನ್ನೇ ಕಲಿಸುತ್ತೇವೆ. ಪ್ರತಿಯೊಬ್ಬ ಯುವತಿಯೂ ಹಾಗೆಯೇ ಯೋಚಿಸುವ ಅಭ್ಯಾಸ ಬೆಳೆಸಿಕೊಂಡಿರುತ್ತಾಳೆ.
“ಯಜಮಾನರನ್ನು ತೃಪ್ತಿಗೊಳಿಸುವ ರೀತಿಯಲ್ಲೆ ಗುಲಾಮರನ್ನು ಬೆಳೆಸುವ ಹಾಗೆಯೇ ಗಂಡಸರನ್ನು ಆಕರ್ಷಿಸುವುದೇ ಹೆಣ್ಣಿನ ಪರಮ ಗುರಿ ಎಂಬಂತೆ ಹುಡುಗಿಯರನ್ನು ಬೆಳೆಸುತ್ತೇವೆ. ‘ಇದು ಕೆಟ್ಟ ರೀತಿಯ ಪೋಷಣೆಯಲ್ಲಿ ಬೆಳೆದ ಹುಡುಗಿಯರಿಗೆ ಅನ್ವಯವಾಗುತ್ತದೆ, ಹೆಣ್ಣಿಗೆ ಬೇರೆ ರೀತಿಯ ಶಿಕ್ಷಣದ ಅವಕಾಶವೂ ಇದೆ’ ಅನ್ನಬಹುದು ನೀವು. ಸ್ಕೂಲು ಕಾಲೇಜುಗಳಿಗೆ ಹೋಗಿ ಮೃತಭಾಷೆಗಳನ್ನು ಕಲಿತರೆ, ಸೂಲಗಿತ್ತಿಯ ಕಸುಬು ಕಲಿತರೆ, ಅಥವ ವೈದ್ಯಕೀಯ ಕಲಿತರೆ, ಸಂಗೀತ ಕಲಿತರೆ, ಸ್ವತಂತ್ರಳಾಗುತ್ತಾಳೆ ಅನ್ನಬಹುದು. ಸುಳ್ಳು. ಎಲ್ಲ ಬಗೆಯ ಮಹಿಳಾ ಶಿಕ್ಷಣಕ್ಕೂ ಗಂಡನ್ನು ಆಕರ್ಷಿಸುವುದನ್ನು ಕಲಿಸುವುದೇ ಗುರಿ.
“ಕೆಲವರು ಸಂಗೀತದ ಮೂಲಕವೋ ಗುಂಗುರು ಕೂದಲಿನ ಮೂಲಕವೋ ಆಕರ್ಷಿಸಿದರೆ ಇನ್ನು ಕೆಲವು ಹೆಂಗಸರು ವಿಜ್ಞಾನ ಅಥವ ನಾಗರಿಕ ಪ್ರಜ್ಞೆಯ ಮೂಲಕ ಗಂಡನ್ನು ಆಕರ್ಷಿಸಲು ಕಲಿಯುತ್ತಾರೆ. ಬೇರೆ ಗುರಿ ಇಲ್ಲದೆ ಇರುವುದರಿಂದ ಮಹಿಳಾ ಶಿಕ್ಷಣದ ಉದ್ದೇಶವೂ ಅದೇ-ಗಂಡನ್ನು ವಶಪಡಿಸಿಕೊಳ್ಳುವ ಸಲುವಾಗಿ ಗಂಡನ್ನು ಮರುಳುಮಾಡಿ ಸೆಳೆಯುವುದು. ಗಂಡಸರೇ ಇರದಂಥ ಮಹಿಳಾ ಶಿಕ್ಷಣ ಕ್ರಮವನ್ನೂ, ಮಹಿಳಾ ವಿಜ್ಞಾನವನ್ನೂ ಕಲ್ಪಿಸಿಕೊಳ್ಳಿ ನೋಡೋಣ. ಹೆಣ್ಣು ಕಲಿತಿದ್ದಾಳೆ ಎಂದು ಗಂಡಿಗೆ ಗೊತ್ತಾಗದಂತೆಯೂ ಕಲಿತ ಹೆಣ್ಣು ಇರುವುದನ್ನು ಕಲ್ಪಿಸಿಕೊಳ್ಳಿ. ಇಲ್ಲ! ಕನ್ಯತ್ವವಲ್ಲ ಮದುವೆಯೇ ಹೆಣ್ಣಿನ ಪರಮ ಗುರಿ ಆಗಿರುವವರೆಗೆ ಯಾವ ಶಿಕ್ಷಣವೂ ಯಾವ ಕಾಲೇಜೂ ಹೆಣ್ಣನ್ನು ಬದಲಿಸಲಾರದು. ಮೈ ಸುಖವೇ ಮುಖ್ಯವಲ್ಲ ಎಂದು ತಿಳಿಯದವರೆಗೂ ಹೆಣ್ಣು ಗುಲಾಮಳಾಗಿಯೇ ಇರುತ್ತಾಳೆ. ಮದುವೆಯಾಗಿರದ ಹೆಣ್ಣುಗಳು ತಮ್ಮ ಆಯ್ಕೆಯನ್ನು ಉಳಿಸಿಕೊಳ್ಳುವುದಕ್ಕೆ, ಮದುವೆಯಾದವರು ಗಂಡಂದಿರ ಮೇಲೆ ತಮ್ಮ ಅಧಿಕಾರವನ್ನು ಸ್ಥಾಪಿಸುವುದಕ್ಕೆ ಹೀಗೆ ಮಾಡಬೇಕು. ಶ್ರೀಮಂತ ವರ್ಗದ ಹೆಂಗಸರಲ್ಲಿ ಕಾಣುವ ಲಂಪಟತನದ ಬಗ್ಗೆ ಆಶ್ಚರ್ಯ ತೋರುವ ಮುನ್ನ ಹೆಣ್ಣುಮಕ್ಕಳನ್ನು ಹೇಗೆ ಬೆಳೆಸುತ್ತೇವೆ ಅನ್ನುವುದನ್ನು ಸ್ವಲ್ಪ ಯೋಚಿಸಬೇಕು. ಅವರು ಬೆಳೆಯುವ ಕ್ರಮದಲ್ಲಿ ಶ್ರೀಮಂತ ಹೆಣ್ಣುಗಳು ಲಂಪಟರಾಗದಿದ್ದರೇ ಆಶ್ಚರ್ಯ.
“ನನ್ನ ವಿಚಾರವನ್ನು ಅರ್ಥಮಾಡಿಕೊಳ್ಳಿ. ಹೊರ ಲೋಕಕ್ಕೆ ತೋರಿಸಿಕೊಳ್ಳುವುದಕ್ಕೆ ಅಥವ ಅವರ ಸ್ವಂತ ಖುಷಿಗೆ ಎಂದೇ ತೀರ ಚಿಕ್ಕಂದಿನಿಂದಲೂ ಉಡುಪು, ಆಭರಣ, ಸ್ವಚ್ಛತೆ, ಗಾಂಭೀರ್ಯ, ಡ್ಯಾನ್ಸು, ಸಂಗೀತ, ಕಾವ್ಯ, ಕಾದಂಬರಿ, ಹಾಡುಗಾರಿಕೆ, ಥಿಯೇಟರು, ಸಂಗೀತ ಕಛೇರಿಗಳು, ಎಲ್ಲವನ್ನೂ ಹೆಂಗಸರು ಅಭ್ಯಾಸಮಾಡಿಕೊಳ್ಳುತ್ತಾರೆ. ಜೊತೆಗೆ ದೈಹಿಕ ಶ್ರಮವಿಲ್ಲದ ಸೋಮಾರಿತನ, ದೇಹದ ಬಗ್ಗೆ ಅತೀ ಕಾಳಜಿ, ಮಿತಿ ಮೀರಿದ ಸ್ವೀಟುಗಳು, ಬಡಪಾಯಿ ಹೆಂಗಸರು ಇದರಿಂದೆಲ್ಲ ಅದೆಷ್ಟುಮಟ್ಟಿಗೆ ತಮ್ಮಲ್ಲಿ ಹುಟ್ಟುವ ಮೈಯಾಸೆಯಿಂದ ನರಳುತ್ತಾರೋ ದೇವರಿಗೇ ಗೊತ್ತು. ವಯಸ್ಸಿಗೆ ಬಂದಕೂಡಲೆ ಕಾಡತೊಡಗುವ ಮೈಯಾಸೆ ಇಪ್ಪತ್ತನೆಯ ವರ್ಷಕ್ಕೆ ಮದುವೆಯಾಗದಿದ್ದರೆ ಆಮೇಲೂ ಹಿಂಸೆಕೊಡಲು ತೊಡಗುತ್ತದೆ. ಇವನ್ನೆಲ್ಲ ಕಾಣಲು ನಮಗೆ ಮನಸ್ಸಿಲ್ಲದಿದ್ದರೂ ಕಣ್ಣಿದ್ದವರಿಗೆಲ್ಲ ಇದು ಕಾಣಲೇಬೇಕು. ಗಂಡಸು ಎದುರಿಗಿದ್ದಾಗ ಉತ್ಸಾಹಿತರಾಗುತ್ತಾರೆ, ಉತ್ತೇಜಿತರಾಗುತ್ತಾರೆ. ಅವರ ಇಡೀ ಬದುಕು ವೈಯ್ಯಾರ ಬಿನ್ನಾಣಗಳನ್ನು ಬೆಳೆಸಿಕೊಳ್ಳುವುದರಲ್ಲೇ ಕಳೆದುಹೋಗುತ್ತದೆ. ಗಂಡು ಎದುರಿಗಿರುವಾಗ ಕಾಮುಕತೆಯ ಶಕ್ತಿಯಲ್ಲಿ ಬದುಕುತ್ತಾರೆ, ಗಂದು ಇಲ್ಲವಾದಾಗ ಬದುಕೇ ಕೊನೆಗೊಂಡಂತೆನಿಸುತ್ತದೆ.
“ಕೇವಲ ನಿರ್ದಿಷ್ಟ ಗಂಡಸು ಎಂದಲ್ಲ, ತೀರ ಕುರೂಪಿಯೂ ವಿಕೃತನೂ ಅಲ್ಲದ ಯಾವ ಗಂಡಸು ಎದುರಿಗಿದ್ದರೂ ಹೀಗೇ ಆಗುತ್ತದೆ. ಅಪರೂಪಕ್ಕೊಮ್ಮೆ ಹೀಗಾದೀತು ಅನ್ನುತ್ತೀರಿ. ಇಲ್ಲ, ಹೀಗೆಯೇ ಇದು ನಿಯಮವೋ ಅನ್ನುವ ಹಾಗೆ ನಡೆಯುತ್ತದೆ. ಕೆಲವು ಹೆಂಗಸರಲ್ಲಿ ಎದ್ದು ಕಾಣುತ್ತದೆ, ಕೆಲವರಲ್ಲಿ ಎದ್ದು ಕಾಣುವುದಿಲ್ಲ, ಅಷ್ಟೆ. ಯಾವ ಹೆಣ್ಣೂ ತನ್ನ ಬದುಕು ತಾನೇ ನಡೆಸಲಾರಳು. ಎಲ್ಲ ಹೆಂಗಸರೂ ಗಂಡಸರ ಮೇಲೆ ಅವಲಂಬಿಸಿಕೊಂಡಿರುವವರೇ. ಅವರು ಬೇರೆ ಥರ ಇರಲಾರರು. ಸಾಧ್ಯವಾದಷ್ಟೂ ಹೆಚ್ಚು ಗಂಡಸರನ್ನು ಆಕರ್ಷಿಸುವುದೇ ಯುವತಿಯರ ಮದುವೆಯಾದ ಹೆಂಗಸರ ಆದರ್ಶವಾದ್ದರಿಂದ ಆಯ್ಕೆಯ ಅವಕಾಶ ಇರಲೆಂದು ಸಾಧ್ಯವಾದಷ್ಟೂ ಗಂಡು ಪ್ರಾಣಿಗಳನ್ನು ಆಕರ್ಷಿಸುವ ಹೆಣ್ಣು ಪ್ರಾಣಿಗಳಂತೆಯೇ ಹೆಂಗಸರೂ ವರ್ತಿಸುತ್ತಾರೆ. ಯವತಿಯರ ಈ ಬಾಳು ಮದುವೆಯಾದಮೇಲೂ ಮುಂದುವರೆಯುತ್ತದೆ. ಆಯ್ಕೆ ಮಾಡಿಕೊಳ್ಳುವ ಅವಕಾಶ ಇರಬೇಕಾದರೆ ಯುವತಿಯರು ಹೀಗಿರುವುದು ಅಗತ್ಯ. ಮದುವೆಯಾದಮೇಲೆ ಕೂಡ ಗಂಡನನ್ನು ಆಳುವುದಕ್ಕೆ ಇದು ಅಗತ್ಯ. ಈ ಪ್ರವೃತ್ತಿಯನ್ನು ಕೊಂಚಕಾಲದ ಮಟ್ಟಿಗೆ ತಡೆಹಿಡಿಯುವುದು, ದಮನಿಸುವುದು ಒಂದೇ ಒಂದು ಸಂಗತಿ-ಮಕ್ಕಳು. ಬಸುರಿಯಾಗಿರುವಾಗ, ಎಳೆಕೂಸಿಗೆ ಹಾಲುಣಿಸುವಾಗ ಹೆಂಗಸು ಈ ರಾಕ್ಷಸತ್ವ ಕಳೆದುಕೊಂಡಿರುತ್ತಾಳೆ. ಮತ್ತೆ ಈ ಸಂದರ್ಭದಲ್ಲಿ ಡಾಕ್ಟರ ಪ್ರವೇಶವಾಗುತ್ತದೆ.
“ನನ್ನ ಹೆಂಡತಿಗೆ ಮಕ್ಕಳನ್ನು ತಾನೇ ಸಾಕಿ ಬೆಳಸುವ ಆಸೆ ಇತ್ತು. ಆರು ಮಕ್ಕಳನ್ನು ಹೆತ್ತು ಸಾಕಿದಳು. ಮೊದಲ ಮಗು ಕಾಯಿಲೆಯ ಮಗು. ಡಾಕ್ಟರುಗಳು ಅವಳ ಬಟ್ಟೆಯನ್ನೆಲ್ಲ ಬಿಚ್ಚಿಸಿ, ಮೈಯೆಲ್ಲ ಕೈಯಾಡಿಸಿ, ಹಾಗೆ ಮಾಡಿದ್ದಕ್ಕೆ ಅವರಿಗೆ ನಾನು ಧನ್ಯವಾದ ಹೇಳಿ ದುಡ್ಡೂ ಕೊಡಬೇಕಾಯಿತು, ಆಕೆ ಮಗುವಿಗೆ ಹಾಲೂಡಿಸಬಾರದು ಎಂದರು. ಇದರಿಂದ ವೈಯ್ಯಾರ ಬಿನ್ನಾಣಗಳಿಗೆ ಇದ್ದ ತಾತ್ಕಾಲಿಕ ಔಷಧವೂ ಇಲ್ಲವಾಯಿತು. ಹಾಲೂಡಿಸುವ ದಾದಿಯೊಬ್ಬಳನ್ನು ನೇಮಿಸಿಕೊಂಡೆವು. ಅವಳೇ ಆ ಮಗುವನ್ನು ಸಾಕಿದಳು. ಅಂದರೆ ಇನ್ನೊಬ್ಬ ಹೆಂಗಸಿನ ಬಡತನ ಮತ್ತು ದಡ್ಡತನವನ್ನು ಆಕೆ ತನ್ನ ಸ್ವಂತ ಮಗುವಿಗೆ ಬದಲಾಗಿ ನಮ್ಮ ಮಗುವಿಗೆ ಎದೆಹಾಲು ಕುಡಿಸುವಂತೆ ಮಾಡಿದೆವು. ಅದಕ್ಕಾಗಿ ಅವಳಿಗೆ ಬಟ್ಟೆ, ದುಡ್ಡು ಕೊಟ್ಟೆವು ಅನ್ನುವುದು ಬೇರೆ ಮಾತು. ಪ್ರಶ್ನೆ ಅದಲ್ಲ. ಮಗುವಿಗೆ ಹಾಲೂಡಿಸುತ್ತಿದ್ದಷ್ಟು ಕಾಲ ನಿದ್ದೆಹೋದಂತಿದ್ದ ನನ್ನ ಹೆಂಡತಿಯ ಬಿನ್ನಾಣ ವೈಯ್ಯಾರಗಳು ಎಚ್ಚರಗೊಂಡವು. ಹೀಗಾದಾಗ ಹಿಂದೊಮ್ಮೆ ಕೊಂಚ ಅನುಭವಕ್ಕೆ ಬಂದಿದ್ದ ಅಸೂಯೆ ನನ್ನೊಳಗೆ ಮತ್ತೆ ದೊಡ್ಡದಾಗಿ ತಲೆ ಎತ್ತಿತು. ನನ್ನ ಹಾಗೆಯೇ ತಮ್ಮ ಹೆಂಡಂದಿರೊಡನೆ ಅನೈತಿಕವಾಗಿ ಬದುಕುವ ಎಲ್ಲ ಗಂಡಸರ ಮನಸ್ಸನ್ನೂ ಈ ಅಸೂಯೆ ಪೀಡಿಸುತ್ತದೆ.”
(ಮುಂದುವರೆಯುವುದು)

Rating
No votes yet