ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹದಿನೈದು

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹದಿನೈದು

“ಹೌದು. ಅಸೂಯೆ. ಮದುವೆಯಾದ ಎಲ್ಲರಿಗೂ ಗೊತ್ತಿರುವ, ಆದರೆ ಎಲ್ಲರೂ ಮುಚ್ಚಿಡುವ ರಹಸ್ಯ. ಮನುಷ್ಯತ್ವವನ್ನು ಭ್ರಷ್ಟಗೊಳಿಸುವ ಪರಸ್ಪರ ದ್ವೇಷವಲ್ಲದೆ ಬಲುದೊಡ್ಡ ವೈವಾಹಿಕ ಗಾಯವಾಗುವುದು ಅಸೂಯೆಯಿಂದ. ಮೌನ ಒಪ್ಪಿಗೆಯಿಂದೆಂಬಂತೆ ಎಲ್ಲರೂ ಅಸೂಯೆಯನ್ನು ಬಚ್ಚಿಟ್ಟುಕೊಳ್ಳಲು ನಿರ್ಧಾರಮಾಡಿರುತ್ತಾರೆ. ಅಸೂಯೆಗೆ ಒಳಗಾದ ಪ್ರತಿಯೊಬ್ಬನೂ ಇದು ನನ್ನೊಬ್ಬನ ದುರದೃಷ್ಟ ಅಂದುಕೊಳ್ಳುತ್ತಾನೆಯೇ ಹೊರತು ಮನುಷ್ಯನ ವಿಧಿಯೇ ಅದು ಎಂದುಕೊಳ್ಳುವುದಿಲ್ಲ. ನಾನೂ ಹಾಗಿದ್ದೆ. ಅನೈತಿಕವಾಗಿ ಬದುಕುವ ದಂಪತಿಗಳ ನಡುವೆ ಅಸೂಯೆ ಇಲ್ಲದಿರಲು ಸಾಧ್ಯವೇ ಇಲ್ಲ. ತಮ್ಮ ಮಗುವಿನ ಹಿತಕ್ಕಾಗಿ ಮೈಸುಖವನ್ನು ತ್ಯಾಗಮಾಡಲಾರದವರು ತಮ್ಮ ಆತ್ಮದ ಹಿತಕ್ಕಾಗಿಯೂ ಮೈಸುಖ ಬಿಡಲಾರರು. ಪರಸ್ಪರ ಸಂಬಂಧದಲ್ಲಿ ನೈತಿಕತೆ ಇಲ್ಲದಿರುವುದರಿಂದ ನನಗಿಲ್ಲದ ಸುಖವನ್ನು ಇನ್ನೊಬ್ಬರು ಪಡೆಯುತ್ತಿರಬಹುದೇನೋ ಅನ್ನುವ ಗುಮಾನಿ ಹುಟ್ಟುತ್ತದೆ, ಒಬ್ಬರನ್ನು ಇನ್ನೊಬ್ಬರು ಗುಟ್ಟಾಗಿ ವಾಚ್‌ಮಾಡುವುದಕ್ಕೆ ತೊಡಗುತ್ತಾರೆ.
“ಮದುವೆಯಾಗಿದ್ದಷ್ಟು ದಿನವೂ ಅಸೂಯೆ ನನ್ನ ಮನಸ್ಸನ್ನು ಪೀಡಿಸುತ್ತಿತ್ತು. ಕೆಲವು ವಿಶೇಷವಾದ ಕಾಲದಲ್ಲಂತೂ ಈ ಪೀಡನೆ ತೀರ ಹೆಚ್ಚಾಗುತ್ತಿತ್ತು- ಅದು ಮಕ್ಕಳಿಗೆ ನನ್ನ ಹೆಂಡತಿ ಹಾಲೂಡಿಸಬಾರದೆಂದು ಡಾಕ್ಟರು ಹೇಳಿದಾಗ. ಯಾವುದೇ ಕಾರಣವಿಲ್ಲದೆ ದಿನ ನಿತ್ಯದ ಸಹಜ ಬದುಕಿಗೆ ಅಡ್ಡಿಯಾಯಿತೆಂದು ಯಾವುದೇ ತಾಯಿಗೆ ಆಗುವಂತೆ ನನ್ನ ಹೆಂಡತಿಗೂ ಆತಂಕವಾಗಿತ್ತು. ತಾಯ್ತನದ ಜವಾಬ್ದಾರಿಯನ್ನು ಎಷ್ಟು ಸುಲಭವಾಗಿ ಕೊಡವಿಕೊಂಡುಬಿಟ್ಟಳಲ್ಲಾ, ಇಷ್ಟೇ ಸುಲಭವಾಗಿ ಹೆಂಡತಿಯಾಗಿ ಅವಳು ಮಾಡಬೇಕಾದ ಕರ್ತವ್ಯವನ್ನೂ ಕೊಡವಿಕೊಂಡುಬಿಟ್ಟರೆ ಎಂದು ಅಸೂಯೆ ಹುಟ್ಟಿತು. ಅವಳ ಆರೋಗ್ಯ ಚೆನ್ನಾಗಿಯೇ ಇತ್ತು. ಡಾಕ್ಟರು ಮಹಾಶಯ ಮಕ್ಕಳಿಗೆ ಹಾಲು ಕುಡಿಸಬೇಡವೆಂದಿದ್ದರೂ ಏನೇನೂ ತೊಂದರೆ ಇಲ್ಲದೆ ಮಕ್ಕಳನ್ನು ಅವಳೇ ಜೋಪಾನಮಾಡಿದ್ದಳು.
“ನಿಮಗೆ ಡಾಕ್ಟರುಗಳ ಬಗ್ಗೆ ಅಂಥ ಗೌರವವೇನೂ ಇದ್ದಂತಿಲ್ಲ” ಎಂದೆ. ಡಾಕ್ಟರುಗಳ ಬಗ್ಗೆ ಮಾತಾಡಿದಾಗಲೆಲ್ಲ ಅವನ ಕಣ್ಣಲ್ಲಿ ಕಾಣುತ್ತಿದ್ದ ಕೋಪದ ಸುಳಿವು ಕಂಡಿದ್ದೆ.
“ಇಷ್ಟ ಪಡುವುದು, ಪಡದೆ ಇರುವುದು ಪ್ರಶ್ನೆಯಲ್ಲ. ಅವರು ನನ್ನ ಜೀವನವನ್ನೇ ಹಾಳುಮಾಡಿದರು. ನಾನಷ್ಟೇ ಅಲ್ಲ, ಸಾವಿರಾರು ಜನರ ಬಾಳು ಹಾಳುಮಾಡಿದ್ದಾರೆ ಡಾಕ್ಟರುಗಳು. ಲಾಯರುಗಳ ಹಾಗೆಯೇ ಡಾಕ್ಟರುಗಳಿಗೂ ದುಡ್ಡು ಮಾಡುವುದಷ್ಟೇ ಗುರಿ. ನನ್ನ ಆಸ್ತಿಯಲ್ಲಿ ಅರ್ಧ ಬೇಕಾದರೂ ಡಾಕ್ಟರಿಗೆ ಕೊಟ್ಟುಬಿಡುತ್ತಿದ್ದೆ. ನನ್ನ ಜಾಗದಲ್ಲಿ ಯಾರಾದರೂ ಹಾಗೇ ಮಾಡುತ್ತಿದ್ದರು. ಈ ಡಾಕ್ಟರುಗಳು ನಮ್ಮ ದಾಂಪತ್ಯದಲ್ಲಿ ಮೂಗು ತೂರಿಸದೆ ದೂರ ಇದ್ದಿದ್ದರೆ ಸಾಕಾಗಿತ್ತು. ಕರೆಕ್ಟಾದ ಅಂಕಿ ಸಂಖ್ಯೆ ಇರದಿದ್ದರೂ ಹತ್ತಿಪ್ಪತ್ತು ಕೇಸುಗಳು ನನಗೆ ಗೊತ್ತು. ನಿಜವಾಗಿ ಇಂಥವು ಸಾವಿರ ಇವೆ. ಈ ಡಾಕ್ಟರುಗಳು ಹೆಂಗಸು ಹೆರಲಾರಳು ಎಂದು ಬಸಿರಲ್ಲೇ ಮಗುವನ್ನು ಸಾಯಿಸುತ್ತಾರೆ, ಅಥವಾ ಎಂಥದೋ ಆಪರೇಶನ್ನು ಮಾಡಿ ತಾಯಿಯ ಜೀವ ತೆಗೆಯುತ್ತಾರೆ. ಹಿಂದೆ ಧರ್ಮವಿರೋಧಿಗಳನ್ನು ವಿಚಾರಣೆಗೆ ಒಳಪಡಿಸಿ ಕೊಲ್ಲುತ್ತಿದ್ದದ್ದನ್ನು ಯಾರೂ ಕೊಲೆ ಎಂದು ಎಣಿಸುತ್ತಿರಲಿಲ್ಲ. ಈಗ ಡಾಕ್ಟರು ಮಾಡುವ ಕೊಲೆಯನ್ನೂ ಕೊಲೆ ಅನ್ನುವುದಿಲ್ಲ. ಮನುಷ್ಯ ಕುಲದ ಉದ್ಧಾರಕ್ಕೆ ಹೀಗೆ ಮಾಡುತ್ತಾರಲ್ಲವೇ! ಡಾಕ್ಟರುಗಳ ಅಪರಾಧ ಲೆಕ್ಕವಿಲ್ಲದಷ್ಟು. ಅದರಲ್ಲೂ ಹೆಂಗಸರನ್ನು ಬಳಸಿಕೊಂಡು ನೈತಿಕ ಭ್ರಷ್ಠತೆ ಬೆಳೆಯುವಹಾಗೆ ಮಾಡುತ್ತಾರೆ. ಅವರ ಮಾತು ಕೇಳುವುದಾದರೆ ಎಲ್ಲೆಲ್ಲೂ ಇನ್‌ಫೆಕ್ಷನ್ನೇ ಕಾಣುತ್ತದೆ. ಮನುಷ್ಯರು ಮನುಷ್ಯರೊಡನೆ ಸೇರುವುದೇ ತಪ್ಪು, ತೀರ ದೂರ ದೂರ ಪ್ರತ್ಯೇಕವಾಗಿ, ಐಸೊಲೇಶನ್ನಿನಲ್ಲಿ ಇರಬೇಕು. ಅದಿರಲಿ. ನಾವು ಕೆಟ್ಟದಾಗಿ ಬದುಕುತ್ತಿದ್ದರೆ ಆರೋಗ್ಯ ಕೆಡದೆ ಮತ್ತಿನ್ನೇನು? ನೀವು ಕೆಟ್ಟರೀತಿಯಲ್ಲಿ ಬದುಕುತ್ತಿದ್ದೀರಿ ಅನ್ನುವುದಿಲ್ಲ ಡಾಕ್ಟರು. ಆಗುವುದಕ್ಕೆಲ್ಲ ನಮ್ಮ ನರಮಂಡಳದ ಅವ್ಯವಸ್ಥೆ ಕಾರಣವಂತೆ. ಡಾಕ್ಟರ ಹತ್ತಿರ ಹೋಗಬೇಕು. ಅವರು ಔಷಧಿ ಬರೆದುಕೊಡಬೇಕು. ಮೂವತ್ತೈದು ಕೊಪೆಕ್ ಕೊಟ್ಟು ಕೊಳ್ಳಬೇಕು. ವಾಸಿಯಾಗಲಿಲ್ಲವೋ ಮತ್ತೆ ಡಾಕ್ಟರ ಹತ್ತಿರ ಹೋಗು, ಔಷಧಿ ತಗೊ! ಒಳ್ಳೆ ಬಿಸಿನೆಸ್ಸು ಇದು.
“ಇರಲಿ. ನನ್ನ ಕಥೆಗೆ ಬರೋಣ. ನನ್ನ ಹೆಂಡತಿ ಮಕ್ಕಳಿಗೆ ಹಾಲೂಡಿ ಬೆಳೆಸಿದಳು ಅಂದೆನಲ್ಲ, ಅವಳು ಬಸುರಿಯಾಗಿದ್ದಾಗ, ಮಕ್ಕಳಿಗೆ ಹಾಲೂಡುತ್ತಿದ್ದಾಗ ನನ್ನ ಸಂಶಯಗಳ, ದ್ವೇಷದ ಹಿಂಸೆ ಇರದೆ ಮನಸ್ಸು ನೆಮ್ಮದಿಯಾಗಿರುತ್ತಿತ್ತು. ಹಾಗೆ ಅವಳು ಬಸುರಿ ಬಾಣಂತಿ ಆಗಿರದಿದ್ದರೆ ಎಂದೋ ಕೊಲೆಮಾಡಿಬಿಡುತ್ತಿದ್ದೆ, ಅಸೂಯೆಯಿಂದ. ಎಂಟು ವರ್ಷಗಳಲ್ಲಿ ಐದು ಮಕ್ಕಳನ್ನು ಹೆತ್ತಳು. ಅವುಗಳಲ್ಲಿ ಮೊದಲನೆಯದು ಬಿಟ್ಟು ಉಳಿದವನ್ನೆಲ್ಲ ಅವಳೆ ಹಾಲುಕೊಟ್ಟು ಬೆಳೆಸಿದಳು.”
“ಮಕ್ಕಳೆಲ್ಲ ಈಗ ಎಲ್ಲಿವೆ?” ನಾನು ಕೇಳಿದೆ.
“ಮಕ್ಕಳು? ಅವನ ಧ್ವನಿಯಲ್ಲಿ ಭಯ ತುಂಬಿಕೊಂಡಿತ್ತು.
“ಸಾರಿ. ನಿಮ್ಮ ಮನಸ್ಸಿಗೆ ನೋವಾಯಿತೋ ಏನೋ.”
“ಇಲ್ಲ, ಇಲ್ಲ. ಪರವಾಗಿಲ್ಲ. ನನ್ನ ಹೆಂಡತಿಯ ಅಣ್ಣನ ಹತ್ತಿರ ಇದ್ದಾರೆ. ಅವರೇನೂ ಕರೆದುಕೊಂಡು ಹೋಗುತ್ತಿರಲಿಲ್ಲ. ಅವರ ಹೆಸರಿಗೆ ನನ್ನ ಆಸ್ತಿಯೆಲ್ಲಾ ಬರೆದುಕೊಟ್ಟೆ. ಆದರೂ ನನ್ನ ಮಕ್ಕಳನ್ನು ವಾಪಸ್ಸು ಕೊಡಲಿಲ್ಲ. ನಾನು ಹುಚ್ಚ ಎಂದು ಅವರ ತೀರ್ಮಾನ. ಮಕ್ಕಳನ್ನು ಅವರ ಹತ್ತಿರವೇ ಬಿಟ್ಟು ಹೋಗುತ್ತಿದ್ದೇನೆ. ನೋಡಿದೆ. ಮಾತಾಡಿಸಿದೆ. ನಿಮ್ಮ ಹತ್ತಿರ ಇದ್ದರೆ ನಿಮ್ಮ ಹಾಗೇ ಆಗುತ್ತಾರೆ, ಬೇಡ, ನಾವೇ ಬೇರೆ ಥರ ಬೆಳೆಸುತ್ತೇವೆ ಅಂದುಬಿಟ್ಟರು. ನಾನು ತಾನೇ ಏನು ಮಾಡಲಿ? ಮಕ್ಕಳನ್ನು ಕರೆದುಕೊಂಡು ಬಂದು ಹೇಗೆ ಸಾಕಲಿ? ನನ್ನ ಹತ್ತಿರ ಈಗ ದುಡ್ಡಿಲ್ಲ, ಕಾಸಿಲ್ಲ, ಘನತೆ ಇಲ್ಲ, ಗೌರವ ಇಲ್ಲ. ನನ್ನ ಹತ್ತಿರ ಈಗ ಇರುವುದು ಜ್ಞಾನ ಮಾತ್ರ. ಅದು ಮಿಕ್ಕವರಿಗೆ ದೊರೆಯುವುದಕ್ಕೆ ಇನ್ನೂ ಎಷ್ಟು ವರ್ಷ ಆಗಬೇಕೋ ಏನೋ.
“ನನ್ನ ಮಕ್ಕಳು ಕೂಡ ಉಳಿದವರ ಹಾಗೆಯೇ ಬೆಳೆಯುತ್ತಾರೆ. ಸುತ್ತಲೂ ಇರುವ ರಾಕ್ಷಸರ ಹಾಗೆ. ಮೂರು ಬಾರಿ ಹೋಗಿ ನೋಡಿಕೊಂಡು ಬಂದೆ. ಏನೂ ಮಾಡಲಾರೆ ಈಗ. ಸೌತ್‌ ಅಲ್ಲಿ ನನ್ನದೊಂದು ಪುಟ್ಟ ಮನೆ, ತೋಟ ಇದೆ. ಅಲ್ಲಿಗೆ ಹೋಗಿ ಇದ್ದುಬಿಡುತ್ತೇನೆ.
“ನನಗೆ ತಿಳಿದದ್ದು ಮಿಕ್ಕವರಿಗೂ ತಿಳಿಯುವುದಕ್ಕೆ ಬಹಳ ಬಹಳ ಕಾಲ ಬೇಕು. ಸೂರ್ಯನಲ್ಲಿ ಎಷ್ಟು ಕಬ್ಬಿಣ ಇದೆ, ನಕ್ಷತ್ರಗಳಲ್ಲಿ ಯಾವ ಯಾವ ಲೋಹ ಇದೆ ಅನ್ನುವುದನ್ನೆಲ್ಲ ತಿಳಿದುಕೊಳ್ಳಬಹುದು. ಆದರೆ ನಮ್ಮೊಳಗೇ ಇರುವ ಕೊಳಕು ಹಂದಿಯನ್ನು ಕಾಣುವುದು ಬಹಳ ಕಷ್ಟ, ಬಹಳ ಕಷ್ಟ.
“ಕೊನೆಯ ಪಕ್ಷ ನೀವು ನನ್ನ ಮಾತನ್ನಾದರೂ ಕೇಳಿಸಿಕೊಂಡಿರಿ. ಅದಕ್ಕೆ ಥ್ಯಾಂಕ್ಸ್ ಹೇಳಬೇಕು.”
(ಮುಂದುವರೆಯುವುದು)

Rating
No votes yet